ಕಡತ
(ಸಾಂದರ್ಭಿಕ ಚಿತ್ರ)
ರಸ್ತೆಯಲ್ಲಿ ಕೊಳಚೆ ನೀರಿನ ಪ್ರವಾಹ
ಮ್ಯಾನ್‌ಹೋಲ್‌ನಿಂದ ಉಕ್ಕಿ ಬರುವ ಕೊಳಚೆ ನೀರಿನ ಪ್ರವಾಹವು ಮಳೆಗಾಲದಲ್ಲಿ ಪಾದಚಾರಿಗಳು ಎದುರಿಸಬೇಕಾದ ಸಮಸ್ಯೆಗಳಲ್ಲಿ ಒಂದು. ಇಂತಹ ಸನ್ನಿವೇಶದಲ್ಲಿ ನೀರಿನ ಮೂಲಕ ಹರಡುವ ಸಾಂಕ್ರಾಮಿಕ ಕಾಯಿಲೆಗಳ ಸಾಧ್ಯತೆಯೂ ಜಾಸ್ತಿ. ಈ ಸಮಸ್ಯೆಗೆ ಮೂರು ಆಯಾಮಗಳಿವೆ. ಮೊದಲನೆಯದು, ಜೋರು ಮಳೆ ಬಂದಾಗ ಪ್ರವಾಹದ ಹಾವಳಿ ಹೆಚ್ಚು. ಎರಡನೆಯದು, ತಗ್ಗು ಪ್ರದೇಶದ ಮ್ಯಾನ್‌ಹೋಲ್‌ನಿಂದಲೇ ಕೊಳಚೆ ನೀರು ಉಕ್ಕುತ್ತದೆ. ಎಂದರೆ, ಕಟ್ಟಡಗಳ ಮೇಲೆ ಬೀಳುವ ನೀರನ್ನು ಮಳೆನೀರಿನ ಇಂಗುಗುಂಡಿ, ರಾಜಕಾಲುವೆಗೆ ಹರಿಯಬಿಡುವುದರ ಬದಲು, ಒಳಚರಂಡಿಗೆ ಹರಿಯಬಿಡಲಾಗಿದೆ. ಮೂರನೆಯದು, ಈ ಸಮಸ್ಯೆ ಬಹಳ ವರ್ಷದಿಂದ ಪರಿಹಾರವಾಗಿಲ್ಲ ಎಂದರೆ ಅಧಿಕಾರಿಗಳ ಗಮನ ಈ ಕಡೆಗೆ ಹರಿದಿಲ್ಲ. ಈ ಸಮಸ್ಯೆಗೆ ಪರಿಹಾರವೂ ಸರಳ. ಮೊದಲು, ಈ ಸಮಸ್ಯೆ ಎಲ್ಲೆಲ್ಲಿ ಇದೆ ಎಂದು ಗುರುತಿಸಬೇಕು. ನಂತರ, ಮೇಲು ಪ್ರದೇಶದಿಂದ ಬರುವ ಮಳೆಯ ನೀರನ್ನು ರಾಜಕಾಲುವೆಗೆ ಹರಿಯಬಿಡಬೇಕು. ಈ ವ್ಯವಸ್ಥೆ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂಬುದರ ಮೇಲೆ ನಿಗಾ ಇಡಬೇಕು. ಈ ಕಾರ್ಯದಲ್ಲಿ ನಿವಾಸಿಗಳ ಕಲ್ಯಾಣ ಸಂಘಗಳ ಸಹಭಾಗಿತ್ವವೂ ಅಗತ್ಯ.
-ಸಿ. ಶಾಮಸುಂದರ್, ಬೆಂಗಳೂರು
****
ಜಾತಿವಾದಿಗಳ ಸೋಗಿಗೆ ಕೊನೆಯಿಲ್ಲವೆ?
‘ಜೋಪಡಿವಾಸಿಗಳು ಕೆಳಮಟ್ಟದವರೇ?’ (ಪ್ರ.ವಾ., ಸೆ. 23) ವರದಿ ಜಾತಿಗ್ರಸ್ತ ಸಮಾಜದ ಮನಃಸ್ಥಿತಿಗೆ ಹಿಡಿದಿರುವ ಕನ್ನಡಿ. ದೇವಸ್ಥಾನದ ಪಕ್ಕದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ನಿರ್ಮಿಸಿದರೆ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ಭಕ್ತರ ಸೋಗಿನ ಜಾತಿವಾದಿಗಳ ವಾದಕ್ಕೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೀಡಿರುವ ಪ್ರತಿಕ್ರಿಯೆ ಸರಿಯಾಗಿದೆ. ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಒಂದುತ್ವವಾದಿಗಳು ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟಗಳನ್ನು ರೂಪಿಸಬೇಕು.
-ರಾಜು ವೆಂಕಟಪ್ಪ, ಬೆಂಗಳೂರು
****
ಎಲ್ಲದ್ದಕ್ಕೂ ‘ಭೀಮೆ’ ತಳಕು ಸರಿಯಲ್ಲ
ಇತ್ತೀಚೆಗೆ ಚಡಚಣ ತಾಲ್ಲೂಕಿನ ದೇವರ ನಿಂಬರಗಿಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷರೊಬ್ಬರ ಹತ್ಯೆಯಾಗಿತ್ತು. ಟಿ.ವಿ. ವಾಹಿನಿಗಳು ‘ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು’ ಎಂಬ ಶೀರ್ಷಿಕೆಯಡಿ ಮೂರ್ನಾಲ್ಕು ದಿನದವರೆಗೆ ಅತಿರಂಚಿತವಾಗಿ ಸುದ್ದಿ ಬಿತ್ತರಿಸಿದ್ದವು. ಎಲ್ಲಿಯ ಭೀಮಾನದಿ? ಎಲ್ಲಿಯ ದೇವರ ನಿಂಬರಗಿ? ಈ ಗ್ರಾಮವು 30ಕ್ಕೂ ಹೆಚ್ಚು ಕಿ.ಮೀ. ದೂರದಲ್ಲಿದೆ.
ನದಿ ದಡದಲ್ಲಿ ಮಣ್ಣೂರ ಎಲ್ಲಮ್ಮ ದೇವಿ ದೇಗುಲ, ಘತ್ತರಗಿಯ ಭಾಗ್ಯವಂತಿ ದೇಗುಲ ಹಾಗೂ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನವಿದೆ. ರೈತರು ಕೃಷಿ ಚಟುವಟಿಕೆಯೊಂದಿಗೆ ನೆಮ್ಮದಿಯಾಗಿದ್ದಾರೆ. ಆದರೆ, ಈ ಭಾಗದಲ್ಲಿ ಏನೇ ಅಪರಾಧ ಘಟಿಸಿದರೂ ‘ಭೀಮೆ’ಯ ಹೆಸರು ತಳುಕು ಹಾಕುವುದು ಸರಿಯಲ್ಲ.
-ಗುರುರಾಜ ಪಾಟೀಲ, ಇಂಡಿ
****
ಶಾಲೆಗೆ ಹೋರಾಡಿದ ಸ್ವಾಮೀಜಿ ಇರುವರೆ?
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಹಲವು ಸ್ವಾಮೀಜಿಗಳು ಪ್ರತಿದಿನ ತಮ್ಮ ಸಮುದಾಯಗಳಿಗೆ ಜಾತಿ, ಧರ್ಮದ ಹೆಸರು ನಮೂದಿಸಲು ಹೇಳುತ್ತಿದ್ದಾರೆ. ಲಿಂಗ–ಧರ್ಮ, ಜಾತಿ–ಮತ ಎಲ್ಲವನ್ನೂ ಮೀರಿ ವರ್ತಿಸಬೇಕಾದ ಪೂಜ್ಯರೇ, ನಿರ್ದಿಷ್ಟ ಜಾತಿವಾರು ಹೇಳಿಕೆ ನೀಡುವುದು ಎಷ್ಟು ಸರಿ. ನಿರ್ದಿಷ್ಟ ಜಾತಿಯ ಮೀಸಲಾತಿಗಾಗಿ, ನಿರ್ದಿಷ್ಟ ಜಾತಿಯವರನ್ನು ಮಂತ್ರಿಯಾಗಿ– ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಹೋರಾಡುವುದು ಸರ್ವೇ ಸಾಮಾನ್ಯ. ಜಾತಿಗಾಗಿ ಉಪವಾಸ ಸತ್ಯಾಗ್ರಹ ಮಾಡಿದವರಿದ್ದಾರೆ; ರಸ್ತೆ, ಶಾಲೆ, ಆಸ್ಪತ್ರೆ ಸರಿ ಇಲ್ಲವೆಂದು ಹೋರಾಡಿದ ಒಬ್ಬ ಸ್ವಾಮೀಜಿಯಾದರೂ ಇದ್ದಾರೆಯೆ?
