ADVERTISEMENT

ವಾಚಕರ ವಾಣಿ: ಶೂನ್ಯ ಬ್ಯಾಂಕ್ ಖಾತೆ: ಶುಲ್ಕ ಬೇಡ 

ಪ್ರಜಾವಾಣಿ ವಿಶೇಷ
Published 7 ಫೆಬ್ರುವರಿ 2024, 0:25 IST
Last Updated 7 ಫೆಬ್ರುವರಿ 2024, 0:25 IST
<div class="paragraphs"><p>ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಶೂನ್ಯ ಬ್ಯಾಂಕ್ ಖಾತೆ: ಶುಲ್ಕ ಬೇಡ 

ಸರ್ಕಾರಿ ಶಾಲೆಯ ಮಕ್ಕಳು ವಿದ್ಯಾರ್ಥಿ ವೇತನ ಪಡೆಯಲು ಶೂನ್ಯ ಬ್ಯಾಲೆನ್ಸ್‌ ಬ್ಯಾಂಕ್ ಖಾತೆ ಹೊಂದಿರಬೇಕೆಂಬ ನಿಯಮವಿದೆ. ಆದರೆ ಈ ಖಾತೆಗೆ ಇಂತಿಷ್ಟು ಹಣ ಜಮಾ ಮಾಡಬೇಕೆಂದು ಬ್ಯಾಂಕುಗಳು ಸೂಚಿಸುತ್ತವೆ. ಅದರಂತೆ ಗ್ರಾಮೀಣ ಭಾಗದ ಪೋಷಕರು ಹಣ ಜಮಾ ಮಾಡುತ್ತಾರೆ. ಆದರೆ ಸೇವಾ ಶುಲ್ಕವೆಂದು ಖಾತೆಯಲ್ಲಿನ ಹಣವನ್ನು ಬ್ಯಾಂಕ್‌ ಕಡಿತಗೊಳಿಸುತ್ತಾ ಹೋಗುತ್ತದೆ. ಇದರಿಂದ ಪೋಷಕರು ಕಂಗಾಲಾಗುತ್ತಾರೆ. ಖಾತೆಯಲ್ಲಿ ಇತರ ಯಾವ ವಹಿವಾಟೂ ನಡೆಯುವುದಿಲ್ಲವಾದ್ದರಿಂದ ಬಳಿಕ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಆಗ ಸರ್ಕಾರ ಹಾಕಿದ ವಿದ್ಯಾರ್ಥಿ ವೇತನ ಜಮಾ ಆಗದೆ ತೊಂದರೆಯಾಗುತ್ತದೆ. ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರದ ಬ್ಯಾಂಕುಗಳಿಗೆ ಅಡ್ಡಾಡಬೇಕಾಗುತ್ತದೆ. ಇದರಿಂದ ಕೃಷಿ ಕೆಲಸಕ್ಕೆ ಅಡಚಣೆಯಾಗಿ, ಮಕ್ಕಳ ಓದಿಗೂ
ತೊಂದರೆಯಾಗುತ್ತದೆ.

ADVERTISEMENT

ಬ್ಯಾಂಕುಗಳು ಬರೀ ಲಾಭಾಂಶವನ್ನು ನೋಡದೆ, ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವಿದೆ. ಶೂನ್ಯ ಬ್ಯಾಂಕ್ ಖಾತೆಗೆ ಸೇವಾ ಶುಲ್ಕದಿಂದ ವಿನಾಯಿತಿ ನೀಡಬೇಕಾಗಿದೆ.

ರಾಜೇಂದ್ರ ಕುಮಾರ್ ಕೆ. ಮುದ್ನಾಳ್, ಠಾಣಗುಂದಿ, ಯಾದಗಿರಿ

ಪ್ರಚಾರದ ವೇದಿಕೆಯಾದ ಹಂಪಿ ಉತ್ಸವ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇತ್ತೀಚೆಗೆ ಚಾಲನೆ ಪಡೆದ ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ಗ್ಯಾರಂಟಿ ಯೋಜನೆಗಳ ಪ್ರಚಾರ, ಮುಖ್ಯಮಂತ್ರಿಯವರ ಗುಣಗಾನ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗೆ ಸೀಮಿತವಾಗಿದ್ದು ದುರ್ದೈವದ ಸಂಗತಿ.

ರಾಜ್ಯದ ಪಂಚ ಗ್ಯಾರಂಟಿಗಳು ಪ್ರತಿ ಮನೆಗೂ ಒಂದಲ್ಲ ಒಂದು ರೀತಿಯಲ್ಲಿ ತಲುಪಿವೆ. ಯೋಜನೆಯ ಲಾಭ ಪಡೆಯುತ್ತಿರುವ ಫಲಾನುಭವಿಗಳಲ್ಲಿ ಸರ್ಕಾರದ ಬಗ್ಗೆ ಅಭಿಮಾನ ಇದೆ. ಆದರೆ ನಾಡಿನ ಸಂಸ್ಕೃತಿ ಮತ್ತು ಆ ಪ್ರದೇಶದ ಕಲೆ, ಇತಿಹಾಸದ ಕುರಿತು ಯುವಪೀಳಿಗೆಗೆ ತಿಳಿಸಬೇಕಾದ ವೇದಿಕೆಯನ್ನು ಸಂಪೂರ್ಣವಾಗಿ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಬಳಸಿಕೊಂಡಿದ್ದು ಅನೇಕರಲ್ಲಿ ಬೇಸರ ಮೂಡಿಸಿತು.

2020ರಲ್ಲಿ ನಡೆದಿದ್ದ ಹಂಪಿ ಉತ್ಸವದಲ್ಲಿಯೂ ಇದೇ ರೀತಿ ಅಂದಿನ ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಯೋಜನೆಗಳ ಕುರಿತು ಭಾಷಣ ಮಾಡಿದರೆ, ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಯಡಿಯೂರಪ್ಪ ಅವರನ್ನು ಹೊಗಳಲು ವೇದಿಕೆಯನ್ನು ಬಳಸಿಕೊಂಡಿದ್ದರು. ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಶ್ರೀಮಂತ ಪ್ರವಾಸಿಗರು ಮಾತ್ರ ಇಲ್ಲಿ ಉಳಿದುಕೊಳ್ಳಬಹುದಾದ ಸ್ಥಿತಿ ಇದೆ. ನಾನಾ ಕಡೆಗಳಿಂದ ಬರುವ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ಉಳಿದುಕೊಳ್ಳಲು ‘ಯಾತ್ರಿ ನಿವಾಸ’ದಂತಹ ಯೋಜನೆಯನ್ನು ಘೋಷಿಸಿದ್ದರೆ ಕಾರ್ಯಕ್ರಮ ಹೆಚ್ಚು ಅರ್ಥ ಪೂರ್ಣವಾಗಿರುತ್ತಿತ್ತು. ಹಂಪಿ ಉತ್ಸವವನ್ನು ರಾಷ್ಟ್ರೀಯ ಉತ್ಸವವನ್ನಾಗಿಆಚರಿಸುವುದಷ್ಟೇ ಅಲ್ಲದೆ ಪ್ರತಿವರ್ಷವೂ ಅನುಕೂಲವಾಗುವಂತೆ ದಿನಾಂಕ ನಿಗದಿಪಡಿಸಲಾಗುವುದುಎಂದು ಸಿ.ಟಿ. ರವಿ ಅವರು ತಾವು ಸಚಿವರಾಗಿದ್ದಾಗ ಹೇಳಿದ್ದರು. ಆದರೆ ಅದು ಈವರೆಗೂ ಸಾಧ್ಯವಾಗಿಲ್ಲ. ಸರ್ಕಾರ ಇನ್ನು ಮುಂದಾದರೂ ಹಂಪಿ ಉತ್ಸವಕ್ಕೆ ಕಾಯಂ ದಿನಾಂಕವನ್ನು ನಿಗದಿ ಮಾಡಲಿ.

ಮಣಿಕಂಠ ಪಾ. ಹಿರೇಮಠ, ಹಂಪಿ

ಜನಕಲ್ಯಾಣ: ರಾಜ್ಯಗಳ ಜೊತೆ ಪೈಪೋಟಿ ಸಲ್ಲ!

ಪಡಿತರ ಕಾರ್ಯಕ್ರಮವು ಸಂವಿಧಾನಾತ್ಮಕವಾಗಿ ರಾಜ್ಯಗಳ ಜವಾಬ್ದಾರಿ. ಈ ಕ್ಷೇತ್ರದಲ್ಲಿ ಒಕ್ಕೂಟ ಸರ್ಕಾರವು ನೇರವಾಗಿ ಪ್ರವೇಶಿಸುತ್ತಿದೆ. ಉದಾಹರಣೆಗೆ, ‘ಭಾರತ ಬ್ರ್ಯಾಂಡ್’ ಅಕ್ಕಿ ಯೋಜನೆಯಲ್ಲಿ ಒಕ್ಕೂಟವು ಕೆ.ಜಿ.ಗೆ
₹ 29ರಂತೆ ಅಕ್ಕಿ ಮಾರಾಟ ಮಾಡುವ ಕಾರ್ಯಕ್ಕೆ ಕೈ ಹಾಕಿದೆ. ಭಾರತೀಯ ಆಹಾರ ನಿಗಮವು ಅಕ್ಕಿಯನ್ನು ರಾಜ್ಯಗಳಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅದರಿಂದ ಅಕ್ಕಿಯನ್ನು ಪಡೆದುಕೊಂಡು ಭಾರತ ಬ್ರ್ಯಾಂಡ್ ಎಂಬ ಹೆಸರಿನಲ್ಲಿ ಅಕ್ಕಿಯನ್ನು ನೇರವಾಗಿ ಮಾರಾಟ ಮಾಡುವ ಒಕ್ಕೂಟ ಸರ್ಕಾರದ ಕ್ರಮವು ರಾಜ್ಯ ಸರ್ಕಾರಗಳ ಹಕ್ಕುಗಳ ಉಲ್ಲಂಘನೆಯಾಗಿದೆ.

ಒಕ್ಕೂಟ ಸರ್ಕಾರವು ಬಾಯಲ್ಲಿ ಸಹಕಾರವಾದಿ ಒಕ್ಕೂಟ ತತ್ವವನ್ನು ಹೇಳುತ್ತದೆ, ಆಚರಣೆಯಲ್ಲಿ ಸ್ಪರ್ಧಾತ್ಮಕ– ಕೇಂದ್ರೀಕೃತ ಒಕ್ಕೂಟ ತತ್ವವನ್ನು ಅನುಸರಿಸುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದನ್ನು ಒಕ್ಕೂಟ ಸರ್ಕಾರ ಕೈಬಿಟ್ಟು ರಾಜ್ಯ ಸರ್ಕಾರಗಳಿಗೆ ನೆರವು ನೀಡಬೇಕು. ಈ ಮೂಲಕ ಇಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

ಟಿ.ಆರ್.ಚಂದ್ರಶೇಖರ, ಬೆಂಗಳೂರು

ಮತಾಂತರ: ಗೊಂದಲ ಬಗೆಹರಿಯಲಿ

ಹಿಂದೂ ಸನಾತನ ಧರ್ಮದ ಬಗ್ಗೆ ಒಲವಿದ್ದು, ಹಿಂದೂ ಧರ್ಮ ಸ್ವೀಕರಿಸಲು ಬಯಸುವವರಿಗೆ ಪವಿತ್ರ ಜಲ ಸಿಂಪಡಿಸಿ ಹಿಂದೂ ಧರ್ಮ ಸೇರಲು ತಿರುಪತಿ ತಿರುಮಲ ದೇವಸ್ಥಾನಮ್ (ಟಿಟಿಡಿ) ಸಹಕರಿಸುತ್ತದೆ ಎಂದು ವರದಿಯಾಗಿದೆ (ಪ್ರ.ವಾ., ಫೆ. 6). ಮುಂದುವರಿದು, ಹಿಂದೂ ಧರ್ಮವನ್ನು ಪಾಲಿಸಲು ಇಚ್ಛಿಸುವ
ಅನ್ಯಧರ್ಮೀಯರಿಗೆ ಹಿಂದೂ ಧರ್ಮದ ಪದ್ಧತಿಗಳು, ಸಂಪ್ರದಾಯ ಮತ್ತು ಆಚರಣೆಗಳ ಕುರಿತು ತರಬೇತಿ ನೀಡಲಾಗುವುದು ಎಂದು ಸಹ ತಿಳಿಸಲಾಗಿದೆ. ಸ್ವಇಚ್ಛೆಯಿಂದ ಬರುವವರಿಗೆ ಹಿಂದೂ ಧರ್ಮ ಸೇರ್ಪಡೆಗೆ ಅವಕಾಶ ಮಾಡಿಕೊಟ್ಟಿರುವುದೇನೋ ಸರಿ. ಆದರೆ ಹಿಂದೂ ಧರ್ಮದಲ್ಲಿ ಹಲವಾರು ಜಾತಿ, ಉಪ ಪಂಗಡಗಳಿದ್ದು ಯಾವ ಜಾತಿಗೆ ಸೇರ್ಪಡೆ ಮಾಡಿಕೊಳ್ಳುತ್ತಾರೆ?

ಒಂದೊಂದು ಜಾತಿ, ಪಂಗಡದಲ್ಲೂ ಒಂದೊಂದು ಬಗೆಯ ಧಾರ್ಮಿಕ ಆಚರಣೆಗಳಿವೆ. ಹೀಗಾಗಿ, ಯಾವ ಆಚರಣೆಗಳ ಕುರಿತು ತರಬೇತಿ ನೀಡಲಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಜಾತಿ, ಉಪಜಾತಿಗಳ ನಡುವೆ ಈಗಾಗಲೇ ಇರುವ ತಾರತಮ್ಯಕ್ಕೆ ತಾರತಮ್ಯದ ಮತ್ತೊಂದು ವರ್ಗ ಸೇರ್ಪಡೆಗೊಂಡಂತೆ ಆಗುತ್ತದಷ್ಟೇ.

ಕೆ.ಎಂ.ನಾಗರಾಜು, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.