ADVERTISEMENT

ವಾಚಕರ ವಾಣಿ: ಚಿನ್ನ, ಬೆಳ್ಳಿ ದರ ಏರಿಕೆಗೆ ಕಡಿವಾಣವಿರಲಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2025, 19:24 IST
Last Updated 10 ಫೆಬ್ರುವರಿ 2025, 19:24 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಚಿನ್ನ, ಬೆಳ್ಳಿ ದರ ಏರಿಕೆಗೆ ಕಡಿವಾಣವಿರಲಿ

ಭಾರತವು ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಹೊಂದಿರುವ ದೇಶಗಳಲ್ಲಿ ಒಂದು. ಎಲ್ಲಾ ವರ್ಗದ ಜನ ಆಸೆಪಟ್ಟು ಖರೀದಿಸುವ ವಸ್ತುಗಳಲ್ಲಿ ಬಂಗಾರ ಪ್ರಮುಖವಾಗಿದೆ. ಮಧ್ಯಮ ವರ್ಗದ ಜನ ಪೈಸೆ ಪೈಸೆ ಕೂಡಿಟ್ಟು ಚಿನ್ನ ಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ. ಹಣದ ಸಮಸ್ಯೆ ಬಂದಾಗ ಚಿನ್ನ ಅಡವಿಟ್ಟು ಅಥವಾ ಅದನ್ನು ಮಾರಿಯಾದರೂ ಹಣ ಪಡೆದುಕೊಳ್ಳಬಹುದು ಎಂಬುದು ಮಧ್ಯಮ ವರ್ಗದವರ ಉದ್ದೇಶವಾಗಿರುತ್ತದೆ. ಹೀಗಾಗಿಯೇ ಇಂದು ಚಿನ್ನ ಪ್ರಮುಖ ಲೋಹವಷ್ಟೇ ಅಲ್ಲ ಆಪತ್ಕಾಲದ ಬಂಧುವಿನಂತೆಯೂ ಗುರುತಿಸಿಕೊಂಡಿದೆ.

ಆದರೆ ಚಿನ್ನ ಇತ್ತೀಚಿನ ದಿನಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಂಗಾರಪ್ರಿಯರಿಗೆ ಆಘಾತದ ಮೇಲೆ ಆಘಾತ ನೀಡುತ್ತಿದೆ. ಅದರಲ್ಲೂ ಈ ಜನವರಿಯಿಂದ ಮೇವರೆಗೂ ಮದುವೆ ಸಮಾರಂಭಗಳು ಇದ್ದು, ಈ ಸಂದರ್ಭದಲ್ಲಿ ಚಿನ್ನಾಭರಣಗಳ ಬೆಲೆ ಹೆಚ್ಚಾಗುತ್ತಿರುವುದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೆಳ್ಳಿ ಕೂಡ ಪೂಜನೀಯ ಲೋಹವಾಗಿ ಬಳಕೆಯಲ್ಲಿದೆ. ಕಾಲ್ಗೆಜ್ಜೆ, ಆಭರಣಗಳು, ಪೂಜಾ ಸಾಮಗ್ರಿಯಂತಹ ಬೆಳ್ಳಿಯ ವಸ್ತುಗಳನ್ನು ಗ್ರಾಹಕರು ದಿನನಿತ್ಯದ ಬಳಕೆಗಾಗಿ ಖರೀದಿಸುತ್ತಾರೆ. ಇಂತಹ ಬೆಳ್ಳಿ ಕೂಡ ಚಿನ್ನದ ಹಿಂದೆಯೇ ತನ್ನ ಬೆಲೆಯನ್ನು ಭರ್ಜರಿಯಾಗಿಯೇ ಏರಿಸಿಕೊಂಡಿದ್ದು, ಅದು ಸಹ ನಾಗಾಲೋಟದಿಂದ ಓಡುತ್ತಿದೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನ ಮತ್ತು ಬೆಳ್ಳಿಯ ದರಗಳಿಗೆ ಕಡಿವಾಣ ಹಾಕಿ, ಬಡ ಹಾಗೂ ಮಧ್ಯಮ ವರ್ಗದ ಜನರ ಕೈಗೆಟಕುವ ರೀತಿಯಲ್ಲಿ ದರಗಳಲ್ಲಿ ಸ್ಥಿರತೆಯನ್ನು ಕಾಪಾಡುವುದು ಅವಶ್ಯ. 

