ADVERTISEMENT

ಭ್ರಷ್ಟರ ಪರ ನಿಲುವು ಖಂಡನೀಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ಅಕ್ರಮ ಮಾರ್ಗದಿಂದ ಆಯ್ಕೆಯಾಗಿರುವುದು ಸಾಬೀತಾಗಿರುವುದರಿಂದ, 362 ಅಭ್ಯರ್ಥಿಗಳು ನೇಮಕಾತಿಗೆ ಅರ್ಹರಲ್ಲವೆಂದು ಹೇಳಿರುವ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌, ಇವರ ಆಯ್ಕೆ ಪ್ರಕ್ರಿಯೆ ರದ್ದು ಮಾಡಿದ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿವೆ. ಹೀಗಿರುವಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಈ ಅಭ್ಯರ್ಥಿಗಳ ಪರವಾಗಿ ಬ್ಯಾಟ್ ಬೀಸಿರುವುದನ್ನು (ಪ್ರ.ವಾ., ಜ. 18) ನೋಡಿದರೆ ಸೋಜಿಗವೆನಿಸುತ್ತದೆ. ನ್ಯಾಯಾಲಯಗಳ ಆದೇಶಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿಗೆ ಈ ಕುರಿತು ಪತ್ರ ಬರೆಯುವುದು ಗೌರವಯುತ ಸ್ಥಾನದಲ್ಲಿರುವವರ ಘನತೆಗೆ ತಕ್ಕುದಲ್ಲ. ಆ ಪತ್ರ ಆಧರಿಸಿ ಕ್ರಮ ತೆಗೆದುಕೊಳ್ಳಲು ಕಡತ ಮಂಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚಿಸುವುದು ನ್ಯಾಯಾಂಗದ ತೀರ್ಪಿಗೆ ಅಗೌರವ ತೋರಿಸಿದಂತೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಅವರು ‘ದೇವೇಗೌಡರ ಮನವಿಗೆ ಸೊಪ್ಪು ಹಾಕಬೇಡಿ’ ಎಂದಿರುವುದು (ಪ್ರ.ವಾ., ಜ. 22) ಸಮಂಜಸವಾಗಿದೆ. ಭ್ರಷ್ಟಾಚಾರ, ಸ್ವಜನಪಕ್ಷಪಾತದ ಮೂಲಕ ಆಯ್ಕೆಯಾದವರ ಪರವಾಗಿ ಮಾಜಿ ಪ್ರಧಾನಿ ನಿಂತುಕೊಳ್ಳುವುದಾದರೆ, ನ್ಯಾಯ ಮಾರ್ಗದಲ್ಲಿ ಪರೀಕ್ಷೆ ಬರೆದು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕಾರಣದಿಂದಾಗಿ ಅವಕಾಶ ವಂಚಿತರಾದ ಸಾವಿರಾರು ಅಭ್ಯರ್ಥಿಗಳ ಪರ ನಿಲ್ಲುವವರು ಯಾರು ಎಂದು ವಿಶ್ವನಾಥ್ ಅವರು ಕೇಳಿರುವುದು ಸರಿಯಾಗಿಯೇ ಇದೆ.

- ಈ.ನಂಜಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.