ವಾಚಕರ ವಾಣಿ
ರಾಜ್ಯ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಅಬಕಾರಿ ತೆರಿಗೆಯನ್ನು ಇತ್ತೀಚೆಗೆ ಏರಿಸಿತ್ತು. ಅದರಂತೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬಂದಿರಬಹುದು. ಆದರೆ, ಕೆಲವು ಕುಟುಂಬಗಳ ಸದಸ್ಯರು ಮದ್ಯಕ್ಕೆ ದಾಸರಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದರಿಂದ ಅವರ ಕುಟುಂಬಸ್ಥರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ
ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇಂತಹ ಮದ್ಯವ್ಯಸನಿಗಳನ್ನು ವ್ಯಸನಮುಕ್ತ ರಾಗಿಸಲು ಸರ್ಕಾರವೇ ವ್ಯಸನಮುಕ್ತ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಆ ಮೂಲಕ ನೊಂದ ಕುಟುಂಬಗಳಿಗೆ ನೆಮ್ಮದಿ ಭಾಗ್ಯ ಕರುಣಿಸಬೇಕಿದೆ.
-ಬೊ.ನಾ. ಮಂಜುನಾಥ, ಬೊಮ್ಮೇನಹಳ್ಳಿ
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆದಿದ್ದು 2016ರಲ್ಲಿ. ಆ ಬಳಿಕ ಚುನಾವಣೆಯೇ ನಡೆದಿಲ್ಲ. ಆದರೆ, ಈ ಚುನಾವಣೆ ಬಳಿಕ ಎರಡು ಭಾರಿ ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿದೆ. ಪಂಚಾಯತ್‌ರಾಜ್ ವ್ಯವಸ್ಥೆಯೇ ಭಾರತದ ರಾಜಕೀಯ ವ್ಯವಸ್ಥೆಯ ಬುನಾದಿ ಎಂದು ಗಾಂಧೀಜಿ ಹೇಳಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಆಶಯ ಈಡೇರಲು ಪಂಚಾಯಿತಿ ಚುನಾವಣೆಗಳು ಅವಶ್ಯಕ.
ಈಗಾಗಲೇ, ಗ್ರಾಮ ಪಂಚಾಯಿತಿಗಳ ಅಧಿಕಾರದ ಅವಧಿ ಮುಗಿದಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದೆ ಹೋದರೆ ಗ್ರಾಮೀಣ ಜನರ ಸ್ಥಿತಿ ಏನು? ಹಳ್ಳಿಗರು ಕುಂದುಕೊರತೆ ಹೇಳಿಕೊಳ್ಳಲು ವಿಧಾನಸೌಧಕ್ಕೆ ಬರಬೇಕೆ?ನುಡಿದಂತೆ ನಡೆದ, ನಡೆವ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು.
-ಚಂದ್ರಶೇಖರ ಎಸ್. ಚಿನಕೇಕರ, ಚಿಕ್ಕೋಡಿ
ಬೆಂಗಳೂರಿನಲ್ಲಿ ಎಸ್‌ಡಿಪಿಐ ಆಯೋಜಿಸಿರುವ ಸಮಾವೇಶಕ್ಕೆ ಅನುಮತಿ ನೀಡಬಾರದೆಂದು ಶಾಸಕ ಬಿ.ಆರ್. ಪಾಟೀಲ ಮತ್ತಿತರರು ಆಗ್ರಹಿಸಿದ್ದಾರೆ. ಅವರಪ್ರಕಾರ ಎಸ್‌ಡಿಪಿಐ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಂತೆ ಕೋಮುವಾದಿ ಆಗಿದೆ; ಸಮಾಜದಲ್ಲಿ ಸಾಮರಸ್ಯ ಕೆಡಿಸುತ್ತಿದೆ. ಹಾಗಾಗಿ, ಎರಡೂ ಸಿದ್ಧಾಂತಗಳನ್ನುಸಮಾನವಾಗಿ ವಿರೋಧಿಸಬೇಕು ಎಂಬುದಾಗಿದೆ. ಅವರು ಮರೆತಿರಬಹುದಾದ ಸತ್ಯವೇನೆಂದರೆ ಎಸ್‌ಡಿಪಿಐ ನೋಂದಾಯಿತ ರಾಜಕೀಯ ಪಕ್ಷವೇ ಹೊರತು ನಿಷೇಧಿತ ಸಂಘಟನೆಯಲ್ಲ. ಎಸ್‌ಡಿಪಿಐ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದುಎಂದು ಹೇಳುವ ಅವರು, ಹಿಂದೆಂದೂ ಬಿಜೆಪಿಯ ರಾಜಕೀಯ ಸಮಾವೇಶ ಅಥವಾ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶಗಳಿಗೆ ಅನುಮತಿ ನೀಡಬಾರದೆಂದು ಆಗ್ರಹಿಸಿದ್ದ ದಾಖಲೆ ಇಲ್ಲ. ಹಾಗಾಗಿ, ಅವರ ಆಗ್ರಹವು ಏಕಪಕ್ಷೀಯ ಹಾಗೂ ಸಾಂವಿಧಾನಿಕ ವಿರೋಧಿಯಾಗಿದೆ.
