ADVERTISEMENT

ವಾಚಕರ ವಾಣಿ| ಬಂದ್ ಕರೆ: ಅಪ್ರಬುದ್ಧ ನಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 19:30 IST
Last Updated 26 ಡಿಸೆಂಬರ್ 2021, 19:30 IST

ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಕನ್ನಡಿಗರನ್ನು ಪ್ರಚೋದಿಸಿ ನೆಮ್ಮದಿಯನ್ನು ಕದಡುವ, ಕರ್ನಾಟಕದ ಹಿತಕ್ಕೆ ಮಾರಕವಾಗುವ ಕೆಲಸವನ್ನು ಕರ್ನಾಟಕ ಏಕೀಕರಣವಾದಂದಿನಿಂದ ನಿರಂತರವಾಗಿ ಮಾಡಿಕೊಂಡು ಬಂದಿದೆ. ಇತ್ತೀಚೆಗೆ ಎಂಇಎಸ್‌ ಕಾರ್ಯಕರ್ತರು, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ್ದು, ಕನ್ನಡ ಬಾವುಟವನ್ನು ಸುಟ್ಟಿರುವುದು ಅಕ್ಷಮ್ಯ. ಎಂಇಎಸ್‌ನ ಇಂತಹ ಚಟುವಟಿಕೆಗೆ ಕಡಿವಾಣ ಹಾಕಲೇಬೇಕು. ಆದರೆ, ಅದರ ತುರ್ತು ನಿಷೇಧಕ್ಕೆ ಆಗ್ರಹಿಸಿ ‘ಕರ್ನಾಟಕ ಬಂದ್’ಗೆ ಕರೆ ನೀಡಿರುವುದು ಸರಿಯಲ್ಲ. ಬಂದ್ ಅನ್ನುವುದು ಜನಾಗ್ರಹದ ಕೊನೆಯ ಅಸ್ತ್ರ. ಎಂಇಎಸ್ ರಾಜಕೀಯ ಪಕ್ಷವಾಗಿ ನೋಂದಣಿಯಾಗಿದೆ. ರಾಜ್ಯ ಸರ್ಕಾರ ನೇರವಾಗಿ ಅದನ್ನು ನಿಷೇಧಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಕೇಂದ್ರವು ಚುನಾವಣಾ ಆಯೋಗಕ್ಕೆ ಇದನ್ನು ರವಾನಿಸಿ ಸೂಕ್ತ ಕ್ರಮಕ್ಕೆ ಸೂಚಿಸಬೇಕು. ಆಗಲೂ ನಿಷೇಧಿಸುವ ಸಾಧ್ಯತೆ ಕಡಿಮೆಯೇ.ಕಳೆದೆರಡು ವರ್ಷಗಳಿಂದ ಕೊರೊನಾ ಸಂಕಟದಿಂದ ನರಳಿರುವ ಜನ ಸ್ವಲ್ಪಮಟ್ಟಿಗೆ ಸುಧಾರಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಬಂದ್ ಮಾಡುವುದು ಎಷ್ಟು ಸರಿ? ಬಂದ್‌ನಿಂದ ಕನ್ನಡಿಗರೇ ತೊಂದರೆಗೊಳಗಾಗುವರು ವಿನಾ ಮರಾಠಿಗರಲ್ಲ. ಬಂದ್ ವಿಫಲವಾದರೆ ಕನ್ನಡ ಹೋರಾಟಗಾರರಿಗೆ ಮುಜುಗರವಾಗುತ್ತದೆ, ಕನ್ನಡ ಚಳವಳಿಯ ಗಾಂಭೀರ್ಯಕ್ಕೂ ಚ್ಯುತಿ ಬರುತ್ತದೆ. ಬಂದ್ ಕರೆಯನ್ನು ಹಿಂದಕ್ಕೆ ಪಡೆದು, ತಪ್ಪಿತಸ್ಥರನ್ನು ಸಮಾಜವಿರೋಧಿ ಅಥವಾ ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು ಪ್ರಬುದ್ಧ ನಡೆಯಾಗುತ್ತದೆ.

- ರಾ.ನಂ.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT