ADVERTISEMENT

ಬೈ ಬೈ ಬುರುಡೆ!

ತುರುವೇಕೆರೆ ಪ್ರಸಾದ್
Published 12 ಮಾರ್ಚ್ 2011, 18:30 IST
Last Updated 12 ಮಾರ್ಚ್ 2011, 18:30 IST

ನಾನು ಬೆಳಿಗ್ಗೆ  ಪರ್ಮೇಶಿ ಮನೆಗೆ ಹೋದಾಗ ಅವನು ಏಣಿ ಹಾಕ್ಕಂಡು ಪೋರ್ಟಿಕೋದ ಬಲ್ಬ್ ಚೇಂಜ್ ಮಾಡಕ್ಕೆ ಸರ್ಕಸ್ ಮಾಡ್ತಿದ್ದ. ಅವನ ಹೆಂಡತಿ ಪದ್ದಮ್ಮ ಏಣಿ ಹಿಡ್ಕಂಡು ಪರ್ಮೇಶಿ ಬೀಳದ ಹಾಗೆ ಹಿಡಿಯೋಕೆ ಬ್ಯಾಲೆನ್ಸ್ ಮಾಡ್ತಿದ್ರು. 

 ‘ಹಾಳಾದ ಏಣಿ, ನಮ್ಮ ಸರ್ಕಾರಗಳ ತರಹ ಆಡುತ್ತೆ, ನೆಟ್ಟಗೆ ನಿಲ್ಲೋದೂ ಇಲ್ಲ, ಮುರ್ಕಂಡು ಬೀಳೋದೂ ಇಲ್ಲ’ ಅಂತ ಏಣಿಗೆ ಹಿಡಿ ಶಾಪ ಹಾಕಿದ್ರು ಪದ್ದಮ್ಮ
 ‘ ಏಯ್! ಸರ್ಕಾರ ಅಂದ್ರೆ ಏಣಿ ಅಲ್ಲ ಕಣೆ! ಅದೊಂತರಾ ಬಿಕಿನಿ ಇದ್ದ ಹಾಗೆ! ಜನಕ್ಕೆ ಯಾವಾಗ ಬೀಳುತ್ತೋ ಅನ್ನೋ ತವಕ, ಯಾಕೆ ಬೀಳಲಿಲ್ಲ ಅನ್ನೋ ಕುತೂಹಲ ಎರಡೂ ಇರುತ್ತೆ ಕಣೆ’

 ‘ಸಾಕು ಸಾಕು ನಿಮ್ಮ ಪೋಲಿ ವೇದಾಂತ, ನಿಮ್ಮ ಸ್ನೇಹಿತರು ಬಂದಿದಾರೆ. ಮಾತಿನ ಮೇಲೆ ಸ್ವಲ್ಪ ನಿಗಾ ಇರಲಿ’ ಅಂದ್ರು ಪದ್ದಮ್ಮ.
 ‘ಓಹೋ! ನೀನು ಯಾವಾಗ ಬಂದೆಯೋ?’ ಕೆಳಗೆ ಬಗ್ಗಿ ನೋಡಿ ಹಲ್ಲು ಬಿಟ್ಟ ಪರ್ಮೇಶಿ.
 ‘ಈಗ ಬರ್ತಿದೀನಿ.... ನೀವು ಬಿಡಿ ನಾನು ಹಿಡ್ಕೊತೀನಿ’  ಅಂದೆ ಪದ್ದಮ್ಮನವರಿಗೆ.

 ‘ಅಯ್ಯೋ ನಿಮಗೆ ಬ್ಯಾಲೆನ್ಸ್ ಸಿಗಲ್ಲ ಬಿಡಿ, ಇವರು ನೆಲದ ಮೇಲೆ ಇದ್ದಾಗಲೇ ವಾಲಾಡೋದು ಜಾಸ್ತಿ, ಇನ್ನೂ ಮಂಗನ ತರ ಮೇಲೆ ಹತ್ತಿದ್ರೆ ಕೇಳಬೇಕಾ? ಒಂದು ಕಡೆಗೆ ಎಳೀತಾರೆ. ಮ್ಯಾನೇಜ್ ಮಾಡಿ ಅಭ್ಯಾಸ ಇದ್ದರೇ ಹಿಡಿಯೋಕೆ ಆಗೋದು ಅಂದ್ರು. ಪರವಾಗಿಲ್ಲ ಬಿಡಿ ಎಂದು ನಾನು ಏಣಿ ಹಿಡ್ಕೊಂಡು ನಿಂತೆ, ಪದ್ದಮ್ಮ ಒಳಗೆ ಹೋದ್ರು.
 ‘ಅಲ್ಲ ಕಣೋ! ಈಗ ಬಲ್ಬ್ ಚೇಂಜ್ ಮಾಡೋ ಅವಸರ ಏನಿತ್ತು? ಬರ್ನಾಗಿತ್ತಾ ಹೇಗೆ?’

