ADVERTISEMENT

ಪಾವತಿ ಅತಿಥಿಗಳ ಪಾಡು

ಮಾನಸ ಕೀಲಾರ
Published 11 ನವೆಂಬರ್ 2011, 19:30 IST
Last Updated 11 ನವೆಂಬರ್ 2011, 19:30 IST

ಪಿಜಿ ಎನ್ನುವುದು ಮಹಾನಗರಗಳಲ್ಲಿ ದುಡಿಯುವ ಯುವತಿಯರ `ಅವಲಂಬಿತ ವಸತಿಗೆ~ ಸುಂದರ ಹೆಸರಿನ ಮೆರುಗು. ಆದರೆ ಈ `ಪಾವತಿ ಅತಿಥಿ~ಗಳ ಬದುಕು ನಿಜಕ್ಕೂ ಕಠಿಣ. ಒಂದೇ ಸೂರಿನಲ್ಲಿ ವಿವಿಧ ಮನಃಸ್ಥಿತಿಯ ಹುಡುಗಿಯರೊಂದಿಗೆ ಬದುಕುವುದು, ಹೊಂದಿಕೊಂಡು ಬಾಳುವುದು ನಿಜಕ್ಕೂ ಕ್ಲಿಷ್ಟಕರ.

ರಾತ್ರಿ ಪಾಳಿ ಕೆಲಸ ಮುಗಿಸಿ ರೂಮ್‌ಗೆ ಹೋದಾಗ ರೂಮ್‌ಮೇಟ್ಸ್ ಎಲ್ಲ ನಿದ್ದೆಗೆ ಜಾರಿರುತ್ತಿದ್ದರು. ಬೆಳಗಿನ ಜಾವ ನಾನು ಹೋಗಿ ಮಲಗಬೇಕು ಎನ್ನುವಷ್ಟರಲ್ಲಿ ರೂಮ್‌ಮೇಟ್ಸ್ ಎದ್ದು ಅವರ ಆಫೀಸ್‌ಗೆ ಹೋಗುವ ತಯಾರಿಯಲ್ಲಿ ಇರುತ್ತಿದ್ದರು! ಇವರೆಲ್ಲ ಹೊರಟುಹೋದ ಮೇಲೆ ನಿದ್ರಿಸೋಣ ಎಂದರೆ ರೂಮ್‌ಕ್ಲೀನ್ ಮಾಡುವ ಹೆಂಗಸರಿಂದ ಕಿರಿ ಕಿರಿ. ಇವರೆಲ್ಲ ಹೋದ ಮೇಲೆ ಮಲಗೋಣ ಎಂದರೆ ಮಧ್ಯಾಹ್ನ 3.30. ಮತ್ತೆ ರಾತ್ರಿ ಪಾಳಿಗೆ ಹಾಜರಾಗಬೇಕೆಂಬ ಆತಂಕದಲ್ಲಿ ನಿದ್ದೆಯೇ ಬಾರದೇ ಹೋದದ್ದು ಉಂಟು.

ಪಿಜಿಯಲ್ಲಿ ಪ್ರತಿದಿನ ಒಂದೊಂದು ರೀತಿಯ ಅನುಭವ. ಒಬ್ಬೊಬ್ಬರ ಜೀವನ ಶೈಲಿಯೂ ಒಂದೊಂದು ಥರ. ಒಂದು ಕಡೆ ಕೆಲವರು ಕಚೇರಿ ಮುಗಿಸಿ ಬಂದವರು ಪಕ್ಕದ ರೂಮ್ ಮೇಟ್‌ಗಳೊಂದಿಗೆ  ಮಾತನಾಡಿ ಸ್ವಲ್ಪ ಕೆಲಸದ ಜಂಜಾಟಕ್ಕೆ ರೆಸ್ಟ್ ತೆಗೆದುಕೊಂಡರೆ, ಮತ್ತೆ ಕೆಲವರು ತಮ್ಮ ಬಾಯ್‌ಫ್ರೆಂಡ್‌ಗಳೊಂದಿಗೆ ರಾತ್ರಿಯ್ಲ್ಲೆಲಾ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಆಫೀಸ್‌ನಲ್ಲಿ ಕೆಲಸ ಮುಗಿಸಿ ನಿದ್ದೆಗೆ ಜಾರೋಣ ಎಂದರೆ ಇಂಥವರ ಕಿರಿಕಿರಿ.

