ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು- ೦7 ಸೆಪ್ಟೆಂಬರ್ 2025

ವಾಚಕರ ವಾಣಿ
Published 7 ಅಕ್ಟೋಬರ್ 2025, 0:04 IST
Last Updated 7 ಅಕ್ಟೋಬರ್ 2025, 0:04 IST
   

ಗಣಿಗಾರಿಕೆ ಸರ್ವೇಕ್ಷಣೆಗೆ ಅನುಮತಿ ಬೇಡ

ಹೊಳಲ್ಕೆರೆ ತಾಲ್ಲೂಕಿನ ಅರಣ್ಯ ಪರಿಸರದಲ್ಲಿ ಗಣಿಗಾರಿಕೆ ಸರ್ವೇಕ್ಷಣೆಗೆ ಅರಣ್ಯ ಇಲಾಖೆ ಅನುಮತಿಸಿರುವುದು ವರದಿಯಾಗಿದೆ (ಪ್ರ.ವಾ.,ಅ. 5). ಇದು ಅಕ್ಷಮ್ಯ. ಇದರಿಂದ, ಬರಪೀಡಿತ ಜಿಲ್ಲೆಯಲ್ಲಿನ ಏಕೈಕ ಹಸಿರು ಪರಿಸರಕ್ಕೆ ಹಾನಿಯೊದಗುವ ಸಂಭವ ಅಧಿಕ. ಪಶ್ಚಿಮ ಘಟ್ಟಗಳ ಆರಂಭಿಕ ಕೊಂಡಿಯಂತಿರುವ ಹಾಗೂ ಹೆಚ್ಚು ಮಳೆ ಸುರಿಯುವ ಈ ಅರೆಮಲೆನಾಡು ಭಾಗದಲ್ಲಿ ಸಾವಿರಾರು ಮರಗಳ ಹನನ, ರಸ್ತೆ ನಿರ್ಮಾಣ ಮುಂತಾದ ಕಾರ್ಯಗಳಿಂದ ಅಲ್ಲಿನ ಜೀವವೈವಿಧ್ಯದ ಪಾರಂಪರಿಕ ಲಯಕ್ಕೆ ಭಂಗವುಂಟಾಗುವುದು. ಅರಣ್ಯ ಇಲಾಖೆ ತಕ್ಷಣವೇ ಈ ಕ್ರಮದಿಂದ ಹಿಂದೆ ಸರಿದು, ಈಗ ನೀಡಿರುವ ಅನುಮತಿ ಹಿಂಪಡೆಯುವುದು ಕ್ಷೇಮಕರ.

-ಚಂದ್ರಶೇಖರ ತಾಳ್ಯ, ಹೊಳಲ್ಕೆರೆ

ರಾಜಕೀಯಕ್ಕೆ ‘ಆಟ’ ಬಲಿಯಾಗದಿರಲಿ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಆಟಗಾರ್ತಿಯರೊಂದಿಗೆ ಭಾರತೀಯ ಆಟಗಾರ್ತಿಯರು ಹಸ್ತಲಾಘವ ಮಾಡಲಿಲ್ಲ. ಈ ನಡವಳಿಕೆ ಶೋಭೆ ತರುವಂತಹುದಲ್ಲ. ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪುರುಷ ಆಟಗಾರರೂ ಹೀಗೆಯೇ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ್ದರು.

ADVERTISEMENT

ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಗಳು ಸೀಮಾತೀತವಾಗಿ ಮಾನವೀಯ ಸಂಬಂಧಗಳನ್ನು ಮೌಲ್ಯಾಧಾರಿತವಾಗಿ ಬೆಸೆಯಬೇಕು. ರಾಜಕೀಯದ ವಿಷ(ಯ)ಕ್ಕೆ ಬಲಿಯಾಗದೆ ಉತ್ತಮ ಸಂದೇಶ ನೀಡಬೇಕು.

-ಮಹಾಂತೇಶ್ ಬಿ. ನಿಟ್ಟೂರು, ದಾವಣಗೆರೆ

‘ಎಐ’ ಬಳಕೆಗೆ ಮಾರ್ಗಸೂಚಿ ರಚಿಸಿ

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಯಂತ್ರಗಳು ಈಗ ಮಾನವರಂತೆ ವರ್ತಿಸುತ್ತಿವೆ, ನಿರ್ಧಾರ ತೆಗೆದುಕೊಳ್ಳುತ್ತಿವೆ ಹಾಗೂ ಕಲೆ ಮತ್ತು ಸಾಹಿತ್ಯವನ್ನೂ ಸೃಷ್ಟಿಸುತ್ತಿವೆ. ಆದರೆ ಈ ಪ್ರಗತಿಗೆ ಕೆಲವು ಅಡೆತಡೆಗಳೂ ಇವೆ. ಉದ್ಯೋಗಗಳ ಮೇಲೆ ‘ಎಐ’ ಪರಿಣಾಮ ಗಂಭೀರವಾಗಿದೆ. ಅನೇಕ ಮಾನವ ಉದ್ಯೋಗಗಳು ಯಾಂತ್ರಿಕ ವ್ಯವಸ್ಥೆಗಳ ಮೂಲಕ ಬದಲಾಗುತ್ತಿರುವುದರಿಂದ ನಿರುದ್ಯೋಗ ಉಲ್ಬಣಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳು ‘ಎಐ’ನ ಸಕಾರಾತ್ಮಕ ಬಳಕೆಗೆ ಮಾರ್ಗಸೂಚಿಗಳನ್ನು ರೂಪಿಸಬೇಕು. ಯುವಪೀಳಿಗೆಯು ಈ ತಂತ್ರಜ್ಞಾನವನ್ನು ಮಾನವಹಿತದ ದೃಷ್ಟಿಯಿಂದ ಉಪಯೋಗಿಸುವ ಮನೋಭಾವ ಬೆಳೆಸಬೇಕು.

