ಭತ್ತದ ಕೃಷಿ ಅವನತಿಯತ್ತ ಸಾಗಿರುವುದರ ಬಗೆಗಿನ ವಸ್ತುಸ್ಥಿತಿಯನ್ನು ಸತೀಶ್ ಜಿ.ಕೆ. ತೀರ್ಥಹಳ್ಳಿ ತೆರೆದಿಟ್ಟಿದ್ದಾರೆ (ಸಂಗತ, ಆ. 14). ಹಿಂದೆ ಮಲೆನಾಡಿನಲ್ಲಿ ಭತ್ತ ಬೆಳೆಯುವುದು ಒಂದು ಆದರಣೀಯ ಉದ್ಯೋಗವಾಗಿತ್ತು. ಒಬ್ಬ ರೈತ ಜಾಸ್ತಿ ಭತ್ತ ಬೆಳೆಯುತ್ತಿದ್ದಾನೆಂದರೆ ಆತನಿಗೆ ತುಂಬಾ ಗೌರವ, ಮಾನ್ಯತೆ ಲಭಿಸುತ್ತಿದ್ದವು. ಆ ಊರಿಗೇ ಆತ ಒಬ್ಬ ದೊಡ್ಡ ಜನ ಅಂತ ಭಾವಿಸಲಾಗುತ್ತಿತ್ತು. ಒಬ್ಬ ವರನಿಗೆ ಹೆಣ್ಣು ಕೊಡಲು ಬರುವ ಕನ್ಯಾಪಿತೃಗಳು ಆ ಮನೆಯ ಕಣದಲ್ಲಿ ದೊಡ್ಡ ಭತ್ತದ ಕುತ್ತರೆ ಅಥವಾ ಹುಲ್ಲಿನ ಗೊಣವೆಗಳನ್ನು ನೋಡಿದರೆ, ಆ ವರನನ್ನು ಅಳಿಯನನ್ನಾಗಿ ಸ್ವೀಕರಿಸಲು ಆ ಒಂದು ಮಾನದಂಡವೇ ಸಾಕಾಗಿ ಬಿಡುತ್ತಿತ್ತು.
ಆದರೆ ಇಂದು ಪರಿಸ್ಥಿತಿ ಬಹಳ ಬದಲಾಗಿ ಹೋಗಿದೆ. ರೈತನನ್ನು ವರಿಸಲು ಹುಡುಗಿಯರೇ ಒಪ್ಪುತ್ತಿಲ್ಲ. ಅದರಲ್ಲೂ ಆತನೇನಾದರೂ ಭತ್ತ ಬೆಳೆಯುವ ಗದ್ದೆಯನ್ನು ಹೇರಳವಾಗಿ ಹೊಂದಿರುವವನೆಂದರೆ ಆ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ! ಭತ್ತದ ಕೃಷಿ ನಷ್ಟದಾಯಕ ಉದ್ಯೋಗ ಎಂದು ಭಾವಿಸಿ ಬಹುತೇಕ ರೈತರು ಭತ್ತ ಬೆಳೆಯುವ ಕಾಯಕದಿಂದ ದೂರ ಸರಿದು ಕೆಲವಾರು ವರ್ಷಗಳೇ ಕಳೆದಿವೆ. ಸರ್ಕಾರಗಳು ಎಚ್ಚೆತ್ತು, ಭತ್ತ ಬೆಳೆಯುವವರಿಗೆಪ್ರೋತ್ಸಾಹದಾಯಕ ಯೋಜನೆಗಳನ್ನು ಹಾಕಿಕೊಳ್ಳಬೇಕಾಗಿದೆ.
- ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.