 ‘ಬರ್ನಾಗಿತ್ತಿಲ್ಲಪ್ಪ, ಕರೆಂಟ್ ಬಿಲ್ ಜಾಸ್ತಿ ಬರುತ್ತೆ. ಈ ಬುರುಡೆ ಬಲ್ಬ್ ತೆಗೆದು ಸಿಎಫ್‌ಎಲ್ ಹಾಕೋಣ ಅಂತ ಒದ್ದಾಡ್ತಿದೀನಿ. ನಮ್ಮ ಪವರ್  ಮಿನಿಷ್ಟ್ರು ಹೇಳಿದ್ದು ನೀನು ಪೇಪರ್ರಲ್ಲಿ ಓದಲಿಲ್ಲವಾ? ಅವರು ಎಲ್ಲಾ ಬುರುಡೆ ಬಲ್ಬ್ ತೆಗೆದು ಸಿಎಫ್‌ಎಲ್ ಹಾಕುಸ್ತಾರಂತೆ. ಈಗ ಬೆಳಕು ಯೋಜನೆ ಶುರುವಾಗಿದೆಯಲ್ಲಪ್ಪ’

 ‘ಅವರು ಹಾಗೆ ಹೇಳಿಕೆ ಕೊಟ್ಟೇ ಸರ್ಕಾರ ಲೋಡ್ ಶೆಡ್ಡಿಂಗ್ ಅನುಭವಿಸೋ ಸ್ಥಿತಿಗೆ ಬಂದಿದ್ದು’
 ‘ಏನು ಹೇಳ್ತಿದೀಯೋ ನೀನು?ಬುರುಡೆ ದೀಪ ತೆಗೀತೀನಿ ಅಂತ ಹೇಳೋದಕ್ಕೂ ಭಿನ್ನಮತ ಉಲ್ಭಣಿಸೋಕೂ ಏನೋ ಸಂಬಂಧ?’
 ‘ಅಲ್ಲೇ ಇರೋದು ನೋಡು ಪಾಯಿಂಟು. ಇವರು ಬುರುಡೆ ದೀಪ ತೆಗೀತೀನಿ, ಸಿಎಫ್‌ಎಲ್ ಹಾಕ್ತೀನಿ ಅಂತ ಹೇಳಿದ ಅರ್ಥಾನೇ ಬೇರೆ!’
 ‘ಹಾಗಂತೀಯ? ನನಗಂತೂ ನಿನ್ನ ಮಾತಿನ ತಲೆ ಬುಡ ಅರ್ಥ ಆಗ್ತಿಲ್ಲ’

