ADVERTISEMENT

ಮರುಪಾವತಿ ತಾಕತ್ತು ಬೆಳೆಸಿ

ಕೃಷಿ ಸಾಲ ಮನ್ನಾ ಬೇಕೇ? ಬೇಡವೇ?

ಕೆ.ಎಸ್‌.ಪುಟ್ಟಣ್ಣಯ್ಯ (ನಿರೂಪಣೆ: ಬಿ.ಜೆ.ಧನ್ಯಪ್ರಸಾದ್)
Published 2 ಜನವರಿ 2015, 19:30 IST
Last Updated 2 ಜನವರಿ 2015, 19:30 IST

ಕೃಷಿ ಪ್ರಧಾನವಾದ ದೇಶ ಭಾರತದಲ್ಲಿ ಸಂಘಟ­ನೆಯ ಕೊರತೆ ಹಾಗೂ ಸರ್ಕಾರದ ಅಸಮರ್ಪಕ ನೀತಿ­ಗಳಿಂದಾಗಿ ರೈತರು ಬಹಳಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಸಾಲ ಮರುಪಾವತಿ ಸಾಮರ್ಥ್ಯವನ್ನು ಸೃಷ್ಟಿಸದೇ ಇರುವು­ದರಿಂದ ಅನ್ನದಾತರ ಸಾಲದ ಭಾರ ಹೆಚ್ಚಾಗಿದೆ. ಸರ್ಕಾರದ ಸಾಲ ಮನ್ನಾ ಯೋಜನೆಗಳಿಂದ ರೈತರಿಗೆ ಉಪಯೋಗವಾಗಿಲ್ಲ ಎಂಬುದು ಶುದ್ಧ ಸುಳ್ಳು. ಇಂಥ ಯೋಜನೆಗಳಿಂದ ಶೇಕಡ 90ರಷ್ಟು ರೈತರು ಋಣಮುಕ್ತರಾಗಲು ಅನುಕೂಲವಾಗಿದೆ.

ಆದರೆ ರೈತರ ಸಾಲವನ್ನು ಯಾಕೆ ಮನ್ನಾ  ಮಾಡಲಾಗುತ್ತಿದೆ ಎಂಬುದನ್ನು ಯಾರೂ ಈವರೆಗೆ ತಿಳಿಸಿಲ್ಲ. ಪ್ರಕೃತಿ ವಿಕೋಪದ ಕಾರಣಕ್ಕೋ, ಬೆಲೆ ನೀತಿ ಇಲ್ಲದೆ ರೈತರು ಆರ್ಥಿಕವಾಗಿ ದುರ್ಬಲರಾಗಿ­ರುವುದಕ್ಕೋ ಅಥವಾ ರೈತರ ವೋಟು ಪಡೆ­ಯು­ವುದಕ್ಕೋ ಎಂಬ ನಿರ್ದಿಷ್ಟ ಕಾರಣವನ್ನು ತಿಳಿಸಬೇಕು. ಆಹಾರ, ಉದ್ಯೋಗ, ವ್ಯಾಪಾರ ಭದ್ರತೆ, ನಿರುದ್ಯೋಗ ನಿವಾರಣೆ ಮತ್ತು ಬೊಕ್ಕಸಕ್ಕೆ ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಕೃಷಿ ಕ್ಷೇತ್ರಕ್ಕೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ದೇಶದಲ್ಲಿ ರೈತರಿಗೆ ಒಟ್ಟು ₨ 7.5 ಲಕ್ಷ ಕೋಟಿ ಸಾಲ ವಿತರಿಸಲಾಗಿದೆ. ಒಟ್ಟು 20 ಕೋಟಿ ರೈತ ಕುಟುಂಬಗಳಿವೆ. ಸಾಲ ಸೌಲಭ್ಯ ಪಡೆದುಕೊಂಡ ಕೃಷಿಕ ಆರ್ಥಿಕವಾಗಿ ಲಾಭ ಗಳಿಸಲು ಅನುಕೂಲವಾದಾಗ ಸಾಲ ನೀತಿಯ ಉದ್ದೇಶ ಸಫಲವಾಗುತ್ತದೆ. ಬ್ಯಾಂಕುಗಳು ಸಂಕುಚಿತ ದೃಷ್ಟಿಕೋನದ ಸಾಲ ಪದ್ಧತಿ ಬದಲಿಗೆ ಹೊಸ ವಿಧಾನವನ್ನು ಅನುಸರಿಸಬೇಕು. ಸಾಲ ಮನ್ನಾ ಯೋಜನೆ 

