ADVERTISEMENT

ವಾಚಕರ ವಾಣಿ: ಕಬ್ಬು ರೈತರ ಅಳಲಿಗೆ ತಕ್ಷಣ ಸ್ಪಂದಿಸಿ

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2025, 23:30 IST
Last Updated 4 ನವೆಂಬರ್ 2025, 23:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಪ್ರಶಸ್ತಿ: ಗಟ್ಟಿಮುಟ್ಟಾಗಿರುವಾಗಲೇ ಗುರ್ತಿಸಿ!

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೆ ತಯಾರಕ ಪೆನ್ನ ಓಬಳಯ್ಯನವರು, ರಾಜ್ಯೋತ್ಸವದ ಮರುದಿನವೇ ನಿಧನರಾಗಿದ್ದಾರೆ. ದೊರೆತ ಪ್ರಶಸ್ತಿಯನ್ನು ಆನಂದಿಸುವುದಕ್ಕೆ ಅವರು ನಮ್ಮೊಡನಿಲ್ಲ. ಪ್ರಶಸ್ತಿಯಿಂದ ಪ್ರೋತ್ಸಾಹಿತರಾಗಿ ಮತ್ತಷ್ಟು ಸಾಧನೆ ಮಾಡಲು ಅವರಿಗೆ ವಯಸ್ಸು ಕೂಡ ಇರಲಿಲ್ಲ. ಪ್ರಶಸ್ತಿಗಳಿಂದ ಸಾಧಕರನ್ನು ಗುರುತಿಸುವುದು ಮುಖ್ಯ. ಅದಕ್ಕೂ ಮಿಗಿಲಾಗಿ, ಇನ್ನೂ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಷ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿದ್ದು, ಮತ್ತಷ್ಟು ಸಾಧನೆ ಮಾಡಬಲ್ಲ ಸಾಮರ್ಥ್ಯ ಇರುವಾಗಲೇ ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಆಗ ಅವರು ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ.

ADVERTISEMENT

ಜಿ. ಬೈರೇಗೌಡ, ನೆಲಮಂಗಲ 

ಕಬ್ಬು ರೈತರ ಅಳಲಿಗೆ ತಕ್ಷಣ ಸ್ಪಂದಿಸಿ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪೂರ ಕ್ರಾಸ್‌ನಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಸಾವಿರಾರು ರೈತರು ಹೋರಾಟ ನಡೆಸುತ್ತಿದ್ದಾರೆ. ಹೋರಾಟವು ಗಂಭೀರ ಸ್ವರೂಪ ಪಡೆದಿದೆ. ಆದರೆ, ರಾಜ್ಯದ ಆಡಳಿತ ವ್ಯವಸ್ಥೆಯು ರೈತರ ಕೂಗು ಕೇಳಿಸಿಕೊಂಡರೂ ಜಾಣಮೌನ ವಹಿಸಿರುವುದು ಸರಿಯಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು, ರೈತರ ಮನವಿ ಕೇಳದೆ ಮುಗುಮ್ಮಾಗಿರುವುದು ಸರಿಯಾದ ನಡೆಯಲ್ಲ. ಮಹಾರಾಷ್ಟ್ರದಲ್ಲಿ ಈಗಾಗಲೇ ಘೋಷಿಸಿರುವಂತೆ ರಾಜ್ಯದಲ್ಲಿಯೂ ಕಬ್ಬಿಗೆ ನ್ಯಾಯಯುತ ಬೆಲೆಯನ್ನು ತಕ್ಷಣವೇ ಘೋಷಿಸಬೇಕು.

