ADVERTISEMENT

ಮರೆತ ಆದ್ಯತೆ

ಪಿ.ವಿ.ಪ್ರವೀಣ್‌ ಕುಮಾರ್‌
Published 9 ನವೆಂಬರ್ 2012, 19:30 IST
Last Updated 9 ನವೆಂಬರ್ 2012, 19:30 IST
ಮರೆತ ಆದ್ಯತೆ
ಮರೆತ ಆದ್ಯತೆ   

ಮೂಲಸೌಕರ್ಯ ವಂಚಿತ ಪ್ರದೇಶಗಳ ಜನರಲ್ಲಿ ಮಡುಗಟ್ಟಿದ ಆಕ್ರೋಶವನ್ನೇ ದಾಳವನ್ನಾಗಿ ಬಳಸಿಕೊಂಡು ನಕ್ಸಲರು ಪಶ್ಚಿಮ ಘಟ್ಟದ ದಟ್ಟಾರಣ್ಯ ಪ್ರದೇಶಗಳ ತಪ್ಪಲಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದಾರೆ.

ನಕ್ಸಲರ ಚಟುವಟಿಕೆ ಕಾಣಿಸಿಕೊಂಡು ದಶಕಗಳೇ ಕಳೆದಿದ್ದರೂ ಸರ್ಕಾರಕ್ಕೆ  ಸಮಸ್ಯೆ ಅರ್ಥವಾಗಿರಲೇ ಇಲ್ಲ.  ಅದು ಬಂದೂಕಿನ ಮೂಲಕವೇ ನಕ್ಸಲರ ಚಟುವಟಿಕೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಾ ಬಂದಿದೆ.

2003ರಲ್ಲಿ ನಕ್ಸಲ್ ಪೀಡಿತ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಲಾಯಿತಾದರೂ ಆ ಹಣ ಬಳಕೆಯಾಗಿದ್ದು ರಾಜಕೀಯ ಲಾಭಕ್ಕೆ. `ಜನಪ್ರತಿನಿಧಿಗಳು ನಕ್ಸಲ್ ಪ್ಯಾಕೇಜನ್ನು ತಮ್ಮ ಅನುಕೂಲದ ಕಾಮಗಾರಿಗಳಿಗಾಗಿ ಖರ್ಚು ಮಾಡಿದ್ದರು. ಕಾಡಿನಂಚಿನಲ್ಲಿ ಯಾವುದೇ ಕಾಮಗಾರಿ ನಡೆದರೂ ಅರಣ್ಯ ಇಲಾಖೆ ತಗಾದೆ ತೆಗೆಯುತ್ತಿತ್ತು.

ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೂ ಈ ಅನುದಾನ ಬಳಕೆಗೆ ಅಡ್ಡಿಯಾಗಿತ್ತು. ಹಾಗಾಗಿ ಮಂಜೂರಾದ ಅನುದಾನವನ್ನೂ ಬಳಸಲಾಗದ ಸ್ಥಿತಿ ಘಟ್ಟ ತಪ್ಪಲಿನ ಕುಗ್ರಾಮಗಳಲ್ಲಿತ್ತು~ ಎಂದು ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಬದಲಾದ ಕಾರ್ಯಕ್ರಮ: ಕೊನೆಗೂ ಎಚ್ಚೆತ್ತ ಸರ್ಕಾರ 2012ರಲ್ಲಿ ನಕ್ಸಲ್ ಪ್ಯಾಕೇಜ್ ಹೆಸರನ್ನು ಬದಲಾಯಿಸಿ, `ದುರ್ಗಮ ಮತ್ತು ಒಳನಾಡು ಪ್ರದೇಶ ಅಭಿವೃದ್ಧಿ~ ಹೆಸರಿನಲ್ಲಿ ನಕ್ಸಲ್ ಸಮಸ್ಯೆ ಇರುವ ಜಿಲ್ಲೆಗಳಿಗೆ 5 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಹಾಗೂ ಉಡುಪಿ ಜಿಲ್ಲೆಗೆ ತಲಾ 5 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ.

ಈ ಅನುದಾನ ನೈಜ ಉದ್ದೇಶಕ್ಕೆ ಬಳಕೆ ಆಗಬೇಕು ಎಂಬ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕ್ರಿಯಾಯೋಜನೆ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ವರಿಷ್ಠಾಧಿಕಾರಿಗಳೂ ಈ ಸಮಿತಿಯಲ್ಲಿರುವುದರಿಂದ ಕಾಮಗಾರಿ ಅನುಷ್ಠಾನದಲ್ಲಿ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಗೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.

