ಮಹಾಲೇಖಪಾಲರ ಕಚೇರಿ: ಕನ್ನಡ ಎಲ್ಲಿ?
ಪಾರ್ಶ್ವವಾಯುಪೀಡಿತ ನನ್ನ ಮಿತ್ರರೊಬ್ಬರ ಪಿಂಚಣಿ ಬಗ್ಗೆ ವಿಚಾರಿಸಲು ಇತ್ತೀಚೆಗೆ ಮಹಾಲೇಖಪಾಲರ ಕಚೇರಿಗೆ ಹೋಗಿದ್ದೆ. ಅಲ್ಲಿನ ನೌಕರನೊಬ್ಬ ಅಲ್ಲಿಟ್ಟಿದ್ದ ಸಾವಿರಾರು ನೌಕರರ ಸೇವಾಪುಸ್ತಕಗಳನ್ನು ತೋರಿಸಿ, ‘ಏ ಸಬ್ಕೋ ಪಢನಾ ಹೈ’ ಎಂದ. ನಾನು ಕುಸಿದುಬೀಳುವುದಷ್ಟೇ ಬಾಕಿಯಿತ್ತು.
ಮಹಾಲೇಖಪಾಲರ ಕಚೇರಿಯು ಸುಮಾರು ಐದು ಲಕ್ಷ ನೌಕರರ ಪಿಂಚಣಿ, ಭವಿಷ್ಯನಿಧಿ ಮತ್ತು ಇತರ ಉಪಾದಾನಗಳ ಲೆಕ್ಕಪತ್ರ ಇಡುತ್ತದೆ. ವಿಚಿತ್ರವೆಂದರೆ, ಈ ಕಚೇರಿಯ ಶೇ 90ರಷ್ಟು ಸಿಬ್ಬಂದಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ! ಆದರೂ, ಇವರು ಪತ್ರಾಂಕಿತ ಅಧಿಕಾರಿಗಳಿಂದ ಹಿಡಿದು ‘ಡಿ’ ಗ್ರೂಪ್ ನೌಕರರ ನಿವೃತ್ತಿ ವೇತನ ಹಾಗೂ ಇತರ ಲೆಕ್ಕಗಳನ್ನು ಮಾಡಿ ಖಜಾನೆ ಇಲಾಖೆಗೆ ಇಂತಿಷ್ಟು ನಿವೃತ್ತಿ ವೇತನ ನೀಡಲು ನಿರ್ದೇಶನ ನೀಡುತ್ತಾರೆ. ಸಾಮಾನ್ಯವಾಗಿ ಸೇವಾಪುಸ್ತಕ ವನ್ನು ಕನ್ನಡದಲ್ಲೇ ಬರೆಯಲಾಗುತ್ತದೆ. ಕನ್ನಡ ಬಾರದ ಇವರು ಕೈಬರಹದ ಕನ್ನಡ ಅಕ್ಷರಗಳನ್ನು ಓದುತ್ತಾರೆಯೆ? ಇದರಿಂದಲೇ ಹಲವು ನೌಕರರ ಪಿಂಚಣಿ ಸಮಸ್ಯೆ ಇಂದಿಗೂ ಇತ್ಯರ್ಥವಾಗಿಲ್ಲ ಎನಿಸುತ್ತದೆ.
⇒ಶರಣು ಬಿರಾದಾರ, ಬೆಂಗಳೂರು
ಮೊಬೈಲ್ ಮೋಹ; ಬದುಕಿಗೆ ಆಪತ್ತು
ಬೆಂಗಳೂರಿನಲ್ಲಿ ಮೊಬೈಲ್ ರಿಚಾರ್ಜ್ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಪತಿಯ ಮೇಲೆ ಕೋಪಗೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (ಪ್ರ.ವಾ., ಅ. 15). ಹಿಂದೆ ಟಿ.ವಿ. ರಿಮೋಟ್‌ಗಾಗಿ ಮನೆಗಳಲ್ಲಿ ಜಗಳ, ಆತ್ಮಹತ್ಯೆಯಂಥ ಪ್ರಕರಣ ವರದಿಯಾಗುತ್ತಿದ್ದವು. ಈಗ ರಿಮೋಟ್ ಸ್ಥಾನವನ್ನು ಮೊಬೈಲ್ ಫೋನ್‌ಗಳು ಆಕ್ರಮಿಸಿಕೊಂಡಿವೆ.
