ADVERTISEMENT

ವಾಚಕರವಾಣಿ: ಓದುಗರ ‍ಪತ್ರಗಳು– 08 ಅಕ್ಟೋಬರ್ 2025

ವಾಚಕರ ವಾಣಿ
Published 8 ಅಕ್ಟೋಬರ್ 2025, 0:08 IST
Last Updated 8 ಅಕ್ಟೋಬರ್ 2025, 0:08 IST
   

ನಿರುದ್ಯೋಗ ತಾಂಡವ: ಸರ್ಕಾರಕ್ಕೆ ನಿದ್ರೆ?

ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಶೇ 7.6 ತಲಪಿದೆ. ಪ್ರತಿ ವರ್ಷ ಒಂದೂವರೆ ಕೋಟಿ ಯುವಜನ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆ. ಆದರೆ, ಕೇವಲ 70 ಲಕ್ಷ ಉದ್ಯೋಗಗಳು ಮಾತ್ರ ಸೃಷ್ಟಿಯಾಗುತ್ತಿವೆ. ಇಷ್ಟೊಂದು ತೀವ್ರ ಸಮಸ್ಯೆ ಇರುವ ಸಂದರ್ಭದಲ್ಲಿ ಸರ್ಕಾರ ಏನು ಮಾಡುತ್ತಿದೆ? ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಯೋಜನೆಗಳ ಫಲಿತಾಂಶವಾದರೂ ಏನು?

ಯುವಶಕ್ತಿ ದೇಶದ ಭವಿಷ್ಯ. ಸರ್ಕಾರದ ವಿಳಂಬ ಹಾಗೂ ಪರಿಣಾಮವಿಲ್ಲದ ಯೋಜನೆಗಳು ಯುವಜನರ ಕನಸುಗಳನ್ನು ಕಮರಿಸುತ್ತಿವೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣವೇ ನೈಜ ಉದ್ಯೋಗಾವಕಾಶಗಳ ಸೃಷ್ಟಿಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಿ.

- ಕಾವ್ಯ ಕೆ., ಕರಿರಾಮನಹಳ್ಳಿ

ADVERTISEMENT

ಪರಿಸರ ಕಾಳಜಿ ಅರಣ್ಯರೋದನ ಆಗದಿರಲಿ

ಅಳಿವಿನ ಅಂಚಿನಲ್ಲಿರುವ ರಣಹದ್ದು ಕುರಿತಂತೆ ಅಖಿಲೇಶ್ ಚಿಪ್ಪಳಿ ಅವರ ಪ್ರಶ್ನೆ (ಪ್ರ.ಜಾ., ಅ. 7) ಸಹಜವಾಗಿಯೇ ನಮ್ಮ ಕಾಲಘಟ್ಟದ ಹಳವಂಡವಾಗಿದೆ. ಹಳ್ಳಿಗಳೆಲ್ಲ ನಗರಗಳತ್ತ ಮುಖ ಮಾಡಿರುವ ಹೊತ್ತಿನಲ್ಲಿ, ಸಮತೋಲನ

ಸಾಧಿಸಲು ಇದ್ದ ಜೀವಜಗತ್ತಿನ ನೈಸರ್ಗಿಕ ಕೊಂಡಿಗಳು ಒಂದೊಂದಾಗಿ ಕಳಚುತ್ತಿರುವ ಸಂದರ್ಭದಲ್ಲಿ, ಪರಿಸರವಾದಿಗಳ ಕಾಳಜಿ ಅರಣ್ಯರೋದನ ಆಗಬಾರದು. ಹಾಗಾಗದಂತೆ ನೋಡಿಕೊಳ್ಳಬೇಕಿರುವುದು ನಮ್ಮ ಮುಂದಿರುವ ದೊಡ್ಡ ಸವಾಲು.

- ಈರಪ್ಪ ಎಂ. ಕಂಬಳಿ, ಬೆಂಗಳೂರು

‘ನಮ್ಮ ಮೆಟ್ರೊ’ – ಹೆಸರಷ್ಟೇ ಅಲ್ಲ, ಪರಂಪರೆ!

ಬೆಂಗಳೂರು ಮೆಟ್ರೊಕ್ಕೆ ನೀಡಲಾಗಿರುವ ‘ನಮ್ಮ ಮೆಟ್ರೊ’ ಎಂಬ ಹೆಸರು ಒಂದು ಸಾರಿಗೆ ವ್ಯವಸ್ಥೆಯ ಹೆಸರಷ್ಟೇ ಅಲ್ಲ, ಕನ್ನಡದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ‘ನಮ್ಮ’ ಎಂಬ ಪದ, ಒಂದು ಸಾಮೂಹಿಕ ಅಸ್ತಿತ್ವ. ಈ ಪದವು ಸ್ವಾಮ್ಯತೆಯ ಅನುಭವ ಮಾತ್ರವಲ್ಲ; ಒಗ್ಗೂಡಿಸುವ ಶಕ್ತಿಯನ್ನು ಹೊಂದಿರುವ ಪದ. ಇದು ಸಮೂಹವನ್ನು ಸಂಕೇತಿಸುತ್ತದೆ.

