ADVERTISEMENT

ವಾಚಕರ ವಾಣಿ: ಹುಬ್ಬಳ್ಳಿ ಎನ್‌ಕೌಂಟರ್‌ ಮೂಡಿಸಿದ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 20:39 IST
Last Updated 14 ಏಪ್ರಿಲ್ 2025, 20:39 IST
<div class="paragraphs"><p>ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು</p></div>

ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

   

ಹುಬ್ಬಳ್ಳಿ ಎನ್‌ಕೌಂಟರ್‌ ಮೂಡಿಸಿದ ಪ್ರಶ್ನೆ

ಹುಬ್ಬಳ್ಳಿಯಲ್ಲಿ ನಡೆದ ಐದು ವರ್ಷದ ಬಾಲಕಿಯ ಕೊಲೆ ಹಾಗೂ ಅದರ ಬೆನ್ನಲ್ಲೇ ಪೊಲೀಸರಿಂದ ನಡೆದ ಆರೋಪಿಯ ಎನ್‌ಕೌಂಟರ್‌, ಸಾರ್ವಜನಿಕ ವಲಯದಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಒಬ್ಬ ಪ್ರಭಾವಿ ರಾಜಕಾರಣಿ, ಅಧಿಕಾರಿ ಅಥವಾ ಉದ್ಯಮಿಯ ಕುಟುಂಬಕ್ಕೆ ಸೇರಿದ ವ್ಯಕ್ತಿ ಇಂತಹ ಕೃತ್ಯ ಎಸಗಿದ ಆರೋಪ
ಎದುರಿಸುತ್ತಿದ್ದರೆ ಆಗಲೂ ಹೀಗೆಯೇ ಎನ್‌ಕೌಂಟರ್‌ ನಡೆಸಲಾಗುತ್ತಿತ್ತೇ? ಬಾಲಕಿಯ ಮೇಲೆ ಆತ ಅತ್ಯಾಚಾರಕ್ಕೆ
ಪ್ರಯತ್ನಿಸಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಕೈಸೇರುವುದಕ್ಕೆ ಮುನ್ನವೇ ಆತ ಅತ್ಯಾಚಾರಿ ಎಂದು ನಿರ್ಧರಿಸಿದ್ದಾದರೂ ಹೇಗೆ? ಕಾನೂನು ಪ್ರಕ್ರಿಯೆಗೆ ಎಲ್ಲರೂ ತಲೆಬಾಗಬೇಕಾದ ಹೊಣೆಗಾರಿಕೆಯ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದುದು ಅತ್ಯಗತ್ಯ.

ADVERTISEMENT

ಸಚಿನ್ ಹೊಳೆಹದ್ದು, ಶೃಂಗೇರಿ

ನದಿಗಳ ಪಾವಿತ್ರ್ಯ ಕಾಯ್ದುಕೊಳ್ಳೋಣ

ನದಿಗಳನ್ನು ಸಾಕ್ಷಾತ್ ದೇವರ ಸ್ವರೂಪವೆಂದು ನಂಬಿ, ಪರಂಪರಾಗತವಾಗಿ ಅವುಗಳನ್ನು ಪೂಜಿಸುತ್ತಾ ಬಂದಿದ್ದೇವೆ. ನದಿಗಳು ಸಕಲ ಜೀವರಾಶಿಗೂ ಆಧಾರವಾಗಿವೆ. ಹಲವು ನಾಗರಿಕತೆಗಳ ಹುಟ್ಟಿಗೆ ಕಾರಣವಾಗಿವೆ. ಪ್ರಕೃತಿ ಸೌಂದರ್ಯ ಕಾಯ್ದುಕೊಳ್ಳುವಲ್ಲಿ ಅವುಗಳ ಪಾತ್ರ ಅಪಾರ. ಇಂತಹ ನದಿಗಳನ್ನು ಸ್ವಚ್ಛವಾಗಿ ಇಟ್ಟು
ಕೊಳ್ಳುವುದು ಎಲ್ಲಾ ನಾಗರಿಕರ ಕರ್ತವ್ಯ. ಆದರೆ ಈ ಹೊಣೆಯನ್ನು ಅರಿಯದೆ ನದಿಗಳಿಗೆ ಕೊಳಕು ನೀರು, ಚರಂಡಿ ತ್ಯಾಜ್ಯ ಸೇರಿಸುತ್ತಿದ್ದೇವೆ. ಪ್ಲಾಸ್ಟಿಕ್ ಬಾಟಲಿ, ಕಸವನ್ನು ಎಸೆಯುತ್ತಿದ್ದೇವೆ. ಇದು ಜಲಚರಗಳ ಪ್ರಾಣಕ್ಕೆ ಕುತ್ತು ತರುತ್ತಿರುವುದು ಮಾತ್ರವಲ್ಲ ಪ್ರಕೃತಿಯ ಅಸಮತೋಲನಕ್ಕೂ ಕಾರಣವಾಗುತ್ತಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ನಮ್ಮೆಲ್ಲರ ಭವಿಷ್ಯಕ್ಕೂ ಮಾರಕವಾಗಲಿರುವುದು ನಿಶ್ಚಿತ.

