ADVERTISEMENT

ಮೀಸಲಾತಿಯ ರಾಜಕೀಯ ಮೇಲಾಟ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಮಾರ್ಚ್ 2021, 19:31 IST
Last Updated 4 ಮಾರ್ಚ್ 2021, 19:31 IST

ಮೀಸಲಾತಿ ಬೇಡಿಕೆಗಾಗಿ ಇತ್ತೀಚೆಗೆ ಹೋರಾಟಗಳು ಬಹಳ ದೊಡ್ಡದಾಗಿ ನಡೆಯುತ್ತಿವೆ. ಯಾವ ಸಮುದಾಯಗಳು ನಿಜವಾಗಿ ಅರ್ಹತೆ ಹೊಂದಿವೆಯೋ ಅವುಗಳಿಗೆ ಮೀಸಲಾತಿಯ ನ್ಯಾಯ ಸಿಗಲಿ. ಆದರೆ ಇಂದು ಸಾಲು ಸಾಲು ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿರುವುದನ್ನು ನೋಡಿದರೆ ವಿಚಿತ್ರ ಎನಿಸುತ್ತದೆ. ಕೆಲವು ನಾಯಕರು ಭವಿಷ್ಯದಲ್ಲಿ ರಾಜಕೀಯ ನಾಯಕತ್ವಕ್ಕಾಗಿ, ತಮ್ಮ ಸಮುದಾಯದಲ್ಲಿ ಮುಂದಿನ ನಾಯಕ ತಾವೇ ಎಂಬ ತೋರ್ಪಡಿಕೆಗಾಗಿ ಹೋರಾಟಕ್ಕಿಳಿದಿದ್ದಾರೆ ಎನಿಸುತ್ತದೆ. ಸರ್ಕಾರದ ಅಂಗವಾದ ಸಚಿವರೇ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಸರ್ಕಾರದ ವಿರುದ್ಧವೇ ಪ್ರತಿಭಟಿಸುತ್ತಾರೆ. ಆದರೆ ಸದನದಲ್ಲಿ ಸಮಯ ಮೀಸಲಿಟ್ಟು ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಮಾತ್ರ ಅವರು ತಯಾರಿಲ್ಲ.

ವಿರೋಧ ಪಕ್ಷಗಳ ನಾಯಕರು ಸಹ ಈ ವಿಷಯದಲ್ಲಿ ರಾಜಕೀಯದ ಆಟ ಆಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ರಾಜಕೀಯ ಮೇಲಾಟದಂತೆ ಭಾಸವಾಗುತ್ತದೆ. ಜೊತೆಗೆ ಆಯಾ ಸಮುದಾಯಗಳ ಜನರ ಭಾವನೆಗಳ ಜೊತೆ ಇವರೆಲ್ಲ ಚೆಲ್ಲಾಟ ಆಡುತ್ತಿರುವಂತೆ ತೋರುತ್ತದೆ. ಮೀಸಲಾತಿ ಕೊಡುವುದಾದರೆ ಆಯಾ ಸಮುದಾಯಗಳ ಬಡವರಿಗೆ, ಏನೂ ಇಲ್ಲದ ಕೊನೇ ಸ್ತರದ ವ್ಯಕ್ತಿಗೆ ಕೊಡಲಿ. ಕೆಲವೆಡೆ ಮೀಸಲಾತಿ ಪಡೆಯುವ ವ್ಯಕ್ತಿಯ ತಂದೆ ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿರುತ್ತಾನೆ ಇಲ್ಲವೇ ದೊಡ್ಡ ಪ್ರಮಾಣದ ಆಸ್ತಿಪಾಸ್ತಿಯ ಒಡೆಯನಾಗಿರುತ್ತಾನೆ. ಅಂತಹ ವ್ಯಕ್ತಿಗೂ ಮೀಸಲಾತಿ ನೀಡಿದರೆ, ಅದೇ ಸಮುದಾಯದ ಮತ್ತೊಬ್ಬ ಬಡವನ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಈ ಬಗೆಯ ಮೀಸಲಾತಿ ನಮ್ಮ ಇಂದಿನ ಸಮಾಜಕ್ಕೆ ಬೇಡ. ಶ್ರೀಮಂತರೇ ಮೀಸಲಾತಿ ಪಡೆಯುತ್ತಾ ಹೋದರೆ ಅದೇ ಸಮುದಾಯದ ಬಡವ ಬಡವನಾಗಿಯೇ ಉಳಿಯುತ್ತಾನೆ.

- ಗೌತಮ್ ಗೌಡರ, ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.