ADVERTISEMENT

ವಾಚಕರ ವಾಣಿ | ಜೀವರಕ್ಷಕ ಮಾಹಿತಿಗೆ ‘ಗೋಲ್ಡನ್‌ ಗಳಿಗೆ’

ವಾಚಕರ ವಾಣಿ
Published 14 ಜುಲೈ 2025, 22:33 IST
Last Updated 14 ಜುಲೈ 2025, 22:33 IST
<div class="paragraphs"><p>- ಐಸ್ಟಾಕ್ ಚಿತ್ರ</p></div>
   

- ಐಸ್ಟಾಕ್ ಚಿತ್ರ

ಸರೋಜಾದೇವಿ ಕೊಡುಗೆ ಅನನ್ಯ

ಸರೋಜಾದೇವಿ ಅವರು ಮೃದು ಸ್ವಭಾವದ ನಟಿಯಾಗಿದ್ದರು. ನಡೆ–ನುಡಿಯಿಂದ ಚಿತ್ರರಸಿಕರ ಮನಸ್ಸು ಗೆದ್ದಿದ್ದರು. ಭಾರತೀಯ ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಸೌಂದರ್ಯ ಹಾಗೂ ಪ್ರತಿಭೆಯ ಗಣಿಯಾಗಿದ್ದ ಅವರ ಅಗಲಿಕೆಯು ಅಭಿಮಾನಿಗಳಿಗೆ ದುಃಖ ತರಿಸಿದೆ.

ADVERTISEMENT

-ಎಂ.ಎಸ್. ಉಷಾ ಪ್ರಕಾಶ್, ಮೈಸೂರು

****

ರೈತರ ಬೆವರಿಗೆ ಬೆಲೆ ಇಲ್ಲವೇ?

ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ₹16.5 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಹೆಸರಿನಲ್ಲಿ ಮನ್ನಾ ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದ್ದಾರೆ. ಮತ್ತೊಂದೆಡೆ ರೈತರು ಬೆಳೆಗೆ ಸೂಕ್ತ ಬೆಲೆ ದೊರೆಯದೆ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಗ್ರಾಮೀಣರು ಉದ್ಯೋಗ ಇಲ್ಲದೆ ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಸರ್ಕಾರಗಳು ಮಾತ್ರ ಬಂಡವಾಳಶಾಹಿಗಳ ಪರವಾಗಿವೆ. ರೈತರ ಬೆವರಿಗೆ ಬೆಲೆಯೇ ಇಲ್ಲವೇ?

-ಎಂ. ಆಂಜನೇಯ, ಹಾವೇರಿ

****

ರಾಜಕಾರಣಿಗಳಿಗೆ ಪ್ರಚಾರದ ಮೋಹ

ಸಾಗರ ತಾಲ್ಲೂಕಿನ ಅಂಬಾರಗೋಡ್ಲು– ಕಳಸವಳ್ಳಿ ಸೇತುವೆ ಲೋಕಾರ್ಪಣೆ ವಿಚಾರಕ್ಕೆ ಸಂಬಂಧಿಸಿದ ‘ಸಿ.ಎಂಗೆ ಅಗೌರವ; ಜಟಾಪಟಿ’ (ಪ್ರ.ವಾ., ಜುಲೈ 14) ಸುದ್ದಿ ಓದಿ ನಗು ಬಂತು. ದೇಶದ ಆರ್ಥಿಕ ಮೂಲವೆಂದರೆ ಜನರು ನೀಡುವ ತೆರಿಗೆ ಹಣ. ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಯಾವುದೇ ಅಭಿವೃದ್ಧಿ ಯೋಜನೆಯು ಸಾರ್ವಜನಿಕರ ಆಸ್ತಿ. ಇದಕ್ಕೆ ರಾಜಕಾರಣಿಗಳು ಸ್ವಂತವಾಗಿ ನಯಾಪೈಸೆ ಖರ್ಚು ಮಾಡುವುದಿಲ್ಲ. ಆದರೆ, ಈ ಯೋಜನೆಗಳ ಹೆಗ್ಗಳಿಕೆ
ಯನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಾರೆ. ಸೇತುವೆಗೆ ಸರಳವಾಗಿ ಪೂಜೆ ಸಲ್ಲಿಸಿ ಲೋಕಾರ್ಪಣೆ ಮಾಡಬಹುದಿತ್ತಲ್ಲವೇ?

