ADVERTISEMENT

‘ಡಬ್ಬಿ ನಮ್ಮವೇ; ನಾವೇ ವಾರಸ್ದಾರರು..!’

ಡಿ.ಬಿ, ನಾಗರಾಜ
Published 26 ಮೇ 2018, 19:30 IST
Last Updated 26 ಮೇ 2018, 19:30 IST

ವಿಜಯಪುರ: ‘ಮನಗೂಳಿ ಬಳಿ ಡಬ್ಬಿಗಳು (ವಿ.ವಿ.ಪ್ಯಾಟ್‌ಗಳು– ಮತ ಖಾತ್ರಿ ಯಂತ್ರ) ಪತ್ತೆಯಾಗುವ ಮುನ್ನವೇ ನನ್ನ ಕ್ಷೇತ್ರದಲ್ಲಿ 12 ಡಬ್ಬಿಗಳು ತುಡುಗಾಗಿವೆ ಕೆಲವು ಅದಲು ಬದಲಾಗಿವೆ ಎಂದು ಲಿಖಿತ ದೂರು ನೀಡಿರುವವನು ನಾನು. ಈಗ ಎಲ್ರೂ ಬಂದು ನಮ್ಮವೇ, ನಮ್ಮವೇ ಅನ್ತಿದ್ದಾರೆ. ಅವು ನಮ್ಮವು. ಅಧಿಕೃತ ದೂರುದಾರರು ನಾವೇ, ವಾರಸ್ದಾರರೂ ನಾವೇ..!’

ಮನಗೂಳಿ ಪಟ್ಟಣದ ಬಳಿಯ ಶೆಡ್‌ ಒಂದರಲ್ಲಿ ಎಂಟು ವಿ.ವಿ. ಪ್ಯಾಟ್‌ ಡಬ್ಬಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ವಿಜುಗೌಡ ಎಸ್‌. ಪಾಟೀಲ ಈಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು.

‘ನಮ್ಮಣ್ಣ ಶಿವಾನಂದ ಎಂಥವನು ಎಂಬುದು ಜಿಲ್ಲೆಗೆ, ರಾಜ್ಯಕ್ಕೆ ಗೊತ್ತಿದೆ. ಅವ ಯಾವ ರೀತಿ ರಾಜಕಾರಣ ಮಾಡ್ತಾನೆ ಎಂಬುದೂ ಗೊತ್ತು. ಸುಮ್ನೇ ಕೆಲವರು ಗುಲ್ಲೆಬ್ಬಿಸ್ತಾರೆ. ಡಬ್ಬಿಗಳು ಬಾಗೇವಾಡಿಯವಲ್ಲ, ನಮ್ಮ ಬಬಲೇಶ್ವರದವು. ಈಗ ಬಂದು ‘ಅವು ನಮ್ಮ ಕ್ಷೇತ್ರದವು ಎನ್ನುವವರ ಬಳಿ ಅದಕ್ಕೆ ಸಂಬಂಧಿಸಿದ ಯಾವ ದಾಖಲೆಗಳಿವೆ? ಅವರಿಗೆ ಸಂಬಂಧಿಸಿದವೇ ಆಗಿದ್ರೆ ಇದುವರೆಗೆ ಯಾಕೆ ದೂರು ಕೊಟ್ಟಿಲ್ಲ? ಮೊದಲು ದೂರು ಕೊಟ್ಟವನು ನಾನು’ ಎಂದು ವಿಜುಗೌಡ ಸಮರ್ಥಿಸಿಕೊಂಡರು.

ADVERTISEMENT

ಮೂರು ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ವಿ.ವಿ. ಪ್ಯಾಟ್‌ಗಳದ್ದೇ ಸದ್ದು. ವಿವಿಧ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ, ‘ಇವು ಇಲ್ಲಿಯವಲ್ಲ, ನಮ್ಮ ಕ್ಷೇತ್ರದವು. ಇದೇ ವಾರ್ಡ್‌, ಇದೇ ಊರಿಗೆ ಸಂಬಂಧಿಸಿದವು’ ಎಂದು ಹೇಳುತ್ತ, ಸಿಬಿಐ ತನಿಖೆಗೆ ಆಗ್ರಹಿಸಿ, ಜನರ ಅನುಕಂಪ ಗಿಟ್ಟಿಸಲು ಸಾಲು ಸಾಲು ಪತ್ರಿಕಾಗೋಷ್ಠಿ ನಡೆಸುವ ಮೂಲಕ ನಗೆಪಾಟಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.