ಹೀಗಾಗಿ, ನದಿಪಾತ್ರದಲ್ಲಿರುವ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವವರು ಸ್ನಾನ ಮಾಡಿದ ತರುವಾಯ ತಮ್ಮ ಬಟ್ಟೆಗಳನ್ನು ನದಿಗೆ ಎಸೆಯಬಾರದು. ನದಿ ಪಾತ್ರದಲ್ಲಿ ಮಲ, ಮೂತ್ರ ವಿಸರ್ಜಿಸಬಾರದು. ನದಿಯನ್ನು ಪವಿತ್ರವೆಂದು ತಿಳಿದು ಆ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವ ಪರಿಪಾಟ ಹಲವರಲ್ಲಿದೆ. ಆದರೆ ಇಂತಹ ಸ್ಥಳಗಳಲ್ಲಿ ಗಲೀಜು ಮಾಡುವುದು ಜನರಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಜೊತೆಗೆ ಆ ಸ್ಥಳಗಳ ಪಾವಿತ್ರ್ಯಕ್ಕೂ ಧಕ್ಕೆ ಉಂಟು ಮಾಡುತ್ತದೆ ಎಂಬುದನ್ನು ಮರೆಯಬಾರದು.

ಶೇಖರಯ್ಯ ಟಿ.ಎಚ್.ಎಂ., ಗೆದ್ದಲಗಟ್ಟೆ

ವರ್ತಮಾನಕ್ಕೆ ಮುಖಾಮುಖಿಯಾಗದ ಜಾಣ್ಮೆಯ ನಡೆ

ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನದ ವೈಶಿಷ್ಟ್ಯವನ್ನು ಎ. ಸೂರ್ಯ ಪ್ರಕಾಶ್ ಅವರು ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಬರೆದಿರುವ ಲೇಖನದಲ್ಲಿ (ಪ್ರ.ವಾ., ಏ. 14) ವಿವರಿಸಿದ್ದಾರೆ. ಆದರೆ ಸಂವಿಧಾನದ ಮಹತ್ವವನ್ನು ತಿಳಿಸಲು ಲೇಖಕರು ಭೂತಕಾಲಕ್ಕೆ ಮುಖ ಮಾಡಿರುವುದು ತುಂಬಾ ಜಾಣ್ಮೆಯ ನಡೆಯಾಗಿದೆ. ವರ್ತಮಾನಕ್ಕೆ ಪ್ರಜ್ಞಾಪೂರ್ವಕವಾಗಿಯೇ ಅವರು ವಿಮುಖರಾಗಿದ್ದಾರೆ. ಪ್ರಸ್ತುತ, ಸಂವಿಧಾನದ ಆಶಯಗಳು ಏನಾಗಿವೆ, ಅವುಗಳಿಗೆ ಧಕ್ಕೆಯಾಗುತ್ತಿರುವುದು ಯಾರಿಂದ ಎಂಬಂತಹ ವಿಷಯಗಳಿಗೆ ಲೇಖಕರು ಮುಖಾಮುಖಿಯಾಗಿಲ್ಲ.

