
ವೆನಿಜುವೆಲಾ ಅಧ್ಯಕ್ಷರಾಗಿದ್ದ ಹ್ಯೂಗೊ ಷಾವೇಜ್ ನಿಧನ ಆ ರಾಷ್ಟ್ರವನ್ನು ಮಾತ್ರವಲ್ಲ, ಇಡೀ ಲ್ಯಾಟಿನ್ ಅಮೆರಿಕವನ್ನು ಹಾಗೂ ಜಗತ್ತಿನ ಕೋಟ್ಯಂತರ ಜನರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ವೆನಿಜುವೆಲಾ ಜನತೆಯಲ್ಲಂತೂ ಶೂನ್ಯ ಭಾವ ಆವರಿಸಿದೆ. ತಮ್ಮ ನಾಯಕನ ಅಗಲಿಕೆಗಾಗಿ ಅಲ್ಲಿನ ಜನ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಅಷ್ಟೇ ಏಕೆ, ಅಲ್ಲಿನ ಉಸ್ತುವಾರಿ ಸರ್ಕಾರ ಷಾವೇಜ್ ಶವವನ್ನು ಶಾಶ್ವತವಾಗಿ ಸಂರಕ್ಷಿಸಿ ಇಡುವ ನಿರ್ಧಾರಕ್ಕೆ ಬಂದಿದೆ.
14 ವರ್ಷಗಳ ಕಾಲ 2.9 ಕೋಟಿ ಜನಸಂಖ್ಯೆಯ ಪುಟ್ಟ ರಾಷ್ಟ್ರದಲ್ಲಿ ಆಳ್ವಿಕೆ ನಡೆಸಿದ ಷಾವೇಜ್ ಇಷ್ಟೆಲ್ಲಾ ಸಂಚಲನ ಮೂಡಿಸಿದ್ದು ಅಚ್ಚರಿಯೇ ಸರಿ. ಷಾವೇಜ್ ಜನಿಸಿದ್ದು 1954ರ ಜುಲೈ 28ರಂದು ಪಶ್ಚಿಮ ವೆನಿಜುವೆಲಾದ ಸಬಟೇನಾ ಪಟ್ಟಣದಲ್ಲಿ- ಶಿಕ್ಷಕ ದಂಪತಿಯ ಆರು ಮಕ್ಕಳ ಪೈಕಿ ಎರಡನೇ ಮಗನಾಗಿ. ಪೋಷಕರು ಶಿಕ್ಷಕರಾಗಿದ್ದರೂ ಮನೆಯಲ್ಲಿ ಬಡತನವೇ. ಷಾವೇಜ್ ಬಾಲ್ಯ ಕಳೆದದ್ದು ತನ್ನ ಅಜ್ಜಿಯ ಮನೆಯಲ್ಲಿ.
ಬೇಸ್‌ಬಾಲ್ ಪ್ರಿಯನಾಗಿದ್ದ ಷಾವೇಜ್ ಆರಂಭಿಕ ವಿದ್ಯಾಭ್ಯಾಸದ ನಂತರ 17ನೇ ವಯಸ್ಸಿನಲ್ಲಿ ಮುಂದಿನ ಓದಿಗಾಗಿ ಮಿಲಿಟರಿ ಅಕಾಡೆಮಿ ಸೇರಿದರು. ಅಲ್ಲಿ ಪದವಿ ಪಡೆದ ನಂತರ ವೃತ್ತಿ ಜೀವನ ಆರಂಭ. ಪ್ಯಾರಾಟ್ರೂಪರ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿ, ರೆಡ್ ಫ್ಲ್ಯಾಗ್ ಎಂಬ ಮಾವೊವಾದಿ ಬಂಡುಕೋರರ ಗುಂಪನ್ನು ನಿಗ್ರಹಿಸುವ ಹೊಣೆ ಅವರದ್ದಾಗಿತ್ತು.
