ADVERTISEMENT

ವಾಚಕರ ವಾಣಿ: 10 ಜುಲೈ 2025

ವಾಚಕರ ವಾಣಿ
Published 9 ಜುಲೈ 2025, 23:58 IST
Last Updated 9 ಜುಲೈ 2025, 23:58 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಶಾಂತಮ್ಮ ಅಂಥವರಿಂದಲೇ ಮಳೆ–ಬೆಳೆ

ಪಾವಗಡ ತಾಲ್ಲೂಕಿನ ಓಬೇನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ, ಅಂಗನವಾಡಿ ಕಟ್ಟಡಕ್ಕೆ ತಮ್ಮ ಸ್ವಂತ ನಿವೇಶನ ನೀಡಿರುವುದು ಶ್ಲಾಘನೀಯ(ಪ್ರ.ವಾ., ಜುಲೈ 9). ಇಂತಹವರಿಂದಲೇ ಒಂದಿಷ್ಟು ಮಳೆ– ಬೆಳೆ ಎನ್ನುವ ವಾಡಿಕೆ ಮಾತು ಸತ್ಯ ಇರಬಹುದು. ಅವರು ನೀಡಿರುವ ಜಾಗದಲ್ಲಿ ಸರ್ಕಾರವು ವಿಳಂಬ ಮಾಡದೆ ಕಟ್ಟಡ ನಿರ್ಮಿಸಿ, ಚಿಣ್ಣರ ಕಲಿಕೆಗೆ ಅನುಕೂಲ ಕಲ್ಪಿಸಬೇಕು.

ಸರ್ಕಾರಿ ಶಾಲೆಗಳ ಹಳೆಯ ವಿದ್ಯಾರ್ಥಿಗಳು ತಮ್ಮೂರಿನ ಶಾಲಾ ಕಟ್ಟಡಗಳಿಗೆ ಸುಣ್ಣ–ಬಣ್ಣ ಬಳಿದು ದುರಸ್ತಿ ಮಾಡಿಸುವ ವಿದ್ಯಮಾನಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಮನಸ್ಸಿಗೆ ನೆಮ್ಮದಿ ನೀಡುವ ಸಂಗತಿ.

ADVERTISEMENT

ಬಿ. ಮೊಹಿದ್ದೀನ್ ಖಾನ್, ಚಿತ್ರದುರ್ಗ

ಯುವಜನರಿಗೆ ವ್ಯವಸಾಯ ಏಕೆ ಬೇಡ?

‘ಬೇಸಾಯ: ಯುವಜನ ಬೇಕಾಗಿದ್ದಾರೆ’ ಲೇಖನವು (ಪ್ರ.ವಾ., ಜುಲೈ 6) ಕೃಷಿ ಕ್ಷೇತ್ರದ ಈಗಿನ ವಾಸ್ತವಕ್ಕೆ ಹಿಡಿದಿರುವ ಕನ್ನಡಿ. ಛಿದ್ರವಾಗುತ್ತಿರುವ ಕೃಷಿ ಭೂಮಿಯನ್ನು ಉಳಿಸಿಕೊಳ್ಳುತ್ತ, ಜಾಗತಿಕ ತಾಪಮಾನದ ವೈಪರೀತ್ಯಗಳನ್ನು ಎದುರಿಸುವ ಸವಾಲು ಸಣ್ಣದಲ್ಲ. ಅಗಿದು ಬಿಸಾಕುವ ಚೂಯಿಂಗ್‌ಗಮ್‌ ಬೆಲೆ ಭವಿಷ್ಯದಲ್ಲಿ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ರೈತರ ಆದಾಯಕ್ಕೆ ಚೂಯಿಂಗ್‌ಗಮ್‌ನಷ್ಟೂ ಖಾತರಿಯಿಲ್ಲ. ಹಾಗಿದ್ದ ಮೇಲೆ ವ್ಯವಸಾಯವೇಕೆ? ರೈತನಿಗೆ ಸಿಗಬೇಕಾದ ಗೌರವ– ಮನ್ನಣೆ ಕಡಿಮೆ. ಹಸನಾಗಿ ಬದುಕುವ ಖಾತರಿಯೂ ಇಲ್ಲ. ಆದ್ದರಿಂದಲೇ, ಹಳ್ಳಿಯ ಪೋಷಕರೇ ತಮ್ಮ ಹೆಣ್ಣುಮಕ್ಕಳನ್ನು ಹಳ್ಳಿಯ ಹುಡುಗನಿಗೆ ಕೊಡಲು ಹಿಂಜರಿಯುತ್ತಾರೆ. ನಮ್ಮ ಮನೋಭಾವ ಬದಲಾಗದೆ ಹೋದಲ್ಲಿ, ಕೃಷಿಯು ಕೇವಲ ಮುದಿ ಜೀವಗಳು ಮಾತ್ರ ಮಾಡುವ ಕೆಲಸವಾಗಿ ಬಿಡುತ್ತದೆ.

