ADVERTISEMENT

ವಾಚಕರ ವಾಣಿ: 30 ಮಾರ್ಚ್ 2023 ಗುರುವಾರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 19:30 IST
Last Updated 29 ಮಾರ್ಚ್ 2023, 19:30 IST

ವಿ.ವಿ. ಕ್ಷೇಮ ಸಮಾಚಾರಕ್ಕೂ ಸಿಗಲಿ ಒತ್ತು

‘ರಾಜ್ಯ ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ್ದು, ವಿಶ್ವವಿದ್ಯಾಲಯಗಳ ಸ್ಥಾಪನೆ ದೇಶಕ್ಕೇ ಮಾದರಿಯಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು (ಪ್ರ.ವಾ., ಮಾರ್ಚ್ 29) ಸ್ವಲ್ಪಮಟ್ಟಿಗೆ ಉತ್ಪ್ರೇಕ್ಷೆ ಅನ್ನಿಸುತ್ತದೆ. ಏಕೆಂದರೆ ಕಳೆದ ನಾಲ್ಕು ವರ್ಷಗಳಿಂದ ನಮ್ಮ ಕನ್ನಡ ವಿಶ್ವವಿದ್ಯಾಲಯವು ಹಗರಣಗಳಿಂದ ಸುದ್ದಿಯಾದದ್ದೇ ಹೆಚ್ಚು.
ವಿದ್ಯಾರ್ಥಿವೇತನ, ಅಲ್ಲಿಯ ಪ್ರಾಧ್ಯಾಪಕರಿಗೆ ತಿಂಗಳ ವೇತನದ ಸಲುವಾಗಿ ಹೋರಾಟ ನಡೆದು ಇಡೀ ವಿಶ್ವವಿದ್ಯಾಲಯದ
ಪರಿಸರವೇ ಕಲುಷಿತಗೊಂಡಿತು. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲೂ ಬೇರೆ ಬೇರೆ ಸಮಸ್ಯೆಗಳು ತಲೆದೋರಿದವು. ಹೀಗಾಗಿ ಸರ್ಕಾರವು ವಿಶ್ವವಿದ್ಯಾಲಯ ಸ್ಥಾಪನೆಗೆ ಮಾತ್ರ ಒತ್ತು ಕೊಡದೆ ನಂತರ ಅಲ್ಲಿಯ ಕ್ಷೇಮ ಸಮಾಚಾರಕ್ಕೂ ಒತ್ತು ಕೊಡಬೇಕು. ಅದು ದೇಶಕ್ಕೆ ಮಾದರಿಯಾಗಬೇಕು. ಇನ್ನು ಆರೋಗ್ಯ ಕ್ಷೇತ್ರದ ಅನಾರೋಗ್ಯದ ಬಗ್ಗೆ ಹೇಳುವುದೇ ಬೇಡ, ಅಲ್ಲವೇ?

ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

***

ರೈಲು ಓಡಾಟ: ಅಸಮಂಜಸ ನಿರ್ಧಾರ

ಭಾರತೀಯ ರೈಲ್ವೆಯ ಅಸಮಂಜಸ ನಿರ್ಧಾರದಿಂದ ಕೆಲವೊಮ್ಮೆ ಎಡವಟ್ಟುಗಳು ಉಂಟಾಗುತ್ತವೆ. ಒಂದೆಡೆ, ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಸೋಲಾಪುರ- ಗುಂತಕಲ್- ಕಲಬುರಗಿ ರೈಲನ್ನು ಪುನರಾರಂಭಿಸದೆ ರದ್ದುಪಡಿಸಿದೆ. ಇನ್ನೊಂದೆಡೆ, ಪ್ರಯಾಣಿಕರ ಸಾಂದ್ರತೆ ಅಷ್ಟೇನೂ ಇರದಿದ್ದರೂ ಬೀದರ್‌- ಕಲಬುರಗಿ ನಡುವೆ ಇನ್ನೊಂದು ಜೋಡಿ ಡೆಮು ರೈಲನ್ನು ಇದೇ 4ರಿಂದ ಆರಂಭಿಸಿದೆ. ಈ ರೈಲಿನ ಸೇವೆಗಾಗಿ ಭಾರತೀಯ ರೈಲ್ವೆಯನ್ನು ಅಭಿನಂದಿಸೋಣ. ಆದರೆ, ರದ್ದಾಗಿರುವ ಸೋಲಾಪುರ- ಗುಂತಕಲ್- ಕಲಬುರಗಿ ಡೆಮು ರೈಲನ್ನು ಪುನಃ ಆರಂಭಿಸಿ, ಸಂಕಷ್ಟದಲ್ಲಿರುವ ಕಲಬುರಗಿ- ರಾಯಚೂರು ನಡುವಣ ಸಣ್ಣ ನಿಲ್ದಾಣಗಳಿಗೆ ಮತ್ತು ಕಲಬುರಗಿಯ ಜನತೆ ರಾಯಚೂರು, ಮಂತ್ರಾಲಯಕ್ಕೆ ಹೋಗಿ, ಅದೇ ದಿನ ಮರಳಿ ಬರುವ ಸೌಲಭ್ಯ ಒದಗಿಸುವ ಕೃಪೆಯನ್ನು ಕೇಂದ್ರ ರೈಲ್ವೆ ವಲಯ ಮಾಡಲಿ ಎಂಬುದು ಜನರ ಹಕ್ಕೊತ್ತಾಯವಾಗಿದೆ.

