ADVERTISEMENT

ವಾಚಕರ ವಾಣಿ | ಸರೋಜಾದೇವಿ ಹೆಸರಿನಲ್ಲಿ ಶಾಲೆ ಆಗಲಿ

ವಾಚಕರ ವಾಣಿ
Published 18 ಜುಲೈ 2025, 0:30 IST
Last Updated 18 ಜುಲೈ 2025, 0:30 IST
<div class="paragraphs"><p>ಸರೋಜಾದೇವಿ</p></div>

ಸರೋಜಾದೇವಿ

   

ಸರೋಜಾದೇವಿ ಹೆಸರಿನಲ್ಲಿ ಶಾಲೆ ಆಗಲಿ

ಕನ್ನಡ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತೀಯ ಚಲನಚಿತ್ರ ಕ್ಷೇತ್ರದ ಬೆಳವಣಿಗೆಗೆ ಬಿ. ಸರೋಜಾದೇವಿ ಅವರು ನೀಡಿರುವ ಕೊಡುಗೆ ಅಪಾರ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ಮಾಡಬೇಕಿದೆ.

ADVERTISEMENT

ಸರ್ಕಾರ ಪ್ರತಿ ವರ್ಷ ಕೊಡಮಾಡುವ ರಾಜ್ಯ ಚಲನಚಿತ್ರ ಪುರಸ್ಕಾರಗಳಲ್ಲಿನ
‘ಅತ್ಯುತ್ತಮ ಶ್ರೇಷ್ಠ ನಟಿ’ ವಾರ್ಷಿಕ ಪ್ರಶಸ್ತಿಯನ್ನು ಸರೋಜಾದೇವಿ ಅವರ ಹೆಸರಿನಿಂದ ಹೆಸರಿಸಬಹುದು. ‘ಬಿ. ಸರೋಜಾದೇವಿ ಅಭಿನಯ ತರಬೇತಿ ಕೇಂದ್ರ’ ಸ್ಥಾಪಿಸುವ ಬಗ್ಗೆಯೂ ಯೋಚಿಸಬಹುದು.  

-ಟಿ. ಸತೀಶ್ ಜವರೇಗೌಡ, ಮಂಡ್ಯ

****

ವ್ಯಾಕರಣದ ಸಾಂದರ್ಭಿಕ ಕಲಿಕೆ ಸೂಕ್ತ

‘ವ್ಯಾಕರಣ ನಿರ್ಲಕ್ಷಿಸಿದರೆ ಭಾಷೆಗೆ ಹಿನ್ನಡೆ’ ಲೇಖನದ ಕಳಕಳಿ, (ಪ್ರ.ವಾ., ಜುಲೈ 17) ಭಾಷೆಯಿಂದಲೇ ಬಾಳು ಕಂಡಿದ್ದ ನನ್ನನ್ನು ಚಿಂತನೆಗೆ ಹಚ್ಚಿತು. ಇಂತಹ ಭಾಷಾ ಗೊಂದಲ– ಆತಂಕ, ಬರವಣಿಗೆಯಲ್ಲಿ
ತೊಡಗಿಸಿಕೊಂಡಿರುವ ಹಿರಿಯ ಕುತೂಹಲಿಗರನ್ನೂ ಕಾಡಿರುವುದುಂಟು.

ಮಿತ್ರರೊಬ್ಬರು, ‘ವಣಿಗರಹಳ್ಳಿ’ ಎಂಬ ಊರನ್ನು ಉಲ್ಲೇಖಿಸಿ, ‘ವಣಿಗರು ಯಾರು?’ ಎಂದು ಕೇಳಿದ್ದರು. ‘ವಾಜರಹಳ್ಳಿ’ ಎಂಬಲ್ಲಿ ‘ವಾಜರು’ ಯಾರು ಎಂದೂ ಕೇಳಿದ್ದರು. ಮೂರನೇ ಕ್ಲಾಸಿನ ನನ್ನ ಮೊಮ್ಮಗನ ಅನುಮಾನ ಇನ್ನೂ ವಿಚಿತ್ರ. ‘ಹಸು ಉಚ್ಚೆ ಹತ್ರ ಪ್ರೋಟೀನ್ ಇರುತ್ತಾ? ಟೀಚರ್ ಹೇಳಿದರು!’ ಇವೆಲ್ಲಾ ಭಾಷೆಗೆ ಸಂಬಂಧಿಸಿದ ‘ಮಾತು’ಗಳು. ಇದಕ್ಕೆಲ್ಲಾ ನಾವು ವಿಧ್ಯುಕ್ತ ವ್ಯಾಕರಣ ಮತ್ತು ಸೂತ್ರಗಳನ್ನು ಅಳವಡಿಸಿ ತಿಳಿವಳಿಕೆ ನೀಡಲು ಸಾಧ್ಯವಿಲ್ಲ.

ಹಸು ಉಚ್ಚೆ ಎನ್ನುವುದಕ್ಕೆ ‘ಗಂಜಲ’ ಎಂಬೊಂದು ಶಿಷ್ಟ ಪದವಿದೆ ಎಂಬುದೇ ನಮ್ಮ ಪೋರನಿಗೆ ಗೊತ್ತಿಲ್ಲ. ಆದರೆ, ‘ಗಂಜಲ’ ಎನ್ನುವುದಾದರೂ ಒಂದು ಸ್ವತಂತ್ರ ಶಬ್ದವೇ? ಅದು ‘ಗೋವಿನ ಜಲ’. ‘ಗೊ’ ಸಂಸ್ಕೃತ; ‘ಜಲ’ ಸಂಸ್ಕೃತ, ‘ನ’ ಎಂಬುದನ್ನು ಅನುಸ್ವಾರ ಮಾಡಿದಾಗ, ‘ಗಂಜಲ’ ಎನ್ನುವುದು ಕನ್ನಡ ಪದ ಆಗುತ್ತದೆ. ಹೀಗೆಯೇ, ‘ವಣಿಜ’ ವಣಿಕನಾಗಿ, ವಣಿಗನಾಗುತ್ತಾನೆ; ‘ವಾಜ’, ಓಜ>ಓವಜ>ಓದಿಸುವ ಅಜ್ಜ (ತಿಳಿವಳಿಕಸ್ಥ) ಆಗುತ್ತಾನೆ. ನಿಜಕ್ಕೆ ಅವನು ಪಾಠ ಓದಿಸುವವನಲ್ಲ; ಬಡಿಗೆ, ಕಮ್ಮಾರಿಕೆ, ಕುಂಬಾರಿಕೆ, ಚಿನಿವಾರಿಕೆ ಮೊದಲಾದ ಕುಶಲಕರ್ಮವನ್ನು, ಪ್ರಾತ್ಯಕ್ಷಿಕೆಯಿಂದ ಮಾಡಿ ತೋರಿಸುವ ಗುರು, ಆಚಾರ್ಯ. ಭಾಷೆ ಉಳಿಯಬೇಕಾದರೆ ವ್ಯಾಕರಣವನ್ನು ಶಾಸ್ತ್ರವಾಗಿ ಅಲ್ಲ, ಸಾಂದರ್ಭಿಕವಾಗಿ, ಸಮಂಜಸವಾಗಿ ಕಲಿಸುವುದು ಅಗತ್ಯ.              

-ಆರ್.ಕೆ. ದಿವಾಕರ, ಬೆಂಗಳೂರು

****

ನಾಯಿಗಳ ಫಾರ್ಮ್ ಸ್ಥಾಪಿಸಲಿ 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬೀದಿ ನಾಯಿಗಳಿಗೆ ಮಾಂಸಾಹಾರ ನೀಡಲು ಮುಂದಾಗಿರುವುದು ಸರಿಯಲ್ಲ. ವಿದೇಶಗಳಲ್ಲಿ ನಾನು ನೋಡಿರುವಂತೆ, ನಾಗರಿಕರ ಹಿತದೃಷ್ಟಿಯಿಂದ ಬೀದಿ ನಾಯಿಗಳು ಅಲ್ಲಿಲ್ಲ. ಆಸಕ್ತಿ ಇರುವವರು ತಮ್ಮ ಮನೆಯಲ್ಲಿ ನಾಯಿ ಸಾಕಿಕೊಳ್ಳುತ್ತಾರೆ. ಅವರು ವಾಯುವಿಹಾರಕ್ಕೆ ನಾಯಿಗಳನ್ನು ಜೊತೆಯಲ್ಲಿ ಕರೆತರುತ್ತಾರೆ. ಜೊತೆಗೆ, ಕೈಯಲ್ಲಿ ಕವರ್ ತರುತ್ತಾರೆ. ರಸ್ತೆಯಲ್ಲಿ ನಾಯಿಗಳು ಮಲ ವಿಸರ್ಜನೆ ಮಾಡಿದರೆ ಅದನ್ನು ಕವರ್‌ನಲ್ಲಿ ಸಂಗ್ರಹಿಸಿ ರಸ್ತೆಯ ಪಕ್ಕದಲ್ಲಿರುವ ಕಸದ ಡಬ್ಬಿಗೆ ಹಾಕಿ ಸ್ವಚ್ಛತೆ ಕಾಪಾಡುತ್ತಾರೆ. ಸರ್ಕಾರಕ್ಕೆ ಬೀದಿ ನಾಯಿಗಳ ಮೇಲೆ ಪ್ರೀತಿ ಇದ್ದರೆ ‘ನಾಯಿಗಳ ಫಾರ್ಮ್’ ಸ್ಥಾಪಿಸಿ ಅವುಗಳಿಗೆ ಮಾಂಸಾಹಾರ ಪೂರೈಸಲಿ.  

-ಸಿ. ಸಿದ್ದರಾಜು ಆಲಕೆರೆ, ಮಂಡ್ಯ 

****

‘ಶಕ್ತಿ’ ಯೋಜನೆ ಪರಾಮರ್ಶೆ ಅಗತ್ಯ 

ಶಕ್ತಿ ಯೋಜನೆಯಡಿ ಪ್ರಯಾಣಿಸಿದವರು 500 ಕೋಟಿಗೆ ತಲುಪಿರುವುದಕ್ಕೆ
ಸರ್ಕಾರ ಸಂತಸದಲ್ಲಿ ಬೀಗುತ್ತಿದೆ. ಆದರೆ, ಇದು ಜಾರಿಗೆ ಬಂದಾಗಿನಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವಯೋವೃದ್ಧರು ಬಸ್‌ಗಳಲ್ಲಿ ಸಂಚಾರ ಮಾಡುವುದೇ ಕಷ್ಟಕರವಾಗಿದೆ. ಬಸ್‌ಗಳಲ್ಲಿ ಜಗಳ ಸಾಮಾನ್ಯವಾಗಿ ಬಿಟ್ಟಿದೆ. ಈ ಯೋಜನೆಗೂ ಕೆಲವೊಂದು ಷರತ್ತು ವಿಧಿಸಬೇಕು. ಇದರಿಂದ ಉಳಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ.

-ಗೋಪಿ ಕೃಷ್ಣ, ಬೆಂಗಳೂರು

****

ಲಂಚಾವತಾರಕ್ಕೆ ಕಡಿವಾಣ ಬೀಳಲಿ

ಕಂದಾಯ ಇಲಾಖೆಯಲ್ಲಿ ಲಂಚವಿಲ್ಲದೆ ಯಾವುದೇ ಕಡತಗಳು ಮುಂದಿನ ಹಂತಕ್ಕೆ ತಲುಪುವುದಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪೌತಿ ಖಾತೆ, ಖಾತೆ ಬದಲಾವಣೆ ಸೇರಿ ಯಾವುದೇ ಸೇವೆಯನ್ನು ಸಕಾಲದಲ್ಲಿ ಪಡೆಯಬೇಕಾದರೂ ಲಂಚ ಕೊಡಲೇಬೇಕಾದ ಸ್ಥಿತಿಯಿದೆ. ಇದು ನಮ್ಮ ದೌರ್ಭಾಗ್ಯವೇ ಸರಿ. ಸರ್ಕಾರವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. 

-ದರ್ಶನ್ ಚಂದ್ರ ಎಂ.ಪಿ., ಚಾಮರಾಜನಗರ 

****

ಕನ್ನಡಿಗರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರಲಿ

ಕಳೆದ ಎರಡು ದಶಕದಿಂದ ಕನ್ನಡದವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಪ್ರಮಾಣ ಕಡಿಮೆಯಾಗಿದೆ. ಕನ್ನಡದ ನೆಲದಲ್ಲಿ ಉದಯವಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್‌ಗೆ ಶ್ರೇಯಸ್ಸು ತಂದುಕೊಟ್ಟವರು ಕನ್ನಡಿಗರೇ. ಈ ಬ್ಯಾಂಕ್‌ಗಳಲ್ಲಿ ಹಿಂದೆ ಸಾವಿರಾರು ಕನ್ನಡಿಗರು ಕೆಲಸ ಮಾಡುತ್ತಿದ್ದರು. ಗ್ರಾಹಕ ಸೇವೆಯು ಕನ್ನಡದಲ್ಲೇ ನಡೆಯುತ್ತಿತ್ತು. 

ಹಿಂದಿ, ತೆಲುಗು ಹಾಗೂ ಇತರ ಭಾಷೆಯ ಅಭ್ಯರ್ಥಿಗಳು ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚಾಗಿ ಪ್ರವೇಶಿಸುತ್ತಿರುವುದರಿಂದ, ಕನ್ನಡಿಗ ಗ್ರಾಹಕರಿಗೆ ಭಾಷಾ ಅಡೆತಡೆಗಳು ಉಂಟಾಗುತ್ತಿವೆ. ನಮ್ಮ ಸ್ವಾಭಿಮಾನಕ್ಕೂ
ಧಕ್ಕೆಯಾಗುತ್ತಿದೆ.

-ಎಸ್.ಟಿ. ರಾಮಚಂದ್ರ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.