ರೂಪಿಸುವಾಗ ಶೇಕಡ ಎಷ್ಟು ಮಂದಿಗೆ ಅನುಕೂಲವಾಗುತ್ತದೆ ಎಂಬುದನ್ನು ಸರ್ಕಾರ ಲೆಕ್ಕ ಹಾಕಬೇಕು.
 ಪ್ರಕೃತಿಯನ್ನೇ ಅವಲಂಬಿಸಿ ಬದುಕಬೇಕಿರುವ ರೈತರು ಉತ್ತಮ ಬೆಳೆ ಬೆಳೆದರೂ ಸೂಕ್ತ ಮಾರು­ಕಟ್ಟೆ ವ್ಯವಸ್ಥೆ ಕೊರತೆಯಿಂದಾಗಿ ನಷ್ಟ ಅನುಭವಿ­ಸಬೇಕಾದ ಸ್ಥಿತಿ ಇದೆ. ಸಂಕುಚಿತ ಸಾಲ ಪದ್ಧತಿಯಡಿ  ಯಾವುದಾದರೂ ಒಂದು ಉದ್ದೇಶಕ್ಕೆ  ಮಾತ್ರ ಸಾಲ ನೀಡಲಾಗುತ್ತಿದೆ. ಸಮಗ್ರ ಬದುಕನ್ನು ರಕ್ಷಣೆ ಮಾಡುವ ಐದಾರು ಮೂಲಗಳಿಗೆ ಸಾಲ ಸೌಕರ್ಯ ಒದಗಿಸಲು ಕ್ರಮ ಕೈಗೊಂಡರೆ ಅನ್ನದಾತರು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಸಣ್ಣ ಹಿಡುವಳಿದಾರರು ಹೆಚ್ಚು ಮಂದಿ ಇದ್ದಾರೆ. ಇವರಿಗೆ ಒಂದು ಲಕ್ಷ ರೂಪಾಯಿ ಸಾಲ ತೆಗೆದುಕೊಳ್ಳುವ ಸಾಮರ್ಥ್ಯದ ‘ಎಟಿಎಲ್‌’ ಕಾರ್ಡ್‌ (ಎನಿ ಟೈಮ್‌ ಲೋನ್‌) ಸೌಕರ್ಯ ಕಲ್ಪಿಸ­ಬೇಕು. ಉಳುಮೆ ಖರ್ಚು ಮತ್ತು ಜೀವನ ನಿರ್ವ­ಹಣೆ ವೆಚ್ಚ ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಿ, ಸಾಲ ಮರುಪಾವತಿಗೆ ಅನುಕೂಲ ಕಲ್ಪಿಸಬಹುದು.  ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದರೆ ಮುಂದಿನ 10 ವರ್ಷಗಳಲ್ಲಿ ಆಹಾರ ಭದ್ರತೆ ಕುಸಿಯಲಿದೆ. 2050ರ ವೇಳೆಗೆ 40 ಕೋಟಿ ಟನ್‌ ಆಹಾರ ಬೇಕಾಗುತ್ತದೆ.

ಕರ್ನಾಟಕದಲ್ಲಿ ಒಟ್ಟು ಭೂಮಿ ಉಳುಮೆಗೆ ಒಂದು ಬಾರಿಗೆ  ₨ 1,500 ಕೋಟಿ (ಒಂದು ವರ್ಷ­ದಲ್ಲಿ 6ರಿಂದ 7 ಬಾರಿ ಭೂಮಿ ಉಳುಮೆ ಮಾಡ­ಲಾಗುತ್ತದೆ), ನೇಗಿಲ ಗುಳ ಕಟ್ಟಲು ವರ್ಷಕ್ಕೆ ₨ 470 ಕೋಟಿ ಬೇಕು, ಲಾಳ ಕಟ್ಟಿಸಲು ಒಂದು ಬಾರಿಗೆ  

