ADVERTISEMENT

‘ತಬಲಾ ರಾಜಕುಮಾರಿ’ ರಿಂಪಾ ಬರ್ತಾರೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ರಿಂಪಾ ಶಿವ
ರಿಂಪಾ ಶಿವ   

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಬಲಾ ವಾದನ ಅಥವಾ ತಬಲಾ ಸಾಥಿ ಎಂದಾಕ್ಷಣ ಯಾರಾದರೂ ಪುರುಷ ಕಲಾವಿದರ ಚಿತ್ರಣ ಕಣ್ಣೆದುರು ಬರುವುದು ಸಾಮಾನ್ಯ.

ಆದರೆ ಈ ಏಕತಾನತೆಯನ್ನು ಮುರಿದು ಈ ಕ್ಷೇತ್ರಕ್ಕೆ ಪ್ರವೇಶಿಸಿದವರು ಕೋಲ್ಕತ್ತದ ರಿಂಪಾ ಶಿವ.

(ಸತೀಶ್‌ ಕೊಳ್ಳಿ)

ADVERTISEMENT

ಜನವರಿ 1, 1986ರಲ್ಲಿ ಜನಿಸಿದ ರಿಂಪಾ ಅವರು ಫರೂಕಾಬಾದ್‌ ಘರಾನಾಕ್ಕೆ ಹೆಸರಾದ ತಬಲಾ ವಾದಕ ಪ್ರೊ. ಸ್ವಪನ್‌ ಶಿವ ಅವರ ಮಗಳು. ತಂದೆಯಿಂದ ಮೊದಲ ಪಾಠ ಕಲಿತಾಗ ಅವರಿಗೆ ಕೇವಲ ಮೂರು ವರ್ಷ. ತಬಲಾ ಕಲಿಯುತ್ತೇನೆ ಎಂದ ಮಗಳಿಗೆ, ‘ಸಿತಾರ್‌ ಕಲಿ ಮಗಳೇ’ ಎಂದಿದ್ದರು ತಂದೆ. ಆದರೆ ತಂದೆ ತಮ್ಮ ಶಿಷ್ಯರಿಗೆ ತಬಲಾ ನುಡಿಸುವ ತಂತ್ರಗಳನ್ನು ಹೇಳಿಕೊಡುವುದನ್ನು ದಿನಾ ನೋಡುತ್ತಿದ್ದ ಬಾಲಕಿಗೆ ತಾನೂ ಅದನ್ನೇ ಕಲಿಯುವ ಆಸೆ ಮೂಡಿತ್ತು. ಮೊದಲ ಕಛೇರಿ ನೀಡಿದಾಗ ರಿಂಗಾ ಅವರಿಗೆ ಇನ್ನೂ ಎಂಟು ವರ್ಷ.

ತಬಲಾ ವಾದನದಲ್ಲಿ ಅಪೂರ್ವವಾದ ತಂತ್ರಗಾರಿಕೆ, ಮಟ್ಟುಗಳನ್ನು ರಿಂಪಾ ಸಣ್ಣ ವಯಸ್ಸಿನಲ್ಲಿಯೇ ಪ್ರಸ್ತುತಪಡಿಸುತ್ತಿದ್ದರು. ಅವರ ಸಾಧನೆಗೆ ಮೆಚ್ಚಿದ ಫ್ರಾನ್ಸ್‌ ಸರ್ಕಾರ ಸಾಕ್ಷ್ಯಚಿತ್ರವೊಂದನ್ನೂ ನಿರ್ಮಿಸಿದೆ. ಅದರ ಹೆಸರು ‘ರಿಂಪಾ ಶಿವ: ಪ್ರಿನ್ಸೆಸ್‌ ಆಫ್‌ ತಬಲಾ’. ಹೀಗೆ, ಜಗತ್ತಿನೆಲ್ಲೆಡೆ ‘ತಬಲಾ ರಾಜಕುಮಾರಿ’ ಎಂದೇ ಗುರುತಿಸಿಕೊಳ್ಳುವ ರಿಂಪಾ ಬೆಂಗಳೂರಿನಲ್ಲಿಯೂ ಸಾಕಷ್ಟು ಬಾರಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸೋಲೊ ವಾದನ ಅವರ ವಿಶೇಷ. ಪಂಡಿತ್‌ ಜಸ್‌ರಾಜ್‌ ಮತ್ತು ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರಿಗೆ ಸಾಥಿ ನೀಡಿರುವುದು ರಿಂಪಾ ಹೆಗ್ಗಳಿಕೆ.