ಈಗಾಗಲೇ ಹಲವಾರು ಮೆಟ್ರೊ ನಿಲ್ದಾಣಗಳಿಗೆ ಮಹಾನ್ ವ್ಯಕ್ತಿಗಳ ಹೆಸರನ್ನು ಇಡುವ ಮೂಲಕ ‘ನಮ್ಮ ಮೆಟ್ರೊ’ ಅನನ್ಯತೆಯನ್ನು ಪಡೆದಿದೆ. ಪ್ರತಿದಿನವೂ ಸಾವಿರಾರು ಮಂದಿ ಪ್ರಯಾಣಿಕರು ಈ ಮೆಟ್ರೊದಲ್ಲಿ ಹಣ ಪಾವತಿಸಿ ಪ್ರಯಾಣಿಸುತ್ತಿದ್ದಾರೆ. ಇದು ಸಾರ್ವಜನಿಕರ ಸ್ವತ್ತು ಎಂಬ ಅನುಭವವನ್ನು ಅವರು ಪ್ರತಿ ಕ್ಷಣದಲ್ಲೂ ಅನುಭವಿಸುತ್ತಿದ್ದಾರೆ. ಜಗತ್ತಿನ ಇನ್ನೆಲ್ಲೆಡೆ ಸಾರಿಗೆ ವ್ಯವಸ್ಥೆಗಳಿಗೆ ಸಂಸ್ಥೆಗಳ ಅಥವಾ ವ್ಯಕ್ತಿಗಳ ಹೆಸರಿರಬಹುದು; ಆದರೆ ಇಲ್ಲಿ ಮಾತ್ರ ‘ನಮ್ಮ’ ಎಂಬುದು ಹೆಸರಲ್ಲ, ಆದರ್ಶವಾಗಿದೆ.

ಇತ್ತೀಚೆಗೆ ಮೆಟ್ರೊಗೆ ಬಸವಣ್ಣನವರ ಹೆಸರು ಇಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದಾರೆ. ಬಸವಣ್ಣನವರು ನಿಸ್ಸಂದೇಹವಾಗಿ ನಮ್ಮ ಹೆಮ್ಮೆ, ನಮ್ಮ ಮಾರ್ಗದರ್ಶಕರು. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ –ಕುವೆಂಪು, ವಿಶ್ವೇಶ್ವರಯ್ಯ, ಅಂಬೇಡ್ಕರ್ ಅವರಂತೆ ಬಸವಣ್ಣನವರೂ ‘ನಮ್ಮ’ ಎಂಬ ಅರ್ಥದೊಳಗೆ ಸೇರುತ್ತಾರೆ. ಅವರು ನಮ್ಮ ಸಂಸ್ಕೃತಿ, ನಮ್ಮ ಅಸ್ತಿತ್ವದ ಭಾಗ. ಆದುದರಿಂದ, ಸರ್ಕಾರ ‘ನಮ್ಮ ಮೆಟ್ರೊ’ ಎಂಬ ಹೆಸರನ್ನೇ ಉಳಿಸಬೇಕು. ‘ನಮ್ಮ ಮೆಟ್ರೊ’ ಸದಾ ನಮ್ಮದಾಗಿರಲಿ.

- ಡಿ. ರಾಮಾನಾಯಕ್, ಬೆಂಗಳೂರು

ವಿಐಪಿ ಸಂಸ್ಕೃತಿಗೆ ತಿಲಾಂಜಲಿ ಸ್ವಾಗತಾರ್ಹ

ಹಾಸನದಲ್ಲಿ ಈ ಬಾರಿಯ ಹಾಸನಾಂಬ ದೇವಿ ದರ್ಶನದ ಸಂದರ್ಭದಲ್ಲಿ ವಿಐಪಿ ಸಂಸ್ಕೃತಿಗೆ ಅವಕಾಶವಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಶಾಸಕರು, ನಟ-ನಟಿಯರು, ನ್ಯಾಯಾಧೀಶರು, ಮುಂತಾದ ಗಣ್ಯರನ್ನು ಸರ್ಕಾರಿ ವಾಹನದಲ್ಲೇ ಕರೆತಂದು ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದಿರುವುದು ಸ್ವಾಗತಾರ್ಹ. ಇದರಿಂದ, ನೂಕುನುಗ್ಗಲು ತಪ್ಪಿ ಕಾಲ್ತುಳಿತದಂತಹ ಅಹಿತಕರ ಘಟನೆಯ ಸಾಧ್ಯತೆ ಇಲ್ಲವಾಗಲಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದೆ, ಹಾಸನಾಂಬ ದೇವಿಯ ದರ್ಶನ ಸುಸೂತ್ರವಾಗಿ ನಡೆಯವಂತಾಗಲಿ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.