ವಾಚಕರ ವಾಣಿ
ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿಗಳನ್ನು ಜೋಡಿಸುವ ಯೋಜನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ‘ಮಾನವರಂತೆ ನದಿಗಳಿಗೂ ಜೀವದ ಹಕ್ಕು ನೀಡಬೇಕು’ ಎಂಬ ಹಕ್ಕೊತ್ತಾಯದ ಮೂಲಕ ಸಾವಿರಾರು ಜನರು ನದಿಗಳ ಜೋಡಣೆಯನ್ನು ವಿರೋಧಿಸಿದ್ದಾರೆ. ಜೋಡಣೆಯಿಂದ ಪಶ್ಚಿಮಘಟ್ಟಗಳ ವಿನಾಶದ ಜೊತೆಗೆ ನದಿಗಳ ಮೂಲವೂ ಅವನತಿ ಹೊಂದುತ್ತದೆ.
ಈ ಹಿಂದೆ ಕೈಗಾ ಅಣುಸ್ಥಾವರದ ಸ್ಥಾಪನೆಗೆ ದೊಡ್ಡ ಹೋರಾಟ ನಡೆದಿತ್ತು. ಆದರೂ, ಅಣುಸ್ಥಾವರ ರಚನೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಈ ಭಾಗದ ಜನರು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ. ಜನರ ಬದುಕಿಗೆವಿನಾಶಕಾರಿಯಾದ ಹಾಗೂ ಅವೈಜ್ಞಾನಿಕವಾದ ನದಿಗಳ ಜೋಡಣೆ ಯೋಜನೆ ಯನ್ನು ಕೈಬಿಡುವುದೇ ಒಳಿತು.
-ರಾಹುಲ್ ಹಂಚಿನಾಳ, ದಾಂಡೇಲಿ
ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಮಕ್ಕಳಿಂದ ಫ್ಯಾಷನ್ ಶೋ ಇತ್ತು. ಅದಕ್ಕೆ ಮೊದಲು ನಿರೂಪಕರು ಅಲ್ಲಿದ್ದ ಕೆಲವು ಮಕ್ಕಳನ್ನು ವೇದಿಕೆಗೆ ಕರೆದರು. ಅವರಿಂದ ಕನ್ನಡ ದಿನಪತ್ರಿಕೆ ಓದಿಸಲು ಪ್ರಯತ್ನಿಸಿ, ಸ್ವಲ್ಪ ಯಶಸ್ವಿಯೂ ಆದರು. ಈ ರೀತಿಯ ಚಟುವಟಿಕೆಗಳು ಪ್ರಶಂಸನೀಯ. ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳಂತೆ ಮಕ್ಕಳ ಕಾರ್ಯಕ್ರಮಗಳಲ್ಲಿ ಯಾರು ಸ್ವಷ್ಟವಾಗಿ ದಿನಪತ್ರಿಕೆ ಓದುತ್ತಾರೋ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಸ್ಪರ್ಧಾ ವೇದಿಕೆಗಳು ಸೃಷ್ಟಿಯಾದರೆ, ಪತ್ರಿಕೆ ಓದುವ ಹವ್ಯಾಸವನ್ನು ಮಕ್ಕಳಿಗೆ ಕಲಿಸಿಕೊಟ್ಟಂತಾಗುತ್ತದೆ. ಅವರಲ್ಲಿ ಸಾಮಾನ್ಯಜ್ಞಾನ ಬೆಳೆಯಲೂ ಸಹಕಾರಿಯಾಗುತ್ತದೆ.
-ಟಿ.ಎಸ್. ಪ್ರತಿಭಾ, ಚಿತ್ರದುರ್ಗ
ಪರೀಕ್ಷೆಗಳು ಮಕ್ಕಳ ಜೀವನದ ಮಹತ್ವಘಟ್ಟವಾದರೂ, ಅವು ಭಯ ಮತ್ತು ಒತ್ತಡದ ಮೂಲವಾಗಬಾರದು. ಇತ್ತೀಚೆಗೆ ಅಂಕಗಳ ಮೇಲಿನ ಅತಿಯಾದ ನಿರೀಕ್ಷೆಯಿಂದ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಿರುವುದು ಕಂಡುಬರುತ್ತಿದೆ. ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುವಲ್ಲಿ ಪೋಷಕರು ಮತ್ತು ಶಿಕ್ಷಕರು ಮಾನವೀಯ ಹಾಗೂ ಸಕಾರಾತ್ಮಕ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು. ವಿಷಯದ ಅರಿವು, ಸಮಯ ನಿರ್ವಹಣೆ ಮತ್ತು ಆತ್ಮವಿಶ್ವಾಸಕ್ಕೆ ಒತ್ತು ನೀಡಿದರೆ ಮಕ್ಕಳು ಧೈರ್ಯದಿಂದ ಪರೀಕ್ಷೆ ಎದುರಿಸಬಲ್ಲರು. ಈ ವಿಚಾರಕ್ಕೆ ಪೋಷಕರು ಗಮನ ನೀಡಬೇಕಿದೆ.