`ವಿಶೇಷ ಅನುದಾನದಿಂದ ಘಟ್ಟ ತಪ್ಪಲಿನ ಕುಗ್ರಾಮಗಳಲ್ಲಿ ರಸ್ತೆಗಳು, ಕಿರು ಸೇತುವೆಗಳು ಕಾಲುಸಂಕಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು ರೂ 3 ಕೋಟಿ ಮೊತ್ತದ ಕ್ರಿಯಾ ಯೋಜನೆ ರಚಿಸಲಾಗಿದೆ~ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಸರ್ಕಾರದ ಈ ಪ್ರಯತ್ನದ ಬಗ್ಗೆ ಕೆಲವು ಕುಗ್ರಾಮಗಳ ಜನತೆ ತೃಪ್ತರಾದಂತಿಲ್ಲ. `ಜಿಲ್ಲಾಡಳಿತ ಒಂದೆರಡು ಕಡೆ ಜನಸಂಪರ್ಕ ಸಭೆ ನಡೆಸಿ ಪ್ರಚಾರ ಗಿಟ್ಟಿಸಿದೆ.

ಆದರೆ ಘಟ್ಟ ತಪ್ಪಲಿನ ನಿವಾಸಿಗಳ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ. ನಕ್ಸಲರು ಪ್ರವೇಶವಾದ ಬಳಿಕ ಕೆಲವು ಮನೆಗಳಿಗೆ ಸೌರದೀಪಗಳ ವಿತರಣೆ ಮತ್ತು ಮನೆಗಳ ದುರಸ್ತಿಗೆ ಅನುದಾನ ನೀಡ್ದ್ದಿದು ಬಿಟ್ಟರೆ ಬೇರಾವ ಅಭಿವೃದ್ಧಿಯೂ ಆಗಿಲ್ಲ.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾದರೂ, ಅರಣ್ಯ ಇಲಾಖೆ ಕಾಮಗಾರಿಗೆ  ಅಡ್ಡಿಪಡಿಸುತ್ತಿದೆ~ ಎಂದು ಸಮಸ್ಯೆಯ ಇನ್ನೊಂದು ಮುಖವನ್ನು ಬಿಚ್ಚಿಡುತ್ತಾರೆ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ನಿವಾಸಿಗಳು.

ಉಡುಪಿ ಜಿಲ್ಲೆಯಲ್ಲಿ ನಕ್ಸಲರ ಚಟುವಟಿಕೆ ವ್ಯಾಪಕವಾಗಿತ್ತು. ಇಲ್ಲಿನ ಘಟ್ಟ ತಪ್ಪಲಿನ ಗ್ರಾಮಗಳಲ್ಲಿ ಒಂದಷ್ಟು ಕಾಮಗಾರಿಗಳು ನಡೆದಿವೆ. `ನಾಡ್ಪಾಲು ಗ್ರಾಮ ತೀರಾ ಹಿಂದುಳಿದಿತ್ತು. ಬೆಳಕನ್ನೇ ಕಾಣದ ಕೆಲವು ಪ್ರದೇಶಗಳಿಗೆ ಇತ್ತೀಚೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಣ್ಣ ಪುಟ್ಟ ರಸ್ತೆಗಳು ದುರಸ್ತಿ ಕಂಡಿವೆ.

ಆದರೆ, ಸಮಸ್ಯೆ ಬೆಟ್ಟದಷ್ಟಿದೆ. ವನಜಾರು ಎಂಬಲ್ಲಿ ನದಿಗೆ ಸೇತುವೆ ಆಗಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಸಾರಿಗೆ ಸಂಪರ್ಕಗಳಿಲ್ಲದೇ ಜನ 8- 10 ಕಿ.ಮೀ. ದೂರ ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕಾಗಿದೆ~ ಎನ್ನುತ್ತಾರೆ ಸೋಮೇಶ್ವರದ ಉದಯ್.

`ಪುಷ್ಪಗಿರಿ~ ಭೂತ: ಕರಾವಳಿಯನ್ನು ನಕ್ಸಲರು ಪ್ರವೇಶಿಸಿದ್ದು, `ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ~ಯ ನೆಪದಲ್ಲಿ. ಈಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲ್ಲೂಕಿನ ಜನರನ್ನು `ಪುಷ್ಪಗಿರಿ ವನ್ಯಧಾಮ ಯೋಜನೆ~ಯ ಭೂತ ಕಾಡುತ್ತಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿ ನಕ್ಸಲರು ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ `ಪುಷ್ಪಗಿರಿ~ಯತ್ತ ದಿಕ್ಕು ಬದಲಾಯಿಸಿದ್ದಾರೆ.

ದ.ಕ. ಜಿಲ್ಲೆಯ ಪುತ್ತೂರು ಹಾಗೂ ಸುಳ್ಯ ತಾಲ್ಲೂಕಿಗೆ ಸದ್ಯ ಯಾವುದೇ ವಿಶೇಷ ಅನುದಾನ ಸಿಗುತ್ತಿಲ್ಲ. ಈ ಎರಡು ತಾಲ್ಲೂಕುಗಳಲ್ಲಿ ನಕ್ಸಲರು ನೆಲೆ ಕಂಡುಕೊಳ್ಳುವ ಮುನ್ನವೇ ಘಟ್ಟ ತಪ್ಪಲಿನ ಕುಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.