ADVERTISEMENT

ವಾಚಕರ ವಾಣಿ: ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿತನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:45 IST
Last Updated 26 ಅಕ್ಟೋಬರ್ 2021, 19:45 IST

ಭಾನುವಾರ ರಾತ್ರಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಭಾರತ– ಪಾಕಿಸ್ತಾನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಸೋತ ಕಾರಣಕ್ಕಾಗಿ, ಹಲವಾರು ವರ್ಷಗಳಿಂದ ತಂಡದ ಪ್ರಮುಖ ಭರವಸೆಯ ಬೌಲರ್ ಆಗಿರುವ ಮೊಹಮ್ಮದ್ ಶಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಭ್ಯವಲ್ಲದ ರೀತಿಯಲ್ಲಿ ನಿರಂತರವಾಗಿ ಟೀಕೆ ಮಾಡುತ್ತಿರುವುದು ಖಂಡನೀಯ. ಸಮಯಕ್ಕೆ ತಕ್ಕಂತೆ ಸರಿಯಾಗಿ ನಿರ್ವಹಣೆ ತೋರದ ತಂಡದ ಹನ್ನೊಂದು ಆಟಗಾರರೂ ಸೋಲಿಗೆ ಜವಾಬ್ದಾರರು ಆಗಿರುತ್ತಾರೆ. ಅದುಬಿಟ್ಟು ತಾವು ಮಾಡಿದ ಓವರ್‌ಗಳಲ್ಲಿ ಸ್ವಲ್ಪ ಜಾಸ್ತಿ ರನ್ ನೀಡಿದ್ದಕ್ಕೆ, ಮುಸಲ್ಮಾನ ಎಂಬ ನೆಪವೊಡ್ಡಿ ಶಮಿ ಅವರನ್ನು ವೈಯಕ್ತಿಕವಾಗಿ ನಿಂದಿಸುವುದು ಯಾರೂ ಒಪ್ಪುವಂತಹದ್ದಲ್ಲ.

ಜಹೀರ್ ಖಾನ್ ನಂತರ ಶಮಿ ಅವರು ಟೀಂ ಇಂಡಿಯಾದ ಅಗ್ರಪಂಕ್ತಿಯ ಬೌಲರ್ ಆಗಿ 2013ರಿಂದ ಮೂರೂ ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ತಂಡದ ಪ್ರಮುಖ ಆಧಾರಸ್ತಂಭವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಇದೇ ಪಾಕಿಸ್ತಾನ ತಂಡದ ವಿರುದ್ಧ ಅಂದಿನ ಪಂದ್ಯ ಗೆಲ್ಲಲು ಅವರು ಕಾರಣರಾಗಿದ್ದನ್ನು ಕೊಂಕು ಹುಡುಕುವ ಮನಃಸ್ಥಿತಿಯವರು ಮರೆಯಬಾರದು. ಇದೆಲ್ಲವೂ ಕೆಸರನ್ನು ಹೊದ್ದು ಮಲಗಿರುವ ರಾಜಕೀಯಪ್ರೇರಿತ ದಾಳಿಯಾಗಿ ಕಾಣಿಸುತ್ತಿದೆ. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ನೋಡಬೇಕೇ ವಿನಾ ಅದರಲ್ಲೂ ಧರ್ಮ, ಜಾತಿ ಹುಡುಕುವುದು ಸ್ವಸ್ಥ ಸಮಾಜವನ್ನು ಹದಗೆಡಿಸುವ ಪ್ರಯತ್ನದಂತೆ ಕಾಣುತ್ತದೆ. ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಕಿಡಿಗೇಡಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷಿಸಬೇಕಿದೆ.

–ಅನಿಲ್ ಕುಮಾರ್, ನಂಜನಗೂಡು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.