ADVERTISEMENT

ಸುತ್ತಿಗೆ ಏಟಿನಿಂದ ತಲೆಯ ಗಟ್ಟಿತನದ ಪರೀಕ್ಷೆ!

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 19:30 IST
Last Updated 8 ಜುಲೈ 2021, 19:30 IST

ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ ಮತ್ತು ಸುತ್ತಮುತ್ತಲಿನ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮಗಳ ಅಧ್ಯಯನಕ್ಕೆ ಮೂರು ಕಡೆ ಪರೀಕ್ಷಾರ್ಥ ಸ್ಫೋಟ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿರುವುದು ಯಾರ ಹಿತಾಸಕ್ತಿಗಾಗಿ?

ರೈತರ ವಿರೋಧದ ನಡುವೆಯೂ ಈ ಕಾರ್ಯ ನಡೆಯುತ್ತಿದೆ. ಭೂವಿಜ್ಞಾನಿಗಳ ಸಮ್ಮುಖದಲ್ಲಿ ನಡೆಯಲಿರುವ ಪರೀಕ್ಷಾರ್ಥ ಸ್ಫೋಟಕ್ಕೆ ₹ 8 ಲಕ್ಷ ಮೌಲ್ಯದ ನಿರ್ದಿಷ್ಟ ಗುಣಮಟ್ಟದ ಸ್ಫೋಟಕಗಳನ್ನು ಮೂರು ಜಾಗಗಳಿಗಾಗಿ ಉಪಯೋಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರೀಕ್ಷೆಯಂತೆ ಈ ಪರೀಕ್ಷೆಯ ನಂತರ ಗಣಿಗಾರಿಕೆಗೆ ಅವಕಾಶ ಕೊಟ್ಟಾಗ, ಲಾಭಕ್ಕಾಗಿ ನಡೆಯುವ ಗಣಿಗಾರಿಕೆಯಲ್ಲಿ ಯಾವ ಸಾಮರ್ಥ್ಯದ ಸ್ಫೋಟಕಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಪ್ರತೀ ಸ್ಫೋಟದ ಸಮಯದಲ್ಲೂ ಕಾಯುವವರು ಯಾರು?

ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲಿ ಐತಿಹಾಸಿಕ ಜಲಾಶಯಕ್ಕೆ ಆಗಬಹುದಾದ ಅಪಾಯ ತಡೆಯುವುದಕ್ಕಿಂತ ಗಣಿ ಧಣಿಗಳ ಲಾಭಕ್ಕೆ ಹೆಚ್ಚು ಅನುಕೂಲ ಮಾಡಿಕೊಡುವ ಹುನ್ನಾರ ಎದ್ದು ಕಾಣುತ್ತದೆ. ಜಲಾಶಯಕ್ಕೆ ಗಣಿಗಾರಿಕೆಯಿಂದ ಹಾನಿ ಆಗುತ್ತದೋ ಇಲ್ಲವೋ ಎಂಬುದನ್ನು ಸ್ಫೋಟ ಮಾಡಿ ನೋಡುವುದೆಂದರೆ, ತಲೆಬುರುಡೆ ಗಟ್ಟಿ ಇದೆಯೋ ಇಲ್ಲವೋ ಎಂದು ಸುತ್ತಿಗೆಯಿಂದ ತಲೆಗೆ ಬಡಿದು ನೋಡಿದಂತೆ. ಪರೀಕ್ಷಾರ್ಥ ಸ್ಫೋಟ ನಡೆಸಿದ್ದೇ ಆದರೆ ಆ ಪರೀಕ್ಷೆಯಿಂದ ಮತ್ತು ನಂತರದ ಸ್ಫೋಟಗಳ ಅನುಮತಿಯಿಂದ ಆಗಬಲ್ಲ ಹಾನಿಗೆ ಯಾರು ಜವಾಬ್ದಾರರು? ಕೆಆರ್‌ಎಸ್‌ನಂತಹ ಜಲಾಶಯ ನಿರ್ಮಾಣ ಮಾಡಲಿಕ್ಕಂತೂ ಇವರಿಂದ ಅಸಾಧ್ಯ. ಕನಿಷ್ಠ ಇರುವಂತಹ ಇಂತಹ ಅಮೂಲ್ಯ ನಿರ್ಮಾಣಗಳನ್ನು ಸಾಮೂಹಿಕ ದುರಾಸೆಗೆ ಬಲಿ ಕೊಡದಿರಲಿ.

ADVERTISEMENT

–ಜಯಚಂದ್ ಪಿ. ಜೈನ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.