ಬೀರಪ್ಪ ಡಿ. ಡಂಬಳಿ, ಅಥಣಿ

ಹುಲಿ ಉಪಟಳ: ಸೆರೆ ಪರಿಹಾರವಲ್ಲ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ. ಹುಲಿ ದಾಳಿಗೆ ರೈತರು ಹಾಗೂ ಕೃಷಿ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಈ ಒತ್ತಡ ಪರಿಸ್ಥಿತಿ ನಿಭಾಯಿಸುವ ದಿಸೆಯಲ್ಲಿ ಅರಣ್ಯ ಇಲಾಖೆಯು ಹುಲಿ ಸೆರೆ ಹಿಡಿಯುವ ತಾತ್ಕಾಲಿಕ ಪರಿಹಾರದ ಮೊರೆ ಹೋಗಿದೆ. ಈ ನಿಲುವು ಒಂದು ರೀತಿಯಲ್ಲಿ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಹಲವು ವರ್ಷದಿಂದ ಅರಣ್ಯ ಒತ್ತುವರಿ ತೆರವು ನಡೆದಿಲ್ಲ. ಅರಣ್ಯದ ಸುತ್ತಲೂ ವೈಜ್ಞಾನಿಕವಾಗಿ ಕಾಪು ವಲಯವನ್ನು (ಬಫರ್‌ ಜೋನ್‌) ಸಂರಕ್ಷಿಸುವ ಕೆಲಸವಾಗಿಲ್ಲ. ಇದು ಕೂಡ ಹುಲಿಗಳ ಉಪಟಳ ಹೆಚ್ಚಳಕ್ಕೆ ಕಾರಣಗಳಲ್ಲಿ ಒಂದಾಗಿದೆ. ಸರ್ಕಾರ ಹುಲಿಗಳ ಸಂಖ್ಯೆ ಹೆಚ್ಚಳಕ್ಕೆ ಪೂರಕವಾದ ಕ್ರಮಕೈಗೊಂಡರೆ ಸಾಲದು. ಅವುಗಳ ಆವಾಸಸ್ಥಳವನ್ನು ಸುಸ್ಥಿರ ನೆಲೆಯಲ್ಲಿ ಅಭಿವೃದ್ಧಿಪಡಿಸಬೇಕು. ಇದಕ್ಕೆ ಮಾದರಿಯಾದ ಸಂರಕ್ಷಣಾ ವ್ಯವಸ್ಥೆಯೊಂದನ್ನು ರೂಪಿಸುವ ತುರ್ತಿದೆ.

ಮಹೇಶ ಪಿ. ಪುಟ್ಟೇಗೌಡನಹುಂಡಿ, ಚಾಮರಾಜನಗರ 

ಡಿಜಿಟಲ್‌ ಸಾಕ್ಷರತೆ ಹೆಚ್ಚುವುದು ಅಗತ್ಯ

‘ಡಿಜಿಟಲ್‌ ಅರೆಸ್ಟ್‌’ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಇದು ಸಮಾಜದಲ್ಲಿ ನಿರ್ಮಾಣವಾಗುತ್ತಿರುವ ಜ್ವಲಂತ ಆರ್ಥಿಕ ಸಮಸ್ಯೆಗೆ ಹಿಡಿದ ಕನ್ನಡಿ. ಮೋಸ ಹೋದವರಲ್ಲಿ ಬಹುಪಾಲು ಸಂತ್ರಸ್ತರು ಹಿರಿಯ ನಾಗರಿಕರೇ ಆಗಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಮುಪ್ಪಿನ ದಿನಗಳಲ್ಲಿ ಅನುಕೂಲವಾಗಲೆಂದು ಜತನದಿಂದ ಕಾಪಾಡಿಕೊಂಡಿದ್ದನ್ನು ದುರುಳರು ದೋಚಿದಾಗ ಉಂಟಾಗುವ ಆಘಾತ ಊಹಿಸಲೂ ಸಾಧ್ಯವಿಲ್ಲ. ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಎಲ್ಲರ ಕೈಗೆಟುಕಿದರೆ ಉಂಟಾಗುವ ಅನುಕೂಲಗಳ ಜೊತೆಗೆ ಸೃಷ್ಟಿಯಾಗುವ ಇಂತಹ ಸಮಸ್ಯೆಗಳಿಗೂ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಸುರಕ್ಷತಾ ಕ್ರಮಗಳ ಕುರಿತು ಜನರಿಗೆ, ಮುಖ್ಯವಾಗಿ ಹಿರಿಯ ನಾಗರಿಕರಿಗೆ ಡಿಜಿಟಲ್‌ ಸಾಕ್ಷರತೆ ಮೂಡಿಸಬೇಕಿದೆ. ಈ ದಿಸೆಯಲ್ಲಿ ಸರ್ಕಾರ, ಸಂಘ–ಸಂಸ್ಥೆಗಳಿಂದ ಎಲ್ಲೆಡೆ ಅಭಿಯಾನ ನಡೆಯಬೇಕಿದೆ.