ಸಂವಿಧಾನದ ಆಶಯಗಳನ್ನು ಮುಕ್ಕಾಗಿಸುತ್ತಿರುವ, ಒಕ್ಕೂಟದ ತತ್ವವನ್ನು ನಿರಾಕರಿಸುತ್ತಿರುವ, ಸಂವಿಧಾನದತ್ತವಾದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಲುವುಗಳನ್ನು ಅವರು ಅಪ್ಪಿತಪ್ಪಿಯೂ ಪ್ರಸ್ತಾಪಿಸಿಲ್ಲ. ಅತ್ಯಂತ ಅಪಾಯಕಾರಿಯಾದ ಇಂತಹ ಪೂರ್ವಗ್ರಹಪೀಡಿತ ನಿಲುವಿನಿಂದ ಓದುಗರ ಅರಿವನ್ನು ವಿಸ್ತರಿಸಲು ಸಾಧ್ಯವೇ? 

ದೊಡ್ಡಿಶೇಖರ, ಆನೇಕಲ್

ಅಂಗನವಾಡಿ ಸಹಾಯಕಿಯ ಮಾದರಿ ಕಾರ್ಯ

ಪಿಯುಸಿ ಫಲಿತಾಂಶದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹೆಣ್ಣುಮಕ್ಕಳೇ ಮುಂದಿರುವುದು ನಿರೀಕ್ಷಿತ ಸಂಗತಿಯೇ ಆಗಿದೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸೇರಿದಂತೆ ಮೂರೂ ವಿಭಾಗಗಳಲ್ಲಿ ಬಾಲಕಿಯರೇ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಬ್ಬಗುಂಟೆಯ ಅಂಗನವಾಡಿ ಸಹಾಯಕಿ ಕರಿಯಮ್ಮ ಅವರು ತಮ್ಮ ಮಗನ ಜೊತೆಯಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆ ಆಗಿರುವ ಸುದ್ದಿ ಓದಿ ಬಹಳ ಸಂತೋಷವಾಯಿತು. ಅವರು ಅಭಿನಂದನೆಗೆ ಅರ್ಹರು. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಸಮಸ್ತ ಹೆಣ್ಣು ಮಕ್ಕಳಿಗೂ ಮಾದರಿಯಾಗಿದ್ದಾರೆ.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣಳಾಗಿದ್ದ ನನ್ನ ಪತ್ನಿ, ನಮ್ಮ ಮದುವೆಯಾದ ಸುಮಾರು 20 ವರ್ಷಗಳ ಬಳಿಕ, ನನ್ನ ತಾಯಿಯ ಆಸೆ ಹಾಗೂ ಸಹಕಾರದಿಂದ ಬಿ.ಎ., ಬಿ.ಇಡಿ. ಮಾಡಿದಳು. ಓದಿಗೆ ವಯಸ್ಸು ಮುಖ್ಯವಲ್ಲ ಎಂಬುದು ಇದರಿಂದ ತಿಳಿಯುತ್ತದೆ.‌

ಎಸ್‌.ವಿ.ಗೋಪಾಲ್‌ ರಾವ್‌, ಬೆಂಗಳೂರು

ಕಳಪೆ ಪದಾರ್ಥ: ಜನರಿಗೆ ಸಿಗಲಿ ಮಾಹಿತಿ

ರಾಜ್ಯ ಆರೋಗ್ಯ ಇಲಾಖೆಯು ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥ, ಔಷಧಿಯಂತಹ ಅನೇಕ ಪ್ರಮುಖ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆ ನಡೆಸುತ್ತಿರುವುದು ಶ್ಲಾಘನೀಯ ಮತ್ತು ಸಕಾಲಿಕ ನಿರ್ಧಾರ. ಹೀಗೆ ನಡೆಸಿದ ಉತ್ಪನ್ನಗಳ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಇರದಂತೆ ನೋಡಿಕೊಳ್ಳಬೇಕು.

ಕಳಪೆ ಉತ್ಪನ್ನಗಳ ತಯಾರಿಕೆಗೆ ನಿರ್ಬಂಧ ಹೇರಿ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು‌. ಅಲ್ಲದೆ, ಈ ಕುರಿತ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯಪಡಿಸುವ ಕೆಲಸ ತ್ವರಿತವಾಗಿ ಆಗಬೇಕು. ಆಗಮಾತ್ರ ಇಲಾಖೆ ಮಾಡುತ್ತಿರುವ ಕೆಲಸ ಸಾರ್ಥಕವಾಗುತ್ತದೆ.

ಚನ್ನಬಸವ ಪುತ್ತೂರ್ಕರ‌, ಉಡುಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.