ADVERTISEMENT

ವಾಚಕರ ವಾಣಿ: ಬುಧವಾರ, ಮೇ 10, 2023

​ಪ್ರಜಾವಾಣಿ ವಾರ್ತೆ
Published 9 ಮೇ 2023, 19:34 IST
Last Updated 9 ಮೇ 2023, 19:34 IST
   

ಹಕ್ಕು- ದಿಕ್ಕು

ಮತದಾನ ನಮ್ಮ ಹಕ್ಕು
ಮನಸು ಮಾಡಿದರೆ
ತೋರಬಹುದು ನಮ್ಮ ಮತ
ಪ್ರಜಾಪ್ರಭುತ್ವಕ್ಕೆ ಸೂಕ್ತ ದಿಕ್ಕು!

-ಮ.ಗು.ಬಸವಣ್ಣ, ನಂಜನಗೂಡು

ADVERTISEMENT

ಯುಪಿಎಸ್‌ಸಿ: ಒಕ್ಕೂಟಧರ್ಮ ಪಾಲನೆಯಾಗಲಿ

ಬಿಜೆಪಿ ನಾಯಕರಾದ ಗೃಹ ಸಚಿವ ಅಮಿತ್‌ ಶಾ ಅವರು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ, ‘ಯುಪಿಎಸ್‌ಸಿ ಪರೀಕ್ಷೆಯನ್ನು ನಮ್ಮ ಸರ್ಕಾರ ಕನ್ನಡದಲ್ಲಿ ಕೊಡುತ್ತಿದೆ. ಅದೂ ನಮ್ಮ ಸರ್ಕಾರ ಬಂದ ಮೇಲೆಯೇ ಇದು ಸಾಧ್ಯವಾಗಿದ್ದು’ ಎಂದು ಹೇಳಿದ್ದಾರೆ. ಇದು ಸಂಪೂರ್ಣ ತಪ್ಪು ಮಾಹಿತಿ. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಇಂದಿಗೂ ಇಂಗ್ಲಿಷ್‌ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಇದೇ 28ರಂದು ಒಕ್ಕೂಟ ಭಾರತದಾದ್ಯಂತ ಈ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆಯನ್ನು ಹಿಂದಿಯಲ್ಲಿ ಬರೆಯಲು ಅವಕಾಶ ಕೊಟ್ಟಂತೆ ಕನ್ನಡದಲ್ಲಿಯೂ ಬರೆಯಲು ಅವಕಾಶ ಕೊಡಬೇಕು. ಅದು ಒಕ್ಕೂಟಧರ್ಮ ಕೂಡ.

ರಾಜ್ಯಗಳು ರಚನೆಯಾಗಿರುವುದು ಭಾಷೆಗಳ ಆಧಾರದ ಮೇಲೆ. ಆಯಾ ರಾಜ್ಯ ಭಾಷೆಗಳಲ್ಲಿ ಆಡಳಿತ ನಡೆಸುವುದು, ಪರೀಕ್ಷೆಗೆ ಅವಕಾಶ ಕಲ್ಪಿಸುವುದು, ಜನಲಕ್ಷಣವನ್ನು ಉಳಿಸಿಕೊಳ್ಳುವುದು, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಒಕ್ಕೂಟ ಭಾರತ ಸರ್ಕಾರದ ಪ್ರಾಥಮಿಕ ಕೆಲಸ. ಸ್ವಾತಂತ್ರ್ಯ ಬಂದು ‌‌‌‌ಏಳು ದಶಕಗಳು ಕಳೆದರೂ ನಾವು ಇಂತಹ ವಿಷಯಗಳಲ್ಲಿ ಸಂಪೂರ್ಣರಾಗದಿರುವುದು ದೊಡ್ಡ ದೌರ್ಭಾಗ್ಯವೇ ಸರಿ. ಕನ್ನಡ ಅಸ್ಮಿತೆಯನ್ನು ಗುರುತಾಗಿ ಇಟ್ಟುಕೊಂಡಿದ್ದೇವೆ ಎಂದು ಹೇಳಿಕೊಳ್ಳುವ ಪಕ್ಷಗಳು ಮತ್ತು ಸಂಘಟನೆಗಳು ಈ ವಿಚಾರವಾಗಿ ಧ್ವನಿ ಎತ್ತಲಿ.