ಪಿಜಿ ಬದುಕು ಯುವತಿಯರಲ್ಲಿ ಸ್ವಾವಲಂಬನೆ, ಸ್ವಾತಂತ್ರ್ಯ ಮನೋಭಾವ, ಸಮೂಹ ಚಿಂತನೆ, ಸ್ವಾಭಿಮಾನಿ ಬದುಕು ಮುಂತಾದ ಮನೋಭಾವವನ್ನು ಬೆಳೆಸುತ್ತದೆ ಎನ್ನುವುದೇನೊ ನಿಜ. ಆದರೆ ನೆಮ್ಮದಿಯ ನಿದ್ರೆ, ಇಷ್ಟದ ಊಟ, ತಿಂಡಿಗೆ ಇಲ್ಲಿ ಆಸ್ಪದವೇ ಇಲ್ಲ. ಪಿಜಿಗಳಲ್ಲಿನ ಊಟ ದೇವರಿಗೆ ಪ್ರೀತಿ. ಬದುಕಬೇಕು ಅನ್ನುವುದಕ್ಕೆ ತಿನ್ನಬೇಕು. ಜೊತೆಗೆ ನಮ್ಮ ಕೆಲಸವನ್ನು ನಾವೇ  ಮಾಡಿಕೊಳ್ಳಬೇಕಾದ ಅನಿವಾರ್ಯತೆ.

ಅದೃಷ್ಟವಶಾತ್ ರೂಮ್‌ಮೇಟ್‌ಗಳು ಮಾನವೀಯತೆ ಇರುವ  ಸ್ನೇಹಜೀವಿಗಳಾಗಿದ್ದರೆ ಸರಿ. ಇಲ್ಲವಾದರೆ ದಿನನಿತ್ಯ ಬೆಳಗಾದರೆ ಅವರೊಂದಿಗೆ ಕಿತ್ತಾಡುವುದು ಇನ್ನೊಂದು ರೀತಿಯ ಹಿಂಸೆ. ಇನ್ನೂ ನೆನಪಿದೆ. ಆಗ ತಾನೇ ನಿದ್ದೆ ಮಾಡುತ್ತಿದ್ದ `ಬಂಕರ್ ಬೆಡ್~ನಿಂದ ಕೆಳಗೆ ಇಳಿಯಬೇಕು. ನಾನು ಇಳಿಯುವುದನ್ನು ಗಮನಿಸದ ರೂಮ್ ಮೇಟ್ ಫ್ಯಾನ್ ಹಾಕಿಬಿಟ್ಟಳು.

ಫ್ಯಾನಿನ ರೆಕ್ಕೆ ಸರಿಯಾಗಿ ಬಂದು ಬೆರಳಿಗೆ ಹೊಡೆಯಿತು. ನನ್ನ ಸುತ್ತ ಏನು ಆಗುತ್ತಿದೆ ಎಂದು ಅರಿಯುವಷ್ಟರಲ್ಲಿ  ನನಗೆ ತಲೆ ಸುತ್ತಿ ಮೂರ್ಛೆ ಹೋದೆ. ನಂತರ ಕೈ ಬೆರಳಿಗೆ ಹೊಲಿಗೆ ಹಾಕಿಸಿ,ಡಾಕ್ಟರ್ ಸಲಹೆಯಂತೆ ಒಂದು ವಾರ ರೆಸ್ಟ್ ತಗೆದುಕೊಳ್ಳಬೇಕಾಗಿ ಬಂತು. ಆಗೆಲ್ಲ ಪಿಜಿ ಗೆಳತಿಯರು ಮಾಡಿದ ಸಹಾಯವನ್ನು ಇಂದಿಗೂ ನೆನೆಯುತ್ತೇನೆ.

ಪಿಜಿಗೆ ಬರುವ ಹುಡುಗಿಯರು ಒಂದೇ ಉದ್ದೇಶಕ್ಕೆ, ಒಂದೇ ಕಾರಣಕ್ಕೆ ಬರುವುದಿಲ್ಲ. ಓದುವ ಹುಡುಗಿಯರು, ಓದು ಅರ್ಧಕ್ಕೆ ನಿಲ್ಲಿಸಿ ಕೆಲಸ ಹುಡುಕುವ ಹುಡುಗಿಯರು, ಓದು ಮುಗಿಸಿ ಕೆಲಸಕ್ಕಾಗಿ ಬರುವವರು, ಕೆಲವೊಂದು ಬಾರಿ ಗಂಡ ಮನೆಯಿಂದ ಹೊರಹಾಕಿದಾಗ ಉಳಿದುಕೊಳ್ಳಲು ಒಂದು ಜಾಗ ಬೇಕು ಎನ್ನುವಂತಹ ಹುಡುಗಿಯರೂ ಕೂಡ ಪಿಜಿಗಳ ಮೊರೆ ಹೋಗುತ್ತಾರೆ. ಹೀಗಾಗಿಯೇ ಪಿಜಿಗಳಲ್ಲಿ ವಿವಿಧ ಮೂಡುಗಳ ಹುಡುಗಿಯರನ್ನು ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.