ADVERTISEMENT

ವಾಚಕರ ವಾಣಿ | ಢೋಂಗಿತನದ ಪ್ರಾಣಿ ಪ್ರೀತಿ

ವಾಚಕರ ವಾಣಿ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
<div class="paragraphs"><p> ನಾಯಿ</p></div>

ನಾಯಿ

   

(ಸಾಂದರ್ಭಿಕ ಚಿತ್ರ)

ಉದ್ಯೋಗದ ಗ್ಯಾರಂಟಿ ಯಾವಾಗ?

ADVERTISEMENT

ರಾಜ್ಯ ಸರ್ಕಾರ ಜನರಿಗಾಗಿ ಗ್ಯಾರಂಟಿಗಳನ್ನು ನೀಡಿದೆ. ಇದರಿಂದ ಜನರಿಗೂ ಅನುಕೂಲವಾಗಿದೆ. ಆದರೆ, ಯುವಜನಾಂಗದ ಶ್ರೇಯೋಭಿವೃದ್ಧಿ ಬಗ್ಗೆ ಆಳುವ ವರ್ಗ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರದ ಗದ್ದುಗೆ ಏರುವುದಕ್ಕೂ ಮೊದಲು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮವಹಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಮಾತು ಮರೆತಿರುವಂತಿದೆ. ನಿರುದ್ಯೋಗಿಗಳಾಗಿರುವ ಯುವಜನರ ಪಾಡು ಹೇಳತೀರದು. ಮುಖ್ಯಮಂತ್ರಿ ಅವರು ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಡೀಕರಿಸುವುದಕ್ಕಷ್ಟೇ ಸೀಮಿತರಾಗಬಾರದು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು.

-ಸಾಗರ್ ದ್ರಾವಿಡ್, ಹಿರಿಯೂರು 

****

ಶಿಕ್ಷಣ ರಂಗದಲ್ಲಿ ರಾಜಕೀಯ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗೆ ನೇಮಕ ಮಾಡಿಕೊಳ್ಳುವಲ್ಲಿ ನಡೆಯುತ್ತಿರುವ ಲಾಬಿಯು ನಮ್ಮನ್ನು ವಿಚಲಿತಗೊಳಿಸುವಂತಿದೆ. ಬಹುಪಾಲು ಶಾಲೆ– ಕಾಲೇಜಿನ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಆಯ್ಕೆಯ ಮಾನದಂಡವನ್ನು ಗಾಳಿಗೆ ತೂರಿದ್ದಾರೆ. ವೈಯಕ್ತಿಕ ಆದ್ಯತೆ ಮೇರೆಗೆ ಅಥವಾ ರಾಜಕೀಯ ನಾಯಕರ ಶಿಫಾರಸ್ಸಿಗೆ ಕಟ್ಟುಬಿದ್ದಿದ್ದಾರೆ. ಇದರಿಂದ ನಾಲ್ಕಾರು ವರ್ಷಗಳಿಂದ ಅತಿಥಿ ಶಿಕ್ಷಕ, ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬದುಕು ಕಟ್ಟಿಕೊಂಡವರು ಬೀದಿಗೆ ಬೀಳುವಂತಾಗಿದೆ.