ಸುಮಾರು ₨ 1,200 ಕೋಟಿ ಬೇಕು (ವರ್ಷದಲ್ಲಿ  ನಾಲ್ಕು ಬಾರಿ ಲಾಳ ಕಟ್ಟಿಸ­ಲಾಗುತ್ತದೆ) ಇದೆಲ್ಲ ಎಷ್ಟು ಮಂದಿ ಆರ್ಥಿಕ ತಜ್ಞರಿಗೆ ತಿಳಿದಿದೆ? ಅತಿವೃಷ್ಟಿ, ಅನಾವೃಷ್ಟಿ ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ಹಾನಿ­ಗಳಿಗೆ ಗುಣಾತ್ಮಕ ಪರಿಹಾರ ಇಲ್ಲದಿರುವುದು, ಬ್ಯಾಂಕಿಂಗ್‌ ಮತ್ತು ಖಾಸಗಿಯವರ ಸಾಲ ತೀರಿಸಲಾಗದ ಹತಾಶ ಸ್ಥಿತಿ ರೈತರ ಆತ್ಮಹತ್ಯೆಗೆ ಕಾರಣವಾಗಿದೆ.

ಇವುಗಳ ಬಗ್ಗೆ ಈವರೆಗೆ ಸಂಸತ್ತಿನಲ್ಲಿ ಸೂಕ್ತ ಚರ್ಚೆಯೇ ನಡೆದಿಲ್ಲ. ಅತಿವೃಷ್ಟಿ, ಅನಾ­ವೃಷ್ಟಿಯ ಸಮರ್ಪಕ ನಿರ್ವಹಣೆಗೆ ಸಂಪನ್ಮೂಲವನ್ನು ಸಂಗ್ರಹಿಸಿಲ್ಲ. ರೈತರ ಆತ್ಮಹತ್ಯೆ­ಗಳಿಗೆ ಕಾರಣ ತಿಳಿಯಲು ಈವರೆಗೆ ಸತ್ಯ­ಶೋಧನಾ ಸಮಿತಿ­ಯನ್ನೇ ರಚಿಸದಿರುವುದು ವಿಪರ್ಯಾಸ. ದೇಶದಲ್ಲಿ ಮಳೆ ಆಶ್ರಯದಲ್ಲಿ ಶೇ 65ರಷ್ಟು ಕೃಷಿಕರು ವ್ಯವಸಾಯ ಮಾಡುತ್ತಿದ್ದಾರೆ. ಬರಗಾಲ ನಿಭಾಯಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಗ್ರ ನೀತಿಯನ್ನು ರೂಪಿಸಿಲ್ಲ.

ಬರ ಪರಿಸ್ಥಿತಿ ಉಂಟಾದಾಗ ರೈತರು ನಗರಗಳಿಗೆ ಗುಳೆ ಹೋಗುವ ಪರಿಪಾಠ ಬೆಳೆದಿದೆ. ಒಣ ಬರ, ಹಸಿ ಬರ, ಬಾಗಾಯ್ತಿ ಬರ (ಅಕಾಲಿಕ ಬೆಳೆ ನಾಶ) ಇತ್ಯಾದಿ ವಿಧಗಳ ಬಗ್ಗೆ ಕಂದಾಯ ಅಧಿಕಾರಿಗಳು, ರಾಜ­ಕಾರ­ಣಿಗಳಿಗೆ ತಿಳಿವಳಿಕೆ ಇಲ್ಲ. ಇಂಥವರಿಂದ ಬರಗಾಲ ಸಮಸ್ಯೆಗೆ ಏನು ಪರಿಹಾರ ನಿರೀಕ್ಷಿಸಲು ಸಾಧ್ಯ? ಸರ್ಕಾರಗಳು ‘ವೋಟ್‌ ಬ್ಯಾಂಕ್‌’ ದಾಳವಾಗಿ ಸಾಲ ಮನ್ನಾ ಯೋಜನೆಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪಗಳನ್ನು ಸಂಪೂರ್ಣವಾಗಿ ಒಪ್ಪಿ­ಕೊಳ್ಳಲು ಸಾಧ್ಯ ಇಲ್ಲ. ಇದರಲ್ಲಿ ಶೇ 20ರಷ್ಟು ಸತ್ಯ ಇರಬಹುದು.