ADVERTISEMENT

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಕುಂಭಮೇಳ: ದ್ವಂದ್ವ ನಿಲುವು

‘ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರೆ ಈ ದೇಶದ ಬಡತನ ನಿವಾರಣೆಯಾಗುವುದೇ?’ ಎಂದು
ಪ್ರಯಾಗ್‌ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಎತ್ತಿದ ಪ್ರಶ್ನೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಹೇಳಿಕೆ ನೀಡಿದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇದೇ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿಬಂದಿದ್ದಾರೆ. ಈಗ ಅವರದೇ ಪಕ್ಷದ ನೇತೃತ್ವದ ಆಡಳಿತವಿರುವ ಕರ್ನಾಟಕ ಸರ್ಕಾರದಿಂದ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಮೂರು ದಿನಗಳ ಕುಂಭಮೇಳ ಆರಂಭವಾಗಿದೆ. ಈ ಪ್ರಕ್ರಿಯೆಗಳಿಂದ, ಆ ಪಕ್ಷದ ನಾಯಕರಲ್ಲಿ ಇಂತಹ ವಿಚಾರಗಳ ಬಗ್ಗೆ ಇರುವ ದ್ವಂದ್ವ ಸ್ಪಷ್ಟವಾಗುತ್ತದೆ.

ಧಾರ್ಮಿಕ ಆಚರಣೆ ಮತ್ತು ನಂಬಿಕೆ ಅವರವರ ವೈಯಕ್ತಿಕ ವಿಚಾರ. ಒಬ್ಬರ ಧಾರ್ಮಿಕ ನಂಬಿಕೆಯು
ಮೂಢನಂಬಿಕೆಯಾಗಿಲ್ಲದೆ, ಇನ್ನೊಬ್ಬರಿಗೆ ಮಾನಸಿಕವಾಗಿಯಾಗಲೀ ದೈಹಿಕವಾಗಿಯಾಗಲೀ ತೊಂದರೆಯನ್ನು ಉಂಟು ಮಾಡದಿದ್ದಲ್ಲಿ ಅಂತಹ ಆಚರಣೆಯನ್ನು ನಿಂದಿಸುವುದು ಸರಿಯಲ್ಲ. ಜನರ ಮನಸ್ಸಿಗೆ ಇಂತಹ ಆಚರಣೆಗಳಿಂದ ನೆಮ್ಮದಿ ಸಿಗುವಂತಿದ್ದರೆ ಅದನ್ನು ವಿರೋಧಿಸುವುದೇಕೆ?

-ಕೆ.ಎಂ.ನಾಗರಾಜು, ಮೈಸೂರು

ಅನ್ಯಾರ್ಥ ಧ್ವನಿಸುವ ರಾಜಕೀಯಪ್ರೇರಿತ ಹೇಳಿಕೆ

‘ಕಾವಿ ಧರಿಸಿದ ಸನ್ಯಾಸಿಗಳು ಪ್ರಸಂಗ ಬಂದರೆ ಧರ್ಮ ಮತ್ತು ದೇಶದ ರಕ್ಷಣೆಗಾಗಿ ಸೈನಿಕರಾಗಲು ಸಿದ್ಧರಾಗಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿರುವುದು
(ಪ್ರ.ವಾ., ಫೆ. 7) ಅಸ್ಪಷ್ಟವೂ ಗೊಂದಲಕಾರಿಯೂ ಅನಗತ್ಯವೂ ಅನ್ಯಾರ್ಥವನ್ನು ಧ್ವನಿಸುವ ಮತ್ತು ರಾಜಕೀಯ ಪ್ರೇರಿತವೂ ಆದ ಮಾತುಗಳಾಗಿ ಕಂಡುಬರುತ್ತಿದೆ. ಇಂದು ನಮ್ಮ ಧರ್ಮ ಮತ್ತು ದೇಶಕ್ಕೆ ಅಂತಹ ಯಾವ ಪ್ರಸಂಗ ಬಂದಿದೆ ಮತ್ತು ಕಾವಿಧಾರಿ ಸನ್ಯಾಸಿಗಳು ಎಂತಹ ಸೈನಿಕರಾಗಬೇಕಾಗಿದೆ ಎಂದು ಸೂಕ್ಷ್ಮವಾಗಿ
ಯೋಚಿಸತೊಡಗಿದಾಗ ಮತ್ತಷ್ಟು ಗೊಂದಲಗಳು ಕಾಣಿಸಿಕೊಳ್ಳುತ್ತಾ ಹೋಗುತ್ತವೆ. ಏಕೆಂದರೆ ವಾಸ್ತವದಲ್ಲಿ ಇಂದು ನಮ್ಮ ಧರ್ಮಗಳು ತಮ್ಮ ಆರಂಭದ ಉದ್ದೇಶಗಳಾದ ಸಾಮೂಹಿಕ ಕಾಳಜಿಯುಳ್ಳ ನೈಜ ಮಾನವೀಯ
ಸಂವೇದನೆಗಳಿಗಿಂತ ಭಿನ್ನವಾಗಿ ಢಾಂಬಿಕ ಆಚರಣೆಗಳೇ ಪ್ರಧಾನವಾಗುತ್ತಾ ಮೂಲತತ್ವಗಳೇ ಮಸುಕಾಗುವಂತಹ ಸ್ಥಿತಿಗೆ ತಲುಪಿವೆ. ದಯಾಮೂಲ, ಸಮಷ್ಟಿ ಹಿತವನ್ನು ಕಾಪಾಡುವ, ಸೌಹಾರ್ದ ಸಂಸ್ಕೃತಿಯ ಚಿಂತನೆಗಳಿಗೆ ಬದಲಾಗಿ ದ್ವೇಷೋತ್ಪಾದನೆ, ಪ್ರಚೋದನಾತ್ಮಕ ಭಾವೋನ್ಮಾದ ವಿಜೃಂಭಿಸುತ್ತಿವೆ.

