ADVERTISEMENT

ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:18 IST
Last Updated 20 ನವೆಂಬರ್ 2018, 20:18 IST

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆಯ ಬುಡವನ್ನು ಗಟ್ಟಿಗೊಳಿಸುವಂಥ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿವೆ ಎಂಬ ಭಾವನೆ ದಟ್ಟವಾಗುತ್ತಲಿದೆ.

ಕೊನೆಯ ದಿನ ಕೆಲವು ನಿರ್ಣಯಗಳನ್ನು ಅಂಗೀಕರಿಸುವಲ್ಲಿಗೆ ಸಮ್ಮೇಳನದ ಉತ್ತರದಾಯಿತ್ವ ಕೊನೆಗೊಳ್ಳುವುದಿಲ್ಲ. ಅಂಗೀಕರಿಸಿದ ನಿರ್ಣಯಗಳನ್ನು ಆಚರಣೆಗಿಳಿಸುವುದು ಮುಖ್ಯ ಎಂದು ಹಲವರು ವಾದಿಸುತ್ತಾರೆ. ಸಮ್ಮೇಳನಗಳು ಪ್ರತಿವರ್ಷವೂ ಜಾತ್ರೆಯೋಪಾದಿಯಲ್ಲಿ ನಡೆಯುತ್ತ ಬಂದಿರುವದನ್ನು ಗಮನಿಸಿದ್ದೇವೆ. ಹಲವು ಕೋಟಿ ರೂಪಾಯಿ ಖರ್ಚು ಮಾಡಿ ಸಾಧಿಸಿದ್ದೇನು ಎಂದು ಯೋಚಿಸಿದಾಗ ಸಮ್ಮೇಳನಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಹತ್ತರವಾದ ಕೆಲಸಗಳನ್ನು ಮಾಡುತ್ತಿಲ್ಲ ಎಂಬುದು ದಿಟವಾಗುತ್ತದೆ.

ಒಟ್ಟಾರೆಯಾಗಿ ಸಾಹಿತ್ಯ ಸಮ್ಮೇಳನಗಳ ಸ್ವರೂಪವೇ ಬದಲಾಗಬೇಕು. ಅಧ್ಯಕ್ಷರ ಮೆರವಣಿಗೆ, ಹಾರ ತುರಾಯಿ,
ಸನ್ಮಾನ, ಮತ್ತದೇ ಮುಖಗಳಿಂದ ಗೋಷ್ಠಿ– ಸಂವಾದಗಳು ಮತ್ತು ಔಪಚಾರಿಕ ನಿರ್ಣಯಗಳಿಗೆ ಸಮ್ಮೇಳನ ಸೀಮಿತವಾಗವಾರದು. ಇಲ್ಲಿ ತೊಡಗಿಸಲಾಗುವ ಹಣ ಸಾರ್ವಜನಿಕರದ್ದು. ಪ್ರತಿ ಪೈಸೆಗೂ ನ್ಯಾಯ ಸಲ್ಲುವಂತೆ ಅದರ ಬಳಕೆಯಾಗಬೇಕು. ಗೋಷ್ಠಿಗಳು ಸಾಹಿತ್ಯದ ವಿದ್ಯಾರ್ಥಿಗಳ ಗುತ್ತಿಗೆ ಎನ್ನುವಂತಾಗದೆ, ವೈದ್ಯ, ಎಂಜಿನಿಯರ್, ಬಸ್ ಕಂಡಕ್ಟರ್, ಸಮಾಜ ವಿಜ್ಞಾನಿ, ವಕೀಲ... ಹೀಗೆ ಕನ್ನಡಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬರನ್ನೂ ಒಳಗೊಳ್ಳಬೇಕು. ಅನ್ಯ ಶಿಸ್ತುಗಳ ಪ್ರಾಜ್ಞರನ್ನು ಪ್ರತಿ ಬಾರಿಯೂ ದೂರವಿಟ್ಟೇ ಗೋಷ್ಠಿಗ
ಳನ್ನು ಸಂಘಟಿಸಲಾಗುತ್ತದೆ. ಪದೇ ಪದೇ ಅವೇ ಮುಖಗಳು, ಅವೇ ವಿಚಾರಗಳು... ಎನ್ನುವಂತಾಗಬಾರದು.

ADVERTISEMENT

ಈ ಬಾರಿ ಸಮ್ಮೇಳನ ಧಾರವಾಡದಲ್ಲಿ ನಡೆಯುತ್ತಿದೆ. ಈ ಸಮ್ಮೇಳನವಾದರೂ ಜಾತ್ರೆಯ ಸ್ವರೂಪದಿಂದ ಹೊರಬಂದು, ನಾಡು–ನುಡಿಯ ಚಿಂತನೆಯ ವೇದಿಕೆಯಾಗಲಿ.

ಡಾ.ಎಸ್.ಬಿ.ಜೋಗುರ, ನಾರಾಯಣಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.