ADVERTISEMENT

ಬೈಯುವಿಕೆಯ ಹಿಂದಿದೆ ನಾನಾ ಉದ್ದೇಶ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:30 IST
Last Updated 21 ಅಕ್ಟೋಬರ್ 2021, 19:30 IST

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ರಾಜಕಾರಣಿಗಳು ಪರಸ್ಪರ ಬೈದಾಡಿಕೊಳ್ಳುವುದೇ ಚುನಾವಣಾ ವಿಷಯ ಎಂಬಂತೆ ಆಗಿರುವುದರ ಬಗ್ಗೆ ಸಂಪಾದಕೀಯ (ಪ್ರ.ವಾ., ಅ. 21) ಆತಂಕ ವ್ಯಕ್ತಪಡಿಸಿದೆ. ‘ಜನರೇಕೆ ಬೈಯುತ್ತಾರೆ’ ಎಂಬುದನ್ನು ಅರಿಯುವ ಮೂಲಕ ಇಂದಿನ ರಾಜಕಾರಣಿಗಳ ಬೈಯುವಿಕೆಯ ಉದ್ದೇಶವನ್ನು ನಾವು ಮನಗಾಣಬಹುದು.

ಯಾವುದೇ ಒಂದು ನುಡಿಸಮುದಾಯದಲ್ಲಿ ಎರಡು ಬಗೆಯ ವ್ಯಕ್ತಿಗಳು ತಮ್ಮ ನಿತ್ಯ ಜೀವನದ ಮಾತುಕತೆ
ಗಳಲ್ಲಿ ಹೆಚ್ಚಾಗಿ ಬೈಗುಳದ ನುಡಿಗಳನ್ನು ಬಳಸುತ್ತಾರೆ. ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ ಮತ್ತು ಆರೋಗ್ಯದಿಂದ ವಂಚಿತರಾಗಿರುವ ಬಡವರು ತಮ್ಮ ಮೈಮನದ ಆತಂಕ, ಹತಾಶೆ ಮತ್ತು ಸಂಕಟವನ್ನು ಹೊರಹಾಕಲು ಬೈಯುವಿಕೆಯಲ್ಲಿ ತೊಡಗುತ್ತಾರೆ. ಜಾತಿಬಲ, ಹಣಬಲ, ತೋಳ್ಬಲ ಮತ್ತು ಆಡಳಿತದ ಗದ್ದುಗೆಯ ಬಲವುಳ್ಳ ಸಿರಿವಂತರು ತಮ್ಮ ಆಸ್ತಿಪಾಸ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ಅಧಿಕಾರವು ತಮ್ಮಿಂದ ಕೈತಪ್ಪಿಹೋಗದಂತೆ ಉಳಿಸಿ ಕೊಳ್ಳಲು ತಾವು ಯಾರನ್ನು ಎದುರಾಳಿಗಳೆಂದು ಭಾವಿಸಿರುತ್ತಾರೆಯೋ ಅಂತಹವರ ತೇಜೋವಧೆ ಮಾಡಲು ಬೈಗುಳವನ್ನು ಬಳಸುತ್ತಾರೆ. ‘ಗೌಡ ಊರ ಮುಂದೆ ಬೈದರೆ, ತೋಟಿ ಒಲೆ ಮುಂದೆ ಬೈದ’ ಎಂಬ ಗಾದೆಯು ಬಡವರು ತಮ್ಮ ಕುಟುಂಬದ ನೆಲೆಯಲ್ಲಿ ಮತ್ತು ಉಳ್ಳವರು ಸಾರ್ವಜನಿಕ ರಂಗದಲ್ಲಿ ಬೈಯುವಿಕೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ.

ಉಳ್ಳವರಿಗೆ ತಾವು ಯಾವುದೇ ಬಗೆಯ ಬೈಗುಳವನ್ನಾಡಿದರೂ ಅದನ್ನು ಅರಗಿಸಿಕೊಳ್ಳಬಲ್ಲೆವೆಂಬ ನಂಬಿಕೆಯಿರು ತ್ತದೆ. ಇಂತಹವರಿಗೆ ಕಾನೂನು ಕಟ್ಟಲೆಗಳ ಬಗ್ಗೆ ಕಿಂಚಿತ್ತಾದರೂ ಗೌರವ ಇರುವುದಿಲ್ಲ. ಸಾರ್ವಜನಿಕ ರಂಗದಲ್ಲಿ ಈಗ ಕೇಳಿಬರುತ್ತಿರುವ ಇಂತಹ ಬೈಗುಳಗಳು ಏನನ್ನು ಸಂಕೇತಿಸುತ್ತಿವೆಯೆಂದರೆ, ‘ಹಲವಾರು ಧರ್ಮಗಳು, ನೂರೆಂಟು ಜಾತಿಗಳ ಹೆಣಿಗೆಯಿಂದ ಕೂಡಿರುವ ನಮ್ಮ ದೇಶದ ಜನಸಮುದಾಯ ಪರಸ್ಪರ ಪ್ರೀತಿ, ಕರುಣೆ ಮತ್ತು ಮೈತ್ರಿಯಿಂದ ಜತೆಗೂಡಿ ನೆಮ್ಮದಿಯಿಂದ ಬಾಳುವಂತಾಗಲೆಂಬ ಯಾವೊಂದು ಆಸೆಯೂ ನಾಡನ್ನು ಆಳುವವರಲ್ಲಿ ಇಲ್ಲ’.

ADVERTISEMENT

ಸಿ.ಪಿ.ನಾಗರಾಜ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.