⇒ಹರೀಶ್ ಎಚ್.ಸಿ., ಬೆಂಗಳೂರು
ದ್ವಿಮುಖ ಹಾಗೂ ಅಸ್ಪಷ್ಟ ಕ್ರೀಡಾನೀತಿ
ಭಾರತ ಮತ್ತು ಪಾಕಿಸ್ತಾನದ ಯುವ ಹಾಕಿ ಕ್ರೀಡಾಪಟುಗಳು ಹಸ್ತಲಾಘವ ನೀಡಿ ಕ್ರೀಡಾಸ್ಫೂರ್ತಿ ಮೆರೆದ ಸುದ್ದಿ (ಪ್ರ.ವಾ., ಅ. 15) ಓದಿ ಸಂತೋಷವಾಯಿತು. ಆದರೆ, ಕ್ರಿಕೆಟ್‌ಗೆ ಪ್ರತ್ಯೇಕ ಕ್ರೀಡಾನೀತಿ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಏಕೆಂದರೆ, ಕ್ರಿಕೆಟ್‌ನಲ್ಲಿ ಹಣದ ಹುಚ್ಚು ಹೊಳೆ ಇದೆ. ಬೇರೆ ಕ್ರೀಡೆಗಳಲ್ಲಿ ಹಣದ ಹರಿವು ಇಲ್ಲ. ರಾಜಕೀಯ ನೀತಿಯೂ ಅಷ್ಟೇ. ಇಂತಹ ದ್ವಂದ್ವ ನೀತಿ ಅನುಸರಿಸುವುದು ಸರಿಯಲ್ಲ.
⇒ಚಂದ್ರಶೇಖರ ಎಚ್.ಎಸ್., ಬೆಂಗಳೂರು
ಪೋಷಕರಿಗೊಂದು ವಿವೇಕದ ಪಾಠ
ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಶಿತ್ ಭಟ್ ಎಂಬ ಹತ್ತು ವರ್ಷದ ಬಾಲಕನ ಒರಟು ನಡವಳಿಕೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯು ಪಾಲಕರಿಗೆ ಪಾಠವಂತೂ ಹೌದು. ಗೆಲುವೇ ಬದುಕಿನ ಗುರಿ. ಅದನ್ನು ಪಡೆದುಕೊಳ್ಳಲು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ವರ್ತಿಸಬಹುದು ಎನ್ನುವ ರೀತಿಯಲ್ಲಿ ಇಂದಿನ ಮಕ್ಕಳು ಬೆಳೆಯುತ್ತಿದ್ದಾರೆ ಎನ್ನುವುದು ಕಟುಸತ್ಯ. ಮೊಬೈಲ್ ಬಳಸಲು ಕಲಿತರೆ ತಾವೇ ಅತಿ ಬುದ್ಧಿವಂತರು ಎಂಬ ಭ್ರಮೆ ಮಕ್ಕಳಲ್ಲಿ ಹುಟ್ಟುವಂತೆ ಮಾಡಿದೆ. ಇದರಲ್ಲಿ ಮಕ್ಕಳ ತಪ್ಪಿಗಿಂತ ಪೋಷಕರ ಪಾಲು ಹೆಚ್ಚಿದೆ.
⇒ಎಚ್.ಎಸ್. ನವೀನ ಕುಮಾರ್, ಹೊಸದುರ್ಗ
ರಾಜಕೀಯ ಕಾಲೇಜು ಸ್ವಾಗತಾರ್ಹ
ಕರ್ನಾಟಕ ವಿಧಾನಮಂಡಲದಿಂದ ಬೆಂಗಳೂರಿನಲ್ಲಿ ರಾಜಕೀಯ ಕಾಲೇಜು ಪ್ರಾರಂಭಿಸಲು ನಿರ್ಧರಿಸಿರುವುದು ಒಳ್ಳೆಯ ನಿರ್ಧಾರ. ಇಂದಿನ ವಿದ್ಯಾರ್ಥಿಗಳಿಗೆ ರಾಜಕೀಯದ ಅರಿವು ಅವಶ್ಯವಿದೆ. ಈಗಾಗಲೇ, ಈ ದಿಸೆಯಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿರುವುದು ಮೆಚ್ಚುವಂತದ್ದು.
⇒ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ
ಪಶ್ಚಿಮ ಬಂಗಾಳದ ದುರ್ಗಾಪುರದ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಖಂಡನಾರ್ಹ. ಹೆಣ್ಣುಮಕ್ಕಳು ಅದೆಷ್ಟೋ ಶ್ರಮ ಮತ್ತು ಕನಸುಗಳೊಂದಿಗೆ ವೈದ್ಯಕೀಯ ಶಿಕ್ಷಣ ಕಲಿಕೆಗೆ ಪ್ರವೇಶ ಪಡೆಯುತ್ತಾರೆ. ಇಂತಹ ಅಮಾನವೀಯ ಕೃತ್ಯಗಳು ಹೆಣ್ಣುಮಕ್ಕಳ ಕನಸುಗಳನ್ನು ಹೊಸಕಿ ಹಾಕುತ್ತವೆ. ಸಮಾಜ ನೈತಿಕ ಅಧಃಪತನದ ಹಾದಿ ಹಿಡಿದಿರುವುದಕ್ಕೆ ಇಂತಹ ಘಟನೆಗಳು ಸಾಕ್ಷಿಯಾಗಿವೆ. ಕರ್ನಾಟಕದಲ್ಲಿಯೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಘಟನೆಗಳು ಹೆಚ್ಚುತ್ತಿವೆ. ತಪ್ಪಿತಸ್ಥರಿಗೆ ತ್ವರಿತವಾಗಿ ಶಿಕ್ಷೆ ವಿಧಿಸಬೇಕಿದೆ.
⇒ದಿವ್ಯ ಬಿ.ಕೆ., ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.