ADVERTISEMENT

ಕೈಗಾರಿಕೆಗಳು ರೋಗಗ್ರಸ್ತವಾದರೆ ಅವುಗಳಿಗೆ ಪುನರ್‌ಸಾಲ ನೀಡಿ ಕಾರ್ಮಿಕರು ಮತ್ತು ಕಾರ್ಖಾನೆಗಳನ್ನು ರಕ್ಷಿಸಬೇಕು ಎಂಬ ನಿಯಮವೇ ಇದೆ. ಇಂಥದ್ದೇ ನಿಯಮವನ್ನು ಕೃಷಿ ಕ್ಷೇತ್ರಕ್ಕೂ ಅನ್ವಯಿಸಬೇಕು. ಸ್ವಾತಂತ್ರ್ಯ ಬಂದು ಆರು ದಶಕಗಳು ಸಂದರೂ ಸಮಗ್ರ ಕೃಷಿ ನೀತಿಯನ್ನು ರೂಪಿಸಲು ಸಾಧ್ಯವಾಗಿಲ್ಲ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಕೇಳಿದರೆ ‘ಕೃಷಿ ರಾಜ್ಯಕ್ಕೆ ಸಂಬಂಧಿಸಿದ್ದು’ ಎಂದು, ರಾಜ್ಯ ಸರ್ಕಾರವನ್ನು ಕೇಳಿದರೆ ‘ಅದು ಕೇಂದ್ರದ ಕೆಲಸ’ ಎಂದು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತವೆ.

ಜೋಳದ ಬೆಲೆ ಕ್ವಿಂಟಲ್‌ಗೆ ₨ 1,310 ಇದ್ದದ್ದು, ಈಗ ₨ 900ಕ್ಕೆ ಕುಸಿದಿದೆ. ಜೋಳದಿಂದ 100 ಉಪ ಉತ್ಪನ್ನಗಳು ತಯಾರಾಗುತ್ತವೆ. ಅಲ್ಲದೆ, ಜೋಳವು ಕೋಳಿ ಉದ್ಯಮದ  ₨ 60 ಸಾವಿರ ಕೋಟಿ, ಕ್ಷೀರೋದ್ಯಮದ ₨ 25 ಸಾವಿರ ಕೋಟಿ ವಹಿವಾಟಿಗೆ ಕಾರಣವಾಗಿದೆ. ಆದರೂ ಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿಪಡಿಸಿಲ್ಲ.

ಕಬ್ಬು 26 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ, ಅಲ್ಲದೆ ಕಬ್ಬಿನಿಂದ 47 ಉಪ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಕಬ್ಬಿಗೆ ಇಂದಿಗೂ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಆಗಿಲ್ಲ. ಬೆಳೆಗಳಿಗೆ ಸರಿಯಾದ ಬೆಲೆ ನಿಗದಿ ಮಾಡದಿರುವುದು ರೈತ ಸಮುದಾಯದ ನೆಮ್ಮದಿ ಕೆಡಿಸಿದೆ.

ರೈತರಿಗೆ ಸಾಲ ವಿತರಿಸುವ ಮುನ್ನ ಬ್ಯಾಂಕ್‌­ನವರು ಸರ್ಕಾರ ದೊಂದಿಗೆ ಚರ್ಚಿಸಿ ಬೆಳೆಗಳಿಗೆ ಬೆಲೆ ನಿಗದಿ ಮಾಡಲು ತಿಳಿಸಬೇಕು.
ಬ್ಯಾಂಕುಗಳು ಈ ರೀತಿ ಸಹಕರಿಸಿದಾಗ ರೈತರಿಗೆ ಸಾಲ ಮರುಪಾವತಿಗೆ ಹುಮ್ಮಸ್ಸು ಮೂಡುತ್ತದೆ. ಸಾಲ ಮರುಪಾವತಿ­ಸದವರಿಗೆ ನೋಟಿಸ್‌ ನೀಡುವುದು, ಮನೆ ಜಪ್ತಿ ಮಾಡುವುದರ ಬದಲು ಸಾಲ ಕಟ್ಟುವಂತೆ ಅವರ ಮನವೊಲಿಸಬೇಕು. ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ನಿರ್ಧಾರಕ್ಕೆ ಬರುವ ಮುನ್ನ ಕೌನ್ಸೆಲಿಂಗ್‌ ಮೂಲಕ ಅವರ ಮನಪರಿವರ್ತನೆ ಮಾಡಬೇಕು.

