ವಾಚಕರ ವಾಣಿ
ಪರೀಕ್ಷಾ ಪೇ ಚರ್ಚೆ: ಆತ್ಮಸ್ಥೈರ್ಯ ಹೆಚ್ಚಲಿ
ಮಕ್ಕಳ ರಕ್ಷಣೆಗೆ ಕಾನೂನಿನ ಜೊತೆಗೆ ಭಯರಹಿತ ಶೈಕ್ಷಣಿಕ ವಾತಾವರಣವೂ ಅಗತ್ಯ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದ ಅಂಗೀಕರಿಸಿರುವ ಭಾರತದಲ್ಲಿ ಪ್ರತಿ ಮಗುವೂ ಪ್ರೀತಿ, ಆರೈಕೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಅರ್ಹ. ರ‍್ಯಾಂಕ್‌ಗೆ ಪೈಪೋಟಿ ಮತ್ತು ಓದಿನ ಒತ್ತಡದಿಂದ 6ರಿಂದ 14 ವರ್ಷದ ಮಕ್ಕಳಲ್ಲಿಂದು ಒತ್ತಡ, ಮಾನಸಿಕ ಅಸ್ಥಿರತೆ ಹೆಚ್ಚುತ್ತಿದೆ. ‘ಪರೀಕ್ಷಾ ಪೇ ಚರ್ಚೆ’ ಶೈಕ್ಷಣಿಕ ಒತ್ತಡದ ಭೀತಿ ಕಡಿಮೆಗೊಳಿಸುವ ದಿಸೆಯಲ್ಲಿ ಮಹತ್ವಪೂರ್ಣ ಹೆಜ್ಜೆ. ಸಂವಿಧಾನದ 21ನೇ ವಿಧಿ ಮತ್ತು 21ಎ ವಿಧಿಯನ್ವಯ ಸರ್ಕಾರ, ಪೋಷಕರು, ಶಿಕ್ಷಕರು ಒಗ್ಗಟ್ಟಾಗಿ ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ ಸಹಾನುಭೂತಿಯ ಮಾರ್ಗದರ್ಶನ ಬೇಕು.
⇒ಆಶಾಲತಾ ಪಿ., ಸುರತ್ಕಲ್
ಗಾಂಧಿ ಹೆಸರು ಬದಲು: ಹಿರಿಮೆಗೆ ಪೆಟ್ಟು
ಹಳ್ಳಿಗಳು ಅಭಿವೃದ್ಧಿಯಾದರಷ್ಟೇ ದೇಶದ ಅಭಿವೃದ್ಧಿಯೂ ಸಾಧ್ಯವೆಂದು ಮಹಾತ್ಮ ಗಾಂಧೀಜಿ ನಂಬಿದ್ದರು. ಅವರ ಹೆಸರನ್ನು ಉದ್ಯೋಗ ಖಾತರಿ ಯೋಜನೆಗೆ ಇಡಲಾಗಿತ್ತು. ಈಗ ಕೇಂದ್ರ ಸರ್ಕಾರವು ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ರಾಷ್ಟ್ರಪಿತನ ಆದರ್ಶಗಳಿಗೆ ತಿಲಾಂಜಲಿ ಇಟ್ಟಿದೆ.
ಈ ನಡೆಯು ಗಾಂಧೀಜಿಯ ಅನುಯಾಯಿಗಳಿಗೆ ತೀವ್ರ ಆಘಾತವನ್ನು ಉಂಟು ಮಾಡಿದೆ. ಕೇಂದ್ರದ ನಿರ್ಧಾರ, ಇಡೀ ವಿಶ್ವವೇ ಗೌರವಿಸುವ ಮಹಾತ್ಮನಿಗೆ ಮಾಡಿದ ಅವಮಾನ ಎಂದರೆ ತಪ್ಪಾಗದು. ಇದು ಭಾರತದ ಹಿರಿಮೆಯನ್ನು ಸಂಕುಚಿತಗೊಳಿಸುತ್ತದೆ. ಇಂಥ ವ್ಯರ್ಥ ಕಸರತ್ತಿನಿಂದ ಮಹಾತ್ಮ ಗಾಂಧೀಜಿಯ ಹೆಸರನ್ನಾಗಲಿ, ಅವರ ಆದರ್ಶಗಳನ್ನಾಗಲಿ ಜನಮಾನಸದಿಂದ ಅಳಿಸಿ ಹಾಕಲು ಸಾಧ್ಯವಿಲ್ಲ.
⇒ಎಸ್.ಎಂ. ಸಕ್ರಿ, ರಾಮದುರ್ಗ
ಖಾಲಿ ಹುದ್ದೆ ಭರ್ತಿ: ಅಧಿಸೂಚನೆ ವಿಳಂಬ
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ.
ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರದ ನೇಮಕಾತಿ ಅಧಿಸೂಚನೆಯನ್ನು ಎದುರು
ನೋಡುತ್ತಿದ್ದಾರೆ. ಇದು ಸರ್ಕಾರದ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮೇಲೂ ಪರಿಣಾಮ ಬೀರಲಿದೆ. ಕೆಲವು ರಾಜಕಾರಣಿಗಳು ಇಂಗ್ಲಿಷ್ ಬಳಸುವುದು
ಪ್ರತಿಷ್ಠೆಯೆಂದು ಭಾವಿಸಿದ್ದಾರೆ. ಈ ಧೋರಣೆಯು ಕನ್ನಡ ಬಾರದ ಹಿರಿಯ
ಅಧಿಕಾರಿಗಳಿಗೆ ವರದಾನವಾಗಿದೆ. ಸರ್ಕಾರ ತೆಗೆದುಕೊಂಡ ಹಲವು ತೀರ್ಮಾನ
ಗಳು ಕನ್ನಡದಲ್ಲಿ ಇರುವುದಿಲ್ಲ. ಸರ್ಕಾರ ಈ ಬಗ್ಗೆ ಎಚ್ಚತ್ತುಕೊಳ್ಳಬೇಕಿದೆ. ಜೊತೆಗೆ, ಖಾಲಿ ಇರುವ ಹುದ್ದೆಗಳಿಗೆ ಹಂತ ಹಂತವಾಗಿ ನೇಮಕಾತಿ ಮಾಡಬೇಕಿದೆ.
⇒ಸಂತೋಷ ಪೂಜಾರಿ, ವಿಜಯಪುರ
ಅನುಕಂಪದ ಹುದ್ದೆ: ಎಲ್ಲರಿಗೂ ಅನ್ವಯಿಸಿ
ರಸ್ತೆ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಮಗಳಿಗೆ ಅನುಕಂಪದ ಆಧಾರದ ಮೇಲೆ ಸಚಿವಾಲಯದಲ್ಲಿ ನೌಕರಿ ನೀಡುವ ಕುರಿತು ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ‘ಅನುಕಂಪದ ಹುದ್ದೆ ನೀಡಲು ಬರುವುದಿಲ್ಲ’ ಎಂಬ ಸಬೂಬು ಹೇಳಲಾಗುತ್ತಿತ್ತು.
1996-97ರಲ್ಲಿ ಕೆಎಂಎಫ್‌ನಲ್ಲಿ ‘ಡಿ’ ದರ್ಜೆ ನೌಕರರೊಬ್ಬರ ಪತ್ನಿ ನರಸಮ್ಮ ಎಂಬುವರು ಅನುಕಂಪದ ಹುದ್ದೆ ಕೋರಿ ವರ್ಷಾನುಗಟ್ಟಲೆ ಕಚೇರಿಗೆ ಅಲೆದರು. ಕೊನೆಗೆ ಸುಪ್ರೀಂ ಕೋರ್ಟ್‌ನ ಅಂತಿಮ ಆದೇಶದ ಷರತ್ತಿಗೆ ಒಳಪಟ್ಟು ಅವರಿಗೆ ಮಾನವೀಯ ದೃಷ್ಟಿಯಿಂದ ತಾತ್ಕಾಲಿಕ ಹುದ್ದೆ ನೀಡಲಾಯಿತು. ಸರ್ಕಾರದ ನಿಗಮ, ಮಂಡಳಿ, ಶಾಸನಬದ್ಧ ಸಂಸ್ಥೆಗಳಲ್ಲಿ ಈ ರೀತಿಯ ಪ್ರಕರಣಗಳು ಈಗಲೂ ಬಾಕಿ ಉಳಿದಿವೆ. ಇಂತಹ ಪ್ರಕರಣಗಳನ್ನು ಮಾನವೀಯ ದೃಷ್ಟಿಯಿಂದ ತ್ವರಿತವಾಗಿ ಬಗೆಹರಿಸಬೇಕಿದೆ.
⇒ಡಿ. ಪ್ರಸನ್ನಕುಮಾರ್, ಬೆಂಗಳೂರು
ಅನಿಶ್ಚಿತ ಬದುಕಿಗೆ ‘ಅವಧಿ ವಿಮೆ’ ಶ್ರೀರಕ್ಷೆ
ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವಧಿ ವಿಮೆ (ಟರ್ಮ್ ಇನ್ಸೂರೆನ್ಸ್) ಸೌಲಭ್ಯ ಕಡ್ಡಾಯಗೊಳಿಸಿರುವುದು ಒಳ್ಳೆಯ ನಿರ್ಧಾರ. ಅಪಘಾತ ಅಥವಾ ಅನಿರೀಕ್ಷಿತ ಮರಣದ ಸಂದರ್ಭದಲ್ಲಿ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ಒದಗಿಸಿ, ಅವರ ಜೀವನಕ್ಕೆ ಈ ವಿಮೆ ಭದ್ರತೆ ನೀಡಲಿದೆ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೂ ನೆರವಾಗಲಿದೆ. ಇದರಿಂದ ಕುಟುಂಬಗಳ ಭವಿಷ್ಯ ಹೆಚ್ಚು ಸುರಕ್ಷಿತವಾಗುತ್ತದೆ. ಎಲ್ಲಾ ವರ್ಗದ ಸರ್ಕಾರಿ ಸಿಬ್ಬಂದಿಗೂ ಅವಧಿ ವಿಮಾ ಸೌಲಭ್ಯ ವಿಸ್ತರಿಸಬೇಕಿದೆ.
⇒ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.