-ಸುನಿಲ್ ಟಿ.ಪಿ., ಮಳವಳ್ಳಿ
****
ನೆಗಡಿಯಾದರೆ ಮೂಗು ಕೊಯ್ಯಲಾಗದು
ಅನುಕಂಪದ ಆಧಾರದಲ್ಲಿ ಗ್ರೂಪ್ ‘ಡಿ’ ಹುದ್ದೆಗೆ ಇನ್ನು ನೇಮಕಾತಿ ಮಾಡದಂತೆ ಸಾರಿಗೆ ಇಲಾಖೆ ಕಾರ್ಯದರ್ಶಿಯು ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ (ಪ್ರ.ವಾ., ಸೆ. 23). ಅನುಕಂಪ ನೇಮಕಾತಿ ಯೋಜನೆಯ ಅನುಷ್ಠಾನದಲ್ಲಿ ಲೋಪವಾದರೆ, ಅಂಥ ನೇಮಕಾತಿಗಳನ್ನು ಅನೂರ್ಜಿತಗೊಳಿಸುವುದು ನ್ಯಾಯ. ಅದು ಬಿಟ್ಟು ಅನುಕಂಪದ ಆಧಾರದಲ್ಲಿ ನೇಮಕಾತಿಯನ್ನೇ ಮಾಡಿಕೊಳ್ಳದಂತೆ ನಿರ್ದೇಶಿಸುವುದು ಅನ್ಯಾಯ.
-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು
****
ಹಿಂದುಳಿದವರ ಅಭ್ಯುದಯಕ್ಕೆ ಅಡ್ಡಗಾಲು ಬೇಡ
ರಾಜ್ಯದಲ್ಲಿರುವ ಹಿಂದುಳಿದ ಜಾತಿಗಳ ಸ್ಥಿತಿಗತಿ ತಿಳಿದುಕೊಳ್ಳಲು ಸಮೀಕ್ಷೆ ಅನಿವಾರ್ಯ. ಇದಕ್ಕಾಗಿಯೇ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಸಮ ಸಮಾಜದ ನಿರ್ಮಾಣಕ್ಕೆ ಇಂತಹ ಸಮೀಕ್ಷೆಗಳು ಕಾಲಕಾಲಕ್ಕೆ ಅನಿವಾರ್ಯವೂ ಹೌದು. ಸಮೀಕ್ಷೆಯಿಂದ ಹೊರಬರುವ ದತ್ತಾಂಶ ಆಧರಿಸಿ ಅತ್ಯಂತ ಹಿಂದುಳಿದ ಜಾತಿಗಳ ಅಭ್ಯುದಯಕ್ಕೆ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಆದರೆ, ಪ್ರಬಲ ಜಾತಿಯ ನಾಯಕರು ಮತ್ತು ವಿರೋಧ ಪಕ್ಷದವರು ಸಮೀಕ್ಷೆಗೆ ಆಕ್ಷೇಪಿಸುವುದು ಸರಿಯಲ್ಲ. ಒಳ್ಳೆಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು ವಿಪಕ್ಷಗಳ ಜವಾಬ್ದಾರಿ.
-ಆಂಜನೇಯ, ಯರಮರಸ್
****
ಚಾಣಾಕ್ಷತನ
ಮನಗಳ್ಳತನ
ಮನೆಕಳ್ಳತನ
ಮತಕಳ್ಳತನ
ಈಗ ಶುರುವಾಗಿದೆ
ಜಾತಿಗಳ್ಳತನ
ನಮ್ಮ‘ತನ’ವೇ ಇಲ್ಲದ
ಚಾಣಾಕ್ಷತನ
-ಹೆಚ್.ವಿ. ಶ್ರೀಧರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.