-ವೆಂಕಟೇಗೌಡ ಎಸ್.ವಿ., ತುಮಕೂರು

****

ಮುಳುವಾದ ‘ಬಿಎಲ್‌ಒ’ ಜವಾಬ್ದಾರಿ

ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಕಲಿಸುವ ಬಗ್ಗೆ ತರಬೇತಿ ಪಡೆದುಕೊಂಡು ಸಿಇಟಿ ಪರೀಕ್ಷೆಯಲ್ಲಿ ಆಯ್ಕೆಯಾಗಿ ಬಂದ ಶಿಕ್ಷಕರು, ಇಲಾಖೆಯೇತರ ಕೆಲಸಗಳ ಜವಾಬ್ದಾರಿಯನ್ನೂ ಹೊರಬೇಕಿದೆ. ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಕೆಲಸದಿಂದ ಹೈರಾಣಾಗಿದ್ದಾರೆ. ಇಬ್ಬರೇ ಶಿಕ್ಷಕರು ಮತ್ತು ಏಕೋಪಾಧ್ಯಾಯ ಶಾಲೆಯಲ್ಲಂತೂ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣೆ ಘೋಷಣೆ ಆದಾಗಿನಿಂದ ಮುಗಿಯುವವರೆಗಿನ ಕೆಲಸಗಳ ಭಾರದಿಂದ ಶಿಕ್ಷಕರು ಮುಕ್ತವಾಗಿ ತರಗತಿ ನಿರ್ವಹಣೆಯನ್ನು ಮಾಡದಂತಾಗಿದೆ. ಮಕ್ಕಳಿಗೆ ಮುಕ್ತವಾಗಿ ಕಲಿಸಲು ಶಿಕ್ಷಕರಿಗೆ ಅವಕಾಶ ನೀಡದಿದ್ದರೆ, ಮುಂದೊಂದು ದಿನ ಸರ್ಕಾರಿ ಶಾಲೆಗಳು ಸ್ಮಾರಕಗಳಂತೆ ಕಾಣಿಸುವ ಸನ್ನಿವೇಶ ದೂರದಲ್ಲಿಲ್ಲ.

-ಹರೀಶ್ ಜಿ.ಆರ್., ದಾವಣಗೆರೆ

****

ರೈತರಿಗೆ ನಿರ್ಗತಿಕರಾಗುವ ಭಯ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ರಕ್ಷಣಾ ಮತ್ತು ವೈಮಾನಿಕ ಪಾರ್ಕ್‌ ನಿರ್ಮಾಣಕ್ಕೆ 449 ಎಕರೆ ಜಮೀನು ಬಿಟ್ಟುಕೊಡಲು ಸಿದ್ಧವಿದ್ದು, ಪ್ರತಿ ಎಕರೆಗೆ ₹3.50 ಕೋಟಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಟ್ಟಿರುವ ಸುದ್ದಿ ಓದಿ ದಿಗಿಲಾಯಿತು (ಪ್ರ.ವಾ., ಜುಲೈ 13). ಇದರ ಹಿಂದೆ ರೈತರಿಗೆ ಆಮಿಷ ತೋರಿಸಿ ಭೂಮಿ ಕಸಿಯುವ ಭೂಮಾಫಿಯಾದ ಹುನ್ನಾರ ಇದೆ. ಭೂಮಿ ಕಳೆದುಕೊಂಡರೆ ರೈತರು ನಿರ್ಗತಿಕರಾಗುವುದರಲ್ಲಿ ಅನುಮಾನವಿಲ್ಲ.

-ಎಚ್.ಆರ್‌. ಪ್ರಕಾಶ್, ಮಂಡ್ಯ 

****

ಧುರೀಣರಿಗೆ ಋಜುತ್ವ ಬೇಕು

1935ರ ಭಾರತೀಯ ಕೌನ್ಸಿಲ್ ಕಾಯ್ದೆ ಪ್ರಕಾರ ಸರ್ಕಾರ ರಚಿಸಿದ ಅಂದಿನ ಕಾಂಗ್ರೆಸ್‌ ಸಚಿವರು, ತಮಗೆ ನಿಯಮ ಪ್ರಕಾರ ಬಳಸಬಹುದಿದ್ದ ಮೊದಲನೇ ದರ್ಜೆ ರೈಲಿನ ಬೋಗಿಯ ಬದಲು ತೃತೀಯ ದರ್ಜೆಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಸ್ವಯಂ ಪ್ರೇರಣೆಯಿಂದ ತಮ್ಮ ಸಂಬಳ ಕಡಿಮೆ ಮಾಡಿಕೊಂಡಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ನಿದ್ದೆ ಬರಲಿಲ್ಲ ಎಂಬ ಕಾರಣಕ್ಕೆ ಐಷಾರಾಮಿ ಕೊಠಡಿಯನ್ನು (ಸ್ವೀಟ್ಸ್‌ ರೂಮ್‌) ಉಪ ಮುಖ್ಯಮಂತ್ರಿಗೆ ಬಿಟ್ಟುಕೊಟ್ಟಿದ್ದಾರೆ. ಐಷಾರಾಮಿ ಕಾರು, ಜೀರೊ ಟ್ರಾಫಿಕ್ ಇತ್ಯಾದಿ ಸೌಲಭ್ಯಗಳು ವರ್ತಮಾನದ ರಾಜಕಾರಣದ ಭಾಗವಾಗಿವೆ. ರಾಜಕಾರಣಿಗಳು ಸರಳತೆ ಮೈಗೂಡಿಸಿಕೊಂಡು ಮತದಾರರಿಗೆ ಮಾದರಿಯಾಗಬೇಕು.

-ಪ್ರಶಾಂತ್ ಕೆ.ಸಿ., ಚಾಮರಾಜನಗರ 

**** 

ಢೋಂಗಿತನದ ಪ್ರಾಣಿ ಪ್ರೀತಿ

ನಾಯಿ ಪ್ರೀತಿ ಮತ್ತು ಜನರ ಬಗೆಗಿನ ಜವಾಬ್ದಾರಿಯ ನಡುವೆ ಬಿಬಿಎಂಪಿ ಆದ್ಯತೆ ಯಾವುದಾಗಬೇಕಿತ್ತು? ಎಂಬುದನ್ನು ಸಂಪಾದಕೀಯವು ಮನಗಾಣಿಸಿದೆ (ಪ್ರ.ವಾ., ಜುಲೈ 12). ಸ್ವಾಮಿ ವಿವೇಕಾನಂದರ ಜೀವಿತಾವಧಿಯಲ್ಲಿ ನಡೆದ ಪ್ರಸಂಗ ಹೀಗಿದೆ: ಭೀಕರ ಕ್ಷಾಮದಿಂದಾಗಿ ಗೋವುಗಳು ಸಂಕಟದಲ್ಲಿವೆ. ಅವುಗಳ ಉಳಿವಿಗೆ ಬೆಂಬಲ ನೀಡಬೇಕು ಎಂದು ಗೋಶಾಲೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ, ವಿವೇಕಾನಂದರನ್ನು ಕೋರಿದ. ಅವರು ಆ ವ್ಯಕ್ತಿಯ ಕೆಲಸವನ್ನು ಪ್ರಶಂಸಿಸಿ, ಕ್ಷಾಮಕ್ಕೆ ತತ್ತರಿಸಿರುವ ಜನರ ಬಗ್ಗೆ ನಿಮ್ಮ ಕಾರ್ಯಯೋಜನೆ ಏನೆಂದು ಕೇಳಿದರು. ಅದಕ್ಕೆ ಆತ, ಜನರು ತಮ್ಮ ಕರ್ಮವನ್ನು ಅನುಭವಿಸುತ್ತಿರುವರೆಂದು ನುಡಿದ. ಆ ಮಾತಿಗೆ ಕೆರಳಿದ ವಿವೇಕಾನಂದರು, ‘ಜನರು ಅವರ ಕರ್ಮ ಅನುಭವಿಸುವಂತಾದರೆ ಗೋವುಗಳು ಕೂಡ ಅವುಗಳ ಕರ್ಮ ಅನುಭವಿಸಲಿ. ಅವುಗಳಿಗೆ ನಮ್ಮ ಬೆಂಬಲವೇಕೆ’ ಎಂದು ನಿಷ್ಠುರವಾಗಿ ಹೇಳಿ, ಆತನನ್ನು ಸಾಗ ಹಾಕಿದರಂತೆ.

ಸಹಮಾನವರಿಗೆ ಮಿಡಿಯದ ಮನಸ್ಸು ಪ್ರಾಣಿಗಳಿಗೆ ಮಿಡಿಯುವುದರಲ್ಲಿ ಢೋಂಗಿತನವಿದೆ ಎಂಬುದು ವಿವೇಕಾನಂದರ ನುಡಿ. ಸಹಮಾನವರನ್ನು ಉಪೇಕ್ಷಿಸಿದ ಪ್ರಾಣಿ ಪ್ರೀತಿಯಲ್ಲಿ ಮನುಷ್ಯತ್ವ ಕೊಂಚವೂ ಇರದು; ಬದಲು ಆತ್ಮವಂಚನೆ ಮಡುಗಟ್ಟಿರುತ್ತದೆ. ಪ್ರಜಾಪ್ರಭುತ್ವದ ಸಂಸ್ಥೆಗೆ ಆದ್ಯತೆ ಮತ್ತು ಆಷಾಢಭೂತಿತನದ ನಡುವೆ ವ್ಯತ್ಯಾಸ ಬೇಡವೇ?

 -ದೊಡ್ಡಿಶೇಖರ್, ಆನೇಕಲ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.