ADVERTISEMENT

ಪಿಕ್ಚರ್‌ ನೋಡಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
ಪಿಕ್ಚರ್‌ ನೋಡಿ
ಪಿಕ್ಚರ್‌ ನೋಡಿ   

‘ಹಣ್ಣು ತಿಂದ್ರೆ ನೇಮು; ಸಿಪ್ಪೆ ತಿಂದ್ರೆ ಕ್ರೈಮು’

ಇದು ದ್ಯಾವ್ರೇ ಚಿತ್ರದ ಮೊದಲು ಮತ್ತು ಕೊನೆಯ ದೃಶ್ಯ ಎರಡರಲ್ಲಿಯೂ ಬರುವ ಮಾತು. ದೊಡ್ಡ ದೊಡ್ಡ ಅಪರಾಧಗಳನ್ನು ಕದ್ದುಮುಚ್ಚಿ ಮಾಡುವವರು ಜೈಲಿನ ಹೊರಗೆ ರಾಜಾರೋಷವಾಗಿರುತ್ತಾರೆ. ಆದರೆ ಬದುಕಿನ ಆಕಸ್ಮಿಕಗಳಿಗೆ ಸಿಲುಕಿ, ಆ ಕ್ಷಣದಲ್ಲಿ ಮೈಮರೆತವರು ಜೈಲಿನೊಳಗೆ ಕೊಳೆಯುತ್ತಿರುತ್ತಾರೆ. ಇಂಥದ್ದೊಂದು ಎಳೆ ಇಟ್ಟುಕೊಂಡು ಗಡ್ಡ ವಿಜಿ ಕಟ್ಟಿದ ಸಿನಿಮಾ ‘ದ್ಯಾವ್ರೇ’. 2013ರಲ್ಲಿ ಬಿಡುಗಡೆಯಾದ ಈ ಚಿತ್ರ ವಾಣಿಜ್ಯಾತ್ಮಕವಾಗಿ ಯಶಸ್ಸನ್ನೇನೂ ಕಂಡಿದ್ದಲ್ಲ. ಆದರೆ ವಸ್ತುವಿನಲ್ಲಿನ ಹೊಸತನ ಮತ್ತು ‘ಅಪರಾಧ’ದ ವ್ಯಾಖ್ಯಾನಗಳನ್ನು ಮುರಿದು ಕಟ್ಟುವ ಪ್ರಯತ್ನದ ಕಾರಣದಿಂದ ಗಮನಸೆಳಯುವಂಥ ಚಿತ್ರ.

‘ದ್ಯಾವ್ರೇ’ ಎನ್ನುವುದು ಈ ಶೀರ್ಷಿಕೆಯಷ್ಟೇ ಅಲ್ಲ, ಅದೊಂದು ಆರ್ತನಾದ. ಮಾನವೀಯತೆಯ ಕರೆಯೂ ಹೌದು. ಬೇರೆ ಬೇರೆ ಕಾರಣಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಒಂದಿಷ್ಟು ಕೈದಿಗಳ ಬದುಕಿನ ಕಥೆಯನ್ನು ವಿಶಿಷ್ಟ ನಿರೂಪಣಾ ತಂತ್ರದ ಮೂಲಕ ಗಡ್ಡ ವಿಜಿ ಹೇಳಿದ್ದಾರೆ. ಇವರೆಲ್ಲರೊಳಗಿನ ಮನುಷ್ಯತ್ವವನ್ನು ಉದ್ದೀಪಿಸುವ, ಮೇಲ್ನೋಟಕ್ಕೆ ವಿಕ್ಷಿಪ್ತ ಎನಿಸುವ, ಆದರೆ ಆಳದಲ್ಲಿ ಅಷ್ಟೇ ಸಹಾನುಭೂತಿ ಹೊಂದಿರುವ ಜೈಲರ್‌ ಪಾತ್ರದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ನಟಿಸಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ ಮೊದಲ ಸಿನಿಮಾ ಇದು ಎನ್ನುವುದೂ ಇದರ ವಿಶೇಷತೆಗಳಲ್ಲೊಂದು.

ADVERTISEMENT

ಜೈಲರ್‌ ಈಗ ತನ್ನದಲ್ಲದ ತಪ್ಪಿಗೆ ಕೈದಿಯಾಗಿ, ಕಂಬಿಗಳ ಹಿಂದೆ ಬದುಕ ಸವೆಸುತ್ತಿದ್ದಾನೆ. ಅವನು ತನ್ನ ವೃತ್ತಿಬದುಕಿನಲ್ಲಿ ಕಂಡ ಅನುಭವಗಳನ್ನು ಒಂದು ಕಾದಂಬರಿಯಾಗಿ ಬರೆಯುತ್ತಿದ್ದಾನೆ. ಆ ಕಾದಂಬರಿಯೇ ಈ ಸಿನಿಮಾ.

ಖಾಕಿಯೊಳಗಿನ ಅಪರಾಧಿಗಳು, ಕೈದಿಯೊಳಗಿನ ಸಜ್ಜನರು, ಸಜ್ಜನರ ಮುಖವಾಡದೊಳಗಿನ ಪಾತಕಿಗಳು, ಪಾತಕ ದಿರಿಸಿನಲ್ಲಿನ ಮುಗ್ಧರು ಹೀಗೆ ಸಮಾಜದ ರೂಢಿಗತ ನಂಬಿಕೆಯನ್ನು ಮುರಿಯುತ್ತಲೇ ಹೋಗುತ್ತದೆ ಈ ಸಿನಿಮಾ. ಹಾಡುಗಳ ಕಾರಣಕ್ಕೂ ದ್ಯಾವ್ರೇ ಚಿತ್ರ ಮನಸ್ಸಿನಲ್ಲಿ ಉಳಿಯುತ್ತದೆ. ಯೋಗರಾಜ್‌ ಭಟ್‌ ಮತ್ತು ಜಯಂತ ಕಾಯ್ಕಿಣಿ ಬರೆದ ಹಾಡುಗಳು ಈ ಚಿತ್ರದಲ್ಲಿ ಒಂದು ಕ್ಯಾರೆಕ್ಟರ್‌ ಆಗಿಯೇ ಜೀವತಳೆದಿವೆ. ಸಿನಿಮಾದ ಹೊರತಾಗಿಯೂ ಮನಸ್ಸಿನಲ್ಲಿ ನೆಲೆನಿಂತು ಕಾಡುವ ಹಾಗಿವೆ. ಅವುಗಳಿಗೆ ವೀರ್‌ ಸಮರ್ಥ್‌ ಸಮರ್ಥ ಸಂಗೀತ ಸಂಯೋಜಿಸಿದ್ದಾರೆ.

ಅರಸು, ಸೋನುಗೌಡ, ಯೋಗರಾಜ್‌ ಭಟ್‌, ನೀನಾಸಂ ಸತೀಶ್‌, ರಾಜೇಶ್‌ ನಟರಂಗ, ಶ್ರುತಿ ಹರಿಹರನ್‌ ಎಲ್ಲರ ನಟನೆಯೂ ಅಚ್ಚುಕಟ್ಟಾಗಿದೆ.

ಈ ಚಿತ್ರವನ್ನು ನೀವು ಯೂ ಟ್ಯೂಬ್‌ನಲ್ಲಿ https://goo.gl/HKcNYz ಕೊಂಡಿ ಬಳಸಿ ನೋಡಬಹುದು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.