ADVERTISEMENT

ವಾಚಕರ ವಾಣಿ: ಏಕವ್ಯಕ್ತಿ, ಐದು ಹುದ್ದೆ ನಿರ್ವಹಣೆ!

ಪ್ರಜಾವಾಣಿ ವಿಶೇಷ
Published 4 ಅಕ್ಟೋಬರ್ 2023, 23:30 IST
Last Updated 4 ಅಕ್ಟೋಬರ್ 2023, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಏಕವ್ಯಕ್ತಿ, ಐದು ಹುದ್ದೆ ನಿರ್ವಹಣೆ!

ಸುಮಾರು 35 ಯೋಜನೆಗಳನ್ನು ಒಳಗೊಂಡಿರುವ ‘ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ’ಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ದೇಶಕರನ್ನು ಹೊರತುಪಡಿಸಿ 19 ಮಂದಿ ಸಿಬ್ಬಂದಿ ಇದ್ದಾರೆ. ಜಂಟಿ ನಿರ್ದೇಶಕರು, ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಕಚೇರಿ ವ್ಯವಸ್ಥಾಪಕರು ಮತ್ತು ಶಾಖಾಧಿಕಾರಿಯ ತಲಾ ಒಂದು ಹುದ್ದೆ, ಅಧೀಕ್ಷಕರು- 3, ಪ್ರಥಮ ದರ್ಜೆ ಸಹಾಯಕರು- 9 ಮತ್ತು ದ್ವಿತೀಯ ದರ್ಜೆ ಸಹಾಯಕರ 2 ಹುದ್ದೆಗಳಿವೆ. ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು, ವಿವಿಧ ಇಲಾಖೆಗಳಿಂದ ಈ ಇಲಾಖೆಗೆ ಅನುಕಂಪದ ಆಧಾರದ ಮೇಲೆ ಭರ್ತಿಯಾಗಿರುವ ಹುದ್ದೆಗಳೇ ಆಗಿವೆ. ಇಲಾಖೆಯ ಜಿಲ್ಲಾ ಕಚೇರಿಗಳೂ ಇದಕ್ಕೆ ಹೊರತಾಗಿಲ್ಲ.

ADVERTISEMENT

ಅತ್ಯಂತ ಶೋಚನೀಯ ಎಂದರೆ, ಬೆಂಗಳೂರು ನಗರ ಅಂಗವಿಕಲರ ಕಲ್ಯಾಣಾಧಿಕಾರಿ ತಮ್ಮ ಹುದ್ದೆಯೊಂದಿಗೆ ಹೆಚ್ಚುವರಿಯಾಗಿ, ಅಂಗವಿಕಲರ ಹಕ್ಕುಗಳು– 2016 ಕಾಯ್ದೆಯಡಿ ಬರುವ ಸಹಾಯಕ ಆಯುಕ್ತರ ಹುದ್ದೆ ಸೇರಿದಂತೆ ನಿರ್ದೇಶನಾಲಯದ ಪ್ರಮುಖ ಹುದ್ದೆಗಳಾದ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರ ಹುದ್ದೆಗಳನ್ನೂ ನಿಭಾಯಿಸುತ್ತಿದ್ದಾರೆ. ಹೀಗೆ, ಏಕಕಾಲದಲ್ಲಿ ಏಕವ್ಯಕ್ತಿ ಮೂರು ಸ್ಥಳಗಳಲ್ಲಿರುವ ಮೂರು ಕಚೇರಿಗಳ ಐದು ಹುದ್ದೆಗಳನ್ನು
ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವೇ? ಇದನ್ನು ಗಮನಿಸಿದರೆ, 21 ಬಗೆಯ ವೈಕಲ್ಯದ ಸುಮಾರು 20 ಲಕ್ಷ ಅಂಗವಿಕಲರು ಹಾಗೂ 58 ಲಕ್ಷ ಹಿರಿಯ ನಾಗರಿಕರಿರುವ ಇಲಾಖೆಯ ಸ್ಥಿತಿ ಏಕೋಪಾಧ್ಯಾಯ ಶಾಲೆಯ
ಮುಖ್ಯೋಪಾಧ್ಯಾಯನಂತೆ ಆಗಿರುವುದು ವಿಪರ್ಯಾಸ.

ಕೇಂದ್ರ ಕಚೇರಿಯ ಸ್ಥಿತಿಯೇ ಹೀಗಾದರೆ, ಇನ್ನು ಸಬಲೀಕರಣಗೊಳ್ಳುವ ಕನಸು ಹೊತ್ತು ಕುಳಿತ ಲಕ್ಷಾಂತರ ಅಂಗವಿಕಲರ ಸ್ಥಿತಿ ಏನಾಗಬೇಡ ಎಂಬ ಕೊರಗು ಕಾಡದಿರಲು ಸಾಧ್ಯವೇ? ಆದ್ದರಿಂದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದರೊಂದಿಗೆ ಇಲಾಖೆಯ ಬಲವರ್ಧನೆ ಹಾಗೂ ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಬೇಕಾಗಿದೆ.

ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ಶ್ರೀಮಂತರು ಅಧ್ಯಕ್ಷರಾಗಿದ್ದರೆ...

‘ಮೀಸಲಾತಿ: ಉದ್ದೇಶ ಮುಕ್ಕಾಗದಿರಲಿ’ ಎಂಬ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ (ಸಂಗತ, ಅ. 3) ಓದಿದಾಗ, ನನಗಾದ ಅನುಭವವೊಂದು ನೆನಪಿಗೆ ಬಂದಿತು. ಇತ್ತೀಚೆಗೆ ನಮ್ಮೂರಿನ ಉತ್ಸವವನ್ನು ಊರಿನ ಶ್ರೀಮಂತರೆಲ್ಲಾ ಸೇರಿ ಚಂದಾ‌ ಹಣದಿಂದ ಏರ್ಪಡಿಸಿದ್ದರು. ಊರಲ್ಲೆಲ್ಲಾ ಮೆರವಣಿಗೆ, ಗ್ರಾಮ ಪಂಚಾಯಿತಿ ಆವರಣದಲ್ಲಿ ಸಭಾ ಕಾರ್ಯಕ್ರಮ ಹಾಗೂ ಅಲ್ಲಿಯೇ ಉಪಾಹಾರದ ವ್ಯವಸ್ಥೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮೀಸಲಾತಿಯಿಂದ ಬಂದ ಕೆಳವರ್ಗದ ಬಡ ವ್ಯಕ್ತಿ. ಹಾಗಾಗಿ, ಈ ಕಾರ್ಯಕ್ರಮ ಅವರ ಗಮನಕ್ಕೆ ಬಾರದೆ ಅವರ ಅನುಪಸ್ಥಿತಿಯಲ್ಲಿಯೇ ಯಾವುದೇ ಅಡೆತಡೆ ಇಲ್ಲದೆ ನಡೆದುಹೋಯಿತು.

ಎಲ್ಲಾ ಮುಗಿದ ಮೇಲೆ ಆತ ಬಂದು ತಮ್ಮ ಸಹವರ್ತಿಗಳೊಂದಿಗೆ, ತಾನು ಬಡವನಾಗಿದ್ದರಿಂದ ತನ್ನ ಗಮನಕ್ಕೆ ಬಾರದೇ ಕಾರ್ಯಕ್ರಮ ನಡೆಯಿತು, ಒಂದುವೇಳೆ ಶ್ರೀಮಂತರು ಅಧ್ಯಕ್ಷರಾಗಿದ್ದರೆ ಹೀಗಾಗಲು ಬಿಡುತ್ತಿದ್ದರೇ ಎಂದು ಗದ್ಗದಿತರಾಗಿ ಕೇಳುತ್ತಿದ್ದ ರೀತಿ ಎಂಥ ಕಲ್ಲು ಹೃದಯಗಳನ್ನೂ ಕರಗಿಸುವಂತಿತ್ತು!

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ರೈತರ ಮೂಗಿಗೆ ಅರಿಸಿನ ಹಚ್ಚುವ ಪ್ರಯತ್ನ!

‘ಹನ್ನೆರಡು ವರ್ಷಗಳ ಬಳಿಕ ಚಪ್ಪಲಿ ಧರಿಸಿದ ರೈತ’ ಸುದ್ದಿ (ಪ್ರ.ವಾ., ಸೆ. 2) ಓದಿ ಈ ಪತ್ರ. ಅರಿಸಿನ ಬೆಳೆಗೆ ಒಂದು ಮಂಡಳಿ ಸ್ಥಾಪಿಸುವ ಪ್ರಧಾನಿ ಘೋಷಣೆ ಇದಕ್ಕೆ ಕಾರಣ. ಕರ್ನಾಟಕದಲ್ಲೂ ಅರಿಸಿನದ ಬೆಳೆಗಾರರಿದ್ದಾರೆ- ಮುಖ್ಯವಾಗಿ ಚಾಮರಾಜನಗರ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ. ಕಮಾಡಿಟಿ ಬೋರ್ಡ್‌ಗಳು
ರಾಷ್ಟ್ರಮಟ್ಟದಲ್ಲಿ ಐದಿವೆ: ಕಾಫಿ, ಟೀ, ರಬ್ಬರ್, ತಂಬಾಕು ಹಾಗೂ ಸಂಬಾರ ಪದಾರ್ಥಗಳಿಗೆ. ಕೊನೆಯದರಲ್ಲಿ ಅರಿಸಿನ ಕೂಡ ಇದೆ. ಆದರೆ ನ್ಯಾಷನಲ್ ಟರ್ಮರಿಕ್ ಬೋರ್ಡನ್ನು ಟೊಬ್ಯಾಕೊ ಬೋರ್ಡ್ ಮಾದರಿಯಲ್ಲಿ ರೂಪಿಸುತ್ತಾರಂತೆ.

