ADVERTISEMENT

ವಾಚಕರ ವಾಣಿ | ಖರ್ಗೆ ಪತ್ರಕ್ಕೆ ಸಿ.ಎಂ ಸ್ಪಂದಿಸುವರೇ?

ವಾಚಕರ ವಾಣಿ
Published 15 ಜುಲೈ 2025, 23:30 IST
Last Updated 15 ಜುಲೈ 2025, 23:30 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ರಸ್ತೆ–ಸೇತುವೆ: ಮಾಹಿತಿ ಅಗತ್ಯ

ಪ್ಯಾಕಿಂಗ್ ಮಾಡಲಾದ ದಿನಸಿ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ ಸಾಧನಗಳ ತನಕ, ಪ್ರತಿಯೊಂದು ವಸ್ತುವಿನ ಮೇಲೂ ಅದರ ತಯಾರಕರ ಹೆಸರು, ಬೆಲೆ, ತಯಾರಿಸಿದ ದಿನಾಂಕ, ಬಳಕೆಯ ಅವಧಿ ಮುಂತಾದ ಅಂಶಗಳು ನಮೂದಾಗಿರುತ್ತವೆ. ಆ ಮಾಹಿತಿ ಗ್ರಾಹಕರಿಗೆ ಉಪಯುಕ್ತ ಹಾಗೂ ವಸ್ತುವಿನ ಗುಣಮಟ್ಟದಲ್ಲಿ ಲೋಪವಿದ್ದಾಗ ಕಾನೂನು ಕ್ರಮಕೈಗೊಳ್ಳಲು ಸಹಕಾರಿ. ಇಂತಹ ಮಾಹಿತಿ ನಾವು ಬಳಸುವ ರಸ್ತೆ, ಸೇತುವೆ, ಚರಂಡಿ, ಸರ್ಕಾರಿ ಕಟ್ಟಡಗಳು ಮುಂತಾದ ಸಾರ್ವಜನಿಕ ಮೂಲಸೌಕರ್ಯಗಳಿಗೂ ಅಗತ್ಯ.

ADVERTISEMENT

ರಸ್ತೆ ಅಥವಾ ಸೇತುವೆ ನಿರ್ಮಾಣ ಮಾಡಿದ ಸಂಸ್ಥೆಯ ಹೆಸರು, ಕಾಮಗಾರಿ ವೆಚ್ಚ, ನಿರ್ಮಾಣದ ದಿನಾಂಕ, ಕಾಲಾವಧಿ, ಒಪ್ಪಂದದ ಅವಧಿ, ನಿರ್ವಹಣೆಗೆ ಯಾರು ಹೊಣೆ ಮುಂತಾದ ಮಾಹಿತಿಗಳು ಸಾರ್ವಜನಿಕವಾಗಿ ಲಭ್ಯವಿರಬೇಕು. ಇವೆಲ್ಲ ಮಾಹಿತಿಯನ್ನು ದೊಡ್ಡ ಫಲಕಗಳಲ್ಲಿ ಪ್ರದರ್ಶಿಸುವುದು ಕಷ್ಟ. ಆದರೆ, ಕ್ಯೂಆರ್‌ ಕೋಡ್‌ ತಂತ್ರಜ್ಞಾನ ಬಳಸಿಕೊಂಡು ಮಾಹಿತಿ ನೀಡುವುದು ಕಷ್ಟವೇನಲ್ಲ. ಇದರಿಂದ ಸಾರ್ವಜನಿಕ ಸೇವೆಯಲ್ಲಿ ಲೋಪ ಕಂಡುಬಂದಾಗ ಪ್ರಶ್ನಿಸಲೂ ನೆರವಾಗಲಿದೆ.

