ADVERTISEMENT

ಜಿಎಸ್‌ಟಿ ಅಲ್ಲ, ‘ಡಿಎಸ್‌ಟಿ’

ಪೃಥ್ವಿರಾಜ್ ಎಂ ಎಚ್
Published 22 ಮೇ 2019, 19:47 IST
Last Updated 22 ಮೇ 2019, 19:47 IST
day light
day light   

ಹಗಲಿನಲ್ಲಿನ ಬೆಳಕನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಧಾನವೇ ‘ಡಿಎಸ್‌ಟಿ’ (Day light saving Time). ಹಲವು ಪಾಶ್ಚಾತ್ಯ ರಾಷ್ಟ್ರಗಳು ಸೂರ್ಯನ ಬೆಳಕು ಹೆಚ್ಚಾಗಿರುವ ತಿಂಗಳಲ್ಲಿ ‘ಡಿಎಸ್‌ಟಿ’ ವಿಧಾನಕ್ಕೆ ಒತ್ತು ನೀಡುತ್ತಾರೆ. ಬೆಳಕನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ ಇಂಧನ ಉಳಿಸುತ್ತವೆ.

‘ಹಗಲು ಸಿಗುವ ಬೆಳಕನ್ನು ಬಳಸಿಕೊಳ್ಳುವುದು ಬಿಟ್ಟು, ರಾತ್ರಿಯಲ್ಲಿ ಅಪಾರ ಹಣ ಖರ್ಚು ಮಾಡಿ ಕೃತಕ ಬೆಳಕು ಸೃಷ್ಟಿಸಿಕೊಂಡು ಜೀವಿಸುವುದು ಎಷ್ಟು ಸರಿ’ ಎಂದು 1784ರಲ್ಲೇ ಅಮೆರಿಕದ ಬೆಂಜಮಿನ್ ಫ್ರಾಂಕ್ಲಿನ್ ಪ್ರಶ್ನಿಸಿದ್ದರು. ‘ಸೂರ್ಯನ ಜೊತೆಗೆ ಎಚ್ಚರಗೊಳ್ಳೋಣ. ಅವನು ಅಸ್ತಮಿಸುವ ಹೊತ್ತಿಗೆ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳೋಣ’ ಎನ್ನುವುದು ಅವರ ಅಭಿಪ್ರಾಯ.

ನ್ಯೂಜಿಲೆಂಡ್‌ನ ಎಂಟಮಾಲಜಿಸ್ಟ್ ಹ್ಯಾಟ್ಸನ್ ಅವರು ಕೂಡ ಹಗಲಿನಲ್ಲಿ ಸಿಗುವ ಬೆಳಕನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಬಗ್ಗೆ ಹಲವು ವಿಧಾನಗಳನ್ನು ತಿಳಿಸಿದರು. ಇವರು ಮೂಡಿಸಿದ ಜಾಗೃತಿಯಿಂದ ‘ಡಿಎಸ್‌ಟಿ’ ಬಗ್ಗೆ ಜನರಲ್ಲಿ ಅರಿವು ಮೂಡಲು ಆರಂಭಿಸಿತು.

ADVERTISEMENT

ಮೊದಲ ವಿಶ್ವ ಮಹಾಯುದ್ಧದ ನಂತರ ಜರ್ಮನಿ ಡಿಎಸ್‌ಟಿ ಅನುಸರಿಸಲು ಆರಂಭಿಸಿದರೆ, ‘ಸನ್‌ಶೈನ್ ಆ್ಯಕ್ಟ್‌’ ಹೆಸರಿನಲ್ಲಿ ಅಮೆರಿಕ ಕಾನೂನು ರೂಪಿಸಿತು. ಇಂಧನ ಮೂಲಗಳ ಕೊರತೆ ಇದ್ದ ಕಾಲದಲ್ಲಿ ಈ ಕಾಯ್ದೆ ಹಲವರನ್ನು ಆಕರ್ಷಿಸಿತು. ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಸೇರಿದಂತೆ ಯುರೋಪ್‌ನ ಹಲವು ದೇಶಗಳು ಈ ವಿಧಾನವನ್ನು ಸಮರ್ಥಿಸಿದವು.

ನಮ್ಮ ದೇಶದ ಪರಿಸ್ಥಿತಿ ಏನು?

ಗುಜರಾತ್‌ನಲ್ಲಿ ಸೂರ್ಯೋದಯವಾಗುವ ಹೊತ್ತಿಗೆ ಅರುಣಾಚಲ ಪ್ರದೇಶದಲ್ಲಿ ಸೂರ್ಯನ ಬೆಳಕು ಹರಡಿ ಎರಡು ಗಂಟೆ ಆಗಿರುತ್ತದೆ. ಈಶಾನ್ಯ ರಾಜ್ಯಗಳಿಗೆ ಮತ್ತು ಉಳಿದ ರಾಜ್ಯಗಳಿಗೆ ಹಗಲು ಅವಧಿಯಲ್ಲಿ ಎರಡು ಗಂಟೆ ವ್ಯತ್ಯಾಸವಿದೆ. ಬ್ರಿಟಿಷರ ಕಾಲದಲ್ಲಿ ಕೋಲ್ಕತ್ತ, ಮುಂಬೈ ಎಂದು ಎರಡು ಟೈಮ್ ಜೋನ್‌ಗಳು ಇದ್ದವು. ಸ್ವಾತಂತ್ರ್ಯ ನಂತರ ‘ಒನ್‌ ಟೈಮ್‌ ಒನ್‌ ನೇಷನ್‌’ ನಿನಾದದ ಮೂಲಕ ಒಂದೇ ಟೈಂ ಜೋನ್ ಬಳಕೆ ಆರಂಭವಾಯಿತು. ಇದರಿಂದ ಈಶಾನ್ಯ ರಾಜ್ಯಗಳು ನಷ್ಟದ ಹಾದಿ ತುಳಿದವು.

