ADVERTISEMENT

ನೀನಂದ್ರೆ ನಂಗಿಷ್ಟ, ಜತೆಗಿರೋದು ಕಷ್ಟ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ನೀನಂದ್ರೆ ನಂಗಿಷ್ಟ, ಜತೆಗಿರೋದು ಕಷ್ಟ
ನೀನಂದ್ರೆ ನಂಗಿಷ್ಟ, ಜತೆಗಿರೋದು ಕಷ್ಟ   

ಪ್ರೀತಿಯ ಚಿರೂ,

ನಾವಿಬ್ರೂ ಸಿಕ್ಕಿದಾಗಲೆಲ್ಲ ಹೇಳ್ಬೇಕು ಅಂದ್ಕೊಂಡ್ರೂ ಹೇಳೋಕೆ ಆಗದೇ ಇರುವ ಕೆಲವು ವಿಷಯಗಳನ್ನು ಇಲ್ಲಿ ಬರೆದಿದ್ದೀನಿ. ಉದ್ದುದ್ದ ವಾಟ್ಸ್ಯಾಪ್‌ ಮೆಸೇಜುಗಳನ್ನು ನೀನು ಓದೋದಿಲ್ಲ ಅಂತ ನಂಗೆ ಗೊತ್ತು. ಅದಕ್ಕೆ ಪತ್ರ ಬರೆದಿದ್ದೀನಿ. ಇಲ್ಲಿ ಇರುವುದು ಸೂಕ್ಷ್ಮ ಸಂಗತಿಗಳು. ಆದರೆ ನಮಗಿಬ್ಬರಿಗೂ ಸಂಬಂಧಿಸಿದ್ದು. ಅದಕ್ಕೆ ಹೇಳಿಕೊಳ್ಳುವುದೇ ವಾಸಿ ಅಂತ ತೀರ್ಮಾನಿಸಿ ನೇರವಾಗಿ ವಿಷಯ ಪ್ರಸ್ತಾಪಿಸಿದ್ದೇನೆ.

ನನ್ನನ್ನೇ ಮದುವೆಯಾಗಬೇಕು ಎಂದು ನೀನು ತೀರ್ಮಾನಿಸಿ ಮನೆಯವರಿಗೂ ಹೇಳಿದ್ದೀಯ. ನಮ್ಮನೇಲೂ ಒಪ್ಪಿದ್ದಾರೆ ಬಿಡು. ಆದರೆ ಜೀವನಪೂರ್ತಿ ಬಾಳುವೆ ಮಾಡಬೇಕಾದವರು ನಾವೇ ಆಗಿರುವ ಕಾರಣ ನಮ್ಮೊಳಗಿನ ಸಣ್ಣ ಪುಟ್ಟ ಐಬುಗಳೂ
ನಾಳೆ ಮಹತ್ವ ಪಡೆದಾವು ಎಂಬ ಆತಂಕದಿಂದ ಈ ಪತ್ರ ಬರೆದಿದ್ದೇನೆ.

ADVERTISEMENT

ನನಗೆ ಆದ್ಯತೆ ಇಲ್ಲ: ನೀನು ನನ್ನನ್ನು ‘ಟೇಕನ್‌ ಫಾರ್‌ ಗ್ರ್ಯಾಂಟೆಡ್‌’ ಅಂತೀವಲ್ಲ ಹಾಗೆ ನಡೆಸಿಕೊಳ್ತಿರೋದು. ನಿನಗೆ ಹೇಗೆ ಬೇಕೋ ಹಾಗೆ ಮಾತಾಡೋದು, ನನ್ನ ಭಾವನೆಗಳಿಗೆ ಬೆಲೆಯೇ ಕೊಡದಂತೆ ಮುಖಕ್ಕೆ ಹೊಡೆದಂತೆ ನಡೆದುಕೊಳ್ಳುವುದು, ಯಾರಿದ್ದಾರೆ ಇಲ್ಲ ಎಂಬುದನ್ನೂ ಗಮನಿಸದೆ ರೇಗೋದು, ನಿನ್ನ ಕೆಲಸ ಮುಗಿದ ತಕ್ಷಣ ನನ್ನ ಒತ್ತಡಗಳನ್ನೂ ಗಮನಿಸದೆ ‘ಇನ್ನೂ ಎಷ್ಟು ಹೊತ್ತು ಕಾಯ್ಬೇಕು’ ಅಂತ ಪದೇ ಪದೇ ಮೆಸೇಜ್‌ ಮಾಡೋದು... ಹೀಗೆ ಕನಿಷ್ಠ 25 ಉದಾಹರಣೆಗಳನ್ನು ಸಂದರ್ಭಸಹಿತವಾಗಿ ಕೊಡಬಹುದು. ನನಗೆ ನಿನ್ನ ಬದುಕಿನಲ್ಲಿ,
ಮನಸ್ಸಿನಲ್ಲಿ ಮಹತ್ವದ ಸ್ಥಾನ, ಆದ್ಯತೆ ಇಲ್ಲ ಎಂಬ ಭಾವ ಗಟ್ಟಿಯಾಗತೊಡಗಿದೆ.