-ಜಿ. ನಾಗೇಂದ್ರ ಕಾವೂರು, ಸಂಡೂರು

****

ಬಾಲಂಗೋಚಿ ಪದ ಪ್ರಯೋಗ ಸರಿಯಲ್ಲ

ಇಂಗ್ಲೆಂಡ್‌ ವಿರುದ್ಧ ಭಾರತ ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಸೋಲುಂಡ ಸುದ್ದಿಗೆ ‘ಫಲ ನೀಡದ ಬಾಲಂಗೋಚಿಗಳ ಹೋರಾಟ’ ಎನ್ನುವ ಶೀರ್ಷಿಕೆ ಸಮಂಜಸವೆನ್ನಿಸಲಿಲ್ಲ. ‘ಬಾಲಂಗೋಚಿ’ ವಿಶೇಷಣ, ಬೌಲರ್‌ಗಳಿಗೆ ಮರ್ಯಾದೆ ತರುವಂತಹದ್ದಲ್ಲ. ಹಾಗೆ ನೋಡಿದರೆ, ಲಾರ್ಡ್ಸ್‌ ಟೆಸ್ಟ್‌ನಲ್ಲಿ ನಮ್ಮ ಸೂಪರ್‌ ಬ್ಯಾಟರ್‌ಗಳಿಗಿಂತ ಬೌಲರ್‌ಗಳೇ ಎರಡೂ ವಿಭಾಗದಲ್ಲಿ ಕೆಚ್ಚೆದೆಯ ಹೋರಾಟ ನೀಡಿದ್ದಾರೆ. ಅಂಥವರನ್ನು ‘ಬಾಲಂಗೋಚಿಗಳು’ ಎಂದು ಕರೆದರೆ ಹೇಗೆ?

‘ಬಾಲಂಗೋಚಿ’ ಪದಕುಟುಂಬದಲ್ಲಿ, ‘ಬಾಲಕತ್ತರಿಸು’ (ಅವಮಾನ ಮಾಡು), ‘ಬಾಲಬಡಿ’ (ಚಮಚಾಗಿರಿ ಮಾಡು), ‘ಬಾಲಬಡುಕ’ (ಹಿಂಬಾಲಕ), ‘ಬಾಲಬಿಚ್ಚು’  (ಉದ್ಧಟತನದಿಂದ ವರ್ತಿಸು) ಮುಂತಾದ ಪದಗಳನ್ನು ಗುರ್ತಿಸಬಹುದು. ಈ ಪದಗಳ ಹಿನ್ನೆಲೆಯಲ್ಲಿ ವ್ಯಂಗ್ಯದ ಧ್ವನಿ, ಹೀಗಳೆಯುವಿಕೆ ಸ್ಪಷ್ಟವಾಗಿದೆ. ಹಾಗಾಗಿ, ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವವರನ್ನು ‘ಬಾಲಂಗೋಚಿಗಳು’ ಎಂದು ಸಂಬೋಧಿಸುವುದು ಸರಿಯಲ್ಲ.

-ಸಿ. ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

****

ಪೌರತ್ವ ನಿರಾಕರಿಸುವ ಅನುಮಾನ

ಬಿಹಾರದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಾರ್ಹ (ಪ್ರ.ವಾ., ಜುಲೈ 14). ಈ ಪರಿಷ್ಕರಣೆಯು ಗೊಂದಲದ ಗೂಡಾಗಿದೆ. ಮತದಾರರ ಪಟ್ಟಿ ಶುದ್ಧೀಕರಿಸುವ ನೆಪದಲ್ಲಿ ಪ್ರಜೆಗಳ ಪೌರತ್ವ ನಿರಾಕರಿಸುವ ಅನುಮಾನ ದಟ್ಟವಾಗಿದೆ. ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಷ್ಕರಣೆ ವಿಧಾನವನ್ನು ಜನರಿಗೆ ಮನದಟ್ಟು ಮಾಡಿದ ನಂತರವೇ ಈ ಪ್ರಕ್ರಿಯೆ ಜಾರಿಗೊಳಿಸುವುದು ಸೂಕ್ತ.