-ಮಲ್ಲಿಕಾರ್ಜುನ ಗೆಡ್ಡೆರ, ತುಮಕೂರು

‘ಶಕ್ತಿ’ ದಾಖಲೆ ಅಭಿನಂದನೀಯ, ಆದರೆ...

ಸರ್ಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮವಾದ ‘ಶಕ್ತಿ’ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ವಿಶ್ವದಾಖಲೆ ನಿರ್ಮಿಸಿರುವುದು ಸಂತೋಷದ ಸಂಗತಿ. ‘ಶಕ್ತಿ’ ರಾಜ್ಯ ಸರ್ಕಾರದ ಪ್ರಶಂಸನೀಯ ಯೋಜನೆ. ಆದರೆ, ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು ಹಾಗೂ ಮಕ್ಕಳ ಬಗ್ಗೆಯೂ ಸರ್ಕಾರ ಯೋಚಿಸಬೇಕು. ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಾಗಿಲ್ಲ; ಪ್ರಯಾಣಿಸುವವರು ಹೆಚ್ಚಾಗಿದ್ದಾರೆ. ಅಧಿಕಾರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಮೂಲಕ ಜನರ ಸಮಸ್ಯೆ ಅರಿಯಬೇಕಾಗಿದೆ. ಬಸ್‌ಗಳ ಸಂಖ್ಯೆ ಹೆಚ್ಚಿಸುವ, ಮಹಿಳೆಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು.

-ಎಚ್. ದೊಡ್ಡ ಮಾರಯ್ಯ, ಬೆಂಗಳೂರು

ಈ ಇಬ್ಬರ ಸಾವುಗಳು ನ್ಯಾಯವೇ?

ಒಂದೇ ವಾರದ ಅಂತರದಲ್ಲಿ ನಾವು ಇಬ್ಬರು ಸಮವಯಸ್ಸಿನ ಖ್ಯಾತನಾಮರನ್ನು ಕಳೆದುಕೊಂಡಿದ್ದೇವೆ.‌ ಒಬ್ಬರು ಯಶವಂತ ಸರದೇಶಪಾಂಡೆ: ತಮ್ಮದೇ ಆದ

ವಿಶಿಷ್ಟ ಬರವಣಿಗೆ, ಮಾತಿನ ಗತ್ತುಗಾರಿಕೆಯಿಂದ ರಂಗಭೂಮಿಗೆ ಹೊಸತನದ ಸ್ಪರ್ಶ ಕೊಟ್ಟವರು. ಇನ್ನೊಬ್ಬರು, ತಮ್ಮದೇ ಆದ ವಿಶಿಷ್ಟ ಕಥೆಗಳಿಂದ ಹೆಸರುವಾಸಿಯಾಗಿದ್ದ ಮೊಗಳ್ಳಿ ಗಣೇಶ್. ಯಶವಂತ ಅವರು ಕನ್ನಡ ರಂಗಭೂಮಿಗೆ ಭವಿಷ್ಯದಲ್ಲಿ ಏನೇನು ಹೊಸ ಐಡಿಯಾ ಕೊಡಾಕ ಹೊಂಟಿದ್ರೊ ಏನೋ? ನಡುದಾರಿಯಲ್ಲೇ ನಿರ್ಗಮಿಸಿದರು. ಮೊಗಳ್ಳಿಯವರು ತಮ್ಮ ಬತ್ತಳಿಕೆಯಲ್ಲಿ ಇನ್ನೂ ಎಂತೆಂಥ ಕಥೆ ಹೆಣೆಯುವ ತಂತ್ರ ರೂಪಿಸಿದ್ದರೋ ಏನೋ? ಮಧ್ಯದಲ್ಲಿಯೇ ಬಿಟ್ಟು ಹೋದರು. ವಿಧಿ ನಿರ್ಣಯ ಘೋರ!

-ಅಶೋಕ ಚಿಕ್ಕಪರಪ್ಪಾ, ಬೆಂಗಳೂರು

ವನ್ಯಜೀವಿ ರಕ್ಷಣೆಗೆ ಸರ್ಕಾರ ಮುಂದಾಗಲಿ

ರಾಜ್ಯದಲ್ಲಿ ಇತ್ತೀಚೆಗೆ ವನ್ಯಪ್ರಾಣಿಗಳ ಸಾವು ಅಥವಾ ಹತ್ಯೆ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪದ ಜೊತೆಗೆ, ಪ್ರಾಣಿಹಂತಕರೊಡನೆ ಅವರ ಅಕ್ರಮ ಸಂಬಂಧದ ಶಂಕೆ ಇದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ, ಅಮೂಲ್ಯ ವನ್ಯಜೀವಿಗಳ ರಕ್ಷಣೆ ಮಾಡಬೇಕಾಗಿದೆ.

-ಎಸ್.ಎನ್. ರಮೇಶ್, ಸಾತನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.