1970, 80ರ ದಶಕಗಳಲ್ಲಿ ಜೂನಿಯರ್ ಕಮ್ಯುನಿಕೇಷನ್ ಆಫೀಸರ್ ಆಗಿದ್ದ ಅವರಿಗೆ ಅದೇಕೋ ಏನೋ ಸೇನೆಯು ಗೆರಿಲ್ಲಾಗಳನ್ನು ನಡೆಸಿಕೊಳ್ಳುವ ರೀತಿಯಲ್ಲಿ ಕ್ರೌರ್ಯ ಅಡಗಿದೆ ಎನ್ನಿಸತೊಡಗಿತು. ಸ್ವತಃ ಸೇನಾಧಿಕಾರಿಯಾಗಿದ್ದರೂ ಅವರು ಈ ಅಸಮಾನತೆಯನ್ನು ಪ್ರಶ್ನಿಸಲು ಶುರು ಮಾಡಿದರು. ವಿಪರ್ಯಾಸಎಂದರೆ, ಷಾವೇಜ್ ಯಾವ `ರೆಡ್ ಫ್ಲ್ಯಾಗ್' ಬಂಡುಕೋರರನ್ನು ನಿಗ್ರಹಿಸಬೇಕಾಗಿತ್ತೋ ಆ ಬಂಡುಕೋರರು ಕೂಡ ಈ ಅಸಮಾನತೆಯ ವಿರುದ್ಧವೇ ಹೋರಾಟ ರೂಪಿಸಿದ್ದರು.
ಷಾವೇಜ್ 80ರ ದಶಕದಲ್ಲಿ ಸೇನೆಯಲ್ಲಿದ್ದಾಗಲೇ `ಕ್ರಾಂತಿಕಾರಿ ಬೊಲಿವಾರಿಯನ್ ಆಂದೋಲನ' ಎಂಬ ರಹಸ್ಯ ಸಂಘಟನೆಯೊಂದನ್ನು ಸ್ಥಾಪಿಸಿದರು. ಪ್ರಭುತ್ವವು ಜನರ ಕಷ್ಟನಷ್ಟಗಳಿಗೆ ಸ್ಪಂದಿಸಲು ವಿಫಲವಾದಾಗ ಸೇನೆಯ ಮಧ್ಯಪ್ರವೇಶ ಅಗತ್ಯ ಎಂಬುದು ಅವರ ನಂಬಿಕೆಯಾಗಿತ್ತು.
ಅಷ್ಟೇ ಅಲ್ಲ, ಅಂತಹ ಸಂದರ್ಭದಲ್ಲಿ ಕ್ರಾಂತಿಕಾರಿ ಹೋರಾಟವೂ ತಪ್ಪಲ್ಲ ಎಂಬ ಸಿದ್ಧಾಂತ ಅವರದ್ದಾಗಿತ್ತು.ಸೇನಾಧಿಕಾರಿಯಾಗಿ ರಹಸ್ಯ ಸಂಘಟನೆ ಕಟ್ಟಿದ ಷಾವೇಜ್ ಅಧಿಕಾರ ಹಿಡಿಯಲು ಆತುರ ಪಡದಿರುವಲ್ಲಿ ಅವರ ದೂರದೃಷ್ಟಿ ಎದ್ದುಕಾಣುತ್ತದೆ. ಒಂದೆಡೆ ರಹಸ್ಯ ಸಂಘಟನೆಯನ್ನು ಬಲಗೊಳಿಸುತ್ತಲೇ ಮತ್ತೊಂದೆಡೆ ಸೇನೆಯಲ್ಲಿ ಸೇವೆ ಮುಂದುವರಿಸಿದರು.
ಅಧಿಕಾರಕ್ಕಾಗಿ ಅವಸರ ತೋರದೆ 1980ರ ದಶಕವಿಡೀ ತಾಳ್ಮೆಯಿಂದ ಕಾಯ್ದರು. ಆದರೆ ಯಾವಾಗ 1992ರ ವೇಳೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವೆನಿಜುವೆಲಾ ಜನತೆಯಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಮಡುಗಟ್ಟಿತೋ ಆಗ ಅಧಿಕಾರ ಹಿಡಿಯಲು ಅದೇ ಸುಸಮಯ ಎಂದುಕೊಂಡರು.
ಆಗ ಐದು ಸೇನಾ ಘಟಕಗಳ ಕಮಾಂಡರ್ ಆಗಿದ್ದ ಷಾವೇಜ್ ಕ್ಷಿಪ್ರಕ್ರಾಂತಿ ನಡೆಸಿ ರಾಜಧಾನಿ ಕ್ಯಾರಕಸ್ ವಶಪಡಿಸಿಕೊಳ್ಳಲು ನಿರ್ಧರಿಸಿಬಿಟ್ಟರು. ಆದರೆ ಆ ಕ್ಷಿಪ್ರಕ್ರಾಂತಿ ಯತ್ನ ವಿಫಲವಾಯಿತು. ತಮ್ಮ ಪ್ರಯತ್ನ ಫಲ ನೀಡದ್ದನ್ನು ಮನಗಂಡ ಷಾವೇಜ್ ಶರಣಾಗತರಾಗಲು ಹಿಂದೆಮುಂದೆ ನೋಡಲಿಲ್ಲ.