-ಚಂದ್ರಪ್ರಭ ಕಠಾರಿ, ಬೆಂಗಳೂರು

****

ತೇಜೋವಧೆಯಿಂದ ಅಶಾಂತಿ ಸೃಷ್ಟಿ

ನಾಗರಿಕರು ತಮಗೆ ಸಂವಿಧಾನದತ್ತವಾಗಿ ಬಂದಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಸಲಹೆಯು ಸ್ವಾಗತಾರ್ಹ (ಪ್ರ.ವಾ., ಜುಲೈ 15). ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ತೇಜೋವಧೆಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿರುವ ನಿದರ್ಶನಗಳು ಸಾಕಷ್ಟಿವೆ. ಸಭ್ಯತೆಯ ಗಡಿ ದಾಟಿದ ಶಾಸಕರು ಮತ್ತು ಸಚಿವರು ಸಾರ್ವಜನಿಕವಾಗಿ ಮತ್ತು ಕೋರ್ಟ್‌ಗಳಿಂದ ಛೀಮಾರಿಗೆ ಒಳಗಾಗುವುದು ವರದಿಯಾಗುತ್ತಲೇ ಇದೆ. ಇತ್ತೀಚೆಗೆ, ಸರ್ಕಾರಗಳಾಗಲೀ ಸಮಾಜವಾಗಲೀ ವ್ಯಂಗ್ಯ, ವಿಡಂಬನೆಯನ್ನು ಸೈರಿಸಿಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಾ ಬಂದಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸ್ವೇಚ್ಛೆಯಿಂದ ಬಳಸುವುದರ ಬಗ್ಗೆ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ ಮನನೀಯವಾದುದು. ಈ ಅಭಿಪ್ರಾಯ, ಎಲ್ಲಾ ನಾಗರಿಕರು, ಕಲಾವಿದರು, ಮಾಧ್ಯಮಕ್ಕೂ ಅನ್ವಯಿಸುತ್ತದೆ.

-ಮೋದೂರು ಮಹೇಶಾರಾಧ್ಯ, ಹುಣಸೂರು

****

ಖರ್ಗೆ ಪತ್ರಕ್ಕೆ ಸಿ.ಎಂ ಸ್ಪಂದಿಸುವರೇ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿ, ನೌಕರರಿಗೆ ಮುಂಬಡ್ತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸಮಂಜಸ. ವಿವಿಧ ಇಲಾಖೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಕೆಲವು ನೇಮಕಾತಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡರೂ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಿಲ್ಲ. ಈ ಬಗ್ಗೆಯೂ ಖರ್ಗೆ ಅವರು ಪತ್ರ ಬರೆಯಲಿ. ಗ್ಯಾರಂಟಿ ಅಲೆಯಲ್ಲೇ ತೇಲುತ್ತಿರುವ ಸರ್ಕಾರವು, ಈ ಪತ್ರಕ್ಕಾದರೂ ಗೌರವ ಕೊಟ್ಟು ಸ್ಪಂದಿಸಲಿ.

-ಎಸ್.ಎನ್. ರಮೇಶ್, ಮಂಡ್ಯ

****

ದೂರದಿಂದ ಕಂಡಿದ್ದೆಲ್ಲ ನಿಜವಲ್ಲ...

‘ಅಂತರಿಕ್ಷದಿಂದ ಕಣ್ಣು ಹಾಯಿಸಿದಾಗ ಭಾರತವು ಮಹತ್ವಾಕಾಂಕ್ಷೆಯೇ ಮೈದಳೆದಂತಿರುವ ಹಾಗೂ ಯಾವುದೇ ಅಂಜಿಕೆಯಿಲ್ಲದ ದೇಶವಾಗಿ ಕಾಣಿಸುತ್ತದೆ’ ಎಂದು ಗಗನಯಾನಿ ಶುಭಾಂಶು ಶುಕ್ಲ ಹೇಳಿದ್ದಾರೆ. ಆದರೆ, ‘ಜಾಗತಿಕ ಚಿತ್ರಹಿಂಸೆ ಸೂಚ್ಯಂಕ’ದಲ್ಲಿ ಭಾರತ ‘ಹೆಚ್ಚು ಅಪಾಯಕಾರಿ’ ಪಟ್ಟಿಯಲ್ಲಿದೆ (ಪ್ರ.ವಾ., ಜುಲೈ 14). ‘ದೂರದ ಬೆಟ್ಟ ನುಣ್ಣಗೆ’ ಗಾದೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಬೀತಾದಂತಾಯಿತು.

 -ಪ್ರಶಾಂತ್ ಕೆ.ಸಿ., ಚಾಮರಾಜನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.