ವಾಚಕರ ವಾಣಿ
ಇತ್ತೀಚೆಗೆ ಕೇರಳ ಮತ್ತು ತಮಿಳುನಾಡು ಪ್ರವಾಸಕ್ಕೆ ತೆರಳಿದ್ದೆ. ಪ್ರವಾಸ ಮುಗಿಸಿ ಚಾಮರಾಜನಗರದ ಗರಿಕೆಕಂಡಿ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಿದೆ. ರಾಜ್ಯದ ರಸ್ತೆಗಳು ಯಮರೂಪಿಯಂತೆ ಬಾಯಿತೆರೆದು ಕುಳಿತಿರುವುದು ಗಾಬರಿ ಹುಟ್ಟಿಸಿತು. ನೆರೆಯ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಸುಸಜ್ಜಿತ ರಸ್ತೆಗಳ ನಿರ್ಮಾಣದಲ್ಲಿ ಪೈಪೋಟಿಗೆ ಬಿದ್ದಂತೆ ಕೆಲಸ ಮಾಡುತ್ತಿವೆ. ಕರ್ನಾಟಕ ಸರ್ಕಾರದ ಧೋರಣೆಯು ಇದಕ್ಕೆ ತದ್ವಿರುದ್ಧ. ರಸ್ತೆಗಳ ದಯನೀಯ ಸ್ಥಿತಿ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಸಮರ್ಪಕ ರಸ್ತೆ ವ್ಯವಸ್ಥೆ ಇದ್ದಾಗಷ್ಟೆ ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತವೆ. ಹಾಗಾಗಿ, ಸರ್ಕಾರವು ‘ರಸ್ತೆ ಗ್ಯಾರಂಟಿ’ಯನ್ನೂ ಘೋಷಿಸಬೇಕಿದೆ.
– ಅಭಿಷೇಕ್, ಹನೂರು
ಗೌರವ ಡಾಕ್ಟರೇಟ್ ಪದವಿಗೆ ಸಂಬಂಧಿಸಿದಂತೆ ನಿಯಮಾವಳಿ ರೂಪಿಸಬೇಕೆಂಬ ಕೂಗು ವಿಧಾನ ಪರಿಷತ್‌ನಲ್ಲಿ ಕೇಳಿಬಂದಿದೆ. ಗಂಭೀರವಾಗಿ ಚರ್ಚೆಗೆ ಒಳಪಡಬೇಕಾದ ವಿಷಯವೂ ಇದಾಗಿದೆ. ವಿಶ್ವವಿದ್ಯಾಲಯಗಳು ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಸಂತೆಯಲ್ಲಿ ಸೊಪ್ಪು ಮಾರಿದಷ್ಟೇ ಈಗ ಸುಲಭವಾಗಿದೆ. ಜೊತೆಗೆ, ಇಂದಿನ ಡಿಜಿಟಲ್ ಯುಗದಲ್ಲಿ ಯುಜಿಸಿ ನಿಯಮಾ
ವಳಿಗೆ ಒಳಪಡುವ ವಿಶ್ವವಿದ್ಯಾಲಯಗಳಷ್ಟೇ ಅಲ್ಲದೇ ಕೆಲವು ಸಂಘ–ಸಂಸ್ಥೆಗಳು, ನಕಲಿ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗೆ ಅರ್ಜಿ ಆಹ್ವಾನಿಸುತ್ತವೆ. ಯಾವುದೇ, ವಿಶೇಷ ಸಾಧನೆ ಮಾಡದೆ ಕೇವಲ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿ ಮಾಡಿದವರಿಗೆಲ್ಲಾ ಈ ನಕಲಿ ಸಂಸ್ಥೆಗಳು ಗೌರವ ಡಾಕ್ಟರೇಟ್ ನೀಡುತ್ತಿರುವುದು ಅಕ್ಷಮ್ಯ. ಯುಜಿಸಿ ಈ ಬಗ್ಗೆ ಎಚ್ಚತ್ತುಕೊಳ್ಳಬೇಕಿದೆ.