 ‘ಬರೀ ಬುರುಡೆ ದೀಪ ತೆಗೆಯೋದಲ್ಲ, ನಮ್ಮ ನಾಡಿನಲ್ಲಿ ಮೊದಲು ನಿನ್ನಂತ ಟ್ಯೂಬ್ ಲೈಟ್‌ಗಳನ್ನೂ ತೆಗೀಬೇಕು’
 ‘ಆಯ್ತು ನಾನು ಟ್ಯೂಬ್ ಲೈಟೇ! ನೀನು ಮರ್ಕ್ಯೂರಿ, ಸರೀನಾ? ’
 ‘ಮತ್ತಿನ್ನೇನು ಹೇಳಬೇಕು ಹೇಳು ನಿನಗೆ? ಮರ್ಕ್ಯುರಿ ನಾನಲ್ಲ! ನಮ್ಮ ಇಂಧನ ಸಚಿವರು. ಅವರು ಮತ್ತೆ ಅಧಿಕಾರದ ದೀಪಗುಚ್ಚಕ್ಕೆ ಅಂಟಿಕೊಂಡ್ರು ಅಂತಾನೆ  ಮಿಕ್ಕೋರಿಗೆಲ್ಲ ಕಣ್ಣುರಿ ಶುರುವಾಗಿದ್ದು. ರಾಜಕೀಯದ ಸೂಕ್ಷ್ಮನೇ ಗೊತ್ತಾಗಲ್ಲ ಅಂತೀಯ. ಪವರ್ ಮಿನಿಸ್ಟ್ರು ಬುರುಡೆ ದೀಪ ತೆಗೀತೀನಿ ಅಂತ ಹೇಳಿದ್ದೇ ಒಂದು ಗೂಡಾರ್ಥದಲ್ಲಿ! ನಾನು ವಾಪಸ್ ಬಂದಿದೀನಿ. ಅದೂ ಪವರ್ರೇ ಸಿಕ್ಕಿದೆ. ಬುರುಡೇ ದೀಪಗಳನ್ನೆಲ್ಲಾ ತೆಗೆದು ಹೊಸ ಸಿಎಫ್‌ಎಲ್ ಹಾಕುಸ್ತೀನಿ ಅಂತ ಮಾರ್ಮಿಕವಾಗಿ ಹೇಳಿದಾರೆ’

 ‘ಓಹೋ! ಹೀಗೆ ಅನ್ನು ಸಮಾಚಾರ?’
 ‘ಹ್ಞೂ ಮತ್ತೆ! ಅದಕ್ಕೆ ಕೆಲವರು ಸ್ಪಿರಿಟ್ ಲ್ಯಾಂಪ್ ಹೇಗೆ ತೆಗೀತೀಯೋ ನಾವೂ ನೋಡ್ತೀನಿ. ಅದೇನು ತೆಗುಸ್ತೀರೋ ತೆಗೆಸಿ. ನಾವು ಹೈಮಾಸ್ ದೀಪನೇ ತೆಗೆದು ಬಿಡ್ತೀವಿ ಅಂತ ಬುರುಡೆ ದೀಪಗಳನ್ನೆಲ್ಲ ಕಟ್ಕಂಡು ಆಚೆ ಹೋಗಿದ್ದದ್ದು’
 ‘ನೀನು ಏನೇ ಹೇಳು? ಅವರು ಬುರುಡೆ ದೀಪ ಅನ್ನೋದನ್ನ ನಾನು ಒಪ್ಪಲ್ಲ ಬಿಡು’

 ‘ಯಾಕೆ ಒಪ್ಪಲ್ಲ ನೀನು? ಅವು ಯಾವಾಗಲೂ ಕಾದಿರುತ್ವೆ, ಪಕ ಪಕ ಅಂತಿರುತ್ವೆ. ಸಿಂಗಲ್ ಅಗ್ತಿರುತ್ವೆ. ಫಿಲಮೆಂಟ್ ಅಲ್ಲಾಡಿಸಿ ನಾವು ಹೋಗ್ತಿವಿ ಅಂತ ಹೆದರಿಸ್ತಿರುತ್ವೆ.  ಹೆವಿ ವೊಲ್ಟೇಜ್ ಬೇಕು, ಅವಾಗವಾಗ ಬೆಚ್ಚಗೆ ಮಾಡಬೇಕು ಅಂತಿರುತ್ವೆ. ಅಂದ ಮೇಲೆ ಅವು ಬುರುಡೆ ದೀಪಗಳೇ ತಾನೇ?’

 ‘ಆದರೂ ಇವನ್ನ ಬುರಡೆ ಸೀರಿಯಲ್ ಸೆಟ್‌ಗಳು ಅನ್ನೋದು ವಾಸಿ. ಒಂದು ಕೈ ಕೊಟ್ರೆ ಯಾವುದೂ ಹತ್ತಲ್ಲವಲ್ಲ. ಸಾಲದ್ದಕ್ಕೆ ಸ್ವಿಚ್ ಹಾಕಿದ ತಕ್ಷಣ ಒಂದು ಕಾಗೆ ಪಟಾಕಿ ತರ ಚಟ್ ಅಂದ್ರೆ, ಇನ್ನೊಂದು ಆಸ್ಫೋಟಕರ್ ಲ್ಯಾಂಪ್ ಹಿಂದಿನಿಂದ ಢಮಾರ್ ಅನ್ನುತ್ತೆ’
‘ನೀನು ಹೇಳೋದೂ ಒಂದು ತರ ನಿಜಾನೇ! ಇವುಗಳ ಜೊತೆ ಇರೋವಂತೂ ಈಗಾಗಲೇ ಸಿಎಫ್‌ಎಲ್ಲೇ ತಾನೇ?’  ‘ಇವುಗಳ ಜೊತೆ ಇರೋ ಸಿಎಫ್‌ಎಲ್ ಅಂದ್ರೆ?

‘ಅದೇ ಕಾಲು ಕಟ್ಟೋ ಫಾರಿನ್ ಲ್ಯಾಂಪ್ಸ್! ಪಕ್ಷೇತರರು! ಅವರೂ ಈ ಲೋಟಸ್ ಮಹಲ್‌ನ  ಪವರ್ ಕಿತ್ತಾಕೋಕೆ ಓಡಾಡ್ತಿದಾರಲ್ಲ!’
‘ ಹೌದೌದು ಥರ್ಮಲ್ ಸ್ಟೇಷನ್ನಲ್ಲಿ ಪವರ್ರೇ ತೆಗುದ್ರೆ ಭಾರತ ಪ್ರಕಾಶಿಸುತ್ತಿದೆ ಅಂತ ಹೇಳಕ್ಕೆ ಆಗಲ್ಲವಲ್ಲಪ್ಪ!’
‘ಅದಕ್ಕೇ ಈ ಟ್ರಬಲ್ ಕೊಡೋ ಎಲ್ಲಾ ಬುರುಡೆ ದೀಪಗಳನ್ನೂ ಕಿತ್ತು ಬಿಸಾಕಿ ಸಿಎಫ್ ಎಲ್ ಹಾಕಬೇಕು ಅಂತ’
 ‘ಸಿಎಫ್‌ಎಲ್‌ನೇ ಯಾಕೆ ಹಾಕಬೇಕು?’

 ‘ಈ ಬುರುಡೆ ಒಳಗೆ ಒಂದು ಫಿಲಮೆಂಟ್ ಇರೋದಕ್ಕೇ ತಾನೇ ಅವು ಅಷ್ಟು ಹೀಟ್ ಆಗಿ ಅವಾಗವಾಗ ಚುರುಕ್ ಅನಿಸೋದು. ಫಿಲಂಮೆಂಟೇ ಇಲ್ಲದೆ ಸಿಎಫ್‌ಎಲ್ ತರ ಕಾಲಿ ಕೊಳವೆ ಇದ್ರೆ ತಣ್ಣಗೆ ಹೇಳಿದಂಗೆ ಕೇಳ್ಕಂಡು ಇರಲ್ಲವಾ ಅದಕ್ಕೆ!’
‘ಹ್ಞೂ ಕಣೋ, ಹಾಗೇನಾದರೂ ಅದರೆ ಇವೆಲ್ಲಾ ಬಿಬಿಎಲ್ ಆಗಿ ಬಿಡುತ್ವೆ’
 ‘ಬಿಬಿಎಲ್ ಅಂದ್ರೆ?’

‘ಭಿನ್ನಮತೀಯ ಬುಡ್ಡಿ ಲ್ಯಾಂಪ್ಗಳು. ಪವರ್ ಇಲ್ಲ ಅಂದ ಮೇಲೆ ಬುಡ್ಡಿ ದೀಪ ತಾನೇ?’
 ‘ಆ ಮೇಲೆ ಅಣ್ಣೇಗೇರಿ ಚರಂಡೀಲಿ ಸಿಕ್ಕ  ಬುರುಡೆ ಮುಂದೆ ಕೂತ್ಕೊಂಡು ಬುರುಡೇ..ಬುರುಡೇ ಅಂತ ಹಾಡು ಹೇಳಬೇಕಾಗುತ್ತೆ ಎನ್ನುತ್ತ ನಾನು ಕೈ ಬಿಟ್ಟೆ. ಪರ್ಮೇಶಿ ದುಡುಂ ಅಂತ  ಏಣಿಯಿಂದ ಬಿದ್ದು ಬುರುಡೆ ಚಚ್ಕಂಡ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.