– ಶಾಂತರಾಜು ಎಸ್‌., ಮಳವಳ್ಳಿ

ಪೋಸ್ಟ್‌ಮಾರ್ಟಂ: ಕಡ್ಡಾಯ ಸಾಧ್ಯವೇ ?

ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಕಡ್ಡಾಯ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಹೃದಯಾಘಾತದಿಂದ ಸಾವಿಗೀಡಾಗುವ ಪ್ರತಿ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಲು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಇದೆಯೇ?

ಅಂತ್ಯಸಂಸ್ಕಾರದ ಸಿದ್ಧತೆ ನಡೆಸಬೇಕಾದ ಸಮಯದಲ್ಲಿ, ಮೃತದೇಹವನ್ನು ನಿಗದಿತ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಆಗಬೇಕು. ಸಮಯಕ್ಕೆ ಸರಿಯಾಗಿ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರ ಲಭ್ಯತೆ ಹಾಗೂ ಪರೀಕ್ಷೆ ನಡೆಸಿದ ನಂತರ ದೇಹವನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲು ಸಿಬ್ಬಂದಿಯೂ ಅಗತ್ಯ. ಬೇಗನೆ ಪೋಸ್ಟ್‌ಮಾರ್ಟಂ ಮಾಡಲು ಇಲ್ಲವೇ ಮಾಡಿಸಲು ಅಡ್ಡದಾರಿಗಳೂ ಹುಟ್ಟಿಕೊಳ್ಳಬಹುದು. ಇವೆಲ್ಲವನ್ನೂ ಯೋಚಿಸಿದರೆ, ಹೊಸ ಆದೇಶವು ಸೂತಕದ ಮನೆಯಲ್ಲಿ ನೋವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ.

– ಜಯಚಂದ್ ಜೈನ್, ದಾವಣಗೆರೆ

ಶಿಕ್ಷಣ ಪ್ರೇಮದ ಅನನ್ಯ ಮಾದರಿ

‘ಹುಟ್ಟೂರಿನ ಸರ್ಕಾರಿ ಶಾಲೆಗೆ ₹14 ಕೋಟಿ ವೆಚ್ಚದ ಕಟ್ಟಡ’ ವರದಿ ಓದಿ ಖುಷಿಯಾಯಿತು (ಪ್ರ.ವಾ., ಜುಲೈ 8). ಡಾ. ಎಚ್.ಎಂ. ವೆಂಕಟಪ್ಪ ಅವರು, ತಮ್ಮದೇ ಕಣ್ವ ಫೌಂಡೇಷನ್‌ನಿಂದ ಚನ್ನಪಟ್ಟಣ ತಾಲ್ಲೂಕು ಹೊಂಗನೂರಿನ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿದ್ದಾರೆ.

‘ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗೆ ಹೋಗಬೇಕು; ಅದೇ ನನಗೆ ಸಿಗುವ ದೊಡ್ಡ ಲಾಭ’ ಎನ್ನುವ ಅವರ ಮಾತು ಒಳ್ಳೆಯ ಸಂದೇಶ. ತನಗೆ ಏನನ್ನೂ ಬಯಸದೆ ಸಮಾಜದ ಮಕ್ಕಳು ವಿದ್ಯಾವಂತರಾಗಬೇಕು ಎಂಬ ಮನೋಭಾವ ದೊಡ್ಡದು. ಸೇವಾ ಮನೋಭಾವ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ವೆಂಕಟಪ್ಪ ಅವರೇ ಸಾಕ್ಷಿ.

– ಕುಂದೂರು ಮಂಜಪ್ಪ, ಹರಿಹರ

ಬೆಳೆಯಲು ನೆರವಾದ ಬೇರು ಕತ್ತರಿಸದಿರಿ

ಹೆತ್ತವರನ್ನು ಮಕ್ಕಳು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಸುದ್ದಿ ಓದಿದಾಗ ನಾವು ಯಾವ ಕಾಲಘಟ್ಟದಲ್ಲಿದ್ದೇವೆ ಎನಿಸುತ್ತದೆ. ನಾವು ನಿಂತಿರುವುದು ಬೇರುಗಳ ಸಹಾಯದಿಂದ ಎನ್ನುವುದನ್ನು ಮರೆಯಬಾರದು. ಬೆಳೆಯಲು ನೆರವಾದ ಬೇರುಗಳನ್ನು ತುಂಡರಿಸುವ ಅಹಂ ಒಳ್ಳೆಯದಲ್ಲ. ಬರೀ ಅಕ್ಷರ ಕಲಿತರೆ ಸಾಲದು; ಮಾನವೀಯತೆ ಇಲ್ಲದೇ ಹೋದರೆ ನಾವು ಕಲಿತ ಅಕ್ಷರ ಬರೀ ಸಾಕ್ಷರತೆಗೆ ಸಮ.

– ಎಂ. ಪರಮೇಶ್ವರ, ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.