-ವಿ. ತಿಪ್ಪೇಸ್ವಾಮಿ, ಹಿರಿಯೂರು

****

ಪೊಲೀಸರಿಗೆ ಹಗುರ ಟೋಪಿ ಬೇಕು

ರಾಜ್ಯದ ಹೆಡ್‌ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ‘ಸ್ಲೋಚ್‌ ಹ್ಯಾಟ್‌’ (ಟೋಪಿ) ಬದಲಾವಣೆಗೆ ಪೊಲೀಸ್‌ ಇಲಾಖೆ ಮುಂದಾಗಿದೆ. ಈಗಾಗಲೇ, ಸಾಕಷ್ಟು ಕ್ಯಾಪ್‌ಗಳನ್ನು ಪರಿಶೀಲಿಸಿದರೂ ಒಮ್ಮತ ಮೂಡಿಲ್ಲ.

ಮಿಲಿಟರಿ ಕ್ಯಾಪ್ ನೋಡಲು ಸುಂದರವಾಗಿದ್ದು, ಹಗುರವಾಗಿದೆ. ಈ ಕ್ಯಾಪ್‌ ಮೇಲೆ ಕರ್ನಾಟಕ ರಾಜ್ಯ ಪೊಲೀಸ್ ಲಾಂಛನದೊಂದಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ‘ಕರ್ನಾಟಕ ರಾಜ್ಯ ಪೊಲೀಸ್’ ಎಂದು ಬರೆಯಿಸಿ ಅಧಿಕೃತಗೊಳಿಸ ಬಹುದು. ಈ ಕ್ಯಾಪ್ ತಲೆಯ ಮೇಲೆ ಭಾರ ಎನಿಸುವುದಿಲ್ಲ. ಸ್ವಚ್ಛಗೊಳಿಸಲು ಸುಲಭ. ಕೈಯಲ್ಲಿ ಹಿಡಿದುಕೊಳ್ಳಲು ಮತ್ತು ಕೆಲಸ ಮಾಡುವಾಗ ಓಡಾಡಿದರೂ ಬೀಳುವುದಿಲ್ಲ. ಈಗಾಗಲೇ, ಇದನ್ನು ಹೆಚ್ಚು ಪೊಲೀಸರು ಧರಿಸುತ್ತಿದ್ದಾರೆ. ಇದಕ್ಕೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕಾಗಿಲ್ಲ.

-ರವಿರಾಜ ಕೆಂದೂರ, ಹುಬ್ಬಳ್ಳಿ

****

ಜೀವರಕ್ಷಕ ಮಾಹಿತಿಗೆ ‘ಗೋಲ್ಡನ್‌ ಗಳಿಗೆ’

ಏನಾಗಿದೆ ನಮ್ಮ ಸರ್ಕಾರಕ್ಕೆ, ವಿರೋಧ ಪಕ್ಷಗಳಿಗೆ? ಹಠಾತ್‌ ಹೃದಯಾಘಾತದಿಂದ ಇಷ್ಟೊಂದು ಜನ ಸಾಯುತ್ತಿದ್ದಾರೆ, ಸಮಾಜಕ್ಕೆ ವೈದ್ಯಕೀಯ ಸಲಹೆ, ಮಾರ್ಗದರ್ಶನ ನೀಡುವ ಒಂದಾದರೂ ಜಾಹೀರಾತು ಪತ್ರಿಕೆಗಳಲ್ಲಿ ಬಂತೆ? ಹೃದಯಾಘಾತದ ಮೊದಲ ಮುನ್ಸೂಚನೆ ಸಿಕ್ಕ ‘ಗೋಲ್ಡನ್‌ ಗಳಿಗೆ’ಯಲ್ಲಿ ಏನು ಮಾಡಬೇಕೆಂದು ವೈದ್ಯಕೀಯ ಸಂಘ, ಸಂಸ್ಥೆಗಳೂ ಬಾಯಿ ಬಿಡುತ್ತಿಲ್ಲ ಏಕೆ? 