ಆದರೆ ಅವರು ಹೀಗೆ ಶರಣಾಗುವ ಮುನ್ನ ಬಲು ಜಾಣ್ಮೆಯಿಂದ ಒಪ್ಪಂದವನ್ನು ಕುದುರಿಸಿಕೊಳ್ಳಲು ಯಶಸ್ವಿಯಾದರು. ಅದರ ಪ್ರಕಾರ, ಟೆಲಿವಿಷನ್‌ನಲ್ಲಿ ಕಾಣಿಸಿಕೊಳ್ಳಲು ತನಗೊಂದು ಸಣ್ಣ ಅವಕಾಶ ನೀಡಬೇಕೆಂದು ಕೋರಿದರು. ಅದು ಅವರ ಮುಂದಿನ ಬೆಳವಣಿಗೆಗೆ ಇಂತಹ ವೇದಿಕೆಯಾಗುತ್ತದೆ ಎಂಬುದನ್ನು ಬಹುಶಃ ಯಾರೂ ಊಹಿಸಿರಲಿಲ್ಲ! ನೀಳಕಾಯದ ಷಾವೇಜ್ ಸೇನಾ ಅಧಿಕಾರಿಯ ಸಮವಸ್ತ್ರದಲ್ಲಿ ದುಂಡನೆಯ ಟೋಪಿ ಧರಿಸಿ ಟೆಲಿವಿಷನ್ ಮೂಲಕ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದರು- `ಸಂಗಾತಿಗಳೇ, ದುರದೃಷ್ಟವಶಾತ್ ನಾವು ಹಾಕಿಕೊಂಡಿದ್ದ ಗುರಿಗಳನ್ನು ಈ ಸದ್ಯಕ್ಕೆ ಸಾಧಿಸಲು ಸಾಧ್ಯವಾಗುತ್ತಿಲ್ಲ' ಎಂದ ಅವರು, `ಹೊಸ ಸಾಧ್ಯತೆಗಳು ಮತ್ತೆ ಸೃಷ್ಟಿಯಾಗುತ್ತವೆ' ಎಂದು ಹೇಳಲು ಮರೆಯಲಿಲ್ಲ.
`ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ' ಎಂಬ ಆ ಎರಡು ಪದಗಳು ವೆನಿಜುವೆಲಾ ಜನತೆ ಮೇಲೆ ಅದೇನು ಮೋಡಿ ಮಾಡಿದವೋ ಗೊತ್ತಿಲ್ಲ. ಅಂದು ಹೊರ ಜಗತ್ತಿಗೆ ಪ್ರಕಟವಾದ ಷಾವೇಜ್ ವಾಕ್ಪಟುತ್ವ ಜೀವಿತದ ಕಡೆಯವರೆಗೂ ಹಾಗೆಯೇ ಮುಂದುವರಿಯಿತು.ಅಮೆರಿಕದ ಸಾಮ್ರಾಜ್ಯಶಾಹಿ ನೀತಿಯ ಕಟು ಟೀಕಾರಾಗಿದ್ದ ಷಾವೇಜ್ ಆಗಾಗ ಆ ರಾಷ್ಟ್ರವನ್ನು ಕೆಣಕುತ್ತಲೇ ಇದ್ದರು. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯು.ಬುಷ್ ಅವರನ್ನು ವಿಶ್ವಸಂಸ್ಥೆ ಮಹಾಧಿವೇಶನದಲ್ಲೇ ಜರಿದು ಧೈರ್ಯ ಪ್ರದರ್ಶಿಸಿದ್ದರು.
ಕ್ಯೂಬಾ, ನಿಕರಾಗುವಾ, ಚೀನಾ, ರಷ್ಯಾ, ಇರಾನ್ ಮತ್ತಿತರ ರಾಷ್ಟ್ರಗಳ ವಿರುದ್ಧ ಉತ್ತಮ ಸಂಬಂಧ ಸ್ಥಾಪಿಸಿಕೊಂಡು ಅಮೆರಿಕವನ್ನು ಇನ್ನಷ್ಟು ಕೆರಳಿಸಿದ್ದರು. ಆದರೆ ಒಬಾಮ ಅವರು ಅಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದಾಗ ಆತ್ಮೀಯವಾಗಿ ಅಭಿನಂದಿಸಿ ಹೃದಯ ವೈಶಾಲ್ಯವನ್ನು ಮೆರೆದಿದ್ದರು. ಆದರೆ ಆರ್ಥಿಕ ನೀತಿಯ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸಂದರ್ಭ ಎದುರಾದಾಗ ಅದೇ ಒಬಾಮ ಅವರನ್ನು ವಿದೂಷಕ ಎಂದೂ ಗೇಲಿ ಮಾಡಿದ್ದರು.