-ಭೀಮನಗೌಡ ಕಾಶಿರೆಡ್ಡಿ, ಬೆಂಗಳೂರು
ರಾಜ್ಯದಲ್ಲಿ 12 ನದಿಗಳು ಮಲಿನವಾಗಿರುವ ಬಗ್ಗೆ ವರದಿಯಾಗಿದೆ. ಇದು ನಿಜಕ್ಕೂ ಆತಂಕಕಾರಿ. ಜೀವಪರಿಸರದಲ್ಲಿ ನದಿಗಳ ಪಾತ್ರ ಹಿರಿದು. ಮನುಷ್ಯ ಸೇರಿದಂತೆ ಲಕ್ಷಾಂತರ ಜೀವಿಗಳ ಬದುಕು ಅವುಗಳೊಂದಿಗೆ ಬೆಸೆದುಕೊಂಡಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನದಿಗಳ ಬಗ್ಗೆ ಜನ ಸಮುದಾಯದಲ್ಲಿ ಯಾವುದೇ ಕಾಳಜಿ ಇಲ್ಲ. ದೇಶದ ಬಹುತೇಕ ಎಲ್ಲಾ ನದಿಗಳ ಒಡಲಿಗೆ ಒಳಚರಂಡಿ ನೀರು, ಕಾರ್ಖಾನೆ ತ್ಯಾಜ್ಯ ಸೇರುತ್ತಿದೆ. ಒಳಚರಂಡಿ ನೀರಿನ ಶುದ್ಧೀಕರಣಕ್ಕೆ ವೈಜ್ಞಾನಿಕವಾದ ಪರ್ಯಾಯ ಮಾರ್ಗ ರೂಪಿಸದ ಹೊರತು ನದಿ ಮಾಲಿನ್ಯ ತಡೆಯಲು ಸಾಧ್ಯವಿಲ್ಲ. ನದಿಗಳ ಸ್ಥಿತಿಯು ದಯನೀಯವಾಗಿದ್ದರೂ, ಆಳುವ ವರ್ಗ ಮಾತ್ರ ನದಿಗಳ ಜೋಡಣೆಗೆ ಪಣತೊಟ್ಟಿರುವುದು ದುರದೃಷ್ಟಕರ.
-ಎಚ್.ಆರ್. ಪ್ರಕಾಶ್, ಮಂಡ್ಯ
ರಾಜ್ಯ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಕನ್ನಡ ಪುಸ್ತಕಗಳ ಖರೀದಿಗೆ ₹10 ಕೋಟಿ ಮೀಸಲಿಟ್ಟಿದ್ದು ದಾಖಲೆಯೇ ಸರಿ. ಆದರೆ, ಇಂದು ಕನ್ನಡ ಪುಸ್ತಕಗಳ ಉದ್ಯಮವು ಹಲವು ಗಂಭೀರ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕಚ್ಚಾವಸ್ತುಗಳ
ಬೆಲೆ ಏರಿಕೆ, ಜಿಎಸ್‌ಟಿ ಮುಂತಾದ ಅಡೆತಡೆಗಳಿಂದ ಪುಸ್ತಕೋದ್ಯಮದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕನ್ನಡ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಆದರೆ, ಸರ್ಕಾರದ ಕೆಲವು ನೀತಿ ನಿರ್ಧಾರಗಳ ಕಾರಣದಿಂದ ಪುಸ್ತಕಗಳ ಖರೀದಿ ಹಾಗೂ
ವಿತರಣೆ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗಾಗಿ, ಈ ಬಾರಿಯ ಬಜೆಟ್ ನಲ್ಲಿ ಕನ್ನಡ ಪುಸ್ತಕಗಳ ಏಕಗವಾಕ್ಷಿ ಖರೀದಿ ಯೋಜನೆಗಾಗಿ ₹25 ಕೋಟಿ ಮೀಸಲಿಡಬೇಕಿದೆ. ಆ ಮೂಲಕ ಕನ್ನಡ ಪುಸ್ತಕೋದ್ಯಮಕ್ಕೆ ಒದಗಿರುವ ಸಂಕಷ್ಟವನ್ನು ನಿವಾರಿಸಬೇಕಾಗಿದೆ.
-ಸೃಷ್ಟಿ ನಾಗೇಶ್, ಬೆಂಗಳೂರು