ADVERTISEMENT

ತನ್ನನ್ನು ತಾನೇ ಕೊಂದುಕೊಳ್ಳುವ ಅಭಿವೃದ್ಧಿ ಪಥ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 19:36 IST
Last Updated 8 ಡಿಸೆಂಬರ್ 2021, 19:36 IST

ಬಿ.ಎಂ.ಶ್ರೀ ಅವರ ‘ಅಶ್ವತ್ಥಾಮನ್’ ನಾಟಕದಲ್ಲಿ ಮೇಳದವರು ಅಶ್ವತ್ಥಾಮನ ರಣ ಬಿಡಾರದ ಬಳಿ ಬಂದು ಅವನ ಅಜ್ಜಿಗೆ ‘ಅಶ್ವತ್ಥಾಮನೆಲ್ಲಿ? ಈ ದಿನ ಬಿಡಾರದಿಂದ ಹೊರಹೋದರೆ ಅವನ ಜೀವಕ್ಕೆ ಅಪಾಯ’ ಎಂದು ಹೇಳುವರು. ಆಗ ಅಜ್ಜಿ ‘ಸಾಯಲೆಂದೇ ಓಡುವವರ ತಡೆಹಿಡಿಯುವವರಾರು?’ ಎಂದು ತನ್ನ ಅಳಲು ತೋಡಿಕೊಳ್ಳುವಳು. ಮೇಳದವರು ಸಮುದ್ರದಂಡೆಗೆ ಧಾವಿಸಿ ಬರುವಷ್ಟರಲ್ಲಿ ಅಶ್ವತ್ಥಾಮನು ಅಭಿಮನ್ಯು ಉಡುಗೊರೆಯಾಗಿ ಕೊಟ್ಟ ಖಡ್ಗವನ್ನು ಸಾಗರದಂಡೆಯ ಮರಳಲ್ಲಿ ಹೂತು, ಅದರ ಮೇಲೆ ಹಾರಿ ಬಿದ್ದು ಅಸುನೀಗಿರುತ್ತಾನೆ.

ಡಿ.ಎಸ್.ನಾಗಭೂಷಣ ಅವರ ‘ಕಸ್ತೂರಿರಂಗನ್ ವರದಿ ಮತ್ತು ಜನತಂತ್ರ ವ್ಯವಸ್ಥೆ’ ಎಂಬ ಲೇಖನವನ್ನು (ಪ್ರ.ವಾ., ಡಿ. 7) ಓದಿದಾಗ ನನಗೆ ಅಶ್ವತ್ಥಾಮನ ದುರಂತ ಅಂತ್ಯ ನೆನಪಾಯಿತು. ಪ್ರಸ್ತುತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮ ಜನತಂತ್ರವು ಅಶ್ವತ್ಥಾಮನಂತೆ ಸ್ವತಃ ದುರಂತವನ್ನು ತಂದುಕೊಳ್ಳುತ್ತಿದೆ ಎನಿಸಿತು. ಅಪೂರ್ವ ಜೈವಿಕ ಕೇಂದ್ರಗಳಲ್ಲಿ ಒಂದಾದ ಪಶ್ಚಿಮ ಘಟ್ಟದ ನಿಬಿಡಾರಣ್ಯಕ್ಕೆ ಹಾನಿ ತಟ್ಟಿದರೆ ಇಡೀ ದಕ್ಷಿಣಾಪಥ ಮರುಭೂಮಿಯಾಗುತ್ತದೆ ಎಂಬುದು ಸೂರ್ಯ ಸತ್ಯ. ಕಳೆದ ಎರಡು ಮೂರು ವರ್ಷಗಳಿಂದ ಕಾಡುತ್ತಿರುವ ಪ್ರಾಕೃತಿಕ ವಿಕೋಪಗಳು, ಅತಿವೃಷ್ಟಿ-ಅನಾವೃಷ್ಟಿ, ಏರುತ್ತಿರುವ ತಾಪಮಾನ, ಕಾಡುತ್ತಿರುವ ಕೊರೊನಾ ಪಿಡುಗು... ಎಲ್ಲಕ್ಕೂ ಅಭಿವೃದ್ಧಿಯ ನೆಪದಲ್ಲಿ ಪಶ್ಚಿಮ ಘಟ್ಟಕ್ಕೆ ನಾವು ಮಾಡುತ್ತಿರುವ ಹಾನಿಯೇ ಕಾರಣ.

ಈ ಕುರಿತು ಪರಿಸರ ವಿಜ್ಞಾನಿಗಳ ಎಚ್ಚರಿಕೆಯ ಕೂಗು ಅರಣ್ಯರೋದನವಾಗುತ್ತಿದೆ. ತೀವ್ರ ಮಳೆ ಸುರಿದಾಗ, ಗುಡ್ಡಗಳು ಕುಸಿದಾಗ, ಪ್ರವಾಹವು ಜನರ ಬದುಕನ್ನು ಕೊಚ್ಚಿಕೊಂಡು ಹೋದಾಗ, ಕೋವಿಡ್‌ನಿಂದ ಸಾವುಗಳು ಸಾಲುಗಟ್ಟಿದಾಗ ಮಾತ್ರ ಪಶ್ಚಿಮ ಘಟ್ಟ ಸಂರಕ್ಷಣೆಯ ಮಾತು ಕೇಳಿಬರುತ್ತದೆ. ಆಗ ಗಾಡ್ಗೀಳ್ ವರದಿ, ಕಸ್ತೂರಿ ರಂಗನ್ ವರದಿ ಎಲ್ಲವೂ ನೆನಪಾಗುತ್ತವೆ. ಉಳಿದಂತೆ ಯಥಾಪ್ರಕಾರ ಅಭಿವೃದ್ಧಿಗಾಗಿ
ಅಗೆತ, ಲಂಚ, ಭ್ರಷ್ಟಾಚಾರ ಎಲ್ಲವೂ ಎಂದಿನಂತೆ ನಡೆಯುತ್ತವೆ. ಗಾಡ್ಗೀಳ್ ವರದಿಯನ್ನು ಪಕ್ಕಕ್ಕಿಟ್ಟಿದ್ದಲ್ಲದೆ
ಈಗ ಕಸ್ತೂರಿರಂಗನ್ ವರದಿಯನ್ನೂ ತಿರಸ್ಕರಿಸಲು ಮುಂದಾಗಿರುವ ಸರ್ಕಾರದ ನಡೆಗೆ ಏನೆನ್ನಬೇಕೋ ತಿಳಿಯದು. ತನ್ನನ್ನು ತಾನೇ ಕೊಂದುಕೊಳ್ಳಲು ಹೊರಟ ಅಶ್ವತ್ಥಾಮನ ಅವಿವೇಕದ ನಡೆ ಇದಲ್ಲವೇ ಎಂದರೆ ಸರಿಹೋದೀತು.

ADVERTISEMENT

- ಪ್ರೊ. ಶಿವರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.