ADVERTISEMENT

ಗ್ರಾಮಸಭೆ ರಾಜಕೀಯ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಏಳು ವರ್ಷಗಳ ಹಿಂದೆಯೇ ಮಂಜೂರಾದ ಆಶ್ರಯ ಮನೆಗಳ ನಿರ್ಮಾಣ ಇನ್ನೂ ಕುಂಟುತ್ತಾ, ತೆವಳುತ್ತಾ ಸಾಗಿದ್ದು, ಫಲಾನುಭವಿಗಳಲ್ಲಿ ಭ್ರಮನಿರಸನ ಉಂಟು ಮಾಡಿದೆ. `ಇಂದಲ್ಲ, ನಾಳೆ ಸೂರು ಸಿಕ್ಕೀತು~ ಎಂಬ ಆಶಾವಾದವೂ ಬರುಬರುತ್ತಾ ಅವರಲ್ಲಿ ಬತ್ತಿ ಹೋಗುತ್ತಿದೆ.

ನೆಲಬಿಟ್ಟು ಮೇಲೇಳದ ಕಟ್ಟಡಗಳು ಒಂದೆಡೆಯಾದರೆ, ಮೇಲಿಂದ ಮೇಲೆ ಫಲಾನುಭವಿಗಳ ಪಟ್ಟಿ ಬದಲಾವಣೆ ಆಗುತ್ತಿರುವುದು ಇನ್ನೊಂದೆಡೆ. ನೆರಳಿಲ್ಲದವರು ಹಾಗೇ ಬದುಕಿದ್ದರೆ, ಮನೆ ಇದ್ದವರಿಗೇ ಮತ್ತೆ `ಆಶ್ರಯ~ ಒಲಿಯುತ್ತಿದೆ ಎಂಬ ಆರೋಪ ವಿಭಾಗದ ಏಳೂ ಜಿಲ್ಲೆಗಳ  ವ್ಯಾಪಕವಾಗಿದೆ.

ಆಶ್ರಯ ಪಟ್ಟಿಯನ್ನು ತಯಾರಿಸುವಾಗ ಗ್ರಾಮಸಭೆಗಳಲ್ಲಿ ನಡೆಯುವ ರಾಜಕೀಯ, ಆ ಪಟ್ಟಿಗೆ ಜಾಗೃತ ಸಮಿತಿ ಒಪ್ಪಿಗೆ ನೀಡುವಲ್ಲಿ ವಿಳಂಬ, ದೊರೆಯದ ನಿವೇಶನ, ಆಶ್ರಯದ `ಭಾಗ್ಯ~ ಸಿಗದ ಉಳ್ಳವರ ಅಡ್ಡಗಾಲು ಮನೆಗಳ ನಿರ್ಮಾಣ ವಿಳಂಬ ಆಗಿರುವುದಕ್ಕೆ ಸಾಮಾನ್ಯ ಕಾರಣಗಳಾಗಿವೆ.

ಕೆಲವೆಡೆ ಶಾಸಕರ ಹಸ್ತಕ್ಷೇಪವೂ ಅತಿಯಾಗಿದ್ದರಿಂದ ಹತ್ತಾರು ಗ್ರಾಮಗಳಲ್ಲಿ ಇನ್ನೂ `ಆಶ್ರಯ~ದ ನೆರಳೂ ಬಿದ್ದಿಲ್ಲ.  ವಿಜಾಪುರ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ನಿರಾಶ್ರಿತರಿದ್ದಾರೆ.

ಬಡತನ ಹಾಗೂ ಮಹಾಪೂರದ ಅಡಕತ್ತರಿಯಲ್ಲಿ ಸಿಕ್ಕು ನಲುಗಿರುವ ಇಲ್ಲಿನ ಜನಕ್ಕೆ ಆಶ್ರಯವಾಗಲಿ, ಆಸರೆಯಾಗಲಿ ಪೂರ್ಣ ಪ್ರಮಾಣದಲ್ಲಿ ಸೂರು ಒದಗಿಸಲು ವಿಫಲವಾಗಿವೆ. ಮಹಾಪೂರದ ಬಳಿಕ ಬರದ ಹೊಡೆತಕ್ಕೆ ಸಿಕ್ಕಿ ನಲುಗಿರುವ ವಿಜಾಪುರ ಜಿಲ್ಲೆಯಲ್ಲಿ ಈಗ ಆಶ್ರಯ ಮನೆಗಳ ನಿರ್ಮಾಣಕ್ಕೆ ನೀರಿನ ಸಮಸ್ಯೆ ಎದುರಾಗಿದೆ.

ಭೌಗೋಳಿಕವಾಗಿ ದೊಡ್ಡ ಜಿಲ್ಲೆ ಎನಿಸಿರುವ ಬೆಳಗಾವಿ ಜಿಲ್ಲೆಯಲ್ಲಿ 80 ಸಾವಿರಕ್ಕೂ ಅಧಿಕ ಆಶ್ರಯ ಮನೆಗಳು ನಿರ್ಮಾಣವಾಗಿವೆ ಎನ್ನುವ ಮಾಹಿತಿ ದಾಖಲೆಗಳಿಂದ ಸಿಗುತ್ತದೆ. ಆದರೆ, ಹನುಮನ ಬಾಲದಂತೆ ಬೆಳೆದ ಮನೆ ಆಕಾಂಕ್ಷಿಗಳ ಪಟ್ಟಿ ಕರಗದಂತೆ ಹಾಗೇ ಉಳಿದುಕೊಂಡಿದೆ.
 