(ಸತೀಶ್‌ ಹಂಪಿಹೊಳಿ)

ಏ.8ರಂದು ನಗರದಲ್ಲಿ ಸೋಲೊ

ಕೋಣನಕುಂಟೆಯ ಶ್ರೀ ಸದ್ಗುರು ಮ್ಯೂಸಿಕ್‌ ಅಕಾಡೆಮಿ ಪ್ರತಿ ವರ್ಷ ನೀಡುವ ‘ಸದ್ಗುರುಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ರಿಂಪಾ ಶಿವ ಪಾಲ್ಗೊಳ್ಳಲಿದ್ದಾರೆ. ಸೋಲೊ ತಬಲಾ ವಾದನವು ಈ ಸಮಾರಂಭದ ವಿಶೇಷ ಆಕರ್ಷಣೆಯಾಗಲಿದೆ. ಅವರಿಗೆ ಸಂವಾದಿನಿಯಾಗಿ ಸತೀಶ್‌ ಕೊಳ್ಳಿ ಸಹಕಾರ ನೀಡಲಿದ್ದಾರೆ. ಬಳಿಕ ಪ್ರವೀಣ್‌ ಗೋಡ್ಕಿಂಡಿ ಬಾನ್ಸುರಿ ವಾದನ ಇರಲಿದೆ. ತಬಲಾ ಸಾಥ್‌– ರಿಂಪಾ ಶಿವ.

ಕುಲಕರ್ಣಿ ಅಸೋಸಿಯೇಟ್ಸ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಸಮಾರಂಭದಲ್ಲಿ ರಿಂಪಾ ಹಾಗೂ ಪ್ರವೀಣ್‌ ಗೋಡ್ಕಿಂಡಿ ಅವರಿಗೆ ‘ಸದ್ಗುರುಶ್ರೀ’ ಪ್ರಶಸ್ತಿಯನ್ನು ಹಿರಿಯ ಹಿಂದೂಸ್ತಾನಿ ಗಾಯಕ ಪರಮೇಶ್ವರ ಹೆಗಡೆ ಪ್ರದಾನ ಮಾಡಲಿದ್ದಾರೆ. ವಿವಿಧ ಸಂಗೀತ ಶಾಲೆಗಳ ತಂಡಗಳಿಂದ ಸಮೂಹ ಗಾಯನ ಇರಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಸತೀಶ್‌ ಹಂಪಿಹೊಳಿ ತಿಳಿಸಿದ್ದಾರೆ.

(ಪ್ರವೀಣ್ ಗೋಡ್ಕಿಂಡಿ)

ಸ್ಥಳ– ಜೆ.ಎಸ್.ಎಸ್. ಸಭಾಂಗಣ, 8ನೇ ಬ್ಲಾಕ್‌, ಜಯನಗರ. ಭಾನುವಾರ ಸಂಜೆ 4.

**

ರಿಂಪಾ ಶಿವ

ಪಾರ್ವತಮ್ಮ ಮತ್ತು ಪಂಡಿತ ಚನ್ನಪ್ಪ ಎರೇಸೀಮೆ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮವು ಭಾನುವಾರ (ಏ.8) ಸಂಜೆ 6 ಗಂಟೆಗೆ ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ನಡೆಯಲಿದೆ. ಹಿಂದೂಸ್ಥಾನಿ ಗಾಯಕ ಪಂಡಿತ ಗಣಪತಿ ಭಟ್‌ ಹಾಸಣಗಿ ಅವರ ಸಂಗೀತ ಕಛೇರಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.