ಆನಂದ ಎನ್.ಎಲ್‌., ಅಜ್ಜಂಪುರ

ಕೊಂಕು ಹುಡುಕಾಟದಲ್ಲಿ ವಿಪಕ್ಷ ಕಣ್ಮರೆ

ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಪ್ರತಿದಿನವೂ ವಿರೋಧ ಪಕ್ಷದ ನಾಯಕರು ಆರೋಪಿಸುತ್ತಾರೆ. ಮತ್ತೊಂದೆಡೆ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಘೋಷಿಸಿದರೂ ಅದಕ್ಕೆ ಅಡ್ಡಗಾಲು ಹಾಕುತ್ತಾರೆ. ಬಹುಮತ ಪಡೆದ ಪಕ್ಷದ ಆಡಳಿತಕ್ಕೆ ತೊಂದರೆ ಕೊಡುವುದು, ಸಮಾಜದಲ್ಲಿ ಧರ್ಮ, ಭಾಷೆ ವಿಷಯಗಳಿಗೆ ಕುಮ್ಮಕ್ಕು ನೀಡಿ ಅಶಾಂತಿ ಸೃಷ್ಟಿಸುವುದು ಮತದಾರರಿಗೆ ಮಾಡುವ ಅವಮಾನವಲ್ಲವೆ? ಸರ್ಕಾರದ ಲೋಪದೋಷವನ್ನು ಬಯಲುಗೊಳಿಸುವುದು ವಿಪಕ್ಷಗಳ ಜವಾಬ್ದಾರಿಯೂ ಹೌದು. ಹಾಗಿದ್ದರೂ, ಅಭಿವೃದ್ಧಿ ಕಾರ್ಯ ಬೆಂಬಲಿಸುವುದು ಜವಾಬ್ದಾರಿಯಲ್ಲವೆ?

ಚಂದ್ರಶೇಖರ ಎಚ್.ಎಸ್., ಬೆಂಗಳೂರು

ಆನ್‌ಲೈನ್ ಅಶ್ಲೀಲತೆ: ಲಗಾಮು ಹಾಕಿ

ಅಪ್ರಾಪ್ತರು ಆನ್‌ಲೈನ್‌ನಲ್ಲಿನ ಅಶ್ಲೀಲ ವಿಷಯಗಳ ಸೆಳೆತಕ್ಕೆ ಸಿಗುವುದರಿಂದ ಆಗಬಹುದಾದ ಅಪಾಯ ಗಂಭೀರವಾದುದು ಮತ್ತು ಅದನ್ನು ನಿರ್ಲಕ್ಷಿಸಲಾಗದು. ಇದರ ತಡೆಗೆ ಕೇಂದ್ರ ಸರ್ಕಾರವು ಡಿಜಿಟಲ್ ಸುರಕ್ಷತೆ ನೀತಿ ಮತ್ತು ಜಾಗೃತಿ ಮೂಡಿಸಬೇಕಿದೆ. ಡಿಜಿಟಲ್ ಸಾಕ್ಷರತೆ ಮತ್ತು ಪೋಷಕರ ಸಬಲೀಕರಣ ಮುಖ್ಯ ಅಂಶವಾಗಬೇಕು. ಅಪ್ರಾಪ್ತರು ಬಳಸುವ ಡಿಜಿಟಲ್ ಸಾಧನಗಳಲ್ಲಿ ಕಡ್ಡಾಯವಾಗಿ ವಿಷಯ ಶೋಧಕ ವ್ಯವಸ್ಥೆ ಇರಬೇಕು. ವಯಸ್ಸು ದೃಢೀಕರಿಸುವ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ ಹಾಗೂ ಇಂಟರ್‌ನೆಟ್‌ ಸೇವಾದಾತರ ಸಹಯೋಗದಡಿ ಅಶ್ಲೀಲ ವಿಷಯಗಳ ಪ್ರವೇಶವನ್ನು ತಡೆಹಿಡಿಯಬೇಕು. ಶಾಲಾ ಪಠ್ಯದಲ್ಲಿ ಡಿಜಿಟಲ್ ಶಿಕ್ಷಣವನ್ನು ಸೇರ್ಪಡೆಗೊಳಿಸಬೇಕು. ಮಕ್ಕಳು ಆರೋಗ್ಯಕರ ಮಾಹಿತಿ ಮತ್ತು ಹಾನಿಕಾರಕ ವಿಷಯಗಳ ನಡುವಿನ ವ್ಯತ್ಯಾಸ ಅರಿಯುವಂತೆ ಮಾಡಬೇಕಿದೆ.

ವಿಜಯಕುಮಾರ್‌ ಎಚ್.ಕೆ., ರಾಯಚೂರು