ಮಾತು ನಿನ್ನ ಬಗ್ಗೆ ಅಷ್ಟೇ: ಮೊನ್ನೆ ಯುಗಾದಿಗೆ ನಮ್ಮಿಬ್ಬರ ಪರಿಚಯವಾಗಿ ಎರಡು ವರ್ಷ. ಇಷ್ಟೂ ದಿನ ನಾನು ಗಮನಿಸಿದ ಅಂಶವೆಂದರೆ ನಾವಿಬ್ಬರೂ ಭೇಟಿಯಾದಾಗ ನಿನ್ನ ಮಾತುಗಳು ನೀನು, ನಿನ್ನ ಮನೆ ಮಂದಿ ಮತ್ತು ಸ್ನೇಹಿತರು ನಿನ್ನ ಬಗ್ಗೆ ಏನು ಒಳ್ಳೆಯದನ್ನು ಹೇಳಿದರು ಎಂಬ ಬಗ್ಗೆಯಷ್ಟೇ ಗಿರಕಿ ಹೊಡೆಯುತ್ತಿರುತ್ತದೆ. ಸ್ನೇಹಿತರು ಹೇಳುವ ಯಾವುದೇ ನಕಾರಾತ್ಮಕ ಅಂಶಗಳನ್ನು ಹಂಚಿಕೊಳ್ಳುವುದೇ ಇಲ್ಲ. ನಾನಾಗಿ ಆಫೀಸು, ಮನೆ ವಿಚಾರ ಹೇಳಹೊರಟರೂ ನಿನಗೆ ಆಸಕ್ತಿ ಇಲ್ಲ! ತಮ್ಮನ್ನೇ ಹೊಗಳಿಕೊಳ್ಳೋದು ‘ಆತ್ಮರತಿ’. ನನ್ನ ಪ್ರಶ್ನೆ ಏನೆಂದರೆ, ನಿನಗೆ ನನ್ನ ಬಗ್ಗೆ ಹೇಳುವ, ಕೇಳುವ ಆಸಕ್ತಿ ಇಲ್ಲದಿದ್ದರೆ ಪ್ರೀತಿ, ಸಂಬಂಧವೆಲ್ಲವೂ ಒಮ್ಮುಖವಾಗುತ್ತದೆ. ಹೇಗಿದ್ದೀಯಾ ಅಂತನಾದ್ರೂ ಕೇಳ್ಬೇಕಲ್ಲ ಮಾರಾಯ? ಸಂವಹನವೇ ಇಲ್ಲದ ಸಂಬಂಧ ಸಾಯೋದು ಗ್ಯಾರಂಟಿ. ಆದರೆ ನಮ್ಮ ನಡುವಿನ ಸಂವಹನವೆಂದರೆ ಬರಿಯ ನಿನ್ನ ಬಗೆಗಿನ ಮಾತು–ಕತೆ ಅಷ್ಟೇ.

ಗೌಪ್ಯವೇಕೆ?: ಮೊನ್ನೆ ಯುಗಾದಿ ದಿನ ನೀನು ಅಕ್ಕನ ಮನೆಗೆ ಹೋಗಬೇಕಿತ್ತು. ಸಿಗೋಣ್ವಾ ಅಂತ ಎಷ್ಟು ಸಲ ಕೇಳಿದ್ರೂ ‘ಇಲ್ಲ ಬೇರೆ ಕೆಲಸ ಇದೆ’ ಎಂಬ
ಮಾಮೂಲಿ ಉತ್ತರ ಸಿಕ್ಕಿತೇ ವಿನಾ ಅಕ್ಕನ ಮನೆಗೆ ಊಟಕ್ಕೆ ಕರೆದಿದ್ದಾರೆ ಎಂದು ಹೇಳಲೇ ಇಲ್ಲ. ಮುಂದಿನ ವಾರ ನಿಮ್ಮಮ್ಮ ಬರ್ತಿದ್ದಾರೇಂತ ನಾಲ್ಕು ದಿನ ರಜೆ ಹಾಕಿರೋ ವಿಷಯ ಸಂತೋಷ ಹೇಳಿದಾಗಲೇ ಗೊತ್ತಾಗಿದ್ದು. ಅಲ್ಲ ಕಣೋ ಪ್ರತಿಯೊಂದನ್ನೂ ಮುಚ್ಚುಮರೆ ಮಾಡುವ ಅಗತ್ಯವೇನಿದೆ?
ನನಗೆ ಪ್ರವೇಶವಿಲ್ಲದ ಖಾಸಗಿತನವನ್ನು ನೀನು ಕಾಯ್ದುಕೊಳ್ಳುತ್ತಿರುವುದು ಅರಗಿಸಿಕೊಳ್ಳಲಾಗುತ್ತಿಲ್ಲ.

