ADVERTISEMENT

ವಾಚಕರ ವಾಣಿ: ಇನ್ನೂ ದಕ್ಕದ ಜಿಎಸ್‌ಟಿ ಲಾಭ

ವಾಚಕರ ವಾಣಿ
Published 24 ಸೆಪ್ಟೆಂಬರ್ 2025, 23:30 IST
Last Updated 24 ಸೆಪ್ಟೆಂಬರ್ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೌದ್ಧ ಧರ್ಮ ಮತ್ತು ಅಂಬೇಡ್ಕರ್‌

ದಲಿತರು ಅಸಮಾನತೆಯಿಂದ ಹೊರಬರಲು ಬೌದ್ಧ ಧರ್ಮದಿಂದಷ್ಟೇ ಸಾಧ್ಯ ಎಂದು ಬಿ.ಆರ್‌. ಅಂಬೇಡ್ಕರ್‌ ನಂಬಿದ್ದರು. ಹಾಗಾಗಿಯೇ, ಹಿಂದೂ ಧರ್ಮ ತ್ಯಜಿಸಿ ಲಕ್ಷಾಂತರ ದಲಿತರೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದರು. ಬಾಬಾ ಸಾಹೇಬರು ಕಲ್ಪಿಸಿದ ಮೀಸಲಾತಿ ಸೌಲಭ್ಯ ಉಂಡ ಫಲಾನುಭವಿಗಳೇ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸುವಂತೆ ಹೇಳುತ್ತಿರುವುದು ವ್ಯಂಗ್ಯವೇ ಸರಿ.

ADVERTISEMENT

-ಸುರೇಶ್ ವಡಗಲಪುರ, ಬೆಂಗಳೂರು

****

‘ಬೌದ್ಧರುದ್ಯಾನ’ದಿಂದ ಗೌರವ ಇಮ್ಮಡಿ 

ಕುವೆಂಪು ವಿರಚಿತ ನಾಡಗೀತೆಗೆ ಈಗ ನೂರರ ಸಂಭ್ರಮ. ಇದೇ ಸಂದರ್ಭದಲ್ಲಿ ಲೇಖಕ ಅರವಿಂದ ಮಾಲಗತ್ತಿ ಅವರು, ನಾಡಗೀತೆಯಲ್ಲಿದ್ದ ‘ಬೌದ್ಧರುದ್ಯಾನ’ ಪದದ ಬಗ್ಗೆ ಪ್ರಸ್ತಾಪಿಸಿದ್ದಾರೆ. 70ರ ದಶಕದಲ್ಲಿ ಈ ಪದ ತಪ್ಪಿಹೋಗಿದ್ದು, ಮತ್ತೆ ಅದನ್ನು ಸೇರಿಸುವಂತೆ ಸರ್ಕಾರಕ್ಕೆ ಕೋರಿರುವುದು ಸಮಂಜಸ. ಅದನ್ನು ಯಾವುದೇ ಕಾರಣಕ್ಕೆ ತೆಗೆದುಹಾಕಿದ್ದರೂ ಮತ್ತೆ ಸೇರಿಸಬೇಕಿದೆ. ಕುವೆಂಪು ಅವರೇ, ‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಬಣ್ಣಿಸಿದ್ದಾರೆ. ‘ಜೈನ ಬೌದ್ಧರುದ್ಯಾನ’ ಅಥವಾ ‘ಬೌದ್ಧ ಜೈನರುದ್ಯಾನ’ ಎಂದು ಸೇರಿಸಿ ಹಾಡುವುದರಿಂದ ನಾಡಿನ ಗೌರವ ಇಮ್ಮಡಿಯಾಗುತ್ತದೆ.

