ADVERTISEMENT

ಸುಪ್ರೀಂಕೋರ್ಟ್ ತೀರ್ಪು ನೀಡಿದ ತಿರುವು

ಏಜೆನ್ಸೀಸ್
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST
ಸುಪ್ರೀಂಕೋರ್ಟ್ ತೀರ್ಪು ನೀಡಿದ ತಿರುವು
ಸುಪ್ರೀಂಕೋರ್ಟ್ ತೀರ್ಪು ನೀಡಿದ ತಿರುವು   

ಸಿಇಟಿ ವ್ಯವಸ್ಥೆಯ ದಿಕ್ಕು ತಪ್ಪಿಸುವ ಪ್ರಯತ್ನ ಪ್ರಾರಂಭವಾಗಿದ್ದು 2002ರಲ್ಲಿ. 1993ರ ತೀರ್ಪನ್ನು ಪ್ರಶ್ನಿಸಿ ಮಣಿಪಾಲ್‌ನ ಟಿಎಂಎ ಪೈ ಶಿಕ್ಷಣ ಸಂಸ್ಥೆಯವರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದಾಗ ಹಿಂದಿನ ತೀರ್ಪನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್ 11 ಮಂದಿ ನ್ಯಾಯಮೂರ್ತಿಗಳ ಪೂರ್ಣ ಪೀಠ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ತೀರ್ಪು ನೀಡಿತು. ಒಟ್ಟು 11 ಮಂದಿ ನ್ಯಾಯಮೂರ್ತಿಗಳ ಪೈಕಿ ಆರು ಮಂದಿ ‘... ಖಾಸಗಿ ವೃತ್ತಿಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ. ಅವರು ತಮ್ಮದೇ ಆದ ಪ್ರವೇಶ ಪರೀಕ್ಷೆ ಮಾಡಿಕೊಳ್ಳಬಹುದು...’ ಎಂದು ತೀರ್ಪು ನೀಡಿದರೆ, ಉಳಿದ ಐವರು ನ್ಯಾಯಮೂರ್ತಿಗಳು ‘ಸರ್ಕಾರಕ್ಕೆ ಅಧಿಕಾರವಿದೆ’ ಎಂದರು. ಅಂತಿಮವಾಗಿ ಬಹುಮತಕ್ಕೆ ಮನ್ನಣೆ ಸಿಕ್ಕಿತು.

ಇದಾದ ನಂತರ ಸಿಇಟಿಗೆ ಕಾನೂನಿನ ಬೆಂಬಲದ ಬೆನ್ನೆಲುಬು ಇಲ್ಲದಂತಾಯಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಪರಸ್ಪರ ಮಾತುಕತೆ ಮೂಲಕ ಸೀಟು ಹಂಚಿಕೆ ಮತ್ತು ಶುಲ್ಕವನ್ನು ನಿಗದಿಪಡಿಸಿಕೊಂಡು ಬರುತ್ತಿವೆ. ಈ ರೀತಿ ಸಹಮತದ ಮೂಲಕ ಮಾಡಿಕೊಂಡ ಒಪ್ಪಂದಕ್ಕೆ ನ್ಯಾಯಾಲಯದ ಒಪ್ಪಿಗೆಯನ್ನು ಪಡೆಯಲಾಗುತ್ತಿದೆ. ಆದರೆ 2003ರಿಂದ ಇಲ್ಲಿಯವರೆಗೆ ಯಾವ ವರ್ಷವೂ ಸುಸೂತ್ರವಾಗಿ ಸೀಟು ಹಂಚಿಕೆ, ಶುಲ್ಕ ನಿಗದಿಯಾದ ಉದಾಹರಣೆಗಳೇ ಇಲ್ಲ. ಪ್ರತಿ ವರ್ಷ ಸರ್ಕಾರ ಮತ್ತು ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ನಡುವೆ ಹಗ್ಗಜಗ್ಗಾಟ ನಡೆದೇ ಇದೆ.

