ವಾಚಕರ ವಾಣಿ
ಶರಾವತಿ ಯೋಜನೆ ಜಾರಿ: ಹಪಹಪಿ ಏಕೆ?
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೇಂದ್ರದ ಅರಣ್ಯ ಸಲಹಾ ಸಮಿತಿ ಕೂಡ ಈ ಕುರಿತು ಕಳವಳ ವ್ಯಕ್ತಪಡಿಸಿದೆ. ವಿದ್ಯುತ್ ಘಟಕ, ಸುರಂಗ ಹಾಗೂ ರಸ್ತೆ ನಿರ್ಮಾಣಕ್ಕೆ ಸುಮಾರು 54 ಹೆಕ್ಟೇರ್‌ನಷ್ಟು ಅರಣ್ಯ ನಾಶವಾಗಲಿದೆ. ಸಿಂಹಬಾಲದ ಸಿಂಗಳೀಕ ಸೇರಿದಂತೆ ಹಲವು ವನ್ಯಜೀವಿಗಳ ಆವಾಸಕ್ಕೆ ಧಕ್ಕೆಯಾಗಲಿದೆ. ಪ್ರಸ್ತುತ, ಇಂಧನ ಉತ್ಪಾದನೆಗೆ ಪರ್ಯಾಯ ಮಾರ್ಗಗಳಿವೆ. ಹಾಗಿದ್ದರೂ, ಪರಿಸರಕ್ಕೆ ಮಾರಕವಾದ ಈ ಯೋಜನೆ ಜಾರಿಯ ಔಚಿತ್ಯವಾದರೂ ಏನಿದೆ? ರಾಜ್ಯ ಸರ್ಕಾರ ಈ ಯೋಜನೆಯನ್ನು ಕೈಬಿಡುವುದೇ ಒಳಿತು.
- ನಿರಂಜನ್ ಎಚ್.ಬಿ., ಸಾಗರ
ಮಹಿಳೆಯರಿಗೆ ಶ್ರೀರಕ್ಷೆ ಆದೀತೆ ‘ಅಕ್ಕ ಪಡೆ’
ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ಯು ರಾಜ್ಯದಾದ್ಯಂತ ಕಾರ್ಯಾರಂಭ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರಸ್ತುತ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳೂವರೆ ದಶಕ ಉರುಳಿದರೂ ಹೆಣ್ಣುಮಕ್ಕಳು, ಮಹಿಳೆಯರು ಒಂಟಿಯಾಗಿ ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ‘ಅಕ್ಕ ಪಡೆ’ಯು ಮಹಿಳೆಯರ ಮಾನಸಿಕ ಸ್ಥೈರ್ಯಕ್ಕೆ ಮತ್ತಷ್ಟು ಬಲ ತುಂಬುವಂತೆ ಕಾರ್ಯನಿರ್ವಹಿಸಲಿ.
- ಎನ್. ಮಹಾರಾಜ, ಹೊಸಪೇಟೆ
ರಂಗಾಯಣ: ಲಾಬಿಕೋರರ ದೂರವಿಡಿ
ರಾಜ್ಯ ಸರ್ಕಾರವು ಧಾರವಾಡದ ರಂಗಾಯಣಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವೃತ್ತಿರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿ ಸಾಮಾಜಿಕ ನ್ಯಾಯ ಕಾಪಾಡಿತ್ತು. ಅವರ ಅಕಾಲಿಕ ನಿಧನದಿಂದ ನಿರ್ದೇಶಕರ ಸ್ಥಾನ ಖಾಲಿಯಾಗಿದೆ. ಬೆಂಗಳೂರಿನ ಕಲಾಕ್ಷೇತ್ರದ ಸುತ್ತ ಓಡಾಡಿಕೊಂಡು ರಾಜಕಾರಣ ಮಾಡುವ ಕೆಲವರು ಈ ನಿರ್ದೇಶಕರ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ. ಅಂಥವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ ಬೆಂಗಳೂರಿನ ಸಾಂಸ್ಕೃತಿಕ ರಾಜಕಾರಣವನ್ನು ಧಾರವಾಡ ರಂಗಾಯಣದಲ್ಲಿ ತಂದು ತುರುಕುವ ಪ್ರಯತ್ನ ಬೇಡ.
ಖಾಲಿಯಾಗಿರುವ ನಿರ್ದೇಶಕ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರತಿಭಾವಂತರನ್ನೇ ನೇಮಿಸಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದು ಸರ್ಕಾರದ ಜವಾಬ್ದಾರಿ. ರಂಗಸಮಾಜದ ಸದಸ್ಯರು, ಈ ದಿಸೆಯಲ್ಲಿ ಆಲೋಚಿಸಿದರೆ ಉಪಕಾರವಾದೀತು.