ಎಡಪಂಥೀಯವಾದಿಯಾಗಿದ್ದ ಷಾವೇಜ್ ಸಮಾಜವಾದಿ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ತಾವು ಅಧಿಕಾರಕ್ಕೆ ಬಂದ ನಂತರ ವೆನಿಜುವೆಲಾದ ತೈಲೋದ್ಯಮವನ್ನು ರಾಷ್ಟ್ರೀಕರಣಗೊಳಿಸಿದರು. ತೈಲ ರಫ್ತಿನಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಸತೊಡಗಿದರು. ಇತರೆ ಲ್ಯಾಟಿನ್ ಅಮೆರಿಕ ದೇಶಗಳಿಗೂ ನೆರವಿನ ಹಸ್ತ ಚಾಚಿದರು. ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ, ಪಿಂಚಣಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು.
ಇದರ ಪರಿಣಾಮವಾಗಿ ರಾಷ್ಟ್ರದಲ್ಲಿ ಶೇ 61ರಷ್ಟಿದ್ದ ಬಡತನ ಹತ್ತು ವರ್ಷಗಳಲ್ಲಿ ಶೇ 33ಕ್ಕೆ ಇಳಿಯಿತು. ಅತಿ ಕಡುಬಡವರ ಸಂಖ್ಯೆ ಶೇ 30ರಿಂದ ಶೇ 9ಕ್ಕೆ ಇಳಿಯಿತು. ಅಸಮಾನತೆ ತಗ್ಗಿತು. ಪದವಿ ಹಂತದವರೆಗಿನ ಶಿಕ್ಷಣವನ್ನು ಉಚಿತಗೊಳಿಸಿದರು. ವೆನಿಜುವೆಲ್ಲಾದಲ್ಲಿ ನಿರಕ್ಷರತೆಯನ್ನು ರಾಷ್ಟ್ರದಲ್ಲಿ ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ ಎಂದು ಯುನೆಸ್ಕೋ ಸಂಸ್ಥೆಯೇ ಘೋಷಿಸಿದೆ.
ಷಾವೇಜ್ ಅವಧಿಯಲ್ಲಿ ಅಪೌಷ್ಟಿಕತೆ ಪ್ರಮಾಣ ಶೇ 5ಕ್ಕೆ ಇಳಿಯಿತು. ರೈತರಿಗೆ ಸುಲಭವಾಗಿ ಸಾಲ ಸಿಗುವಂತಾಯಿತು.1980ರಲ್ಲಿ ಶೇ 90ರಷ್ಟಿದ್ದ ಆಹಾರ ಆಮದು 2011ರ ವೇಳೆಗೆ ಶೇ 30ಕ್ಕೆ ಇಳಿಯಿತು. ನವಜಾತ ಶಿಶು ಮರಣ ಸಂಖ್ಯೆ 1999ರಲ್ಲಿ 1000ಕ್ಕೆ 25 ಇದ್ದುದು 2011ರ ವೇಳೆಗೆ 1000ಕ್ಕೆ 11ಕ್ಕೆ ಇಳಿಯಿತು. ವೈದ್ಯರ ಸಂಖ್ಯೆ 1998ರಲ್ಲಿ 10,000 ಜನಸಂಖ್ಯೆಗೆ 18 ಇದ್ದುದು 58ಕ್ಕೆ ಏರಿತು. ಮಾಜಿ ಸೇನಾಧಿಕಾರಿಗಳು, ಆಪ್ತರನ್ನೇ ಆಯಕಟ್ಟಿನ ಸ್ಥಾನಗಳಿಗೆ ನೇಮಿಸಿದ ಆಪಾದನೆ ಷಾವೇಜ್ ಮೇಲಿದೆಯಾದರೂ ಅವರು ಅಂತಹ ದೊಡ್ಡ ಹಗರಣಕ್ಕೆ ಆಸ್ಪದ ನೀಡಲಿಲ್ಲ ಎಂಬುದು ಮೆಚ್ಚಬೇಕಾದ ಅಂಶ.