ತರಕಾರಿ, ಆಹಾರ ಪದಾರ್ಥಗಳ ಬೆಲೆ ಏರಿದಾಗ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಆದರೆ, ಇವುಗಳ ಬೆಲೆ ತೀವ್ರ ಕುಸಿದಾಗ ಯಾರೂ ರೈತರ ಬೆಂಬಲಕ್ಕೆ ಬರುತ್ತಿಲ್ಲ. ರೈತ ಸಮುದಾಯ ಅಸಂಘಟಿತ ವಲಯವಾಗಿದೆ. ರಾಷ್ಟ್ರ ಮಟ್ಟದಲ್ಲಿ ಈ ಸಮುದಾಯದ ಒಗ್ಗೂಡುವಿಕೆಗೆ ಭಾಷೆ ಅಡ್ಡಿ­ಯಾಗಿದೆ. ಗ್ರಾಹಕರು ಮತ್ತು ರೈತರು ಇಬ್ಬರನ್ನೂ ಗಮನದಲ್ಲಿ ಇಟ್ಟುಕೊಂಡು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೃಷಿ ಕ್ಷೇತ್ರಕ್ಕೆ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಪರಿಣತರ ಜೊತೆಗೆ ಪ್ರಾಯೋಗಿಕ ಜ್ಞಾನ ಹೊಂದಿರುವ ಕೃಷಿಕರನ್ನೂ ಒಳಗೊಳ್ಳಬೇಕು.

ಖಾಸಗಿ ಸಾಲ ಈಗ ಬಹಳಷ್ಟು ಬೆಳೆದಿದೆ. ಇದರಿಂದ ಬಡ ರೈತರು ಸಂಪೂರ್ಣ ನಾಶವಾಗುವ ಅಪಾಯ ಇದೆ. ಆದ್ದರಿಂದ ಬ್ಯಾಂಕುಗಳು ವಿವಿಧ ಯೋಜನೆಗಳಡಿ ಲಭ್ಯ ಇರುವ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು.

ರೈತರಿಗೆ ನೀಡಿದ ಸಾಲದ ಹಣ ಸದ್ವಿನಿಯೋಗ ಆಗುತ್ತಿಲ್ಲ ಎಂಬ ಮಾತಿನಲ್ಲಿ ಹುರುಳಿಲ್ಲ. ರೈತರ ಮನಶಾಸ್ತ್ರವನ್ನು ಅಧ್ಯಯನ ಮಾಡಬೇಕು. ಸಾಲ ನೀತಿಯ ಪುನರ್‌ ವಿಮರ್ಶೆ ಆಗಬೇಕು. ರೈತ ಕುಟಂಬದಲ್ಲಿನ ಎಲ್ಲ ಸದಸ್ಯರಿಗೂ ಉದ್ಯೋಗ ಸೃಷ್ಟಿಸಿಕೊಳ್ಳುವ, ವರ್ಷಪೂರ್ತಿ ವಿವಿಧ ಕಸುಬುಗಳಲ್ಲಿ (ಹೈನುಗಾರಿಕೆ, ಕುರಿ–ಕೋಳಿ ಸಾಕಣೆ ಇತ್ಯಾದಿ) ತೊಡಗಿಕೊಳ್ಳಲು ಅನುಕೂಲವಾಗು­ವಂಥ ಸಾಲ ನೀತಿ ರೂಪಿಸಬೇಕಾದ ಅಗತ್ಯ ಇದೆ.  