ನ್ಯಾಯಾಲಯದ ತೀರ್ಪಿನ ನಂತರ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಮೆಡ್- ಕೆ ಸಂಸ್ಥೆಯನ್ನು ಹುಟ್ಟು ಹಾಕಿ ಪ್ರತ್ಯೇಕ ಸಿಇಟಿ ನಡೆಸಿಕೊಂಡು ಬರುತ್ತಿವೆ.

ADVERTISEMENT

2003ರಲ್ಲಿ ಸುಪ್ರೀಂಕೋರ್ಟ್ ಖಾಸಗಿಯವರ ಪರವಾಗಿ ತೀರ್ಪು ನೀಡಿದ್ದೇ ತಡ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಸರ್ಕಾರದ ಮೇಲೆ ಸವಾರಿ ಮಾಡಲು ಶುರು ಮಾಡಿದರು. ಅಲ್ಲದೆ, ಅವರ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಒಂದೆಡೆ ಪ್ರತಿವರ್ಷ ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ಜಾಸ್ತಿಯಾಗುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆ ಕಡಿಮೆ ಆಗುತ್ತಿದೆ.

ದೂಳು ತಿನ್ನುತ್ತಿರುವ ವರದಿಗಳು: ಮಣಿಪಾಲದ ಟಿಎಂಎ ಪೈ ಶಿಕ್ಷಣ ಸಂಸ್ಥೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2003ರಲ್ಲಿ ನೀಡಿದ ತೀರ್ಪಿನಿಂದಾಗಿ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳು ಮೇಲುಗೈ ಸಾಧಿಸಿದರೂ, ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ನಿಗದಿ ಮತ್ತು ಪ್ರವೇಶ ಮೇಲ್ವಿಚಾರಣೆಯ ಅಧಿಕಾರ ಸರ್ಕಾರಕ್ಕೆ ಇದೆ. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದರೆ ಸರ್ಕಾರ ಇದುವರೆಗೆ ತನಗಿರುವ ಅಧಿಕಾರವನ್ನು ಚಲಾಯಿಸಿದ ಉದಾಹರಣೆ ಇಲ್ಲ. ಖಾಸಗಿಯವರ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಅವರಿಗೆ ಅನುಕೂಲವಾಗುವಂತಹ ತೀರ್ಮಾನಗಳನ್ನು ಆಡಳಿತದ ಚುಕ್ಕಾಣಿ ಹಿಡಿದವರು ತೆಗೆದುಕೊಳ್ಳುತ್ತಿದ್ದಾರೆ. ಇದುವರೆಗೆ ಶುಲ್ಕ ನಿಗದಿಗಾಗಿ ಮೂರು ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಯಾವ ಸಮಿತಿಯ ವರದಿಯನ್ನೂ ಸರ್ಕಾರ ಅನುಷ್ಠಾನಗೊಳಿಸಲಿಲ್ಲ. ನಾಮಕಾವಾಸ್ತೆಗೆ ರಚನೆಯಾದ ಸಮಿತಿಗಳ ಕಾರ್ಯನಿರ್ವಹಣೆಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಆದರೆ ಅವುಗಳಿಂದ ಯಾವುದೇ ರೀತಿಯ ಉಪಯೋಗ ಆಗಿಲ್ಲ.

ಹಿಂದೆ ರಚನೆಯಾಗಿದ್ದ ನ್ಯಾ. ಮುರಗೋಡ್ ಮತ್ತು ನ್ಯಾ.ರಂಗ ವಿಠಲಾಚಾರ್ ನೇತೃತ್ವದ ಸಮಿತಿಗಳು ನೀಡಿರುವ ವರದಿಗಳು ದೂಳು ತಿನ್ನುತ್ತಿವೆ. ಅಲ್ಲದೆ ಕಳೆದ ವರ್ಷ ರಚನೆಯಾಗಿದ್ದ ನ್ಯಾ.ಪದ್ಮರಾಜ್ ಸಮಿತಿ ನೀಡಿರುವ ವರದಿ ಸಹ ಅದೇ ಸಾಲಿಗೆ ಸೇರ್ಪಡೆಯಾಗಿದೆ. ಕಳೆದ ತಿಂಗಳು ಪದ್ಮರಾಜ್ ಸಮಿತಿ ನೀಡಿರುವ ವರದಿಯನ್ನು ಜಾರಿಗೆ ತರುವುದಿಲ್ಲ. ಮಾತುಕತೆ ಮೂಲಕವೇ ಈ ವರ್ಷವೂ ಸರ್ಕಾರ ಶುಲ್ಕ ನಿಗದಿ ಮಾಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದಾರೆ.