ದೇಶದ ಅರಿಸಿನ ಬೆಳೆಯ ಶೇ 35ರಷ್ಟು ಕ್ಷೇತ್ರ ಹಾಗೂ ಶೇ 47ರಷ್ಟು ಉತ್ಪಾದನೆ ಆಂಧ್ರಪ್ರದೇಶದಲ್ಲಿದೆ. ಅಲ್ಲಿನ ಕೃಷಿ ‌ವಿಶ್ವವಿದ್ಯಾಲಯ (ಎಎನ್‌ಜಿಆರ್‌ಎಯು) ಕಡಪ ಜಿಲ್ಲೆಯ ಅರಿಸಿನ ಬೆಳೆಗಾರರ ಸಮಸ್ಯೆಗಳ ಬಗೆಗೆ 2020-21ರಲ್ಲಿ ಅಧ್ಯಯನ ನಡೆಸಿ ಇತ್ತೀಚೆಗೆ ವರದಿ‌ ಬಿಡುಗಡೆ ಮಾಡಿದೆ. ಅದರ ಪ್ರಕಾರ, ರೈತರು‌ ಬೆಲೆ ಹಾಗೂ‌ ಅದರ‌ ಏರಿಳಿತ, ಹಣ ಸಿಗುವಲ್ಲಿನ‌ ವಿಳಂಬದ ಬಗೆಗೆ ಹೇಳಿದ್ದಾರೆ. ಬೋರ್ಡ್ ಸ್ಥಾಪಿಸಬೇಕು ಎಂದು‌ ಕೇಳಿಲ್ಲ. ಕಾಫಿ ಬೋರ್ಡ್‌ಗಿಂತ ಟೀ ಬೋರ್ಡ್ ಪರಿಣಾಮಕಾರಿ ಕೆಲಸ ಮಾಡಿದೆ ಎನ್ನಬಹುದು. ರಬ್ಬರ್ ಬೋರ್ಡ್‌ಗೆ ಬೆಲೆ ಹಾಗೂ ಬೇಡಿಕೆ ಕುಸಿತದ ಬಗೆಗೆ ಹೆಚ್ಚೇನೂ ಮಾಡಲಾಗುತ್ತಿಲ್ಲ. ತಂಬಾಕಿನ‌ ಕ್ಷೇತ್ರ ನಿಯಂತ್ರಿಸುವ ಪ್ರಯತ್ನ ನಡೆದಿದೆ. ಒಟ್ಟಾರೆ ಈ ಸರಕು‌ ಮಂಡಳಿಗಳ ಕೆಲಸ ಮಾರುಕಟ್ಟೆ ಸಂಶೋಧನೆ, ರಫ್ತು ‌ ಉತ್ತೇಜನ ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹೆ‌ ನೀಡುವುದಕ್ಕೆ ಸೀಮಿತವಾಗಿದೆ. ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಅಷ್ಟು ಸಹಾಯ ಆಗದು.

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತೆಲಂಗಾಣದಲ್ಲಿ ಅರಿಸಿನ ಮಂಡಳಿಯನ್ನು ಸ್ಥಾಪಿಸುತ್ತೇವೆ ಎಂದು ಹೇಳುವುದು ಅದನ್ನು ಪ್ರಚಾರದ ಸರಕಾಗಿ ಬಳಸಿದಂತೆ. ಮೂಲಸೌಕರ್ಯ ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಕಷ್ಟ,
ಮೌಲ್ಯವರ್ಧನೆಯಲ್ಲಿ ಖಾಸಗಿ ರಂಗ‌ದ ಪಾತ್ರ ಹೆಚ್ಚು. ಹಾಗಾಗಿ ನರೇಂದ್ರ ಮೋದಿಯವರು ರೈತರ ಮೂಗಿಗೆ ಅರಿಸಿನ ಹಚ್ಚಲೆತ್ನಿಸಿದ್ದಾರೆ ಎನ್ನಬಹುದು. ಇದರ ಜತೆಗೆ ಮಾಡಿರುವ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆಯೂ ಹಾಗೇ- ಅಂತಹ ಸಂಸ್ಥೆಗಳು ಕೆಲ ಕಾಲದ ನಂತರ ಸಂಪನ್ಮೂಲ ಕೊರತೆಯಂತಹ ಸಮಸ್ಯೆಗಳಿಂದ ಚೇತನಾರಹಿತವಾಗಿವೆ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.