‘ದೇಶ ಉಳಿದರೆ ಮಾತ್ರ ನಮ್ಮ ಧರ್ಮಗಳು ಮತ್ತು ಸಂಸ್ಕೃತಿ ಉಳಿಯುತ್ತವೆ’ ಎಂಬ ಸ್ವಾಮೀಜಿ ಮಾತಿನಲ್ಲಿ ಧರ್ಮಕ್ಕಾಗಿ ದೇಶ ಉಳಿಯಬೇಕಾಗಿದೆ, ಧರ್ಮ ಮೊದಲು ನಂತರ ದೇಶ, ಧರ್ಮ ಮತ್ತು ಸಂಸ್ಕೃತಿಯ ‘ಜೊತೆಗೆ’ ದೇಶ ಎಂಬ ಅಂತರಾರ್ಥವು ಹೊರಹೊಮ್ಮುವುದು ಕಂಡುಬರುತ್ತಿದೆ. ಅಂದರೆ ನಮ್ಮಲ್ಲಿ ಇನ್ನೂ ಸಂವಿಧಾನಾತ್ಮಕ ‘ರಾಷ್ಟ್ರೀಯ ಪರಿಕಲ್ಪನೆ’ಯೇ ಮೂಡಿಲ್ಲವೇನೊ ಎಂಬ ಸಂದೇಹ ಬರುತ್ತದೆ.

-ಪು.ಸೂ‌.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಪ್ಯಾರಾಚೂಟ್ ತರಬೇತಿ: ಮುನ್ನೆಚ್ಚರಿಕೆ ಅಗತ್ಯ

ಉತ್ತರಪ್ರದೇಶದ ಆಗ್ರಾದಲ್ಲಿ ಅಧಿಕಾರಿಗಳಿಗೆ ಪ್ಯಾರಾಚೂಟ್ ತರಬೇತಿ ಕೊಡುವ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಪ್ಯಾರಾಚೂಟ್ ತೆರೆದುಕೊಳ್ಳದೆ ಹೊಸನಗರ ಮೂಲದ ವಾಯುಪಡೆ ಅಧಿಕಾರಿ ಜಿ.ಎಸ್‌.ಮಂಜುನಾಥ್‌ ಅವರು ಸಾವಿಗೀಡಾಗಿರುವುದು ದುರದೃಷ್ಟಕರ. ವಿಮಾನ ಅಥವಾ ಹೆಲಿಕಾಪ್ಟರ್ ಹೊರಡುವ ಮುನ್ನ ಪ್ಯಾರಾಚೂಟ್ ಅನ್ನು ಬಿಚ್ಚಿ, ಅದು ಸರಿಯಾಗಿ ಇದೆಯೇ ಎಂದು ಪರಿಶೀಲಿಸಿ ನಂತರ ಹೊರಡುವ ವ್ಯವಸ್ಥೆ ಇರಬೇಕು. ಅನ್ಯಾಯವಾಗಿ ಒಬ್ಬ ಪರಿಣತ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಇನ್ನು ಮುಂದಾದರೂ ಇಂತಹ ತಿಳಿಗೇಡಿತನವನ್ನು ತೋರದೆ, ಪ್ರತಿ ಬಾರಿಯೂ ಪ್ಯಾರಾಚೂಟ್‌ಗಳನ್ನು ಸರಿಯಾಗಿ ಪರಿಶೀಲಿಸಿಯೇ ಅಧಿಕಾರಿಗಳನ್ನು ಹೆಲಿಕಾಪ್ಟರ್‌ಗೆ ಹತ್ತಿಸಬೇಕು.

- ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.