ದೇಶದ ಎಲ್ಲ ಕಚೇರಿಗಳಲ್ಲೂ ಒಂದೇ ಕೆಲಸದ ಅವಧಿಯನ್ನು (10ರಿಂದ 5) ನಿಗದಿ ಮಾಡಿದ ಪರಿಣಾಮ, ಈಶಾನ್ಯ ರಾಜ್ಯಗಳೂ ಅದನ್ನೇ ಪಾಲಿಸುತ್ತಿವೆ. ಆದರೆ ಅಲ್ಲಿ 4 ಗಂಟೆಗೆಲ್ಲಾ ಕತ್ತಲೆ. ಇದರಿಂದ ಕೃತಕ ದೀಪಗಳ ಬಳಕೆ ಅನಿವಾರ್ಯ. ಕತ್ತಲೆಯಲ್ಲಿ ಪ್ರಯಾಣಿಸುವುದರಿಂದ ಅಪಘಾತ–ಅಪರಾಧಗಳ ಪ್ರಮಾಣವೂ ಹೆಚ್ಚಾಗುತ್ತದೆ. ಈ ರೀತಿ ಆಗುವುದು ಬೇಡವೆಂದು ಟೈಮ್‌ ಜೋನ್ ಬದಲಿಸಿದರೂ ಸಮಸ್ಯೆಯೇ. ಕಾರಣ, ರೈಲುಗಳು ಮತ್ತು ವಿಮಾನಗಳ ಸಂಚಾರ ಅವಧಿ ನಿಗದಿಪಡಿಸುವುದು ಕಷ್ಟ.

ಅಸ್ಸಾಂನ ಟೀ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ‘ಬೇಗನ್ ಚಾಯ್‌ಟೈಮ್’ ಎಂಬ ಪ್ರತ್ಯೇಕ ಟೈಮ್‌ಜೋನ್ ಪಾಲಿಸುತ್ತಾರೆ. ಬೆಳಕು ಇರುವಷ್ಟು ಹೊತ್ತು ಕೆಲಸ ಮಾಡಿ, ಕತ್ತಲಾಗುತ್ತಿದ್ದಂತೆಯೇ ನಿಲ್ಲಿಸುತ್ತಾರೆ.

ಸಮಯದ ಬದಲಾವಣೆ

‘ಡಿಎಸ್‌ಟಿ’ ವಿಧಾನವನ್ನು ಅನುಸರಿಸುವ ದೇಶಗಳು ಮಾರ್ಚ್‌ ತಿಂಗಳ ಎರಡನೇ ಭಾನುವಾರದ ಮಧ್ಯರಾತ್ರಿಯಂದು ತಮ್ಮ ಗಡಿಯಾರದ ಮುಳ್ಳುಗಳನ್ನು ಒಂದು ಗಂಟೆ ಮುಂದಕ್ಕೆ ತಳ್ಳುತ್ತವೆ. ಆ ಸಮಯವನ್ನೇ ಅನುಸರಿಸಿ ಕಚೇರಿಗಳು, ಶಾಲಾ–ಕಾಲೇಜುಗಳ ಕಾರ್ಯಾವಧಿಯೂ ಬದಲಾಗುತ್ತದೆ. ಬೇಸಿಗೆ ಮುಗಿಯುತ್ತಿದ್ದಂತೆಯೇ ಸ್ಟ್ಯಾಂಡರ್ಟ್ ಟೈಮ್ ಜೋನ್ ಬಳಸುತ್ತವೆ. ಡಿಎಸ್‌ಟಿ ಅನುಸರಿಸುವುದರಿಂದ ಇಂಧನ ಬಳಕೆ ಶೇ. 3ರಷ್ಟು ಕಡಿಮೆ ಆಗುತ್ತದೆ ಎಂದು ಕೆಲವು ದೇಶಗಳು ಕಂಡುಕೊಂಡಿವೆ.

‘ಡಿಎಸ್‌ಟಿ’ಗೆ ತಕರಾರುಗಳೂ ಇವೆ. ಸಮಯ ಬದಲಾವಣೆ ಮಾಡಿಕೊಳ್ಳುವುದರಿಂದ ದೇಹದ ಜೈವಿಕ ಗಡಿಯಾರದಲ್ಲೂ ವ್ಯತ್ಯಾಸಗಳು ಆಗುತ್ತವೆ. ಹಾಗಾಗಿ ಯುರೋಪ್‌ನ ಹಲವು ದೇಶಗಳು ಈ ವಿಧಾನವನ್ನು ಪಾಲಿಸುವುದು ಬಿಟ್ಟಿವೆ. ಅಮೆರಿಕ ಮಾತ್ರ ಇಂದಿಗೂ ‘ಡಿಎಸ್‌ಟಿ’ ಪಾಲಿಸುವಂತೆ ಸೂಚಿಸುತ್ತಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.