ಸಮಿತಿಗಳು ನೀಡುವ ವರದಿಯನ್ನು ಜಾರಿಗೆ ತರಲು ಸರ್ಕಾರಕ್ಕೆ ಮನಸ್ಸು ಇಲ್ಲದಿದ್ದರೆ ಏಕೆ ಸಮಿತಿ ರಚನೆ ಮಾಡಬೇಕು. ಅದರ ಕಾರ್ಯನಿರ್ವಹಣೆಗೆ ಸಾರ್ವಜನಿಕರ ತೆರಿಗೆ ಹಣವನ್ನು ಯಾಕೆ ಪೋಲು ಮಾಡಬೇಕು ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಆದರೆ ಸರ್ಕಾರ ಮಾತ್ರ ‘ವರದಿಯನ್ನು ಹಾಗೆಯೇ ಇಟ್ಟಿದ್ದೇವೆ. ಸಂದರ್ಭ ಬಂದರೆ ಬಳಸಿಕೊಳ್ಳುತ್ತೇವೆ’ ಎಂಬ ಸಿದ್ಧ ಉತ್ತರವನ್ನೇ ಪ್ರತಿ ಬಾರಿಯೂ ನೀಡುತ್ತಿದೆ.

ಪರಸ್ಪರ ಮಾತುಕತೆ ಮೂಲಕ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಪಡಿಸುವ ಸಂಬಂಧ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ನಡೆದ ಮಾತುಕತೆ ವಿಫಲವಾಗಿರುವುದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗ ‘ಪದ್ಮರಾಜ್ ಸಮಿತಿ ಶಿಫಾರಸು ಮಾಡಿರುವ ವರದಿ ಪ್ರಕಾರವೇ ಶುಲ್ಕ ನಿಗದಿ ಮಾಡಿ’ ಎನ್ನುತ್ತಿವೆ.

ಆದರೆ ಸರ್ಕಾರ ಇದಕ್ಕೆ ಸಿದ್ದವಿಲ್ಲ. ಆ ರೀತಿ ಮಾಡಿದರೆ ಪ್ರತಿಯೊಂದು ಕಾಲೇಜಿಗೂ ಪ್ರತ್ಯೇಕ ಶುಲ್ಕ ನಿಗದಿಯಾಗುತ್ತದೆ. ಇದೇ 27, 28ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆದರೆ ಯಾವ ಕೋರ್ಸ್‌ಗೆ ಎಷ್ಟು ಶುಲ್ಕ, ಸರ್ಕಾರಿ ಮತ್ತು ಕಾಮೆಡ್-ಕೆ ಕೋಟಾದಲ್ಲಿ ಎಷ್ಟು ಸೀಟುಗಳು ಲಭ್ಯವಿರುತ್ತವೆ ಎಂಬುದೇ ಇನ್ನೂ ಸ್ಪಷ್ಟವಾಗದ ಕಾರಣ ವಿದ್ಯಾರ್ಥಿಗಳು, ಪೋಷಕರು ಗೊಂದಲದಲ್ಲಿದ್ದಾರೆ. ಪ್ರತಿ ವರ್ಷ ಜನವರಿ, ಫೆಬ್ರುವರಿ ತಿಂಗಳಲ್ಲೇ ಸಿಇಟಿ ಕೈಪಿಡಿ ಬಿಡುಗಡೆ ಮಾಡಿ ಅದರಲ್ಲಿ ಎಲ್ಲ ವಿವರಗಳನ್ನೂ ನೀಡಲಾಗುತ್ತಿತ್ತು. ಆದರೆ ಈ ವರ್ಷ ಏಪ್ರಿಲ್ ಎರಡನೇ ವಾರ ಕಳೆದರೂ ಸಿಇಟಿ ಬಿಕ್ಕಟ್ಟು ಬಗೆಹರಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.