ADVERTISEMENT

ಭಾರತೀಯರ ಕೊಡುಗೆ ಏನು ಗೊತ್ತೇ?

ಇ.ಎಸ್.ಸುಧೀಂದ್ರ ಪ್ರಸಾದ್
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಧಾರವಾಡ: ‘ಇಡೀ ಜಗತ್ತಿಗೆ ಸೊನ್ನೆಯನ್ನು ಪರಿಚಯಿಸಿದವರು ಭಾರತದ ಆರ್ಯಭಟ. ಆತ ಒಬ್ಬ ಹಿಂದೂ. ಭೂಮಿ ಸೂರ್ಯನ ಸುತ್ತ ಸುತ್ತಲು 365 ದಿನಗಳು ಬೇಕು ಎಂದು ಹೇಳಿದವರು ಭಾಸ್ಕರಾಚಾರ್ಯ. ಅವರೂ ಒಬ್ಬ ಹಿಂದೂ. ವಿಮಾನ ಕಂಡುಹಿಡಿದವರು ರೈಟ್ ಸಹೋದರರಲ್ಲ. ಬದಲಿಗೆ ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಪುಷ್ಪಕ ವಿಮಾನ ಇತ್ತು’ ಹೀಗೆ ಹೇಳುತ್ತಾ ಸಾಗಿದವರು ರಾಜಸ್ಥಾನದ ರಾಜಧಾನಿ ಜೈಪುರದ ಎಂಎನ್‌ಐಟಿ ನಿರ್ದೇಶಕ ಪ್ರೊ. ಉದಯ ಕುಮಾರ ಯರಗಟ್ಟಿ.

ಎಬಿವಿಪಿಯ 37ನೇ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಷ್ಟ್ರೀಯತೆ ಕುರಿತು ದೀರ್ಘ ಭಾಷಣ ಮಾಡಿ ಅಪಾರ ಚಪ್ಪಾಳೆ ಗಿಟ್ಟಿಸಿದರು. ಭಾರತದ ಸಾಧನೆಯ ಪಟ್ಟಿ ಹೀಗೆ ಮುಂದುವರೆಯಿತು.

‘ವಿದ್ಯುತ್ ಕಂಡು ಹಿಡಿದವರು ಎಡಿಸನ್‌ (ಬಲ್ಬ್‌ ಕಂಡುಹಿಡಿದವರು) ಅಲ್ಲ, ಬದಲಿಗೆ ನೂರಾರು ವರ್ಷಗಳ ಹಿಂದೆ ವಿದ್ಯುತ್‌ ಚಕ್ರವರ್ತಿ ಇದನ್ನು ಶೋಧಿಸಿದ. ನೀವೆಲ್ಲಾ ಕೈಯಲ್ಲಿ ಹಿಡಿದಿರುವ ಫೋನ್ ಕಂಡು ಹಿಡಿದವರು ಮಾರ್ಕೊನಿ ಅಲ್ಲ ಬದಲಿಗೆ ಜಗದೀಶ ಚಂದ್ರ ಬೋಸ್‌’ ಎಂದರು. ಆಗ ಪಕ್ಕದಲ್ಲಿದ್ದ ವಿದ್ಯಾರ್ಥಿಯೊಬ್ಬ ಮಾರ್ಕೊನಿ ಕಂಡು ಹಿಡಿದದ್ದು ರೇಡಿಯೊ ಅಲ್ಲವೇ? ಎಂದು ಪಕ್ಕದಲ್ಲಿದ್ದ ತನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದ.

ADVERTISEMENT

ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಪ್ರೊ. ಉದಯಕುಮಾರ್, ಚಂದ್ರನ ಮೇಲೆ ಮೊದಲು ಹೆಜ್ಜೆ ಇಟ್ಟವರು ಭಾರತದವರೇ ಆದ ರಾಕೇಶ ಶರ್ಮ (ಬಾಹ್ಯಾಕಾಶಕ್ಕೆ ಹೋಗಿ ಬಂದವರು). ಅಲ್ಲಿ ಕಾಲಿಟ್ಟು ‘ಸಾರೇ ಜಹಾಂಸೆ ಅಚ್ಛ’ ಎಂದರು. ಈ ಬಾರಿ ವೇದಿಕೆಯಲ್ಲಿದ್ದ ಗಣ್ಯರೂ ಪರಸ್ಪರ ಮುಖ ನೋಡಿಕೊಂಡರು.

ನಂತರ ಪಶ್ಚಿಮ ಬಂಗಾಳದವರು ಚೀನಾಗೆ ಹೋಗಿ ಅಲ್ಲಿಯ ಬುದ್ಧಿ ಕಲಿತರು. ಗುಜರಾತಿನವರು ಯುರೋಪಿಗೆ ಹೋಗಿ ಅವರಂತಾದರು. ದಕ್ಷಿಣ ಭಾರತದವರು ಆಫ್ರಿಕಾ ಕಡೆ ಮುಖಮಾಡಿದರು. ಎಲ್ಲರೂ ಅಮೆರಿಕಾಗೆ ಹೋಗಿ. ಅಲ್ಲಿ ಸಂಪಾದಿಸಿ ಭಾರತಕ್ಕೆ ಹಣ ತನ್ನಿ’ ಎಂದು ತಮ್ಮ ವೀರಾವೇಶದ ಮಾತುಗಳನ್ನು ಮುಗಿಸಿದರೂ, ಆವರಣದಲ್ಲಿ ಚರ್ಚೆಗಳು ಗುನುಗುಡುತ್ತಲೇ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.