– ದಿವಾಕರ್ ಡಿ., ಮದ್ದೂರು
‘ರೀಲ್ಸ್ ಕಾಲದಲ್ಲಿ ಮಕ್ಕಳ ಪುಸ್ತಕ’ ಲೇಖನವು (ಲೇ: ಯೋಗೇಂದ್ರ ಯಾದವ್, ಪ್ರ.ವಾ., ಜ. 28) ಸಮಯೋಚಿತವಾಗಿದೆ ಮತ್ತು ಓದುಗರಲ್ಲಿ ಜಾಗೃತಿ ಪ್ರಜ್ಞೆ ಮೂಡಿಸುತ್ತದೆ. ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಉತ್ತಮ ಸಲಹೆ ನೀಡಲಾಗಿದೆ. ಹೊಸ ತಲೆಮಾರಿನ ಮಕ್ಕಳಲ್ಲಿ ಮೊಬೈಲ್ ಫೋನ್ ಮತ್ತು ರೀಲ್ಸ್ ವ್ಯಸನಗಳು ಅನಿಯಂತ್ರಿತವಾಗಿ ಸ್ಥಾನ ಪಡೆದಿವೆ. ಹಾಗಾಗಿ, ಅವರಲ್ಲಿ ಓದಿನ ಅಭಿರುಚಿ ಬೆಳೆಸಲು ಪೋಷಕರು ಆದ್ಯತೆ ನೀಡುವ ತುರ್ತಿದೆ. ಮಕ್ಕಳಿಗೆ ಬಾಲ್ಯದಿಂದಲೇ ಓದಿನ ತುಡಿತ ಬೆಳೆಸಬೇಕು. ಅವರ ವಯೋಮಾನಕ್ಕೆ ಅನುಗುಣವಾಗಿ ಪುಸ್ತಕಗಳನ್ನು ಓದಿಸಬೇಕು. ನಿಯಮಿತವಾಗಿ ಗ್ರಂಥಾಲಯಗಳಿಗೆ ಕರೆದೊಯ್ಯಬೇಕು. ಇದು ಅವರು ಸೃಜನಾತ್ಮಕವಾಗಿ ಬೆಳೆಯಲು ಸಹಕಾರಿಯಾಗಲಿದೆ.
– ಗಜೇಂದ್ರ ಪ್ರಸಾದ್ ಜಿ., ಬೆಂಗಳೂರು
ರಾಜಕೀಯ ಪಕ್ಷಗಳ ತಾಕಲಾಟದಿಂದಾಗಿ ಮಹಾಕವಿ ಸರ್ವಜ್ಞನ ಜನ್ಮಸ್ಥಳದ ವಿವಾದ ಕಗ್ಗಂಟಾಗಿದೆ. ಈ ಹಿಂದೆ ಹಾವೇರಿ ಜಿಲ್ಲೆಯ ಮಾಸೂರು ಮತ್ತು ಅಬಲೂರು ಗ್ರಾಮಗಳ ನಡುವೆ ಸರ್ವಜ್ಞ ಕವಿಯ ಜನ್ಮಸ್ಥಳ ಕುರಿತಂತೆ ವಿವಾದ ಉಂಟಾಯಿತು. ಅದು ರಾಜಕೀಯ ತಿರುವು ಪಡೆದು ಕವಿಯ ಜನ್ಮಜಾತಕವನ್ನೇ ಜಾಲಾಡಿದ ಪ್ರಸಂಗವೂ ನಡೆಯಿತು. ಸರ್ವಜ್ಞನ ಸಮಾಧಿ ಕುಮದ್ವತಿ ನದಿ ತೀರದ ಮಾಸೂರಿನಲ್ಲಿದೆ. ಅಲ್ಲಿನ ಗ್ರಾಮ ಪಂಚಾಯಿತಿ ಆಡಳಿತವು ಈ ಬಗ್ಗೆ ಹೋರಾಟ ನಡೆಸಿದರೂ, ರಾಜಕೀಯ ಪಕ್ಷಗಳು ಗೊಂದಲ ಉಂಟು ಮಾಡಿವೆ. ಮಾಸೂರೇ ಜನ್ಮಸ್ಥಳವೆಂದು ಆತನ ತ್ರಿಪದಿಗಳ ಮೂಲಕ ಸಾಬೀತುಪಡಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ರಚಿಸಿದ ಸರ್ವಜ್ಞ ಪ್ರಾಧಿಕಾರ ಸ್ಮಾರಕದಂತೆ ಉಳಿದಿದೆ. ಈ ವಿಷಯದ ಬಗ್ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಥವಾ ಸಾಹಿತ್ಯ ಪರಿಷತ್ತಾದರೂ ಗಮನಹರಿಸಿ, ಸರ್ವಜ್ಞ ಕವಿಯ ಜನ್ಮಸ್ಥಳದ ಗೊಂದಲ ಬಗೆಹರಿಸಲಿ.
