ADVERTISEMENT

ಎಸ್‌ಡಿಎಂಸಿ: ಹಳಿ ತಪ್ಪಿದ ರಚನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 20:00 IST
Last Updated 8 ಜುಲೈ 2019, 20:00 IST

‘ಎಸ್‌ಡಿಎಂಸಿ: ಅಧಿಕಾರವಿಲ್ಲದ ಅಧಿಕಾರ’ ಎಂಬ ಲೇಖನ (ಸಂಗತ, ಜುಲೈ 5) ಶಿಕ್ಷಣ ಇಲಾಖೆಯ ಕಣ್ಣು ತೆರೆಸುವಂತಿದೆ. ಸರ್ಕಾರದ ಹಲವು ಯೋಜನೆಗಳು ಅತ್ಯುತ್ತಮವಾಗಿಯೇ ಇರುತ್ತವೆ. ಆದರೆ ಅನುಷ್ಠಾನದ ಹಂತದಲ್ಲಿ ವಿಫಲಗೊಳ್ಳುತ್ತವೆ. ಅವುಗಳಲ್ಲಿ ಎಸ್‌ಡಿಎಂಸಿ ಕೂಡ ಒಂದು. ಸ್ವಯಂ ಸೇವಾ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ವತಿಯಿಂದ ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಉತ್ತಮಪಡಿಸುವ ಉದ್ದೇಶದಿಂದ ಪ್ರಕಲ್ಪವೊಂದನ್ನು ನಡೆಸಲಾಗುತ್ತಿದೆ. ಇದರ ಉದ್ದೇಶಗಳಲ್ಲಿ ಎಸ್‌ಡಿಎಂಸಿಯನ್ನು ಸಬಲಗೊಳಿಸುವುದು ಪ್ರಮುಖ ಅಂಶವಾಗಿದೆ.

ಹಲವು ಕಡೆಗಳಲ್ಲಿ ಎಸ್‌ಡಿಎಂಸಿಗಳು ಸ್ಥಳೀಯ ಶಾಸಕರ ಆಣತಿಯಂತೆಯೇ ಕಾರ್ಯ ನಿರ್ವಹಿಸುತ್ತವೆ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಎಸ್‌ಡಿಎಂಸಿ ಅಧ್ಯಕ್ಷರಾಗಬೇಕೆಂಬ ನಿಯಮವಿದ್ದರೂ ಹಲವು ಶಾಲೆಗಳಲ್ಲಿ ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿದ್ದಾರೆ ಹಾಗೂ ಅವರು ನಿಯುಕ್ತಿ ಮಾಡಿದ ಉಪಾಧ್ಯಕ್ಷರು ಶಾಲೆಯ ಉಸ್ತುವಾರಿ ನೊಡಿಕೊಳ್ಳಬೇಕೆಂಬ ಪದ್ಧತಿ ರೂಢಿಯಲ್ಲಿದೆ.

ಎಸ್‌ಡಿಎಂಸಿಯು ರಚನೆಯಲ್ಲಿಯೇ ಹಳಿ ತಪ್ಪಿರುವುದರಿಂದ ಮೊದಲು ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಶಾಸಕರೇ ಸ್ವಯಂಘೋಷಿತ ಅಧ್ಯಕ್ಷರಾಗಿರಬೇಕೆಂಬ ಪದ್ಧತಿ ರೂಢಿಯಾಗಿರುವುದರಿಂದ ಶಿಕ್ಷಣ ಇಲಾಖೆಯು ಅದನ್ನು ಬದಲಿಸುವ ಗೋಜಿಗೇ ಹೋಗುವುದಿಲ್ಲ. ಈ ವಿಷಯದ ಬಗ್ಗೆ ಹೆಚ್ಚು ಚರ್ಚೆಯಾಗಿ, ಶಾಸಕರೂ ಒಳಗೊಂಡಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯೋಪಾಧ್ಯಾಯರಿಗೆ ಸ್ಪಷ್ಟತೆ ಮೂಡಿಸಬೇಕಾದ ಅಗತ್ಯವಿದೆ.

ADVERTISEMENT

ಜಯಂತ ಕೆ.ಎಸ್., ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.