-ಗಿರೀಶ್ ಮತ್ತೇರ, ಯರಗಟ್ಪಿ‌ಹಳ್ಳಿ, ಚನ್ನಗಿರಿ

ಉಡೀಸ್ ಎಂಬ ಉಡಾಫೆ

ಉಕ್ರೇನ್ ಮತ್ತು ರಷ್ಯಾ ನಡುವೆ ಒಂದು ವರ್ಷದಿಂದಲೂ ಯುದ್ಧ ನಡೆಯುತ್ತಿದೆ. ಆದರೂ ಅದು ಇನ್ನೂ ಮುಕ್ತಾಯ ಆಗದಿರುವುದು ಆತಂಕಕಾರಿ ಸಂಗತಿ. ಎರಡೂ ರಾಷ್ಟ್ರಗಳು ವೈಯಕ್ತಿಕ ಅಹಮ್ಮಿಗೆ ಬಿದ್ದಿವೆ. ಇವುಗಳ ಹಿಂದೆ ಬಲಾಢ್ಯ ರಾಷ್ಟ್ರಗಳು ಇರುವುದು ಗುಟ್ಟಾಗೇನೂ ಉಳಿದಿಲ್ಲ. ಈ ನಡುವೆ ಅಣುಬಾಂಬ್‌ ಬಳಕೆಯ ಮಾತುಗಳು ಕೇಳಿಬರುತ್ತಿರುವುದರಿಂದ ಇಡೀ ವಿಶ್ವವೇ ಆತಂಕಕ್ಕೆ ಒಳಗಾಗಿದೆ. ಇದು ಅತ್ಯಂತ ಸೂಕ್ಷ್ಮ ಸಂಗತಿಯಾಗಿದೆ.

ಕನ್ನಡ ಸುದ್ದಿ ವಾಹಿನಿಯೊಂದು ಇತ್ತೀಚೆಗೆ ‘ಉಕ್ರೇನ್ ಉಡೀಸ್’ ಎಂದು ಬೇಜವಾಬ್ದಾರಿಯಿಂದ ಸುದ್ದಿ ಬಿತ್ತರ ಮಾಡಿದ್ದು ಖಂಡನೀಯ. ಅಣುಬಾಂಬ್‌ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಬದಲು ಇಂತಹ ಬೇಜವಾಬ್ದಾರಿ ಹೇಳಿಕೆ ಮತ್ತು ಸುದ್ದಿ ಪ್ರಸಾರವನ್ನು ಮಾಧ್ಯಮಗಳು ನಿಲ್ಲಿಸಲಿ. ಒಮ್ಮೆ ಅಣುಬಾಂಬ್‌ ಬಳಕೆಯಾದರೆ ಸುದ್ದಿ ಓದುವವರು ಮತ್ತು ನೋಡುವವರು ಯಾರೂ ಇರುವುದಿಲ್ಲ ಎಂಬ ಸಂಗತಿ ಅರ್ಥ ಆಗಲಿ.
-ಡಾ. ರುದ್ರೇಶ್ ಅದರಂಗಿ, ಬೆಂಗಳೂರು 

ಉತ್ತಮ ಫಲಿತಾಂಶ ಮತ್ತು ಒತ್ತಡ

ಈ ಬಾರಿ ರಾಜ್ಯದಲ್ಲಿನ ಎಸ್ಎಸ್ಎಲ್‌ಸಿ ಉತ್ತಮ ಫಲಿತಾಂಶದ ಬಗ್ಗೆ ಸಂಪಾದಕೀಯದ ಸಕಾರಾತ್ಮಕ ವಿಶ್ಲೇಷಣೆ (ಪ್ರ.ವಾ., ಏ. 9) ಸ್ವಾಗತಾರ್ಹ. ಆದರೆ ಬರೀ ಶೇಕಡಾವಾರು ಅಂಕಿ ಅಂಶಗಳ ವಿಶ್ಲೇಷಣೆಯು ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ಕೈಗನ್ನಡಿ ಎಂದು ಭಾವಿಸಲಾಗದು. ಮಕ್ಕಳು ಪಾಸಾದರೆಂಬ ಸಂತೋಷಕ್ಕಿಂತ ಅವರ ಮುಂದಿನ ಓದು, ಉದ್ಯೋಗಕ್ಕೆ ಹಣ ಹೊಂದಿಸುವ ಬಗ್ಗೆ ತಲೆ ಮೇಲೆ ಕೈಹೊತ್ತು ಕುಳಿತ ಮಧ್ಯಮ ವರ್ಗದ ತಾಯ್ತಂದೆಯರ ಸಂಖ್ಯೆ ಮಾತ್ರ ಅಪಾರವಾಗಿರುತ್ತದೆ!

