ADVERTISEMENT

‘ನೀವು ಸ್ಮೋಕ್ ಮಾಡುತ್ತೀರಾ?’

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 15 ಜನವರಿ 2021, 19:30 IST
Last Updated 15 ಜನವರಿ 2021, 19:30 IST

‘ಕೆಜಿಎಫ್‌ 2’ ಚಿತ್ರದಲ್ಲಿನ ಸಿಗರೇಟ್‌ ಸೇವನೆ ದೃಶ್ಯಗಳಿಗಾಗಿ ನಾಯಕ ನಟ ಯಶ್‍ ಅವರಿಗೆ ನೋಟಿಸ್‌ ನೀಡಿರುವ ಸುದ್ದಿಯನ್ನು ಓದಿದಾಗ (ಪ್ರ.ವಾ., ಜ. 14) ನನ್ನ ಶಾಲಾ ದಿನಗಳ ನೆನಪಾಯಿತು. ಆಗಿನ ದಿನಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳಲ್ಲಿ ಆಟಗಾರ, ಪೈಲಟ್‍, ಪೊಲೀಸ್‌ ಅಧಿಕಾರಿಗಳು ಧೂಮಪಾನ ಮಾಡುವುದನ್ನು ತೋರಿಸುತ್ತಿದ್ದರು. ಅವುಗಳಿಂದ ಪ್ರಚೋದಿತರಾಗಿ ಹಿರಿಯರು ಸ್ಟೈಲಾಗಿ ಸಿಗರೇಟ್‌ ಸೇದುವುದನ್ನು ನೋಡಿ ನನಗೂ ಸಿಗರೇಟ್‌ ಸೇದಬೇಕೆಂದು ಆಸೆಯಾಗುತ್ತಿತ್ತು. ಶುರುವಿಗೆ ನೆಲದ ಮೇಲೆ ಬಿದ್ದ ತುಣುಕು ಸಿಗರೇಟ್‌ ಹಚ್ಚಿ, ಕಾಲ ಮೇಲೆ ಕಾಲು ಹಾಕಿ ‘ನಾನೇ ಹೀರೊ’ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಮುಂದೆ ಕದ್ದು ಬೀಡಿ, ಸಿಗರೇಟ್ ಸೇದುವುದು ನನಗೆ ಚಟವೇ ಆಗಿಬಿಟ್ಟಿತು. ನನ್ನ ಸಹೋದರನೂ ಇದೇ ರೀತಿ ಮಾನಸಿಕ ಪ್ರಲೋಭನೆಗೆ ಒಳಗಾಗಿ ಸೇದುವುದನ್ನು ರೂಢಿಸಿಕೊಂಡಿದ್ದ. ಮುಂದೆ ಹಿರಿಯರ ಪುಣ್ಯದಿಂದ ನಾವು ಆ ಚಟದಿಂದ ಹೊರಬಂದದ್ದು ಇನ್ನೊಂದು ಕತೆ. ಡಾ. ರಾಜ್‌ಕುಮಾರ್‌ ಅವರು ‘ಪರೋಪಕಾರಿ’ ಸಿನಿಮಾ ಬಿಟ್ಟರೆ ಉಳಿದ ಯಾವ ಪಾತ್ರದಲ್ಲೂ ಮದ್ಯಪಾನ, ಧೂಮಪಾನ ಮಾಡಿಲ್ಲ. ಅಮಿತಾಭ್‌ ಬಚ್ಚನ್‍ ಅವರ ‘ಶರಾಬಿ’ ಚಿತ್ರ ಬಂದ ನಂತರ ಅನೇಕ ವಿದ್ಯಾರ್ಥಿಗಳು ಕುಡಿತ ಶುರು ಮಾಡಿದರು ಎಂಬ ಮಾತಿದೆ.

ಮಕ್ಕಳು ಮತ್ತು ಯುವಕರು ಸಿನಿಮಾ ನಟ–ನಟಿಯರನ್ನು ಅನುಕರಣೆ ಮಾಡುವುದು ಸಹಜ. ಆದ್ದರಿಂದ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಸಿಗರೇಟ್‌ ಕುರಿತು ಜಾಹೀರಾತು ನೀಡುವುದು, ಸಾರ್ವಜನಿಕವಾಗಿ ಸೇದುವುದನ್ನು ಹತ್ತಾರು ವರ್ಷಗಳ ಕಾನೂನು ಹೋರಾಟದ ನಂತರ ನಿಷೇಧಿಸಲಾಯಿತು. ಸಿಗರೇಟ್‌ ಸೇವನೆಯು ಡ್ರಗ್ಸ್‌ನಂತಹ ಭಯಾನಕ ಚಟಗಳಿಗೆ ತಾಯಿಯಿದ್ದಂತೆ. ಕಾನೂನು ಪಾಲಕರು ಇಂತಹ ವಿಷಯಗಳಲ್ಲಿ ಕಠಿಣವಾಗಿ ವರ್ತಿಸಬೇಕು. ವಿದೇಶಗಳಲ್ಲಿ ಧೂಮಪಾನಕ್ಕೆ ಸಂಬಂಧಪಟ್ಟಂತೆ ಕಟ್ಟುನಿಟ್ಟಿನ ಕಾನೂನುಗಳಿವೆ. ಅಂಕಿ ಅಂಶದ ಪ್ರಕಾರ, ಅಮೆರಿಕ, ಇಂಗ್ಲೆಂಡ್‌ ದೇಶಗಳಲ್ಲಿ ಸಿಗರೇಟ್‌ ಸೇದುವವರ ಪ್ರಮಾಣ ಬಹಳ ಕಡಿಮೆಯಾಗಿದೆಯಂತೆ. ಅಲ್ಲಿ ನೌಕರಿಗೆ ಅರ್ಜಿ ಹಾಕುವಾಗ ‘ನೀವು ಸ್ಮೋಕ್ ಮಾಡುತ್ತೀರಾ’ ಎನ್ನುವ ಪ್ರಶ್ನೆ ಇರುತ್ತದಂತೆ. ‘ಹೌದು’ ಎಂದಾದರೆ ಅರ್ಜಿ ಹಾಕುವಂತೆಯೇ ಇಲ್ಲ. ಏಕೆಂದರೆ ಸಿಗರೇಟ್‌ ಸೇದುವವರು ತಮ್ಮ ಆರೋಗ್ಯವನ್ನಲ್ಲದೆ ಸಹೋದ್ಯೋಗಿಗಳ ಆರೋಗ್ಯವನ್ನೂ ಕೆಡಿಸುತ್ತಾರೆ ಎನ್ನುವುದು ಕಾರಣ. ಆದರೆ ಭಾರತದಲ್ಲಿ ಧೂಮಪಾನಿಗಳ ಸಂಖ್ಯೆ ಅತಿಯಾಗಿ ಏರಿದೆ. ಇದರ ಜೊತೆ ಗುಟ್ಕಾ ಚಟವೂ ಮಿತಿಮೀರಿದೆ. ಅವುಗಳ ಕಾರಣದಿಂದ ಬರುವ ಕ್ಯಾನ್ಸರ್‌, ಹೊಟ್ಟೆಯ ಅಲ್ಸರ್, ಹೃದಯ ಬೇನೆ, ಲಕ್ವದಂತಹ ರೋಗಗಳ ಏರಿಕೆಯೂ ಆಗಿದೆ.

- ಪ್ರೊ. ಶಶಿಧರ ಪಾಟೀಲ್‌,ಬಾಗಲಕೋಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.