ತಾಂತ್ರಿಕವಾಗಿ ಸಮಸ್ಯೆ ಇದ್ದಲ್ಲಿ, ಕಲಬುರಗಿ- ರಾಯಚೂರು ನಡುವೆ ಈ ಡೆಮು ರೈಲನ್ನು ಓಡಾಡಿಸಲಿ. ಈ ಕುರಿತು ಏನೆಲ್ಲಾ ಟ್ವೀಟ್ ಮಾಡಿದರೂ ಕೇಂದ್ರದ ರೈಲ್ವೆ ಸಚಿವರು ಸ್ಪಂದಿಸುತ್ತಿಲ್ಲ. ಇನ್ನಾದರೂ ಅವರು ಸ್ಪಂದಿಸುವಂತೆ ಆಗಲಿ.

ವೆಂಕಟೇಶ್ ಮುದಗಲ್, ಕಲಬುರಗಿ

***

ಯುದ್ಧವಲ್ಲ, ಇದು ಸಂಭ್ರಮ!

ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಪ್ರಕ್ರಿಯೆ. ರಾಜ್ಯದ ಪ್ರತೀ ಪ್ರಜೆ ಖುಷಿಯಿಂದ ತನ್ನ ಹಕ್ಕನ್ನು ಚಲಾಯಿಸುವ ಮೂಲಕ ಅದು ಮತದಾರರ ಹಬ್ಬವಾಗಬೇಕು. ಯುದ್ಧ ಎಂದು ಈ ಚುನಾವಣೆಯನ್ನು ಕರೆಯುವುದು ಅಷ್ಟೊಂದು ಸಮಂಜಸವೆನಿಸದು.

ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

***

ಜಾತ್ರೆ ಒಳ– ಹೊರಗಿನ ‘ಸತ್ಯ’ದರ್ಶನ

ಕುಣಿಗಲ್‌ ತಾಲ್ಲೂಕಿನ ಉಜ್ಜನಿ ಚೌಡೇಶ್ವರಿ ದೇವಿ ಜಾತ್ರೆ ಸಮಯದಲ್ಲಿ ದಲಿತರು ಜನಿವಾರ ಧಾರಣೆ ಮಾಡಿದ ಸುದ್ದಿ ಪ್ರಕಟವಾಗಿದೆ (ಪ್ರ.ವಾ., ಮಾರ್ಚ್‌ 26). ಕೆಲವು ದಶಕಗಳಿಂದ ಇದೇ ಬಗೆಯ ಸುದ್ದಿಗಳು ಆಗಾಗ್ಗೆ
ಪ್ರಕಟವಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುತ್ತವೆ. ಒಬ್ಬ ಅಧ್ಯಯನಕಾರನಾಗಿ ಈ ಕುರಿತ ವಾಸ್ತವ ಸಂಗತಿಗಳನ್ನು ಸಾರ್ವಜನಿಕರ ಮುಂದಿಡುವುದು ಅಗತ್ಯ ಎಂದು ಭಾವಿಸಿದ್ದೇನೆ. ಸಂಪ್ರದಾಯವನ್ನು ಸ್ಥಿರೀಕರಿಸು
ವಂತೆ ದಲಿತರಿಗೆ ವೈದಿಕರು ಜನಿವಾರ ಹಾಕಿ ಮಂತ್ರ ಹೇಳುವುದನ್ನೇ ‘ಸೌಹಾರ್ದ’ ಎನ್ನುವುದು ಸರಿಯೇ? ‘ಆ ಗ್ರಾಮದವರು ಜಾತಿ– ಧರ್ಮದ ಹಂಗಿಲ್ಲದೆ ಬದುಕಿದ್ದಾರೆ’ ಎಂಬುದನ್ನು ಎಷ್ಟರಮಟ್ಟಿಗೆ ಒಪ್ಪಬಹುದು.

ಜಾತ್ರೆ ಮುಗಿಯುತ್ತಿದ್ದಂತೆ ಅವರೆಲ್ಲಾ ಜನಿವಾರ ತೆಗೆದುಹಾಕಿ ಮತ್ತೆ ತಮ್ಮ ಹಟ್ಟಿಯ ಮನೆಗಳಿಗೇ ಹೋಗುತ್ತಾರೆ. ಆ ಮೂಲಕ ತಲೆಮಾರಿನ ಜಾತಿ ನಿರ್ಬಂಧ ಹಾಗೂ ಕಸುಬುಗಳನ್ನೇ ಮುಂದುವರಿಸುತ್ತಾರೆ. ಜನಿವಾರ ಹಾಕಿದಾಕ್ಷಣ ಇವರಾರೂ ಗ್ರಾಮದೇವತೆಯ ಮೂಲ ಗುಡಿಯಲ್ಲಿ ಪೂಜೆ ಮಾಡುವಂತಿಲ್ಲ. ವಿಶೇಷವಾಗಿ
ಈ ದಲಿತ ಪೂಜಾರಿಗಳು ತಮ್ಮ ‘ಹರೆ’ ವಾದ್ಯವನ್ನೇ ದೇವರೆಂದು ಪೂಜಿಸುತ್ತಾರೆ ಹಾಗೂ ಈ ಪೂಜಾರಿಯು ಆ ಹರೆಯೊಂದಿಗೆ ಗ್ರಾಮದೇವತೆಯ ಗುಡಿಯೊಳಗೆ ನುಗ್ಗಲು ಪ್ರಯತ್ನಿಸುವುದನ್ನೂ ಆಚರಣಾತ್ಮಕವಾಗಿಯೇ
ತಡೆಯಲಾಗುತ್ತದೆ.

ಪರಿಷೆಗಳಲ್ಲಿ ಊರಿನ ಪ್ರತಿಯೊಂದು ಜಾತಿಯವರಿಗೂ ಒಂದೊಂದು ಕಾರ್ಯ ನಿಗದಿಯಾಗಿರುವುದರಲ್ಲಿ ಆಡಳಿತಾತ್ಮಕ ವ್ಯವಹಾರ ನಿರ್ವಹಣೆಯ ಸೂಕ್ಷ್ಮ ಇರುವುದನ್ನು ಗಮನಿಸಬೇಕು. ಜಾತ್ರೆ ನಿರ್ವಿಘ್ನವಾಗಿ ನಡೆಯಲೆಂದು ಎಲ್ಲಾ ಜಾತಿ, ಕುಲ ಕಸುಬಿನವರನ್ನೂ ದೇವರ ಸೇವೆ ಹೆಸರಲ್ಲಿ ಒಳಗೊಳ್ಳುವಂತೆ ಮಾಡಲಾಗುತ್ತದೆ. ಆ ಕೆಲಸಗಳು ಉಚಿತವಾಗಿ ಆಗಲಿ ಎಂಬ ಉದ್ದೇಶವೂ ಇದರ ಹಿಂದೆ ಇದ್ದಂತಿದೆ. ಸೇವೆ ಹೆಸರಿನಲ್ಲಿ ಇದನ್ನು ‘ಬಿಟ್ಟಿ ಮಾಡುವುದು’ ಎಂದೂ ಕೆಲವೆಡೆ ಕರೆಯುವುದುಂಟು. ಭಕ್ತರ ಸಂಖ್ಯೆ ಹೆಚ್ಚಾಗಲೆಂದೇ ಪ್ರತೀ ಜಾತ್ರೆಯಲ್ಲಿ ಇಂತಹ ವಿಶೇಷ ಬಗೆಯ ಆಚರಣೆ, ನಂಬಿಕೆಗಳನ್ನು ಅಳವಡಿಸಲಾಗಿರುತ್ತದೆ ಎಂಬುದನ್ನು ಗಮನಿಸಿದರೆ, ಜಾತ್ರೆಗಳ ಒಳ– ಹೊರಗಿನ ‘ಸತ್ಯ’ದರ್ಶನ ಆದೀತು.

ಡಾ. ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.