ಹೋಲಿಸಬೇಡ: ನಿನ್ನ ಬಗ್ಗೆ ಏನಾದರೂ ಅಸಮಾಧಾನ ವ್ಯಕ್ತಪಡಿಸಿದರೆ ‘ನಾನು ಇರೋದೇ ಹೀಗೆ ಕಷ್ಟವಾದರೆ ಬಿಟ್ಟುಬಿಡು’ ಅಂತ ಕಡ್ಡಿಮುರಿದಂತೆ ಹೇಳುತ್ತೀಯಲ್ಲ ನೀನು ಮಾಡುತ್ತಿರೋದು ಏನು? ನಿನ್ನ ಟೀಮ್‌ ಮ್ಯಾನೇಜರ್‌ ಆಶ್ರಿತಾ ಮತ್ತು ನನಗೆ ಹೋಲಿಕೆ ಮಾಡಿ ಮಾತಾಡುವುದು ಸರಿನಾ? ಆಕೆಯನ್ನು ಸಣ್ಣಪುಟ್ಟ ವಿಚಾರಕ್ಕೂ ನನ್ನ ಮುಂದೆ ಹೊಗಳುತ್ತೀ. ಆದರೆ ನಾನು ನಿನಗಾಗಿ ತ್ಯಾಗ, ಸಹಾಯ ಮಾಡಿದಾಗ ಕೃತಜ್ಞತೆಯ ಮಾತೂ ಬರುವುದಲಿಲ್ಲ! ನಾನು ನಾನಾಗಿರಲು ಬಯಸುತ್ತೇನೆ. ಅವರಿವರನ್ನು ನೋಡಿ ಬದಲಾಗುವುದಕ್ಕಿಂತ ಇರುವ ಸನ್ನಡತೆಗಳನ್ನು ಉಳಿಸಿಕೊಳ್ಳುವುದು ಸೂಕ್ತ ಅಂತ ನನ್ನ ಭಾವನೆ. ‘ನಾನು ಇರೋದೇ ಹೀಗೆ’ ಅನ್ನೋಕೂ ಮುಂಚೆ ನಿನ್ನ ವರ್ತನೆ, ವ್ಯಕ್ತಿತ್ವ ಸರಿ ಇದೆಯಾ ಎಂದು ಪರಿಶೀಲಿಸಿಕೋ.

‘ಕಷ್ಟವಾದರೆ ಬಿಟ್ಟುಬಿಡು’ ಎಂಬ ನಿನ್ನ ಮಾತಿಗೇ ಬರುತ್ತೇನೆ...

ಸಣ್ಣಪುಟ್ಟ ದೋಷಗಳನ್ನು ತಿದ್ದಿಕೊಂಡರೆ ಬದುಕು ಸುಂದರವಾಗಿರುತ್ತದೆ. ವ್ಯಕ್ತಿತ್ವ ಮತ್ತು ವರ್ತನೆಯ ಬಗ್ಗೆ ಸೂಕ್ಷ್ಮ ಸಂವೇದನೆಗಳನ್ನು ‍ಕಾಪಾಡಿಕೊಂಡಿರುವ ನಾನು ಬದುಕಿನ ಮೌಲ್ಯಗಳಿಗೆ ಮತ್ತು ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತೇನೆ. ನೀನೂ ಕೊಟ್ಟರೆ ನಾವಿಬ್ಬರೂ ಸಮಾನ ಮನಸ್ಕರಾಗುತ್ತೇವೆ. ಮದುವೆಯಾದ ಮೇಲೆ ಈ ಸಂಗತಿಗಳು ನಮ್ಮಿಬ್ಬರ ಮಧ್ಯೆ ಅಂತರ ಸೃಷ್ಟಿಸಬಹುದು. ಅದಕ್ಕಿಂತ ಈಗ ತಿದ್ದುಕೊಳ್ಳುವುದು ಒಳ್ಳೆಯದು ಎಂಬುದು ನನ್ನ ಭಾವನೆ. ಆಯ್ಕೆ ಮತ್ತು ಅವಕಾಶ ಎರಡನ್ನೂ ನಿನ್ನ ಕೈಲಿಟ್ಟಿದ್ದೇನೆ. ಯೋಚಿಸು.
– ನಿನ್ನ ಅರುಂಧತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.