ಇದು ನಿಜಕ್ಕೂ ಕಲ್ಯಾಣ ರಾಜ್ಯದ (ವೆಲ್‌ಫೇರ್ ಸ್ಟೇಟ್) ಲಕ್ಷಣ ಅಲ್ಲ. ಸಾಮಾನ್ಯ ಶಿಕ್ಷಣ (ಜನರಲ್ ಎಜುಕೇಷನ್) ರಾಜ್ಯ ಸರ್ಕಾರದ ಕಡ್ಡಾಯ ಜವಾಬ್ದಾರಿ. ನಮ್ಮ ತಲೆಮಾರಿನಂತೆ ಈಗ ಸಾಮಾನ್ಯ ಶಿಕ್ಷಣವೆನ್ನುವುದು ಓದುವುದು ಬರೆಯುವುದಕ್ಕಷ್ಟೇ ಸೀಮಿತವಲ್ಲ. ಕಂಪ್ಯೂಟರ್ ಸಾಕ್ಷರತೆ ಸಹ ಇದರಲ್ಲಿ ಸೇರಿರುತ್ತದೆ. ಅಂದಮಾತ್ರಕ್ಕೆ ಶಿಕ್ಷಣದ ವೆಚ್ಚ ಜಾಸ್ತಿಯಾಗಿಬಿಡುತ್ತದೆ, ಅದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮಾತ್ರ ಸಾಧ್ಯ ಎನ್ನುವುದು ಭ್ರಮೆ. ಅದನ್ನೂ ವಿದ್ಯಾವಿಹೀನ ಬೇಜವಾಬ್ದಾರಿಯುತ ಸರ್ಕಾರಗಳೇ ಹುಟ್ಟುಹಾಕಿರುವುದು! ಶಾಲಾ ಶಿಕ್ಷಣದ ಪಠ್ಯವನ್ನು ಕಾಲಮಾನಕ್ಕೆ ತಕ್ಕಂತೆ ಸುಧಾರಿಸಬೇಕು ಮತ್ತು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ಖಾಸಗಿ ವಲಯದಿಂದ ಹೊರತಾಗಿಸಬೇಕು. ಇದು ಸಾಧ್ಯವಾಗಬಹುದೇ?

-ಆರ್.ಕೆ.ದಿವಾಕರ, ಬೆಂಗಳೂರು

ಭ್ರಮೆ ಕಳಚುವವರೆಗೆ ಸಮಸ್ಯೆಗೆ ಪರಿಹಾರವಿಲ್ಲ
ಕೃಷಿಕ ಗಂಡುಗಳಿಗೆ ಮದುವೆಗೆ ಹೆಣ್ಣು ಸಿಗದಿರುವುದರ ಬಗ್ಗೆ ಡಾ. ಜ್ಯೋತಿ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಮೇ 9) ದೀರ್ಘವಾಗಿ ಚರ್ಚಿಸಿದ್ದಾರೆ. ಲೇಖನದಲ್ಲಿ ಪ್ರಸ್ತಾಪಿಸಿರುವಂತೆ, ಕನ್ಯಾಪಿತೃಗಳು ಇಷ್ಟೊಂದು ಆಳವಾಗಿ ವಿಷಯ ವಿಶ್ಲೇಷಣೆ ಮಾಡುವಷ್ಟು ಪ್ರಬುದ್ಧರಲ್ಲ. ವರನ ಆಯ್ಕೆಯಲ್ಲಿ ಅವರು ಬಹಳ ಸರಳ ಮತ್ತು ನೇರ. ವರ ಡಾಕ್ಟರಾಗಿರಬೇಕು, ಎಂಜಿನಿಯರ್ ಆಗಿರಬೇಕು, ಇಲ್ಲವೇ ಸರ್ಕಾರದಲ್ಲಿ ಕಾಯಂ ಉದ್ಯೋಗಿಯಾಗಿರಬೇಕು. ಅಂದರೆ ಯಾವುದೇ ಅಡೆತಡೆಗಳಿಲ್ಲದೆ ಆದಾಯ ತರುವ ಗಂಡು ಪೋಷಕರ ಮೊದಲ ಪ್ರಾಶಸ್ತ್ಯ. ಜೊತೆಗೆ ವಿದ್ಯಾವಂತ ಹೆಣ್ಣುಗಳು ಉದ್ಯೋಗಕ್ಕೆ ಸೇರಿದ ಮೇಲೆ ತಮಗೆ ಸರಿಸಮಾನರಾದ ಜೀವನಸಂಗಾತಿಯನ್ನು ಆರಿಸಿಕೊಳ್ಳುವುದೂ ಉಂಟು. ಹೀಗಾಗಿ ಕೃಷಿಕ ಗಂಡುಗಳಿಗೆ ಹೆಣ್ಣು ಸಿಗುವುದು ಕಷ್ಟವಾಗುತ್ತಿದೆ.

ಹಳ್ಳಿಯ ಕೃಷಿಕ ಗಂಡುಗಳಿರಲಿ, ನಗರಗಳಲ್ಲಿ ಸ್ವಂತ ಉದ್ಯೋಗ ಮಾಡುವ ಗಂಡುಗಳಿಗೂ ಹೆಣ್ಣು ಲಭ್ಯವಿಲ್ಲ. ಶಿಕ್ಷಣ ಅಂದರೆ ಇಂಗ್ಲಿಷ್ ಶಿಕ್ಷಣ, ಉನ್ನತ ವ್ಯಾಸಂಗ ಅಂದರೆ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣ, ಉದ್ಯೋಗ ಅಂದರೆ ಸರ್ಕಾರಿ ಉದ್ಯೋಗ ಎಂಬ ಭ್ರಮೆ ಎಲ್ಲಿಯವರೆಗೆ ಜನರನ್ನು ಆವರಿಸಿರುತ್ತದೋ ಅಲ್ಲಿಯವರೆಗೆ ಸಮಸ್ಯೆಗೆ ಪರಿಹಾರವಿಲ್ಲ.
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.