-ಮಹಾಂತೇಶ್ ಬಿ. ನಿಟ್ಟೂರು, ದಾವಣಗೆರೆ

****

ಜಾತಿವಾದಿಗಳಿಗೆ ಲಗಾಮು ಹಾಕಬೇಕು

‘ಜಾತಿ ತಾರತಮ್ಯ: ನೆಲದಲ್ಲಿ ಕುಳಿತೇ ಕೆಲಸ’ ವರದಿ (ಪ್ರ.ವಾ., ಸೆ. 24) ಓದಿ ಬೇಸರವಾಯಿತು. ತುಮುಲ್‌ನ ಹಣಕಾಸು ವಿಭಾಗದ ಆಡಳಿತ ಅಧೀಕ್ಷಕ ಆ‌ರ್.ಎಸ್. ವಿನಯ್, ‘ದಲಿತ’ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. ಸಮಾಜದಲ್ಲಿ ದಲಿತರ ಬಗೆಗಿನ ಅಸಹನೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಕುರ್ಚಿ ಕೊಡದಿರುವುದು ವ್ಯಕ್ತಿಯ ಘನತೆಗೆ ಧಕ್ಕೆ ತರುತ್ತದೆ. ಜಾತಿಯ ಕಬಂಧಬಾಹುಗಳಿಗೆ ಮೂಗುದಾರ ಹಾಕಬೇಕಿದೆ. 

-ಎಫ್.ಡಿ. ರಾಮಾಪೂರ, ಧಾರವಾಡ 

****

ಇನ್ನೂ ದಕ್ಕದ ಜಿಎಸ್‌ಟಿ ಲಾಭ

ಇತ್ತೀಚೆಗೆ ನಾನು ಬೆಣ್ಣೆ ಖರೀದಿಸಲು ನಂದಿನಿ ಪಾರ್ಲರ್‌ಗೆ ಹೋಗಿದ್ದೆ. ಅರ್ಧ
ಕೆ.ಜಿ.ಗೆ ಹಳೆಯ ಬೆಲೆ ₹305 ಕೊಡಬೇಕು ಎಂದು ಅಂಗಡಿಯಾತ ಹೇಳಿದ. ನಾನು ಹೊಸ ಬೆಲೆ ₹286 ಅಲ್ಲವೆ? ಎಂದೆ. ಅದಕ್ಕೆ ಆತ ನಮಗಿನ್ನೂ ಆ ಹೊಸ ಸ್ಟಾಕ್ ಬಂದಿಲ್ಲ ಎಂದು ಉತ್ತರಿಸಿದ. ಎಲ್ಲಾ ಅಂಗಡಿಗಳದ್ದೂ ಇದೇ ಸ್ಥಿತಿ. 

ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸೆಪ್ಟೆಂಬರ್‌ 22ರಿಂದ ಜಿಎಸ್‌ಟಿ ತೆರಿಗೆ ಹಂತಗಳನ್ನು ಪರಿಷ್ಕರಿಸಿರುವುದು ಸರಿಯಷ್ಟೆ. ಆದರೆ, ಜನರಿಗೆ ಇನ್ನೂ ಈ ಪರಿಷ್ಕರಣೆಯ ಲಾಭ ಸಿಗುತ್ತಿಲ್ಲ. ದಾಸ್ತಾನಿರುವ ಹಳೆಯ ಸರಕುಗಳು ಮುಗಿಯುವ ತನಕ ನಾವು ನಷ್ಟ ಮಾಡಿಕೊಂಡು ಹೊಸ ಬೆಲೆಗೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಅಂಗಡಿಯವರು ಹೇಳುತ್ತಾರೆ. ಇದಕ್ಕೆ ಪರಿಹಾರವಾದರೂ ಏನು?

-ಪುಷ್ಪಾ ಶ್ರೀರಾಮರಾಜು, ಬೆಂಗಳೂರು

****

ಯೋಜನೆ ಜಾರಿಗೆ ಹಟ ಮಾಡಬೇಡಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಪಶ್ಚಿಮಘಟ್ಟದ ಪಾಲಿಗೆ ಅತಿದೊಡ್ಡ ಕಂಟಕ. ಆದರೂ, ಇದರ ಸಾಧಕ–ಬಾಧಕದ ಬಗ್ಗೆ ಚರ್ಚಿಸದೆ ಸರ್ಕಾರವು ಯೋಜನೆ ಜಾರಿಗೆ ಹಟ ಹಿಡಿದಿರುವುದು ಅಕ್ಷಮ್ಯ. ಸಿಂಹಬಾಲದ ಸಿಂಗಳೀಕ ಸೇರಿ ಅಪರೂಪದ ವನ್ಯಜೀವಿಗಳ ಗೋಣು ಮುರಿಯುವ ಯೋಜನೆ ಇದು. 