ಕಾರವಾರ ಜಿಲ್ಲೆಗೆ ಬೇರೊಂದು ರೀತಿಯ ಸಮಸ್ಯೆ ಆಶ್ರಯ ಮನೆ ಕಟ್ಟಲು ತಡೆಯೊಡ್ಡಿದೆ. ಕಲ್ಲು ಕ್ವಾರಿಗಳ ಕಾರ್ಯಾಚರಣೆ ಮೇಲೆ ಕೋರ್ಟ್ ನಿಷೇಧ ಹೇರಿದ್ದರಿಂದ ಮನೆ ನಿರ್ಮಾಣಕ್ಕೆ ಕಲ್ಲು ಸಿಗುತ್ತಲೇ ಇಲ್ಲ ಎನ್ನುವ ನೆಪವೊಡ್ಡಿ ಅಲ್ಲಿಯ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.


ಹಲವು ಗ್ರಾಮಗಳಲ್ಲಿ ಮನೆ ನಿರ್ಮಾಣವಾಗುವ ಮುನ್ನವೇ ಫಲಾನುಭವಿಗಳು ನಿಧನ ಹೊಂದಿದ್ದು, ವಾರಸುದಾರಿಕೆಗೆ ಮಕ್ಕಳಲ್ಲಿ ಪೈಪೋಟಿ ಬಿದ್ದಿದೆ. ಹೀಗಾಗಿ ಹಳ್ಳಿ ಪರಿಸರದಲ್ಲಿ ಸಾಮಾಜಿಕ ಸಮಸ್ಯೆಗೂ ಈ ಸೂರು ಕಾರಣವಾಗಿದೆ.
 
ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರು ಮಾತ್ರ ಈ ಯೋಜನೆ ಪ್ರಯೋಜನೆ ಪಡೆದುಕೊಳ್ಳಬೇಕು ಎಂಬ ಸ್ಪಷ್ಟ ನಿಯಮವಿದ್ದರೂ ಸೂರಿದ್ದವರು, ರಾಜಕಾರಣಿಗಳ ಹಿಂಬಾಲಕರು ದೊಡ್ಡ ಪ್ರಮಾಣದಲ್ಲೇ `ಆಶ್ರಯ~ದೊಳಗೆ ನುಸುಳಿದ್ದಾರೆ. ಸ್ಥಳೀಯ ಶಾಸಕರ ಪ್ರಭಾವ ಈ ನುಸುಳುವಿಕೆಯಲ್ಲಿ ಎದ್ದು ಕಾಣುತ್ತದೆ.

ಆಶ್ರಯದ ಲಾಭ ಪಡೆಯಲು ವಿವಿಧ ಪ್ರಮಾಣ ಪತ್ರಗಳನ್ನು ಬೇರೆ ಬೇರೆ ಇಲಾಖೆಗಳಿಂದ ತರಬೇಕು. `ಎಲ್ಲಿಯೂ ಹಣ ಬಿಚ್ಚದೆ ಕೆಲಸವೇ ಆಗುವುದಿಲ್ಲ~ ಎನ್ನುವುದು ಬಹುತೇಕ ಫಲಾನುಭವಿಗಳ ಅಳಲು. ಹುಬ್ಬಳ್ಳಿಯಲ್ಲಿ ನಿರ್ಮಾಣವಾದ ಆಶ್ರಯ ಮನೆಗಳನ್ನು ಫಲಾನುಭವಿಗಳ ಬದಲಾಗಿ ಬೇರೆಯವರು ಸ್ವಾಧೀನಕ್ಕೆ ಪಡೆದು ವಾಸವಾಗಿದ್ದಾರೆ ಎಂಬ ದೂರುಗಳಿವೆ.

ಆಶ್ರಯ ಯೋಜನೆ ಅಡಿಯಲ್ಲಿ ಲಕ್ಷಾಂತರ ಮನೆಗಳ ಹಂಚಿಕೆಯಾಗಿದ್ದನ್ನು ದಾಖಲೆಗಳು ಖಚಿತಪಡಿಸುತ್ತವೆ. ಹೀಗಿದ್ದೂ ಈಚೆಗೆ ಆರಂಭಿಸಲಾದ ಬಸವ ವಸತಿ, ಇಂದಿರಾ ಆವಾಸ್, ಅಂಬೇಡ್ಕರ್ ಆವಾಸ್ ಸೇರಿದಂತೆ ಹಲವು ಯೋಜನೆಗಳಿಗೆ ಲಕ್ಷಾಂತರ ಅರ್ಜಿಗಳು ಬರುತ್ತಿವೆ. ನಿರ್ವಸಿತರ ಸಂಖ್ಯೆಗೂ, ಹಂಚಿಕೆಯಾದ ಮನೆಗಳಿಗೂ, ಬಂದ ಅರ್ಜಿಗಳಿಗೂ ತಾಳೆ ಆಗುತ್ತಿಲ್ಲ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT