ADVERTISEMENT

ಸುರಕ್ಷತಾ ಮಸೂದೆ ಏನಾಯ್ತು?

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST
ಸುರಕ್ಷತಾ ಮಸೂದೆ ಏನಾಯ್ತು?
ಸುರಕ್ಷತಾ ಮಸೂದೆ ಏನಾಯ್ತು?   

ಎಲ್ಲ ಕಡೆಗಳಿಂದ ಬರುತ್ತಿರುವ ಒತ್ತಡಗಳ ಹಿನ್ನೆಲೆಯಲ್ಲಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳ ರಕ್ಷಣೆಗೆ ಮಸೂದೆಯೊಂದನ್ನು ಜಾರಿಗೆ ತರಲು ಉದ್ದೇಶಿಸಿದೆ. `ಎಚ್ಚರಿಕೆ ಗಂಟೆ~ ಬಾರಿಸುವವರ ಸುರಕ್ಷತಾ ಮಸೂದೆ- 2011~ ಎಂಬ ಹೆಸರಿನ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ.

ಸದ್ಯ ರಾಜ್ಯಸಭೆ ಮುಂದಿರುವ ಮಸೂದೆಯ ಕೆಲವು ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಮಸೂದೆಯ ನ್ಯೂನತೆಗಳನ್ನು ಸರಿಪಡಿಸಬೇಕು. ಅದು ದುರುಪಯೋಗವಾಗದಂತೆ ತಡೆಯುವ ಕ್ರಮಗಳಿಗೆ ಮುಂದಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ರಾಜ್ಯಸಭೆಯಲ್ಲೂ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಲೋಕಸಭೆಯಲ್ಲಿ ಸಂಖ್ಯಾಬಲದಲ್ಲಿ ಗೆದ್ದ ಸರ್ಕಾರ, ರಾಜ್ಯಸಭೆಯಲ್ಲಿ ಸಂಖ್ಯಾಬಲದ ಮೇಲೆ ಆಟವಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಮೇಲ್ಮನೆಯಲ್ಲಿ ವಿರೋಧ ಪಕ್ಷಗಳ ಬಲವೇ ಹೆಚ್ಚು. ಹೀಗಾಗಿ ಸರ್ಕಾರ ಉಪಾಯದ ಮಾರ್ಗಗಳನ್ನು ಹುಡುಕಬೇಕು. ಸಂಘರ್ಷದ ಹಾದಿ ಹಿಡಿದರೆ ಮಸೂದೆಗೆ ಸೋಲು ಖಚಿತ.

ಸಾರ್ವಜನಿಕ ಬದುಕನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಈಗ ಜನರ ಕೈಗೆ ಮತ್ತೊಂದು ಅಸ್ತ್ರ ಸಿಕ್ಕಿದೆ. `ಮಾಹಿತಿ ಹಕ್ಕು ಕಾಯ್ದೆ~ಸಾರ್ವಜನಿಕ ಜೀವನದಲ್ಲಿ ಇರುವವರು ತಪ್ಪು ಹೆಜ್ಜೆಗಳನ್ನು ಇಡುವ ಮುನ್ನ ಮತ್ತೊಮ್ಮೆ ಯೋಚಿಸುವಂತೆ ಮಾಡಿದೆ. ಈ ಕಾಯ್ದೆ ಪ್ರಯೋಗ ಕುರಿತು ಸಾಮಾನ್ಯ ಜನರಿಗೆ ಇನ್ನು ಅರಿವು ಮೂಡಬೇಕಿದೆ.
 
ಈಗ ಇದನ್ನು ಬಳಕೆ ಮಾಡುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರ ಮೇಲೂ ದಾಳಿ ನಡೆಯುತ್ತಿವೆ. ಮಾಹಿತಿ ಹಕ್ಕು ವ್ಯಾಪಕವಾಗಿ ಬಳಕೆಯಾದರೆ ಇಂಥ ದಾಳಿಗಳು ನಿಲ್ಲಬಹುದು. ಮಾಹಿತಿ ಹಕ್ಕು ತನ್ನ ಸರ್ಕಾರದ ಹೆಗ್ಗಳಿಕೆ ಎಂದು ಬೀಗುತ್ತಿರುವ ಯುಪಿಎ ಸರ್ಕಾರ ಪ್ರಾಮಾಣಿಕ ಅಧಿಕಾರಿಗಳ ಸುರಕ್ಷತೆ ಮಸೂದೆ ಜಾರಿಗೆ ಏಕೆ ತಡಮಾಡುತ್ತಿದೆ ಎಂಬುದು ಉತ್ತರ ಸಿಗದ ಪ್ರಶ್ನೆ.

ಮಸೂದೆಯಲ್ಲಿ ಏನಿದೆ
`ಎಚ್ಚರಿಕೆ ಗಂಟೆ ಬಾರಿಸುವವರ ಸುರಕ್ಷತಾ ಮಸೂದೆ- 2011~ ಸರ್ಕಾರದ ಅಧಿಕಾರಿಗಳ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ವಿರುದ್ಧ ದೂರು ನೀಡಲು ಅವಕಾಶವಿದೆ. ಅಲ್ಲದೆ, ದೂರು ದಾಖಲಿಸುವ ಅಧಿಕಾರಿಗಳಿಗೆ ರಕ್ಷಣೆ ಒದಗಿಸುತ್ತದೆ. ಸರ್ಕಾರದ, ಸರ್ಕಾರೇತರ ಸಂಸ್ಥೆಗಳ ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ ಜಾಗೃತ ಆಯೋಗಕ್ಕೆ ದೂರು ಕೊಡಬಹುದು.

ಯಾವುದೇ ದೂರಿಗೆ ಹೆಸರು, ವಿಳಾಸ ಇರಬೇಕು. ಫಿರ್ಯಾದಿಯ ಗೌಪ್ಯತೆ ಕಾಪಾಡಲಾಗುವುದು. ಅಗತ್ಯವಾದರೆ ಮಾತ್ರ ಇಲಾಖೆ ಮುಖ್ಯಸ್ಥರ ಗುರುತು ಬಹಿರಂಗ ಮಾಡಲಾಗುವುದು. ಮಾಹಿತಿ ಬಹಿರಂಗ ಮಾಡಿದವರ ವಿರುದ್ಧ ಕ್ರಮಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಾಗೆ ಸುಳ್ಳು ದೂರು ನೀಡಿದವರನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.