- ಮಹಾದೇವ ಹಡಪದ, ಧಾರವಾಡ
ಕಲಬೆರಕೆ ತುಪ್ಪ ಜಾಲಕ್ಕೆ ಕಡಿವಾಣ ಹಾಕಿ
‘ನಂದಿನಿ’ ಬ್ರ್ಯಾಂಡ್ ಹೆಸರಿನಡಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿರುವುದು ಆತಂಕಕಾರಿ. ಬಂಧಿತರಲ್ಲಿ ಒಬ್ಬ ಕೆಎಂಎಫ್ ಉತ್ಪನ್ನಗಳ ವಿತರಕ ಆಗಿರುವುದು ದುರಂತ. ನಂದಿನಿ ತುಪ್ಪಕ್ಕೆ ದೇಶದಾದ್ಯಂತ ಭಾರೀ ಬೇಡಿಕೆ ಇದೆ. ಇದರ ಲಾಭ ಪಡೆಯುವುದು ದುಷ್ಕರ್ಮಿಗಳ ಉದ್ದೇಶವಾಗಿರುವುದು ಸ್ಪಷ್ಟ. ಕಲಬೆರಕೆ ತುಪ್ಪದ ಸೇವನೆಯು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಹಾಗಾಗಿ, ತುಪ್ಪದ ಪ್ಯಾಕಿಂಗ್ ಕುರಿತಂತೆ ಕೆಎಂಎಫ್ ಎಚ್ಚರ ವಹಿಸಬೇಕು. ನಿಯಮಿತವಾಗಿ ಖಾಸಗಿ ಗೋದಾಮುಗಳು ಮತ್ತು ಅಂಗಡಿಗಳ ತಪಾಸಣೆ ನಡೆಸುತ್ತಿದ್ದರೆ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಲಿದೆ. ಕಲಬೆರಕೆ ತಡೆಗೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಿದೆ. ತಪ್ಪಿತಸ್ಥರಿಗೆ ಸರ್ಕಾರವು ಕಠಿಣ ಶಿಕ್ಷೆಯನ್ನೂ ವಿಧಿಸಬೇಕಿದೆ.
- ಬಸಪ್ಪ ಎಸ್. ಮುಳ್ಳೂರ, ಹಲಗತ್ತಿ
ಉಡುಗೊರೆ ಪರಂಪರೆ, ಅಭಿವೃದ್ಧಿಗೆ ಬರೆ
ಬಿಹಾರದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ₹10 ಸಾವಿರ ಜಮೆ ಮಾಡಿದ್ದರಿಂದ ಎನ್‌ಡಿಎ ಗೆಲುವು ಸುಲಭವಾಯಿತೆಂದು ಹೇಳಲಾಗುತ್ತದೆ. ಈ ಹಿಂದೆ ಕರ್ನಾಟಕ, ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಇಂತಹದ್ದೇ ಉಚಿತ ಕೊಡುಗೆಗಳ ಭರವಸೆ ನೀಡಿ ಅಧಿಕಾರದ ಗದ್ದುಗೆ ಏರಿದ್ದು ಸುಳ್ಳೇನಲ್ಲ. ಅರವಿಂದ ಕೇಜ್ರಿವಾಲ್ ಉಚಿತ ಕೊಡುಗೆ ಘೋಷಿಸಿಯೇ ಅಧಿಕಾರ ಹಿಡಿದಿದ್ದು, ಇವರೆಲ್ಲರಿಗೂ ಮಾದರಿ ಆಗಿರುವಂತಿದೆ. ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲೂ ಉಚಿತ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಬಡವರಿಗೆ ಸಹಾಯ ಮಾಡುತ್ತೇವೆ ಎಂಬ ನೆಪದಲ್ಲಿ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳಿಂದ ಹೊಸ ಅವತಾರ ಸೃಷ್ಟಿಯಾಗಿದೆ. ಜನಸಾಮಾನ್ಯರ ತೆರಿಗೆ ಹಣವನ್ನು ಹೀಗೆ ಹಂಚುತ್ತಾ ಹೋದರೆ ಅಭಿವೃದ್ಧಿ ಮರೀಚಿಕೆ ಆಗುವುದರಲ್ಲಿ ಅನುಮಾನವೇ ಇಲ್ಲ.
- ಅತ್ತಿಹಳ್ಳಿ ದೇವರಾಜ್, ಬೆಂಗಳೂರು
ಡೇಟಿಂಗ್ ಆ್ಯಪ್ ಹಾವಳಿ ತಡೆಗಟ್ಟಿ
ಇತ್ತೀಚೆಗೆ ಡೇಟಿಂಗ್ ಆ್ಯಪ್‌ಗಳ ಹಾವಳಿ ಉಲ್ಬಣಿಸಿದೆ. ಆ್ಯಪ್ ಬಳಸಿ ವಂಚಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ಆ್ಯಪ್‌ನಲ್ಲಿ ವಿವರ ದಾಖಲಿಸಿದ ತಕ್ಷಣವೇ ಸ್ನೇಹ ಬೆಳೆಸುವ ಖದೀಮರು, ಸುಲಭವಾಗಿ ವಂಚನೆಯ ಬಲೆಯೊಳಗೆ ಕೆಡವುತ್ತಾರೆ. ಒಮ್ಮೆ ಈ ಜಾಲದೊಳಗೆ ಸಿಲುಕಿದರೆ ಹೊರಬರುವುದು ಕಷ್ಟ. ಆ್ಯಪ್‌ನಲ್ಲಿರುವ ಮಹಿಳೆಯರ ಮಾಯಾಜಾಲಕ್ಕೆ ಸಿಲುಕಿ ಜೀವ ಕಳೆದುಕೊಂಡವರೂ ಇದ್ದಾರೆ. ನಾಯಿಕೊಡೆಗಳಂತೆ ಹಬ್ಬುತ್ತಿರುವ ಇಂತಹ ಆ್ಯಪ್‌ಗಳಿಗೆ ಲಗಾಮು ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಜೊತೆಗೆ, ಯುವಜನರಿಗೂ ಜಾಗೃತಿ ಮೂಡಿಸುವ ತುರ್ತಿದೆ.
- ಮಮತ ಟಿ.ಪಿ., ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.