ADVERTISEMENT

ವಾಚಕರ ವಾಣಿ: ಹೀಗಿರಲಿ ಯುವಜನ ಗ್ರಾಮಸಭೆ...

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 19:31 IST
Last Updated 12 ಜನವರಿ 2023, 19:31 IST

ಇದೇ 12ರಿಂದ 19ರ ನಡುವೆ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಯುವಜನ ಗ್ರಾಮಸಭೆ ನಡೆಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ಕೊನೆಯ ಗಳಿಗೆಯಲ್ಲಿ ಸುತ್ತೋಲೆ ಕಳುಹಿಸಿದರೆ ಅಗತ್ಯವಾದ ಸಿದ್ಧತೆ ನಡೆಸಲು ತೊಡಕಾಗುವುದು ಸಹಜ. ಯುವಜನರ ಭಾಗವಹಿಸುವಿಕೆಯ ಹಕ್ಕು ಮತ್ತು ಸಬಲೀಕರಣದ ನೆಲೆಯಿಂದ ಯುವಜನ ಗ್ರಾಮಸಭೆಗಳು ಮುಖ್ಯವಾದವು. ಅಲ್ಲದೆ ಗ್ರಾಮದ ಅಭಿವೃದ್ಧಿಯಲ್ಲಿ ಯುವಜನರನ್ನು ಸಕ್ರಿಯಗೊಳಿಸುವ ಉದ್ದೇಶದಿಂದಲೂ ಈ ಸಭೆಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿದೆ.

ಕರ್ನಾಟಕ ಯುವನೀತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಯುವಜನ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸುವ ಪ್ರಸ್ತಾಪವಿದ್ದರೂ ಸರ್ಕಾರ ಇದನ್ನು ಅನುಮೋದಿಸಿಲ್ಲ. ಯುವಜನ ಸಬಲೀಕರಣದ ಹಲವು ಪ್ರಸ್ತಾವಗಳನ್ನು ಕೈಬಿಡಲಾಗಿದೆ. ಶಿಕ್ಷಣ ಸಂಬಂಧಿತ ಮೂಲ ಸೌಕರ್ಯಗಳು, ಯುವಜನರ ಆರೋಗ್ಯ ಸುಧಾರಣೆ, ಯುವಜನರಿಗೆ ಜೀವನೋಪಾಯದ ದಾರಿಗಳನ್ನು ಸೃಷ್ಟಿಸಿ ತರಬೇತಿ ನೀಡುವುದು ಮತ್ತು ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು ಇವೆಲ್ಲದರಲ್ಲೂ ಸ್ಥಳೀಯ ಸಂಸ್ಥೆಗಳು ಸಕ್ರಿಯ ಪಾತ್ರ ನಿರ್ವಹಿಸಲು ಸಾಧ್ಯ. ಹೆಸರಿಗಷ್ಟೇ ಔಪಚಾರಿಕ ಸಭೆಗಳನ್ನು ನಡೆಸಿ ಭಾಷಣ ಮಾಡುವುದಕ್ಕಿಂತಲೂ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಅವರ ಸಮಸ್ಯೆ, ಸವಾಲುಗಳು ಮತ್ತು ಸಾಧ್ಯತೆಗಳನ್ನು ಅವರೇ ಮುಕ್ತವಾಗಿ ಹಂಚಿಕೊಳ್ಳುವಂತೆ, ಪಂಚಾಯಿತಿ ಜೊತೆಗೂಡಿ ಕೆಲಸ ಮಾಡುವಂತೆ ಈ ಸಭೆಗಳನ್ನು ವಿನ್ಯಾಸಗೊಳಿಸಬೇಕಾಗಿದೆ.

-ಜನಾರ್ದನ ಕೆಸರಗದ್ದೆ, ಬಂಟ್ವಾಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.