– ಕೃಷ್ಣಮೂರ್ತಿ ಕುಲಕರ್ಣಿ, ಹುಬ್ಬಳ್ಳಿ
ಪ್ರಜ್ಞಾವಂತರು, ಶಿಕ್ಷಣ ಪಡೆದವರು, ಸಾಹಿತಿಗಳು ಓದು, ಪುಸ್ತಕ ಮತ್ತು ಗ್ರಂಥಾಲಯ ಕುರಿತು ಮಾತನಾಡುತ್ತಾರೆ. ಆದರೆ, ಲೇಖಕರು ಬರೆದ ಕೃತಿಗಳ ಸಗಟು ಖರೀದಿಗೆ ಸರ್ಕಾರ ಮುಂದಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ರಾಜ್ಯದಲ್ಲಿ ಓದುವ ಸಂಸ್ಕೃತಿ ಬೆಳೆಯುವುದಾದರೂ ಹೇಗೆ? ಈ ಹಿಂದೆ ಸದನದ ವಾಕ್ಪಟುಗಳೆಲ್ಲ ಓದುವ ಅಭಿರುಚಿ ಹೊಂದಿದ್ದರು. ಹಾಗಾಗಿ, ಅಧಿವೇಶನದಲ್ಲಿ ಗಂಭೀರ ಚರ್ಚೆ ನಡೆಯುತ್ತಿತ್ತು. ನಾಡಿನ ಸಾಹಿತಿಗಳ ಉಕ್ತಿಗಳ ಉಲ್ಲೇಖವೂ ಇರುತ್ತಿತ್ತು. ಈಗಿನ ಜನಪ್ರತಿನಿಧಿಗಳು ಪರಸ್ಪರ ನಿಂದನೆಯಲ್ಲಿಯೇ ಮುಳುಗಿದ್ದಾರೆ. ಅವರಿಗೆ ಓದುವ ಅಭಿರುಚಿ ಇಲ್ಲ. ಹಾಗಾಗಿ, ಗ್ರಂಥಾಲಯಗಳಿಗೆ ಪುಸ್ತಕ ಖರೀದಿಯಲ್ಲಿ ಆಗಿರುವ ವಿಳಂಬ ಕುರಿತು ಚರ್ಚೆಯನ್ನೂ ಮಾಡುತ್ತಿಲ್ಲ.
– ರಾಚು ಎಸ್. ಕೊಪ್ಪಾ, ಬಂಥನಾಳ
ಪ್ರತಿಯೊಂದು ಗ್ರಾಮವೂ ಸ್ವತಂತ್ರವಾದ ಒಂದು ಗಣರಾಜ್ಯದಂತೆ ಇರಬೇಕು; ಪ್ರತಿ ಹಳ್ಳಿಯೂ ಜೀವನಕ್ಕೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸಿಕೊಂಡು ಸ್ವಾವಲಂಬಿಯಾಗಬೇಕು ಎನ್ನುವುದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಆ ಧ್ಯೇಯದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧೀಜಿಯ ಹೆಸರಿಡುವ ಸರ್ಕಾರದ ಚಿಂತನೆ ಸ್ವಾಗತಾರ್ಹ. ಗ್ರಾಮಕ್ಕೆ ಸಂಬಂಧಿಸಿದಂತೆ ಇದೊಂದು ಭಿನ್ನ ಕಲ್ಪನೆ. ಆದರೆ, ಕೇವಲ ಹೆಸರಿಟ್ಟರೆ ಸಾಲದು. ಗ್ರಾಮಗಳು ರಾಷ್ಟ್ರಪಿತ ಕನಸು ಕಂಡಂತೆ ಅಭಿವೃದ್ಧಿ ಕಾಣಬೇಕು. ಗಾಂಧಿ ನಾಮಕರಣದ ಯೋಚನೆ ರಾಜಕೀಯಪ್ರೇರಿತವಾಗಿ ಸ್ವಹಿತಾಸಕ್ತಿಯಿಂದ ಗ್ರಾಮಗಳ ಬಲಿಗೆ ಹೇತುವಾಗದಿರಲಿ.
– ಆಮಿರ್ ಅಶ್ಅರೀ, ಬನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.