ವಿದ್ಯುತ್‌ ಉತ್ಪಾದನೆಗೆ ಹಲವು ಮಾದರಿಗಳಿವೆ. ಸಮುದ್ರದ ದಡದಲ್ಲಿ ಅಥವಾ ಸಮುದ್ರದೊಳಗೆ ಪವನ ಯಂತ್ರ ಅಳವಡಿಸಿ; ಕೆರೆಗಳಲ್ಲಿ ತೇಲುವ ಸೌರಫಲಕ ಅಳವಡಿಸಿಯೂ ವಿದ್ಯುತ್‌ ಉತ್ಪಾದಿಸಬಹುದು. ಇಂತಹ ಪರ್ಯಾಯ ಮಾರ್ಗಗಳತ್ತ ಸರ್ಕಾರದ ಚಿತ್ತ ಹರಿಯಬೇಕಿದೆ.

-ಹರೀಶ ಎಸ್., ತುಮಕೂರು 

****

ಮುಧೋಳ ದೊರೆಯ ಆದರ್ಶ ನಡೆ

ಮುಧೋಳ ಸಂಸ್ಥಾನದ ಘೋರ್ಪಡೆ ದೊರೆಯು ಅರಮನೆ ಪಕ್ಕದಲ್ಲಿ ಹರಿಯುವ ಘಟಪ್ರಭಾ ನದಿಯಲ್ಲಿ ಸ್ನಾನ ಮಾಡಿ ಪೂಜೆಗೆ ತೆರಳುತ್ತಿದ್ದರು. ಅವರು ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ತಳ ಸಮುದಾಯದವರ ಗುಡಿಸಲುಗಳಿದ್ದವು. ದೊರೆಯ ಪೂಜೆಯ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸಿ, ಅವರನ್ನು ಸ್ಥಳಾಂತರಿಸಲು ಅಧಿಕಾರಿಗಳು ಮುಂದಾದರು. ವಿಷಯ ತಿಳಿದ ದೊರೆ ಅಧಿಕಾರಿಗಳನ್ನು ಕರೆದು, ‘ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ನನಗೆ ಮೊಲೆ ಉಣಿಸಿ ಪೊರೆದವರು ಗುಡಿಸಲ ತಾಯಂದಿರು. ಅವರನ್ನು ಸ್ಥಳಾಂತರಿಸುವುದೇ ಆದರೆ ಅರಮನೆಯ ಒಳಗಡೆ ಸ್ಥಳ ಕೊಡಿ’ ಎಂದು ಹೇಳಿದ್ದರು.

ದೇಗುಲದ ಪಕ್ಕದಲ್ಲಿ ಕೊಳೆಗೇರಿ ನಿವಾಸಿಗಳ ಪುನರ್ವಸತಿ ಕೇಂದ್ರ ನಿರ್ಮಿಸಬಾರದು. ಇದರಿಂದ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಕೆಲವರು ಹೈಕೋರ್ಟ್‌ ಮೊರೆ ಹೋಗಿರುವ ಸುದ್ದಿ ಓದಿದಾಗ ಈ ಘಟನೆ ನೆನಪಾಯಿತು.

-ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

****

ದೂರ ಸರಿದರು

ಓದುಗರಿಗೆ

ಸಾಹಿತ್ಯ ಪ್ರೇಮ ‘ಭಿತ್ತಿ’

ಓದಿನ ‘ದಾಟು’ ಹೆಚ್ಚಿಸಿ

ರಾಷ್ಟ್ರಮಟ್ಟದ ಖ್ಯಾತಿಗೆ

‘ಸಾಕ್ಷಿ’ಯಾದ ‘ಭೀಮಕಾಯ’ರು

ಈ ‘ಆವರಣ’ ಬಿಟ್ಟು

‘ದೂರ ಸರಿದರು’

ನಮ್ಮೆಲ್ಲರ ಮೆಚ್ಚಿನ

ಎಸ್.ಎಲ್. ಭೈರಪ್ಪನವರು!

 ಆರ್. ನಾಗರಾಜ್, ಗೊರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.