ಮತ್ತೊಂದು ಸಂಗತಿಯೆಂದರೆ, ಷಾವೇಜ್ ಕ್ರೈಸ್ತ ಧರ್ಮೀಯರಾದರೂ ವ್ಯಾಟಿಕನ್ ಚರ್ಚ್‌ಗೆ ರಾಜಕೀಯ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಎಂದೂ ಅವಕಾಶ ನೀಡಲಿಲ್ಲ. ವ್ಯಾಟಿಕನ್ ಚರ್ಚ್‌ನೊಂದಿಗೆ ಅವರು ಮಧುರ ಸಂಬಂಧವನ್ನೇನೂ ಹೊಂದಿರಲಿಲ್ಲ, ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ನಂತರ, ಚರ್ಚ್‌ನೊಂದಿಗಿನ ಸಂಬಂಧ ಸರಿಪಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರೆಂಬ ವರದಿಗಳಿವೆ.
ರಾಷ್ಟ್ರಾಧ್ಯಕ್ಷರಾಗಿದ್ದ ಷಾವೇಜ್ ಅವರೇ ವ್ಯವಸ್ಥೆಯ ಕೇಂದ್ರಬಿಂದುವಾದದ್ದು ವ್ಯವಸ್ಥೆಯ ಒಂದು ದೌರ್ಬಲ್ಯ ಎನ್ನುವವರು ಇದ್ದಾರೆ. ಆದರೆ, ಅದೇ ವೇಳೆಗೆ, ವಿವಿಧ ಸಾಮಾಜಿಕ ಆಂದೋಲನಗಳನ್ನು ತಮ್ಮ ಆಡಳಿತದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದ್ದು ಅವರ ಶಕ್ತಿಯಂತೆ ಗೋಚರಿಸುತ್ತದೆ. ನಿಕೊಲಸ್ ಮಾಡ್ಯುರೊ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡುವಲ್ಲಿಯೂ ಅವರ ಜಾಣ್ಮೆ ಕೆಲಸ ಮಾಡಿದೆ ಎನ್ನಲಾಗಿದೆ.
ರಾಜಕೀಯ ಇಚ್ಛಾಶಕ್ತಿ, ಮಹತ್ವಾಕಾಂಕ್ಷೆ, ದೂರದೃಷ್ಟಿ ಮತ್ತು ಅಚಲ ಬದ್ಧತೆ ಮೇಳೈಸಿದ ವ್ಯಕ್ತಿಯಾಗಿದ್ದ ಷಾವೇಜ್ ಬಡಜನರನ್ನು ಉದ್ಧರಿಸಲು ಬಂದ ಅವತಾರ ಪುರುಷ ಎಂಬಂತೆ ಕಾಣತೊಡಗಿದರು. ಹಾಗೆಂದ ಮಾತ್ರಕ್ಕೆ ಅವರು ಮಧ್ಯಮ ವರ್ಗದ ಜನರ ಬೆಂಬಲ ಗಳಿಸುವಲ್ಲಿ ಹಿಂದೆ ಬೀಳಲಿಲ್ಲ. 2012ರ ಅಕ್ಟೋಬರ್‌ನಲ್ಲಿ ಅವರು ಗೆದ್ದು ಬಂದ ಪರಿಯೇ ಇದಕ್ಕೆ ಸಾಕ್ಷಿ.
ಸಿರಿವಂತರ ವಿರುದ್ಧ ಬಡವರನ್ನು ಎತ್ತಿಕಟ್ಟಿ ರಾಜಕೀಯ ಮಾಡಿದ ಷಾವೇಜ್ ವೈಖರಿ ಸರಿಯಲ್ಲ ಎನ್ನುವ ಸಾಕಷ್ಟು ವಿಶ್ಲೇಷಣೆಗಳೂ ಇವೆ. ಆರಾಧನಾ ಸಂಸ್ಕೃತಿಗೆ ಮಾರು ಹೋಗಿ ಆತ್ಮಲೋಲುಪತೆ ಕಡೆ ಜಾರಿದ್ದ ಅವರಲ್ಲಿ ಸರ್ವಾಧಿಕಾರತ್ವದ ಎಳೆಗಳು ಮೈಗೂಡಲು ಮೊದಲಾಗಿದ್ದವು ಎಂಬ ವಾದವೂ ಇದೆ. ಅದೇನೇ ಇರಲಿ, ತಮ್ಮ ಜೀವಿತದುದ್ದಕ್ಕೂ ಅಚ್ಚರಿ, ಅನಿರೀಕ್ಷಿತಗಳೊಂದಿಗೆ ಹೊಸ ತಿರುವುಗಳನ್ನು ನೀಡುತ್ತಾ ಸಾಗಿದ್ದ ಷಾವೇಜ್ ಇನ್ನಷ್ಟು ದಿನ ಇದ್ದಿದ್ದರೆ ಈ ಟೀಕೆಗಳನ್ನು ಸುಳ್ಳು ಮಾಡುತ್ತಿದ್ದರೋ, ಏನೋ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.