ADVERTISEMENT

ವಾಚಕರ ವಾಣಿ: ಗ್ರಾಮದ ಐತಿಹಾಸಿಕ ಹಿನ್ನೆಲೆ ಗೌರವಿಸಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 19:21 IST
Last Updated 29 ಜೂನ್ 2021, 19:21 IST

ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಕಾಸರಗೋಡು ಜಿಲ್ಲೆಯ ಕೆಲವು ಹಳ್ಳಿಗಳ ಹೆಸರುಗಳನ್ನು ಬದಲಾವಣೆ ಮಾಡಿ ಮಲಯಾಳಂ ಹೆಸರುಗಳನ್ನು ಇಡಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಯಾವುದೇ ಪ್ರದೇಶಕ್ಕೆ ಮರುನಾಮಕರಣ ಅಥವಾ ಐತಿಹಾಸಿಕ ಹಿನ್ನೆಲೆಗೆ ಧಕ್ಕೆ ಮಾಡುವ ಕಾರ್ಯವನ್ನು ಯಾವುದೇ ಸರ್ಕಾರ ಮಾಡಬಾರದು. ಅದು ಉತ್ತರಪ್ರದೇಶ, ಗುಜರಾತ್, ಕೇರಳ, ಕರ್ನಾಟಕ ಎಲ್ಲಿಯೇ ಆಗಲಿ ಪ್ರತಿಯೊಂದು ಹಳ್ಳಿಯ ಹೆಸರಿಗೂ ಐತಿಹಾಸಿಕ, ಪೌರಾಣಿಕ ಮಹತ್ವ ಮತ್ತು ಕಾರಣಗಳಿರುತ್ತವೆ.

ಅಲ್ಲದೆ ಯಾವುದೇ ಒಂದು ಭಾಷೆಯ ಪ್ರಭಾವವನ್ನು ಒಂದು ನೇರರೇಖೆ ಗಡಿ ತಡೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಗಡಿ ಭಾಗದ ಜನರು ದ್ವಿಭಾಷಿಕರಾಗಿರುತ್ತಾರೆ ಅಥವಾ ಒಂದು ಭಾಷೆಯ ಜನರು ಮತ್ತೊಂದು ಭಾಷಿಕರ ರಾಜ್ಯದಲ್ಲಿ ಹಂಚಿ ಹೋಗಿರುತ್ತಾರೆ. ಅದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಇಂದು ಕನ್ನಡ ಮಾತನಾಡುವ ಜನರ ಯಾವುದೋ ಗ್ರಾಮ ಕೇರಳಕ್ಕೆ ಸೇರಿರಬಹುದು, ಮಲಯಾಳಂ ಮಾತನಾಡುವ ಜನರ ಗ್ರಾಮ ಕರ್ನಾಟಕಕ್ಕೆ ಸೇರಿರಬಹುದು. ಆದರೆ ಅಲ್ಲಿನ ಜನರ ಭಾವನೆ, ಗ್ರಾಮದ ಐತಿಹಾಸಿಕ ಹಿನ್ನೆಲೆಯನ್ನು ಗೌರವಿಸುವುದು ಪ್ರಬುದ್ಧ ಸಮಾಜದ ಕರ್ತವ್ಯ.

ತಾತ್ವಿಕವಾಗಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಅವರ ನಿಲುವುಗಳನ್ನು ವಿರೋಧಿಸುವ ಪಿಣರಾಯಿ ವಿಜಯನ್ ಮತ್ತು ಅವರ ನೇತೃತ್ವದ ಸರ್ಕಾರಕ್ಕೆ ಇಂತಹ ನಿರ್ಧಾರಗಳು ಶೋಭೆ ತರುವುದಿಲ್ಲ. ಅವರು ಶೀಘ್ರ ಈ ನಿರ್ಧಾರದಿಂದ ಹಿಂದೆ ಸರಿಯುವುದು ಉತ್ತಮ.
-ನಂದನ್ ಖಂಡೇನಹಳ್ಳಿ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.