-ಮಹಮ್ಮದ್ ಜಲಾಲುದ್ದೀನ್, ಮಂಗಳೂರು
ಸ್ವಾಮಿ ವಿವೇಕಾನಂದರ ಜಯಂತಿಯನ್ನು ‘ಯುವ ದಿನ’ವಾಗಿ ಆಚರಿಸಲಾಗುತ್ತದೆ. ಆದರೆ, ದೇಶದಲ್ಲಿ ಯುವಜನತೆಗೆ ಬೇಕಾದ ಸೌಲಭ್ಯಗಳು ಸಿಗುತ್ತಿವೆಯೇ ಎಂಬ ಪ್ರಶ್ನೆ ಕಾಡುತ್ತದೆ. ಭಾರತದಲ್ಲಿ ಯುವಜನರ ಸಂಖ್ಯೆ ಶೇ 60ಕ್ಕಿಂತ ಹೆಚ್ಚಿದೆ. ಈ ಯುವ ಸಂಪನ್ಮೂಲವನ್ನು ಬಳಸಿಕೊಳ್ಳದ ಭಾರತ ಪ್ರಕಾಶಿಸುವುದಾದರೂ ಹೇಗೆ?
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ಜಾತಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಹಾಗೆಯೇ ಯುವಜನತೆಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸಲಿ, ಮತ್ತು ಯುವಜನ ಆಯೋಗ ಸ್ಥಾಪಿಸಿ ಅವರ ದೂರುದುಮ್ಮಾನ ಆಲಿಸುವ ಕೆಲಸವಾಗಲಿ. ಜತೆಗೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ತ್ವರಿತವಾಗಿ ಅಧಿಸೂಚನೆ ಪ್ರಕಟಿಸಬೇಕಿದೆ.
-ನಾಗಾರ್ಜುನ ಹೊಸಮನಿ, ಕಲಬುರಗಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯ ಪೂರ್ವಭಾವಿ ಸಿದ್ಧತಾ ಸಭೆ ಆರಂಭಿಸಿರುವುದು ಸರಿಯಷ್ಟೆ. ಶಿಕ್ಷಣ ದೇಶದ ಅಭಿವೃದ್ಧಿಯ ಬೆನ್ನೆಲುಬು. ಅದು ಪ್ರಾಥಮಿಕ ಶಿಕ್ಷಣ ಇರಬಹುದು ಅಥವಾ ಉನ್ನತ ಶಿಕ್ಷಣ ಇರಬಹುದು. ಈ ಕ್ಷೇತ್ರವನ್ನು ಸದೃಢಗೊಳಿಸದ ಹೊರತು ದೇಶ ಪ್ರಗತಿ ಕಾಣದು. ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಶಿಕ್ಷಣ ಸಿಗುವಂತಾಗಬೇಕು. ಇದು ಸರ್ಕಾರದ ಪ್ರಥಮ ಜವಾಬ್ದಾರಿ.
ಪ್ರಸ್ತುತ ರಾಜ್ಯದಲ್ಲಿ ಶಿಕ್ಷಣಕ್ಕೆ ಮೀಸಲಿಡುತ್ತಿರುವ ಅನುದಾನ ಕಡಿಮೆಯಿದೆ. ಹಾಗಾಗಿ, 2026–27ನೇ ಸಾಲಿನ ರಾಜ್ಯ ಬಜೆಟ್‍ನಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ. ಶಿಕ್ಷಣ ಕ್ಷೇತ್ರವನ್ನು ಬಲಪಡಿಸದೆ ಹೋದರೆ ಅಭಿವೃದ್ಧಿ ಅಸಮಗ್ರವಾಗಿಯೇ ಉಳಿಯುತ್ತದೆ.
-ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.