ADVERTISEMENT

ಕೊಡುಗೈದಾನಿಯ ಹಾವಳಿ

ವಿಜಯ್ ಹೂಗಾರ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಶಾಲಾ ಮಕ್ಕಳಿಗೆ  ನೋಟ್‌ಬುಕ್ ಮತ್ತು ಸ್ಕೂಲ್‌ಬ್ಯಾಗ್, ದೇವಸ್ಥಾನಗಳ ಜೀರ್ಣೋದ್ಧಾರ , ಯುವಕ ಸಂಘಗಳಿಗೆ  ಸಂಗೀತ ಮತ್ತು ಕ್ರೀಡಾ ಸಲಕರಣೆಗಳು, ಹಬ್ಬಗಳಲ್ಲಿ ಮಹಿಳೆಯರಿಗೆ ಸೀರೆ ಮತ್ತು ಲಡ್ಡು, ಅಭಿಮಾನಿಗಳಿಗೆ ಟೀ ಶರ್ಟ್... ಇವೆಲ್ಲವೂ ಉಚಿತ. ನೀಡುತ್ತಿರುವ `ಕೊಡುಗೈ ದಾನಿ~ ಆರ್. ಶಂಕರ್. ಇವರು ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆ ಇಟ್ಟುಕೊಂಡಿರುವ ಉಮೇದುವಾರ.

 ಆರ್. ಶಂಕರ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮಹಾಪೌರರು. ಕಳೆದ ಚುನಾವಣೆಯಲ್ಲಿ ಬೆಂಗಳೂರಿನ ಸರ್ವಜ್ಞ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತವರು.

ರಾಣೆಬೆನ್ನೂರ ಕ್ಷೇತ್ರದಿಂದ ಚುನಾವಣೆ ಎದುರಿಸುವ ಉದ್ದೇಶ ಇಟ್ಟುಕೊಂಡು ಕಳೆದ ಒಂದು ವರ್ಷದಿಂದ ಇಲ್ಲಿಯೇ ವಾಸವಾಗಿದ್ದಾರೆ. ರಿಯಲ್ ಎಸ್ಟೇಟ್ ವಹಿವಾಟಿನ ಜತೆಯಲ್ಲಿ ಇವರು ಫ್ಲೆಕ್ಸ್ ಮುದ್ರಣದ ಉದ್ಯಮವನ್ನೂ ನಡೆಸುತ್ತಿದ್ದಾರೆ.  ಒಂದು ವರ್ಷದ ಹಿಂದೆ ಕುಟುಂಬ ಸಮೇತರಾಗಿ ಇಲ್ಲಿ ಬಂದು ನೆಲೆಸಿದ್ದಾರೆ.

ಈ ಒಂದು ವರ್ಷದಲ್ಲಿ ರಾಣೆಬೆನ್ನೂರ ತಾಲ್ಲೂಕಿನ ಗ್ರಾಮೀಣ ಶಾಲಾ ಮಕ್ಕಳಿಗೆ ಸುಮಾರು 2 ಲಕ್ಷ ನೋಟ್ ಬುಕ್ ಹಾಗೂ ಸ್ಕೂಲ್ ಬ್ಯಾಗ್ ವಿತರಿಸಿದ್ದಾರೆ. ಹಳ್ಳಿಗಳಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಒಂದರಿಂದ ಎರಡು ಲಕ್ಷ ರೂ.ವರೆಗೆ ದೇಣಿಗೆ ನೀಡಿದ್ದಾರೆ.
 
ಗಣೇಶ ಚತುರ್ಥಿ ಸಂದರ್ಭದಲ್ಲಿ ಗಣೇಶ ಪ್ರತಿಷ್ಠಾಪಿಸುವ ಯುವಕ ಸಂಘಗಳಿಗೆ 5ರಿಂದ 10 ಸಾವಿರ ರೂ.ವರೆಗೆ ದೇಣಿಗೆ ಹಾಗೂ ತಲಾ ಒಂದು ಯುವಕ ಸಂಘಕ್ಕೆ ತಮ್ಮ ಹೆಸರಿರುವ 20 ಟೀ ಶರ್ಟ್‌ಗಳನ್ನು ವಿತರಣೆ ಮಾಡಿದ್ದಾರೆ. ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ 10 ಸಾವಿರ ಲಡ್ಡುಗಳನ್ನು ಹಾಗೂ ರಂಜಾನ್ ಹಬ್ಬಕ್ಕೆ ಮಹಿಳೆಯರಿಗೆ ಸೀರೆಗಳನ್ನು ಹಂಚಿದ್ದಾರೆ.

ಜಿಲ್ಲೆಯ ಹಾಗೂ ರಾಣೆಬೆನ್ನೂರ ತಾಲ್ಲೂಕಿನ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸದೇ ಪಕ್ಷದ ಚಿಹ್ನೆ ಹಾಗೂ ಮುಖಂಡರ ಭಾವಚಿತ್ರ ಬಳಸಿ ಪ್ರಚಾರ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಕಾಂಗ್ರೆಸ್ ಕಳೆದ ಎರಡೂವರೆ ತಿಂಗಳ ಹಿಂದೆಯೇ ಆರ್.ಶಂಕರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.ಆದರೂ, ಆರ್. ಶಂಕರ್ ಮಾತ್ರ ಇದಾವುದಕ್ಕೆ ತಲೆ ಕೆಡಿಸಿಕೊಳ್ಳದೇ ದಾನ ಮಾಡುವ ಕಾರ್ಯದ ಮೂಲಕ ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.