ಕೃಷಿಯಿಂದ ಸರ್ಕಾರಕ್ಕೆ ಸಂದಾಯವಾಗುವ ಅಪ್ರತ್ಯಕ್ಷ ತೆರಿಗೆ ಬಗ್ಗೆ ಯಾವುದೇ ದಾಖಲೆ ಇಲ್ಲ. ಬಹುತೇಕ ಉದ್ಯಮಗಳಿಗೆ (ಹೋಟೆಲ್‌, ಬಟ್ಟೆ,  ತಂಬಾಕು ಮೊದಲಾದವು) ಕೃಷಿಯೇ ಆಸರೆ­ಯಾಗಿದೆ. ಸಾಲ ವಿತರಣೆ ಮತ್ತು ಮರುಪಾವತಿಯ ಸಾಧಕ– ಬಾಧಕಗಳ ಬಗ್ಗೆ ರೈತ ಸಂಘಟನೆ­ಗಳೊಂದಿಗೆ ಚರ್ಚೆ ನಡೆಸಬೇಕು.

ಕೃಷಿ ಸಂಬಂಧಿತ ಮಾರುಕಟ್ಟೆ, ಉದ್ಯಮಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗಬೇಕು. ಸಮಗ್ರ ನೀರಾವರಿಗೆ ಒತ್ತು ಕೊಡಬೇಕು. ಸಂಕುಚಿತ ಸಾಲ ಪದ್ಧತಿ ನಿಲ್ಲಿಸಿ, ಪ್ಯಾಕೇಜ್‌ ಸಾಲ ಸೌಲಭ್ಯಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು. ಸಾಲ ವಿತರಣೆಗೆ ಅನುಸರಿಸುವ ವಿಧಾನವನ್ನು ಸರಳಗೊಳಿಸಬೇಕು.

ದೇಶದಲ್ಲಿ ಕೃಷಿ ವೆಚ್ಚ ಮತ್ತು ನಷ್ಟದ ಬಗ್ಗೆ ಮಾಹಿತಿ ನೀಡುವ  ಪುಸ್ತಕಗಳೇ ಇಲ್ಲ. ಕೃಷಿ ಕ್ಷೇತ್ರಕ್ಕೆ ಸೂಕ್ತ ನೀತಿ ರೂಪಿಸಿ ರೈತರ ಗುಳೆಯನ್ನು ತಪ್ಪಿಸಬೇಕು. ಕಡಿಮೆ ಜಮೀನಿನಲ್ಲಿ ಬಹು ಬೆಳೆ ಬೆಳೆಯುವ ವಿಧಾನಗಳನ್ನು ಸಣ್ಣ ಹಿಡುವಳಿದಾರರಿಗೆ ತಿಳಿಸಿಕೊಟ್ಟು, ಅವರನ್ನು ಆರ್ಥಿಕ ಸ್ವಾವಲಂಬಿ­ಗಳಾ­ಗಿಸಬೇಕು. ಕೃಷಿಯನ್ನು ಲಾಭದಾಯಕ ಆಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದರೆ ರೈತರ ಸಮಸ್ಯೆಗಳು ತಾನೇ ತಾನಾಗಿ ಬಗೆಹರಿಯುತ್ತವೆ.

'ರೈತರ ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿಯಲು ಈವರೆಗೆ ಸತ್ಯಶೋಧನಾ ಸಮಿತಿಯನ್ನೇ ರಚಿಸದೆ ಇರುವುದು ನಿಜಕ್ಕೂ ವಿಪರ್ಯಾಸ.'

'ಕೃಷಿ ವಲಯಕ್ಕೆ ಸಾಲ ನೀಡುವುದರಿಂದ ಪ್ರಯೋಜನ ಇಲ್ಲ ಎಂಬ ಅಭಿಪ್ರಾಯ ‘ಅನ್ನವನ್ನೇ ಯಾರೂ ಊಟ ಮಾಡು­ವುದು ಬೇಡ’ ಎಂದು ಹೇಳಿದಂತೆ.'

'ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ನಿರ್ಧಾರಕ್ಕೆ ಬರುವ ಮುನ್ನ, ಕೌನ್ಸೆಲಿಂಗ್‌ ಮೂಲಕ ಅವರ ಮನಪರಿವರ್ತನೆ ಮಾಡಬೇಕು.'

(ಲೇಖಕರು ಶಾಸಕರು ಮತ್ತು ರೈತ ಮುಖಂಡರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.