ನಾನು ಸಂಗ್ರಹಿಸಿದ ಕೆಲವು ಮಾಹಿತಿಗಳು ಹೀಗಿವೆ: ಅಲ್ಪವೆಚ್ಚದ, ಬಾಯಲ್ಲಿ ಕರಗುವ ಆಸ್ಪಿರಿನ್‌ ಗುಳಿಗೆಯನ್ನು ಕಿಸೆಯಲ್ಲಿ ಸದಾ ಇಟ್ಟುಕೊಂಡಿರಬೇಕು. ಎದೆನೋವು ಕಾಣಿಸಿಕೊಂಡ ತಕ್ಷಣ ಆ ಮಾತ್ರೆಯನ್ನು ಅಗಿಯಬೇಕು, ನುಂಗಬಾರದು. ತುರ್ತು ಪರಿಸ್ಥಿತಿಯಲ್ಲಿ ಅದು ಹೃದಯದ ರಕ್ತನಾಳ ಮುಚ್ಚಿಕೊಳ್ಳದಂತೆ ಶೀಘ್ರ ತಡೆದು ಜೀವರಕ್ಷಣೆ ಮಾಡುತ್ತದೆ (ಕೆಲವೊಮ್ಮೆ ಆಸಿಡಿಟಿ, ಅಜೀರ್ಣದಿಂದಲೂ ಎದೆನೋವು ಬಂದೀತು; ಆಗ ಇದು ಸೂಕ್ತವಲ್ಲ; ಕೆಲ ಮಾದರಿಯ ಲಕ್ವ ಹೊಡೆದಾಗಲೂ ಆಸ್ಪಿರಿನ್‌ ಸೇವನೆ ಸೂಕ್ತವಲ್ಲ). ತುರ್ತಾಗಿ ಆಂಬುಲೆನ್ಸ್‌ಗೆ (108) ಕರೆ ಮಾಡಿ. ಆಸ್ಪತ್ರೆಗಳಲ್ಲೂ ತುರ್ತು ಸಹಾಯಕ್ಕೆಂದು ಆಸ್ಪಿರಿನ್‌ ಅಗಿಯಲು ಹೇಳುತ್ತಾರೆ. ಆಂಬುಲೆನ್ಸ್‌ ನಿಮ್ಮೂರಲ್ಲಿ ಸದಾ ಸಜ್ಜಾಗಿದೆಯೆ ಎಂದು ಸಾಮಾನ್ಯ ದಿನಗಳಲ್ಲೂ ಆಗಾಗ ಪರೀಕ್ಷೆ ಮಾಡುತ್ತಿರಬೇಕು. ಕೃತಕ ಶ್ವಾಸೋಚ್ಛಾಸದ (ಸಿಪಿಆರ್‌) ತಂತ್ರವನ್ನು ಕುಟುಂಬದ ಒಂದಿಬ್ಬರಾದರೂ ಕಲಿತಿರಬೇಕು.

ಇನ್ನೊಂದು ಮುಖ್ಯ ವಿಷಯ: ಲೈಂಗಿಕ ದೌರ್ಬಲ್ಯವನ್ನು ಮೀರಲೆಂದು ವಯಾಗ್ರಾ ಮಾದರಿಯ ಮಾತ್ರೆಗಳ ಬಳಕೆ ಈಗೀಗ ಯುವಕರಲ್ಲೂ ಹೆಚ್ಚಿದೆ. ವೈದ್ಯರ ಸಲಹೆ ಇಲ್ಲದೇ ಸೇವಿಸಬೇಡಿ. ಅದೂ ಕೆಲವರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಶಕ್ತಿವರ್ಧಕ ಪೇಯದ ಜೊತೆಗಂತೂ ಅದರ ಸೇವನೆ ಮಾಡಲೇಬಾರದು. ರಕ್ತದೊತ್ತಡ ಹಠಾತ್‌ ಕಮ್ಮಿ ಆದೀತು. ಜಿಮ್‌ಗೆ ಹೋಗುವವರೂ ಅಲ್ಲಿ ಶಿಫಾರಸು ಮಾಡುವ ಪೇಯ ಮತ್ತು ಆಹಾರದ ಬಗ್ಗೆ ಹುಷಾರಾಗಿರಿ. ಈಗಂತೂ ಇಸಿಜಿ ಮಾಡಿಸಿಕೊಳ್ಳಲು ಅನೇಕರು
ದೌಡಾಯಿಸುತ್ತಿದ್ದಾರೆ. ನೆನಪಿರಲಿ, ಇಸಿಜಿ ಪರೀಕ್ಷೆ ಎಲ್ಲ ಸಮಯದಲ್ಲೂ ನಂಬಲರ್ಹ ಕ್ಷೇಮಚಿತ್ರಣ ನೀಡುವುದಿಲ್ಲ.

ಇಂಥ ಮತ್ತು ಇನ್ನೂ ಕೆಲವು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ವೈದ್ಯರ ಅಧಿಕೃತ ಮಾಹಿತಿ ವಿವಿಧ ಮಾಧ್ಯಮಗಳಲ್ಲಿ ಏಕೆ ಬರುತ್ತಿಲ್ಲ? ಸರ್ಕಾರ ಮತ್ತು ರಾಜಕೀಯ ಪಕ್ಷಗಳು ತಮಗೆ ಬೇಕಿದ್ದಾಗ ಏನೆಲ್ಲ ಬಗೆಯ ದೊಡ್ಡ ಜಾಹೀರಾತುಗಳಿಗೆ ಹಣ ಸುರಿಯುತ್ತಿವೆ. ಇಂಥ ಆತಂಕದ ಸಮಯದಲ್ಲಿ ಜನಜಾಗೃತಿಯ ವೈದ್ಯಕೀಯ ಸಲಹೆಗಳನ್ನು ಪ್ರಕಟಿಸುತ್ತಿಲ್ಲ.

-ನಾಗೇಶ ಹೆಗಡೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.